ಖಗೋಳಶಾಸ್ತ್ರ – ನಕ್ಷತ್ರಗಳ ಸಂಕ್ಷಿಪ್ತ ಅಧ್ಯಯನ
• ಆಕಾಶಕಾಯಗಳ ಬಗ್ಗೆ ಅಧ್ಯಯನ ಮಾಡುವ ಭೌತಶಾಸ್ತ್ರದ ಶಾಖೆಯೇ ಖಗೋಳಶಾಸ್ತ್ರ(ಅಸ್ಟರೊನಮಿ).
• ವಿಶ್ವದ ಅಧ್ಯಯನಕ್ಕೆ ‘ವಿಶ್ವವಿಜ್ಞಾನ'(ಕಾಸ್ಮಾಲಜಿ) ಎಂದು ಕರೆಯುತ್ತಾರೆ.
• ವಿಶ್ವ ( ಬ್ರಹ್ಮಾಂಡ)
ಆಕಾಶವನ್ನು ರಾತ್ರಿ ವೇಳೆಯಲ್ಲಿ ನೋಡಿದಾಗ ಅಸಂಖ್ಯಾತ ನಕ್ಷತ್ರಗಳು ಕಂಡುಬರುತ್ತವೆ. ಇಂತಹ ಮಿಲಿಯನ್ಗಟ್ಟಲೆ ನಕ್ಷತ್ರಗಳ ಗುಂಪನ್ನು “ಗೆಲಾಕ್ಸಿ” ಎನ್ನುವರು. ಸುಮಾರು 100 ಬಿಲಿಯನ್ ಗೆಲಾಕ್ಸಿಗಳಿವೆ. ಈ ಎಲ್ಲಾ ಗೆಲಾಕ್ಸಿಗಳ ಒಟ್ಟು ಗುಂಪನ್ನು ಒಟ್ಟಾರೆಯಾಗಿ “ವಿಶ್ವ ಅಥವಾ ಬ್ರಹ್ಮಾಂಡ” ಎನ್ನುವರು.
• ಗೆಲಾಕ್ಸಿಗಳು – ಅಸಂಖ್ಯಾತ ತಾರೆಗಳ ಸಮೂಹವೇ ಗೆಲಾಕ್ಸಿ ಅಥವಾ ನಕ್ಷತ್ರಪುಂಜ.
• ಒಟ್ಟಾರೆಯಾಗಿ ಎಲ್ಲಾ ಗೆಲಾಕ್ಸಿಗಳನ್ನು ಅವುಗಳ ಆಕಾರದ ಆಧಾರದ ಮೇಲೆ ಎಡ್ವಿನ್ಹಬಲ್
3 ವಿಧಗಳಾಗಿ ವಿಂಗಡಿಸಿದನು.
1. ಸುರುಳಿ ಗೆಲಾಕ್ಸಿ
2. ಎಲಿಪ್ಸೀಯ ಗೆಲಾಕ್ಸಿ
3. ಅನಿಯತ ಗೆಲಾಕ್ಸಿ
• ನಮ್ಮ ಗೆಲಾಕ್ಸಿ– ನಿರ್ಮಲ ರಾತ್ರಿಯ ಆಕಾಶದಲ್ಲಿ ನಕ್ಷತ್ರಗಳ ನಡುವೆ ಆಕಾಶದುದ್ದಕ್ಕೂ ವ್ಯಾಪಿಸಿರುವ ಮುಸುಕು ದೀಪ್ತತೆಯುಳ್ಳ ಪಟ್ಟಿಯೊಂದನ್ನು ಕಾಣಬಹುದು. ಇದಕ್ಕೆ “ ಆಕಾಶಗಂಗೆ ಅಥವಾ ಹಾಲುಹಾದಿ ಅಥವಾ ಕ್ಷಿರಪಥ ಅಥವಾ ಮಿಲ್ಕಿವೇ” ಎನ್ನುವರು.
• ನಮ್ಮ ನಕ್ಷತ್ರವಾದ ಸೂರ್ಯ ಈ ಆಕಾಶಗಂಗೆಯ ಒಂದು ನಕ್ಷತ್ರವಾದ್ದರಿಂದ ‘ಆಕಾಶಗಂಗೆ’ಯನ್ನು ನಮ್ಮ ಗೆಲಾಕ್ಸಿ ಎನ್ನುವರು.
• ನಮ್ಮ ಗೆಲಾಕ್ಸಿಯು ಸುರುಳಿ ಗೆಲಾಕ್ಸಿಯಾಗಿದೆ.
• “ಆಂಡ್ರೋಮಿಡ” ಎಂಬುದು ನಮಗೆ ಹತ್ತಿರದಲ್ಲಿರುವ ಪ್ರಸಿದ್ಧ ಸುರುಳಿ ಗೆಲೆಕ್ಸಿ. ಇದನ್ನು ‘ಎಮ್31’ ಎಂದು ಕರೆಯುತ್ತಾರೆ.
• ಗೆಲಾಕ್ಸಿಗಳ ಚಲನೆಯನ್ನು ಅಧ್ಯಯನ ಮಾಡಲು “ಡಾಪ್ಲರ್ ಪರಿಣಾಮ” ವನ್ನು ಬಳಸುತ್ತಾರೆ.
•ನೀಹಾರಿಕೆಗಳು – ರಾತ್ರಿ ಆಕಾಶದಲ್ಲಿ ನಕ್ಷತ್ರಗಳ ಜೊತೆಗೆ ದೂರದರ್ಶಕಗಳ ಮೂಲಕ ನೋಡಬಹುದಾದ ಹಲವು ಮುಸುಕು ಮೋಡಗಳಂಥ ಮಚ್ಚೆಗಳನ್ನು “ನೀಹಾರಿಕೆಗಳು” ಎನ್ನುವರು.
• ನೀಹಾರಿಕೆಗಳು ನಮ್ಮ ಗೆಲಾಕ್ಸಿಗಳ ತರಹವೇ ಇದೆ ಎಂದು ಸೂಚಿಸಿದವನು- ಇಮ್ಯಾನ್ಯುಲ್ ಕ್ವಾಂಟ್
* ನಕ್ಷತ್ರಗಳ ಜೀವನಚಕ್ರದ ಅಂತ್ಯದಲ್ಲಿ ಸೂಪರ್ನೋವಾ ಅಥವಾ ಮಹಾನವ್ಯ ಸ್ಫೋಟ ಉಂಟಾದಾಗ ನಕ್ಷತ್ರದಲಿದ್ದ ದ್ರವ್ಯ ಹೊರಕ್ಕೆ ಚಿಮ್ಮಲ್ಪಟ್ಟಾಗ ನೀಹಾರಿಕೆಗಳು ಉಂಟಾಗುತ್ತವೆ.
• ನಕ್ಷತ್ರಗಳು = ಸ್ವಯಂ ಪ್ರಕಾಶವನ್ನು ಹೊಂದಿರುವ ಆಕಾಶ ಕಾಯಗಳೇ ನಕ್ಷತ್ರಗಳು.
• ನಕ್ಷತ್ರಗಳಲ್ಲಿ ದ್ರವ್ಯವು ಪ್ಲಾಸ್ಮಾಸ್ಥಿತಿಯಲ್ಲಿದೆ. ಅವುಗಳಲ್ಲಿ ನಡೆಯುವ ಬೈಜಿಕ ಕ್ರಿಯೆಗಳಿಂದ ಅಪಾರ ಪ್ರಮಾಣದ ಶಕ್ತಿಯು, ಬೆಳಕು ಮತ್ತು ಶಾಖದ ರೂಪದಲ್ಲಿ ಬಿಡುಗಡೆಯಾಗುತ್ತದೆ.
• ಭೂಮಿಗೆ ಅತಿ ಹತ್ತಿರದಲ್ಲಿರುವ ನಕ್ಷತ್ರ “ಸೂರ್ಯ”.
• ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ನಕ್ಷತ್ರ “ ಪ್ರಾಕ್ಸಿಮಾ ಸೆಂಟಾರಿ”.
• ನಕ್ಷತ್ರಗಳು ನಮ್ಮಿಂದ ತುಂಬಾ ದೂರದಲ್ಲಿವೆ. ನಕ್ಷತ್ರಗಳ ದೂರವನ್ನು ಅಳೆಯಲು “ಜೋರ್ತಿವರ್ಷ” ಎಂಬ ಏಕಮಾನವನ್ನು ಬಳಸಿಕೊಳ್ಳುತ್ತೇವೆ.
• ಜೋರ್ತಿವರ್ಷ – ಒಂದು ವರ್ಷ ಕಾಲ ಬೆಳಕು ಚಲಿಸಿದ ದೂರವನ್ನು 1 ಜೋರ್ತಿವರ್ಷ ಎನ್ನುವರು.(ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿ.ಮೀ.)
• ಪಾರ್ಸೆಕ್ – ನಕ್ಷತ್ರಗಳ ದೂರವನ್ನು ಅಳೆಯಲು ಬಳಸುವ ಜ್ಯೋರ್ತಿವರ್ಷಕ್ಕಿಂತಲೂ ದೊಡ್ಡ ಏಕಮಾನವೆಂದರೆ “ ಪಾರ್ಸೆಕ್”.
• 1 ಪಾರ್ಸೆಕ್ ಎಂದರೆ- 3.26 ಜ್ಯೋರ್ತಿವರ್ಷ
• ನಕ್ಷತ್ರಗಳ ಹುಟ್ಟು ಮತ್ತು ಸಾವು – ನಕ್ಷತ್ರಗಳಿಗೂ ಜೀವಿಗಳ ಹಾಗೆ ಹುಟ್ಟು ಮತ್ತು ಸಾವು ಇದೆ. ಹಾಗೆಯೇ ಪ್ರತಿಯೊಂದು ನಕ್ಷತ್ರಕ್ಕೂ ಆಯಸ್ಸು ಎಂಬುದಿದೆ. ನಕ್ಷತ್ರಗಳ ಹುಟ್ಟಿನಿಂದ ಸಾವಿನವರೆಗೆ ನಡೆಯುವ ಪ್ರಕ್ರಿಯೆಗಳಿಗೆ “ ನಾಕ್ಷತ್ರಿಕ ವಿನ್ಯಾಸ” ಎನ್ನುವರು.
1. ಆದಿನಕ್ಷತ್ರ( ಪ್ರೊಟೊಸ್ಟಾರ್)
ನಕ್ಷತ್ರಗಳ ಉಗಮದ ಮೊದಲಲ್ಲಿ ಉಂಟಾಗುವ ಸ್ಥಿತಿಯನ್ನು “ಆದಿ ನಕ್ಷತ್ರ”(ಪ್ರೊಟೋಸ್ಟಾರ್) ಎಂದು ಹೆಸರು. ಬಹುಮಟ್ಟಿಗೆ ಹೈಡ್ರೋಜನ್ನಿಂದ ಆದಂತಹ ಬೃಹತ್ ಅನಿಲ ಮೋಡಗಳು ವ್ಯೋಮದಲ್ಲಿವೆ. ಇಂಥ ಅನಿಲೀಯ ಮೋಡಗಳು ಗುರುತ್ವ ಸೆಳೆತದಿಂದ ಸಂಕೋಚನೆಗೊಂಡಾಗ ನಕ್ಷತ್ರಗಳು ಹುಟ್ಟುತ್ತವೆ. ಅನಿಲಗಳ ಸಂಕೋಚನೆಯಿಂದ ಸಾಂದ್ರತೆಯೂ, ಒತ್ತಡವೂ ಹೆಚ್ಚುತ್ತಾ ಹೋಗುತ್ತದೆ. ಕ್ರಮೇಣ ಮೋಡದ ಕೇಂದ್ರದಲ್ಲಿ ಗೋಲಾಕಾರದ ರಾಶಿ ರೂಪುಗೊಳ್ಳುತ್ತದೆ. ಸ್ವಲ್ಪ ಹೆಚ್ಚು ಕಡಿಮೆ, ಮೋಡದ ರಾಶಿಯ 99% ಭಾಗ ಕೇಂದ್ರದಲ್ಲಿಯೇ ಇರುತ್ತದೆ. ಹೀಗೆ ಕೇಂದ್ರದಲ್ಲಿ ರೂಪುಗೊಳ್ಳುವ ಗೋಲಕ್ಕೆ ಆದಿ ನಕ್ಷತ್ರ ಅಥವಾ ಪ್ರೊಟೋಸ್ಟಾರ್ ಎಂದು ಹೆಸರು. ಇದನ್ನು ನಕ್ಷತ್ರದ “ಕಕೂನ್ ಹಂತ” ಎನ್ನಬಹುದು. ಆದಿ ನಕ್ಷತ್ರದ ಕೇಂದ್ರದಲ್ಲಿ ಹೈಡ್ರೋಜನ್ ಇರುತ್ತದೆ.
2. ನಕ್ಷತ್ರದ ಸ್ಥಿರ ಸ್ಥಿತಿ
ಆದಿನಕ್ಷತ್ರವು ಇನ್ನಷ್ಟು ಕುಗ್ಗುತ್ತಾ ಹೋದಂತೆ ಅದರೊಳಗಿರುವ ಪರಮಾಣುಗಳು ಪದೇ ಪದೇ ಡಿಕ್ಕಿ ಹೊಡೆಯುವುದರಿಂದ ಅದರ ತಾಪ ಏರುತ್ತದೆ. ತಾಪ ಸಾಕಷ್ಟು ಏರಿದಾಗ ಕೇಂದ್ರದಲ್ಲಿ ಹೈಡ್ರೋಜನ್ ಬೀಜಗಳ ಸಮ್ಮಿಲನ ಆರಂಭವಾಗುತ್ತದೆ. ಹೈಡ್ರೋಜನ್ ಬೀಜಗಳು ಸಮ್ಮಿಲನಗೊಂಡು ಹೀಲಿಯಂ ಬೀಜಗಳಾಗುವುದರ ಜೊತೆಗೆ ವಿವಿಧ ತರಂಗದೂರವನ್ನು ಹೊಂದಿರುವ ವಿದ್ಯುತ್ಕಾಂತೀಯ ಅಲೆಗಳು, ವಿಕಿರಣಗಳ ರೂಪದಲ್ಲಿ ಅಪಾರ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಕಾಲಾಂತರದಲ್ಲಿ ವಿಕಿರಣಗಳಿಂದಾದ ಹೊರಮುಖ ಒತ್ತಡವು ಗುರುತ್ವದ ಒಳಮುಖ ಒತ್ತಡಕ್ಕೆ ಸಮವಾಗಿರುತ್ತದೆ. ಇದರಿಂದ ನಕ್ಷತ್ರಕ್ಕೆ ಸ್ಥಿರ ಸ್ಥಿತಿ ಬರುತ್ತದೆ. ಇದನ್ನು “ನಕ್ಷತ್ರದ ಯೌವನ ಹಂತ” ಎನ್ನುವರು.
3. ಕೆಂಪು ದೈತ್ಯ
ನಕ್ಷತ್ರದ ಒಳಭಾಗದಲ್ಲಿ ಸಮ್ಮಿಲನ ಪ್ರಕ್ರಿಯೆ ಮುಂದುವರಿದಂತೆ ಹೆಚ್ಚು ಹೆಚ್ಚು ಹೈಡ್ರೋಜನ್ ಪರಿವರ್ತನೆಯಾಗಿ ಹೀಲಿಯಮ್ ಆಗುತ್ತದೆ. ಕಾಲಾಂತರದಲ್ಲಿ ನಕ್ಷತ್ರಗರ್ಭ ಪ್ರಧಾನವಾಗಿ ಹೀಲಿಯಂನಿಂದ ತುಂಬಿಹೋಗಿ ಸಮ್ಮಿಲನ ಕ್ರಿಯೆ ಬಲು ನಿಧಾನವಾಗುತ್ತದೆ. ಗರ್ಭದ ಒಳಗಡೆ ಒತ್ತಡ ಬಹಳ ಕಡಿಮೆಯಾಗಿ ನಕ್ಷತ್ರವು ತನ್ನದೇ ಗುರುತ್ವದಿಂದ ಕುಸಿಯುತ್ತಾ ಹೋಗುತ್ತದೆ. ಆದರೂ ನಕ್ಷತ್ರದ ಹೊರ ಪದರಗಳಲ್ಲಿ ಹೈಡ್ರೋಜನ್ ಸಮ್ಮಿಲನ ಮುಂದುವರೆದು ಶಕ್ತಿ ಬಿಡುಗಡೆ ಆಗುತ್ತದೆ. ಆದ್ದರಿಂದ ಹೊರಗಿನ ಚಿಪ್ಪು ಉಬ್ಬುತ್ತದೆ. ನಕ್ಷತ್ರದ ಹೊರಪದರಗಳು ಉಬ್ಬುವುದಲ್ಲದೆ ನಕ್ಷತ್ರ ಹೊರಸೂಸುತ್ತಿರುವ ವಿಕಿರಣಗಳ ತೀವ್ರತೆ ಕಡಿಮೆಯಾಗುತ್ತದೆ. ಇದರಿಂದ ನಕ್ಷತ್ರವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ನಕ್ಷತ್ರದ ಈ ಸ್ಥಿತಿಗೆ “ಕೆಂಪು ದೈತ್ಯ” ಎನ್ನುವರು.
ಸೂರ್ಯ ಕೆಂಪು ದೈತ್ಯದ ಸ್ಥಿತಿಗೆ ಬಂದಾಗ ಬುಧ ಮತ್ತು ಶುಕ್ರ ಗ್ರಹಗಳನ್ನು ನುಂಗುಹಾಕುವುದಲ್ಲದೆ ತನ್ನ ಕಾವಿನಿಂದ ಭೂಮಿಯನ್ನು ಸುಟ್ಟುಹಾಕುತ್ತದೆ.
4. ಶ್ವೇತಕುಜ್ಜ
ನಕ್ಷತ್ರದ ಹೊರ ಪದರಗಳು ವ್ಯಾಕೋಚನೆಗೊಳ್ಳುತ್ತಾ ಹೋದಂತೆ ಗರ್ಭ ಸಂಕೋಚಿಸಿ ಇನ್ನೂ ಬಿಸಿಯಾಗುತ್ತದೆ. ತಾಪ ಹೆಚ್ಚಾದಾಗ ಗರ್ಭದಲ್ಲಿರುವ ಹೀಲಿಯಂ ಬೀಜಗಳು ಪರಿವರ್ತನೆಗೊಂಡು ಕಾರ್ಬನ್ ಬೀಜಗಳಾಗುತ್ತವೆ. ಗರ್ಭದಲ್ಲಿ ಹೀಲಿಯಂ ಸಮ್ಮಿಲನ ಪೂರ್ಣಗೊಂಡ ಅನಂತರ ಗರ್ಭವು ಇನ್ನಷ್ಟು ಕುಸಿಯಲಾರದು. ಕೆಂಪು ದೈತ್ಯದ ಉಬ್ಬಿದ ಹೊರಪದರ ಕಳಚಿಕೊಂಡು ದೂರಕ್ಕೆ ಎಸೆಯಲ್ಪಡುತ್ತದೆ. ಇದರಿಂದ ಹೈಡ್ರೋಜನ್ನಿನ ಮೋಡಬಾಗುತ್ತದೆ. ಈ ಮೋಡವನ್ನು ಗ್ರಹೀಯ ನೀಹಾರಿಕೆ ಎನ್ನುವರು. ಇದರ ನಂತರ ನಕ್ಷತ್ರವು ತನ್ನದೇ ಗುರುತ್ವದಿಂದಾಗಿ ಕುಸಿಯತೊಡಗುತ್ತದೆ. ತಾಪ ಹೆಚ್ಚಾದಂತೆ ಗರ್ಭದಲ್ಲಿ ಹೊರಮುಖ ಒತ್ತಡ ಏರುವುದರಿಂದ ಇನ್ನಷ್ಟು ಕುಸಿತ ಉಂಟಾಗುವುದು ನಿಲ್ಲುತ್ತದೆ. ಇದು ಉಚ್ಚ ತಾಪದಿಂದಾಗಿ ಹೊಳೆಯುತ್ತದೆ. ಇದನ್ನು ಶ್ವೇತಕುಬ್ಜ ಎನ್ನುವರು.
5. ಕೃಷ್ಣಕುಬ್ಜ
ಶ್ವೇತಕುಬ್ಜದಲ್ಲಿ ಬೈಜಿಕ ಕ್ರಿಯೆಗಳು ನಿಲಿಗಡೆಯಾಗಿರುವುದರಿಂದ ಕ್ರಮೇಣ ಅವುಗಳ ಆಂತರಿಕ ಶಕ್ತಿ ಕಡಿಮೆಯಾಗಿ ತಾಪವೂ ಕಡಿಮೆ ಆಗುತ್ತದೆ. ಅದು ಹೆಚ್ಚು ಹೆಚ್ಚು ಮುಸುಕಾಗುತ್ತಾ ಹೋಗಿ ಕಾಲಾಂತರದಲ್ಲಿ ಬೆಳಕು ಹೊಮ್ಮುವುದು ನಿಲ್ಲುತ್ತದೆ. ಈಗ ಅದು ತಣ್ಣಗಿರುವ ಕಪ್ಪು ರಾಶಿ ಇದನ್ನು “ ಕೃಷ್ಣ ಕುಬ್ಜ” ಎನ್ನುತ್ತಾರೆ.
• ನಕ್ಷತ್ರಗಳ ದೀಪ್ತತೆ” – ನಕ್ಷತ್ರಗಳು ಎಲ್ಲಾ ದಿಕ್ಕುಗಳಲ್ಲಿ ಪ್ರತಿ ಸೆಕೆಂಡಿಗೆ ಹೊಮ್ಮಿಸುವ ಶಕ್ತಿಯನ್ನು “ನಕ್ಷತ್ರಗಳ ದೀಪ್ತತೆ” ಎನ್ನುವರು.
• ನಕ್ಷತ್ರಗಳಿಂದ ಹೊರಹೊಮ್ಮುವ ಬೆಳಕನ್ನು ನಕ್ಷತ್ರಗಳ ಪ್ರಕಾಶ ಎನ್ನುವರು. ನಕ್ಷತ್ರಗಳ ಪ್ರಕಾಶತೆಯನ್ನು “ ಕಾಂತಿಮಾನ” ಎಂಬ ಪದ್ಧತಿಯಿಂದ ಸೂಚಿಸುತ್ತಾರೆ.
• ನಕ್ಷತ್ರಗಳ ಬಣ್ಣವು ಅವುಗಳ ಮೇಲ್ಮೈ ತಾಪವನ್ನು ಅವಲಂಭಿಸಿದೆ. ‘ಸೂರ್ಯ’ನ ಬಣ್ಣ ಹಳದಿಯಾಗಿದೆ.
‘ರಿಗೆಲ್’ ಎಂಬ ನಕ್ಷತ್ರದ ಬಣ್ಣ ನೀಲಿ ಮಿಶ್ರಿತವಾಗಿದೆ. ಕಾರಣ ಅದರ ಮೇಲ್ಮೈ ತಾಪ ಅತಿ ಹೆಚ್ಚಾಗಿದೆ. ‘ಬೀಟಲ್ಗೀಸ್’ ಎಂಬ ನಕ್ಷತ್ರದ ಬಣ್ಣ ಕೆಂಪು ಆಗಿದೆ. ಯಾಕೆಂದರೆ ಇದರ ತಾಪ ಕಡಿಮೆ ಇದೆ. ‘ಲುಬ್ಧಕ’ ನಕ್ಷತ್ರದ ಬಣ್ಣ ಹಳದಿ ಛಾಯೆಯುಳ್ಳ ಬಿಳಿಯಾಗಿದೆ.
• ಜೋಡಿ ನಕ್ಷತ್ರ ( ಯುಗ್ಮತಾರೆ) – ಗುರುತ್ವದಿಂದ ಪರಸ್ಪರ ಬಂಧಿತವಾಗಿದ್ದು ಸಾಮಾನ್ಯ ಗುರುತ್ವ ಕೇಂದ್ರದ ಸುತ್ತ ವೃತ್ತಾಕಾರಗಳಲ್ಲಿ ಗಿರಕಿ ಹೊಡೆಯುತ್ತಿರುವ ಎರಡು ನಕ್ಷತ್ರಗಳ ವ್ಯವಸ್ಥೆಗೆ ಜೋಡಿನಕ್ಷತ್ರ
( ಯುಗ್ಮತಾರೆ) ಎನ್ನುತ್ತಾರೆ.
ಉದಾ: ಲುಬ್ಧಕ( ಸಿರಿಯಸ್)
• ನಕ್ಷತ್ರಪುಂಜಗಳು – ರಾತ್ರಿ ಆಕಾಶದಲ್ಲಿ ನಮಗೆ ಕಾಣುವ ನಕ್ಷತ್ರಗಳ ಸಂಖ್ಯೆ ಸಾಕಷ್ಟು ದೊಡ್ಡದು. ಆದ್ದರಿಂದ ಅವುಗಳನ್ನು ಗುರುತಿಸಬಹುದಾದ ವಿನ್ಯಾಸಗಳು ಅಥವಾ ಚಿತ್ರಾಕೃತಿಗಳ ಮೂಲಕ ಗುರುತಿಸುವುದು ಅನುಕೂಲ. ಇಂಥ ನಕ್ಷತ್ರ ಚಿತ್ರಾಕೃತಿಗಳನ್ನು “ ನಕ್ಷತ್ರಪುಂಜ” ಗಳು ಎನ್ನುವರು.
• ಸಪ್ತ್ರರ್ಷಿ ಮಂಡಲ – ಆಕಾಶದಲ್ಲಿ ಉತ್ತರದಿಕ್ಕಿನಲ್ಲಿ ಕಾಣುವ ಏಳು ನಕ್ಷತ್ರಗಳ ಗುಂಪಿಗೆ “ಸಪ್ತರ್ಷಿ ಮಂಡಲ” ಎನ್ನುವರು. ಇದು ಭಾರತೀಯರು ಈ ನಕ್ಷತ್ರಪುಂಜಕ್ಕೆ ಇಟ್ಟ ಹೆಸರು.
• “ಧ್ರುವ ನಕ್ಷತ್ರ” – ಪೂರ್ವಕಾಲದ ನಾವಿಕರು ದಿಕ್ಕನ್ನು ಕಂಡು ಹಿಡಿಯಲು “ಧ್ರುವ ನಕ್ಷತ್ರ” ವನ್ನು ಅವಲಂಬಿಸುತ್ತಿದ್ದರು.