HistoryPersons and PersonaltySpardha TimesUncategorized

ಸಾಮ್ರಾಟ್ ಅಶೋಕ್ : ನೆನಪಿನಲ್ಲಿಡಬೇಕಾದ ಸಂಗತಿಗಳು

Share With Friends

ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿಬರುತ್ತದೆ. ಕಳಿಂಗ ಯುದ್ಧದ ಬಳಿಕ ಬೌದ್ಧ ಮತವನ್ನು ಪ್ರಚಾರಗೊಳಿಸುವುದರಲ್ಲಿ ತೊಡಗಿಕೊಂಡ ಸಾಮ್ರಾಟ್ ಅಶೋಕ, ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದವನು.ಅಶೋಕನು ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಕ್ರಿ.ಪೂ 273 ರಿಂದ ಕ್ರಿ.ಪೂ 232 ರವರಿಗೆ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ. 1915 ರವರಿಗೆ ಪಿಯದಸಿ ರಾಜ ಯಾರೆಂದು ತಿಳಿಯದಾಗಿತ್ತು. ಆದರೆ 1915ರಲ್ಲಿ ದೊರೆತ ಮಾಸ್ಕಿ ಶಾಸನದಲ್ಲಿ ಅಶೋಕನನ್ನು ದೇವಾನಾಂಪ್ರಿಯ ಅಶೋಕ ಎಂದು ಕರೆದಿದ್ದು ಈ ಅಸ್ಪಷ್ಟತೆ ನಿವಾರಣೆ ಗೊಂಡಿತು. ಅಶೋಕ’ ಶಬ್ಧಕ್ಕೆ – ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥವಿದೆ.

# ಆರಂಭಿಕ ಜೀವನ:
ಅತ್ಯುತ್ತಮ ಯೋಧನಾಗಿಯೂ, ಚಾಣಾಕ್ಷ ರಾಜನೀತಿಜ್ಙನಾಗಿಯೂ ಬೆಳೆದ ಅಶೋಕನು ಮೌರ್ಯ ಸೇನೆಯ ಅನೇಕ ತುಕಡಿಗಳ ನಾಯಕತ್ವ ವಹಿಸಿದ. ರಾಜ್ಯಾದ್ಯಂತ ಬೆಳೆಯುತ್ತಿದ್ದ ಅಶೋಕನ ಜನಪ್ರಿಯತೆಯನ್ನು ಕಂಡು ಕರುಬಿದ ಅವನ ಅಣ್ಣಂದಿರು, ಬಿಂದುಸಾರನು ತನ್ನ ನಂತರದ ರಾಜನಾಗಿ ಅಶೋಕನನ್ನೇ ಚುನಾಯಿಸಬಹುದು ಎಂಬ ಆತಂಕಕ್ಕೊಳಗಾದರು. ಅವರೆಲ್ಲರಿಗೂ ಹಿರಿಯನಾಗಿ, ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿದ್ದ, ರಾಜಕುಮಾರ ಸುಸೀಮನು, ತನ್ನ ರಾಜ್ಯಪಾಲಿಕೆಯ ಅಧೀನದಲ್ಲಿದ್ದ ಸಿಂಧ್ ಪ್ರಾಂತದ ತಕ್ಷಶಿಲೆಯಲ್ಲಿ ತಲೆಯೆತ್ತಿದ್ದ ರಾಜವಿರೋಧೀ ಪ್ರತಿಭಟನೆಯನ್ನು ಹತ್ತಿಕ್ಕಲು ಅಶೋಕನನ್ನು ಕಳುಹಿಸುವಂತೆ ಬಿಂದುಸಾರನ ಮನವೊಲಿಸಿದನು. ಸುಸೀಮನ ದುರಾಡಳಿತದಿಂದಲೂ, ಅಲ್ಲಿಯ ಇಂಡೋ-ಗ್ರೀಕ್ ಬುಡಕಟ್ಟಿನ ಜನರ ಯುದ್ಧಪ್ರೇಮಿ ಪ್ರವೃತ್ತಿಯಿಂದಲೂ , ತಕ್ಷಶಿಲೆ ಪ್ರಕ್ಷುಬ್ದವಾಗಿತ್ತು. ಇದರಿಂದ ಅನೇಕ ಬಂಡುಕೋರ ಗುಂಪುಗಳ ಸೃಷ್ಟಿಯಾಗಿ, ಅರಾಜಕತೆ ಬೇರುಬಿಡುತ್ತಿತ್ತು. ತಂದೆಯ ಆಜ್ಙೆಯನ್ನು ಪಾಲಿಸಿ, ಅಶೋಕ ತಕ್ಷಶಿಲೆಗೆ ಪಯಣ ಬೆಳೆಸಿದ. ಅಶೋಕನ ಆಗಮನದ ಸುದ್ದಿ ಹರಡುತ್ತಿದ್ದಂತೆ, ಬಂಡುಕೋರರು ಅವನನ್ನು ಸ್ವಾಗತಮಾಡಿದ್ದರಿಂದ, ಪ್ರತಿಭಟನೆಯು ಶಾಂತಿಯುತವಾಗಿ ಅಂತ್ಯವಾಯಿತು. (ಇದೇ ಪ್ರಾಂತ ಮುಂದೆ , ಅಶೋಕನ ಆಳ್ವಿಕೆಯ ಕಾಲದಲ್ಲಿ, ಮತ್ತೆ ಬಂಡೆದ್ದಿತು. ಆದರೆ ಈ ಬಾರಿ ಅದನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು.)

ಅಶೋಕನ ಯಶಸ್ಸಿನಲ್ಲಿ ಮುಂದೆ ಚಕ್ರವರ್ತಿಯಾಗುವ ಮಹತ್ವಾಕಾಂಕ್ಷೆಯನ್ನು ಕಂಡ ಅವನ ಮಲ-ಸೋದರರು ಮತ್ತಷ್ಟುಅಸ್ವಸ್ಥರಾದರು. ಸುಸೀಮನ ಇನ್ನಷ್ಟು ಚಿತಾವಣೆಯಿಂದ , ಬಿಂದುಸಾರ, ಅಶೋಕನನ್ನು ರಾಜ್ಯಬಿಟ್ಟು ತೊಲಗಲು ಆದೇಶಿಸಿದ. ಅದರಂತೆ, ಕಳಿಂಗಕ್ಕೆ ಹೋಗಿ ಅಜ್ಙಾತವಾಗಿ ನೆಲೆಸಿದ ಅಶೋಕ . ಅಲ್ಲಿ ಪರಿಚಯವಾದ ಕೌರ್ವಾಕಿ ಎಂಬ ಬೆಸ್ತರ ಹೆಂಗಸಿನ ಪ್ರೇಮದಲ್ಲಿ ಸಿಲುಕಿದ. ಈಚೆಗೆ ಸಿಕ್ಕಿದ ಶಾಸನಗಳ ಪ್ರಕಾರ, ಆಕೆ ದ್ವಿತೀಯ ಅಥವಾ ತೃತೀಯ ರಾಣಿಯಾದಳು.

ಇಷ್ಟರಲ್ಲಿ , ಉಜ್ಜಯಿನಿಯಲ್ಲಿ ಮತ್ತೊಂದು ಹಿಂಸಾತ್ಮಕ ಪ್ರತಿಭಟನೆ ಪ್ರಾರಂಭವಾಗಿತ್ತು. ಎರಡು ವರ್ಷಗಳ ಬಹಿಷ್ಕಾರದ ನಂತರ ಬಿಂದುಸಾರ ಅಶೋಕನ್ನು ಮರಳಿ ಕರೆಯಿಸಿದ. ಉಜ್ಜಯಿನಿಗೆ ಪ್ರತಿಭಟನೆಯನ್ನು ಎದುರಿಸಲು ಹೋದ ಅಶೋಕ ಅಲ್ಲಿ ಗಾಯಗೊಂಡರೂ, ಅವನ ಸೇನಾನಾಯಕರು ಪ್ರತಿಭಟನೆಯನ್ನು ಉಪಶಮನ ಮಾಡುವುದರಲ್ಲಿ ಯಶಸ್ವಿಯಾದರು. ಸುಸೀಮನ ನಂಬಿಕಸ್ತಬಂಟರಿಂದ ತೊಂದರೆಗೀಡಾಗಬಹದು ಎಂಬ ಶಂಕೆಯಿಂದ ಅಶೋಕನ್ನು ಬಚ್ಚಿಟ್ಟು ಶುಶ್ರೂಷೆ ಮಾಡಲಾಯಿತು. ಇಲ್ಲಿ ಅವನ ಸೇವೆ ಮಾಡಿದವರು ಬೌದ್ಧ ಸನ್ಯಾಸಿ ಸನ್ಯಾಸಿನಿಯರು. ಅಶೋಕನಿಗೆ ಬುದ್ಧನ ಬೋಧನೆಗಳ ಮೊದಲ ಪರಿಚಯವಾದದ್ದೂ ಮತ್ತು ಪಕ್ಕದ ವಿದಿಶಾ ನಗರದ ವ್ಯಾಪಾರಿ ಒಬ್ಬನ ಮಗಳಾದ ,ದೇವಿ ಎಂಬ ಸುಂದರ ತರುಣಿ ಅವನ ಪರಿಚಾರಿಕೆಯಾಗಿ ಪರಿಚಯವಾದದ್ದೂ ಇಲ್ಲಿಯೇ.ಗಾಯಗಳಿಂದ ಚೇತರಿಸಿಕೊಂಡ ಮೇಲೆ ಅಶೋಕ ಆಕೆಯನ್ನು ಮದುವೆಯಾದ. ಈಗಾಗಲೇ ಅಶೋಕನಿಗೆ ಅಸಾಂಧಿಮಿತ್ರ ಎಂಬ ತರುಣಿಯೊಂದಿಗೆ ಮದುವೆಯಾಗಿತ್ತು. ಆಕೆ ಸಾಯುವವರೆಗೂ ಅಶೋಕನ ಪ್ರೀತಿಪಾತ್ರ ಪಟ್ಟದರಾಣಿಯಾಗಿ ಬಾಳಿದಳು. ಅವಳು ತನ್ನ ಸಂಪೂರ್ಣ ಜೀವನವನ್ನು ಪಾಟಲೀಪುತ್ರದಲ್ಲಿ ಕಳೆದಂತೆ ಕಂಡುಬರುತ್ತದೆ.

ಅದರ ನಂತರದ ವರ್ಷ ಶಾಂತಿಯುತವಾಗಿ ಸಾಗಿತು. ಅವನ ರಾಣಿ, ದೇವಿ ಚೊಚ್ಚಲ ಮಗುವಿನ ತಾಯಿಯಾಗುವುದರಲ್ಲಿದ್ದಳು. ಇದೇ ಸುಮಾರಿಗೆ , ಬಿಂದುಸಾರನು , ಕಾಯಿಲೆ ಬಿದ್ದು ಮರಣಶಯ್ಯೆಯಲ್ಲಿದ್ದನು. ಬಿಂದುಸಾರನು ಸುಸೀಮನ ಪರವಾಗಿದ್ದರೂ, ಸುಸೀಮನ ವೈರಿಯಾಗಿದ್ದ ರಾಧಾಗುಪ್ತನೆಂಬ ಮಂತ್ರಿಯ ನಾಯಕತ್ವದ ಮಂತ್ರಿಗಳ ಗುಂಪೊಂದು, ಅಶೋಕನಿಗೆ ಕರೆಕಳುಹಿಸಿ, ರಾಜನಾಗಲು ಆಹ್ವಾನಿಸಿತು. ಒಂದು ಬೌದ್ಧ ಕತೆಯ ಪ್ರಕಾರ , ಅಶೋಕನು ಕ್ರೋಧಾವೇಶದಲ್ಲಿ ಸುಸೀಮನ್ನೂ ಸೇರಿದಂತೆ ತನ್ನೆಲ್ಲಾ ಸೋದರರನ್ನು ಕೊಂದು, ಅವರ ಹೆಣಗಳನ್ನು ಪಾಟಲೀಪುತ್ರದ ಬಾವಿಯೊಂದರಲ್ಲಿ ಬಿಸಾಕಿದನು. ಈಗಾಗಲೇ ಬಿಂದುಸಾರನು ಸ್ವರ್ಗವಾಸಿಯಾಗಿದ್ದನೋ ಎಂಬುದು ಸ್ಪಷ್ಟವಾಗಿಲ್ಲ. ಅಶೋಕನ ಜೀವನದ ಈ ಘಟ್ಟದಲ್ಲಿ ಅನೇಕರು ಅವನನ್ನು “ಚಂಡ ಅಶೋಕ” ಅರ್ಥಾತ್ ಹೃದಯಹೀನ ಕೊಲೆಗಡುಕ ಎಂದು ಕರೆದರು.

ಈ ಕಾಲದ ಅಶೋಕನ ಕ್ರೌರ್ಯವನ್ನು ಬೌದ್ಧ ಕತೆಗಳು ಬಣ್ಣಿಸುತ್ತವೆ. ಇವುಗಳಲ್ಲಿ ಬಹುತೇಕ ಕತೆಗಳು ನಂಬಲನರ್ಹವಾಗಿದ್ದು , ಅಶೋಕ ಮುಂದೆ ಬೌದ್ಧಧರ್ಮವನ್ನು ಸ್ವೀಕಾರ ಮಾಡಿದ ಮೇಲೆ ಅವನಲ್ಲುಂಟಾದ ಪರಿವರ್ತನೆಯ ಮಹತ್ತನ್ನು ಹೆಚ್ಚುಮಾಡಲು ಹೇಳಿರುವಂತಿದೆ. ಪಟ್ಟಕ್ಕೇರಿದ ಅಶೋಕ ಮುಂದಿನ ಎಂಟುವರ್ಷ ತನ್ನ ರಾಜ್ಯವನ್ನು ವಿಸ್ತರಿಸಿದ; ಅದು ಪೂರ್ವದಲ್ಲಿ ಇಂದಿನ ಬಾಂಗ್ಲಾದೇಶ,ಅಸ್ಸಾಮ್ ವರೆಗೆ, ಪ ಶ್ಚಿಮದಲ್ಲಿ ಇಂದಿನ ಇರಾನ್ ಮತ್ತು ಅಫಘಾನಿಸ್ತಾನದವರೆಗೂ,ಉತ್ತರದಲ್ಲಿ ಪಾಮೀರ್ ಗ್ರಂಥಿಯವರೆಗೂ ಮತ್ತು ದಕ್ಷಿಣದಲ್ಲಿ ದಕ್ಷಿಣಭಾರತದ ಭೂಖಂಡದವರೆಗೂ ಹಬ್ಬಿತ್ತು. ಈಗ ಅಶೋಕನಿಗೆ ಚಕ್ರವರ್ತಿ ಎಂಬ ಬಿರುದು ಪ್ರಾಪ್ತವಾಗಿತ್ತು. ಇದೇ ಸುಮಾರಿಗೆ, ಅವನ ಬೌದ್ಧ ರಾಣಿ, ದೇವಿಗೆ ಎರಡು ಮಕ್ಕಳಾಗಿದ್ದರು. ಮಹೀಂದ್ರ ಎಂಬ ಮಗ ಮತ್ತು ಸಂಘಮಿತ್ರ ಎಂಬ ಮಗಳು.

# ಕಳಿಂಗದ ಯುದ್ಧ :
ಆಶೋಕನ ಆಳಿಕೆಯ ಆರಂಭದ ಭಾಗ ಸಾಕಷ್ಟು ರಕ್ತಸಿಕ್ತವಾಗಿತ್ತೆಂದು ಕಂಡು ಬರುತ್ತದೆ. ಅಶೋಕನು ಒಂದಿಲ್ಲೊಂದು ಯುದ್ಧದಲ್ಲಿ ಸದಾ ತೊಡಗಿಕೊಂಡಿದ್ದು ಒಂದರ ಹಿಂದೊಂದು ಪ್ರದೇಶಗಳನ್ನು ಗೆಲ್ಲುತ್ತ ಅದಾಗಲೇ ದೊಡ್ಡದಾಗಿದ್ದ ಮೌರ್ಯ ಸಾಮ್ರಾಜ್ಯವನ್ನು ಮತ್ತೂ ವಿಸ್ತರಿಸುತ್ತ ತನ್ನ ಸಂಪತ್ತನ್ನು ಹೆಚ್ಚಿಸುತ್ತ ಇದ್ದನು . ಕಳಿಂಗದ ಮೇಲಿನದು ಅವನ ಕೊನೆಯ ಗೆಲುವು. ಕಳಿಂಗವು ಇಂದಿನ ಓರಿಸ್ಸಾದ ಪೂರ್ವ ತೀರದ ರಾಜ್ಯವಾಗಿತ್ತು . ಕಳಿಂಗವು ತನ್ನ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವಗಳ ಬಗ್ಗೆ ಹೆಮ್ಮೆಪಡುತ್ತಿತ್ತು ; ಸಾರ್ವಭೌಮ ಗಣರಾಜ್ಯವಾದ ಕಳಿಂಗವು ಕ್ಷತ್ರಿಯ ರಾಜರನ್ನೂ ರಾಜಧರ್ಮದ ಕಲ್ಪನೆಯನ್ನೂ ಹೊಂದಿದ್ದ ಅಂದಿನ ಭಾರತದ ಆಡಳಿತವ್ಯವಸ್ಥೆಗೆ ಒಂದು ಅಪವಾದವಾಗಿತ್ತು .

ಕಳಿಂಗ ಯುದ್ಧ (ಕ್ರಿ.ಪೂ.265 ಅಥವಾ ಕ್ರಿ.ಪೂ.263)ದ ಆರಂಭಕ್ಕೆ ಕಾರಣ ಏನೆಂದು ನಿಶ್ಚಿತವಾಗಿ ತಿಳಿದಿಲ್ಲ . ಅಶೋಕನ ಸೊದರರಲ್ಲೊಬ್ಬ – ಬಹುಶಃ ಸುಸೀಮನ ಬೆಂಬಲಿಗನೂ – ಕಳಿಂಗಕ್ಕೆ ಓದಿ ಹೋಗಿ ಆಶ್ರಯ ಪಡೆದಿರಬಹುದು. ಇದರಿಂದ ಅಶೋಕನು ಸಿಟ್ಟಿಗೆದ್ದನು . ಈ ದ್ರೋಹಕ್ಕಾಗಿ ಕಳಿಂಗದ ಮೇಲೆ ಆಕ್ರಮಣ ಮಾಡಲು ಅವನ ಮಂತ್ರಿಗಳು ಸಲಹೆ ನೀಡಿದರು . ಅದರಂತೆ,ಅಶೋಕನು ಶರಣಾಗಲು ಕಳಿಂಗದ ರಾಜಮನೆತನಕ್ಕೆ ಆದೇಶ ನೀಡಿದನು. ಅವರು ಈ ಆದೇಶವನ್ನು ಉಲ್ಲಂಘಿಸಿದಾಗ , ಕಳಿಂಗವನ್ನು ಮಣಿಸಲು ಅಶೋಕನು ತನ್ನ ಒಬ್ಬ ಸೇನಾಪತಿಯನ್ನು ಕಳಿಂಗಕ್ಕೆ ಕಳಿಸಿದನು .

ಆದರೆ, ಕಳಿಂಗದ ಚಾಣಾಕ್ಷ ದಂಡನಾಯಕನಿಂದ , ಅಶೋಕನ ಸೇನೆ , ಅದರ ನಾಯಕನೊಂದಿಗೆ, ಧೂಳೀಪಟವಾಯಿತು. ಈ ಸೋಲಿನಿಂದ ತಬ್ಬಿಬ್ಬಾದ ಅಶೋಕ, ಅಲ್ಲಿಯವರೆಗಿನ ಭಾರತದ ಇತಿಹಾಸದಲ್ಲೇ ಅತಿದೊಡ್ಡದಾಗಿದ್ದ ದಂಡಿನೊಡನೆ ಕಳಿಂಗದ ಮೇಲೆ ಏರಿ ಹೋದ. ಕಳಿಂಗವು ಭಾರೀ ಪ್ರತಿರೋಧವನ್ನೊಡ್ಡಿತು . ಆದರೆ ಅಶೋಕನ ಬಲಿಷ್ಠ ಸೈನ್ಯ , ಉತ್ತಮ ಆಯುಧಗಳು ಮತ್ತು ಸೈನಿಕರ ಮತ್ತು ಸೇನಾಪತಿಗಳ ಅನುಭವಗಳಿಗೆ ಅವರು ಸಾಟಿಯಾಗಲಿಲ್ಲ . ಇಡೀ ಕಳಿಂಗವನ್ನು ಲೂಟಿ ಮಾಡಿ ನಾಶ ಮಾಡಲಾಯಿತು ಅಶೋಕನ ನಂತರದ ಶಿಲಾಶಾಸನಗಳು ತಿಳಿಸುವಂತೆ ಕಳಿಂಗದ ಕಡೆ ಒಂದು ಲಕ್ಷ ಜನರು ಮತ್ತು ಅಶೋಕನ ಸೈನ್ಯದ ಹತ್ತು ಸಾವಿರ ಜನರು ಕೊಲ್ಲಲ್ಪಟ್ಟರು . ಸಾವಿರಾರು ಜನ ಸ್ತ್ರೀಪುರುಷರನ್ನು ಗಡಿಪಾರು ಮಾಡಲಾಯಿತು .

# ಬೌದ್ಧಧರ್ಮ ಸ್ವೀಕಾರ ಮತ್ತು ಪ್ರಚಾರ
ಕಳಿಂಗವೆಂದು ಕರಿಯಲ್ಪಡುತ್ತಿದ್ದ ಈಗಿನ ಒರಿಸ್ಸಾ ಅತ್ಯಂತ ಪ್ರಾಚೀನ ರಾಜ್ಯ. ಕೂರ್ಮಪುರಾಣ, ಮಹಾಭಾರತಗಳಲ್ಲೂ ಕಳಿಂಗದ ಉಲ್ಲೇಖ ಬಂದಿದೆ. ಕಾಳಿದಾಸ ತನ್ನ ರಘುವಂಶದಲ್ಲಿ ಸಮುದ್ರ ತೀರದ ರಾಜ್ಯಗಳ ರಾಜಧಾನಿಯಾಗಿ ಇದನ್ನು ಗುರುತಿಸುತ್ತಾನೆ. ಮಹೇಂದ್ರ ಪರ್ವತವನ್ನು ಹೊಂದಿರುವ ಮತ್ತು ದಂಡಕಾರಣ್ಯವನ್ನು ಗಡಿಯಾಗಿ ಪಡೆದಿರುವ ರಾಜ್ಯವೆಂದು ಪರಿಚಯಿಸುತ್ತಾನೆ. ಸಮೃದ್ಧವಾದ ಕರಾವಳಿ ಭಾಗವನ್ನು ಪಡೆದಿರುವ ಕಳಿಂಗ ಸಮುದ್ರ ಮಾರ್ಗದ ಮೂಲಕ ಜಗತ್ತಿಗೆ ಭಾರತದ ಕೊಂಡಿಯಾಗಿತ್ತು.

ದೇವನಾಂಪ್ರಿಯ ಅಶೋಕನಿಗೆ ಕಳಿಂಗವನ್ನು ಏರಿಹೋಗಲು ಇಷ್ಟು ಕಾರಣ ಸಾಕಿತ್ತು. ಕಳಿಂಗದ ಮೇಲೆ ದಾಳಿಗೈದ ಅಶೋಕ ಪೂರ್ಣ ರಾಜ್ಯವನ್ನು ಧ್ವಂಸಗೊಳಿಸಿದ. ಒಂದೂವರೆ ಲಕ್ಷ ಜನರನ್ನು ಬಂಧಿಸಿ ತಂದ. ಒಂದು ಲಕ್ಷ ಜನರನ್ನು ಯುದ್ಧದಲ್ಲಿ ಕೊಲ್ಲಲಾಯ್ತು. ಹೆಣಗಳ ರಾಶಿಯೇ ಅಲ್ಲಿ ಬಿತ್ತು. ಅಶೋಕ ಜಯಶಾಲಿಯಾದ ನಿಜ ಆದರೆ ಸತ್ತವರ ದೇಹಗಳನ್ನು ಕಂಡು ಅವನು ಮಮ್ಮಲಮರುಗಿದ. ಜನರ ನೈತಿಕ ಮತ್ತು ಸಾಮಾಜಿಕ ಬದುಕಿನ ಮೇಲಾದ ಆಘಾತ ಅವನ ಜೀವ ಹಿಂಡಿತು.

ಸದಾ ಒಳಿತನ್ನೇ ಮಾಡುವ ಪರಿವ್ರಾಜಕರು, ಶ್ರಮಣರು, ಬೌದ್ಧ ಪಂಥೀಯರು, ಸಂನ್ಯಾಸಿಗಳು ಇವರನ್ನೂ ಯುದ್ಧ ಬಿಡದೇ ಕೊಂದಿತ್ತು. ಸೆರೆ ಸಿಕ್ಕವರಲ್ಲಿ ಅವರೂ ಇದ್ದರು. ಯುದ್ಧ ಗುಣಮಾಡಲಾಗದಂತಹ ಗಾಯವನ್ನು ಮಾಡಿರುವುದು ಅವನರಿವಿಗೆ ಬಂತು. ಈಗ ಆತ ಶಸ್ತ್ರದ ಗೆಲುವು ಗೆಲುವಲ್ಲವೆಂಬುದನ್ನು ಅರಿತ. ಧರ್ಮದ ಗೆಲುವೇ ನಿಜವಾದ ಗೆಲುವು ಎಂದು ನಿಶ್ಚಯಿಸಿದ. ಧರ್ಮ ವಿಜಯಕ್ಕಾಗಿ ಪಣ ತೊಟ್ಟ. ಅಲ್ಲಿಂದಾಚೆಗೆ ಆತ ಬುದ್ಧನ ಅನುಯಾಯಿಯಾದ ಎನ್ನುತ್ತವೆ ಕೆಲವು ಸಾಹಿತ್ಯಗಳು. ಆದರೆ ಅಶೋಕನೇ ಸ್ತಂಭವೊಂದರ ಬರಹದ ಮೇಲೆ ಆರಂಭದ ಒಂದೆರಡು ವರ್ಷ ನಾನು ಸಾಮಾನ್ಯವಾಗಿಯೇ ಎಲ್ಲರಂತೆ ಇದ್ದೆ. ಆನಂತರವೇ ನನ್ನಲ್ಲಿ ಬಹಳ ಬದಲಾವಣೆ ಬಂದಿದ್ದು ಎಂಬರ್ಥದ ಸಾಲು ಬರೆಸಿದ್ದಾನೆ. ಹೀಗಾಗಿಯೇ ಆತ ಮೊದಲೇ ಬುದ್ಧಾನುಯಾಯಿಯಾಗಿದ್ದ ಆನಂತರ ಕಳಿಂಗ ಯುದ್ಧ ಅವನನ್ನು ಶಾಂತಿ-ಅಹಿಂಸೆಗಳತ್ತ ತೀವ್ರವಾಗಿ ಸೆಳೆಯಿತು ಎಂಬುದನ್ನು ಒಪ್ಪಬಹುದೇನೋ?

ಕಳಿಂಗ ಯುದ್ಧದ ನಂತರ ಅವನಲ್ಲಿ ಮಹತ್ತರವಾದ ಬದಲಾವಣೆ ಬಂದದ್ದನ್ನು ಕಳಿಂಗ ಶಾಸನದಲ್ಲಿ ಕಾಣಬಹುದು. ‘ಪ್ರತಿಯೊಬ್ಬರೂ ನನ್ನ ಮಕ್ಕಳಂತೆ. ಹೇಗೆ ನನ್ನ ಮಕ್ಕಳು ಇಹ ಮತ್ತು ಪರದಲ್ಲಿ ಸುಖ-ಸಮೃದ್ಧಿಯನ್ನು ಪಡೆಯಲೆಂದು ಆಶಿಸುತ್ತೇನೋ ಹಾಗೆಯೇ ಪ್ರತಿಯೊಬ್ಬನಿಗಾಗಿಯೂ ಪ್ರಾಥರ್ಿಸುತ್ತೇನೆ’ ಎಂದಿದೆ. ನಂದರ ಕಾಲದ ಮಗಧಕ್ಕೂ ಮೌರ್ಯರ ಕಾಲದ ಮಗಧಕ್ಕೂ ಇದ್ದ ಅಗಾಧ ವ್ಯತ್ಯಾಸ ಇದು. ಅಶೋಕ ಈ ಪರಿಯ ಪ್ರೇಮದಿಂದಲೇ ತನ್ನ ಪ್ರಜೆಗಳನ್ನು ಗೆದ್ದುಬಿಟ್ಟಿದ್ದ. ಇಲ್ಲವಾದಲ್ಲಿ ಅಷ್ಟು ವಿಸ್ತಾರವಾಗಿದ್ದ ಭೂಖಂಡವನ್ನು ಆಳುವುದು ತಮಾಷೆಯ ಮಾತಾಗಿರಲಿಲ್ಲ.

ಇಡಿಯ ಸಾಮ್ರಾಜ್ಯ ಪ್ರಾಂತ್ಯಗಳಾಗಿ ವಿಭಜಿಸಲ್ಪಟ್ಟಿದ್ದವು. ಇವುಗಳಿಗೆ ರಾಜವಂಶದ ಕುಮಾರರು ಮುಖ್ಯಸ್ಥರಾಗಿ ನೇಮಿಸಲ್ಪಡುತ್ತಿದ್ದರು. ಒಬ್ಬ ಕುಮಾರ ತಕ್ಷಶಿಲೆ, ಮತ್ತೊಬ್ಬ ಸುವರ್ಣಗಿರಿಗೆ ನೇಮಿಸಲ್ಪಟ್ಟಿದ್ದರೆ ಮೂರನೆಯವ ಆಗ ತಾನೆ ವಶವಾಗಿದ್ದ ಕಳಿಂಗದ ಅಧಿಪತಿಯಾಗಿದ್ದ. ಉಜ್ಜಯನಿಗೆ ಮತ್ತೊಬ್ಬ. ಕುಮಾರರಲ್ಲದೇ ರಾಜ್ಯಪಾಲರೂ ಬೇರೆ ಬೇರೆ ಭಾಗಗಳಿಗೆ ಪ್ರಮುಖರಾಗಿ ನೇಮಿಸಲ್ಪಟ್ಟಿದ್ದರು. ಈ ಪ್ರಮುಖರು ಪ್ರಾಂತ್ಯಗಳೊಳಗಿನ ಬೇರೆ ಬೇರೆ ಜಿಲ್ಲೆಗಳಿಗೆ ಮಹಾಮಾತ್ರರೆಂಬ ಪ್ರಮುಖರನ್ನು ನೇಮಿಸಿಕೊಳ್ಳುತ್ತಿದ್ದರು. ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಹೇಳಿರುವಂತೆಯೇ ಅಧಿಕಾರಿಗಳ ನೇಮಕವೂ ನಡೆದಿತ್ತು.

ತೆರಿಗೆ ಸಂಗ್ರಹಿಸಲು ಜಿಲ್ಲಾ ಮಟ್ಟದಲ್ಲಿ ಯುಕ್ತ, ಉಪಯುಕ್ತರು; ಈಗಿನ ಸವರ್ೇ ಅಧಿಕಾರಿಗಳಂತೆ ಭೂಮಿ ಅಳತೆಗೆ ಹಗ್ಗ ಹಿಡಿದು ನಿಲ್ಲುವ ರಜ್ಜಕರು, ನ್ಯಾಯಸ್ಥಾನದಲ್ಲಿ ನ್ಯಾಯ ನೀಡುವ ಜವಾಬ್ದಾರಿ ಹೊತ್ತ ನಗರ ಅಥವಾ ಪೌರ ವ್ಯವಹಾರಕರು. ಇವರೆಲ್ಲ ಸೇರಿ ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅಶೋಕ ಚಾಣಕ್ಯ ಹೇಳಿದಂತೆ ಅಧಿಕಾರಿಗಳನ್ನು ನೇಮಿಸಿದ್ದಲ್ಲದೇ ಧರ್ಮ ಮಹಾಮಾತ್ರರನ್ನೂ ಎಲ್ಲೆಡೆ ಇರಿಸಿದ್ದ. ಬಹುಶಃ ಇವರು ಬುದ್ಧ ಧರ್ಮದ ಚಿಂತನೆಯನ್ನು, ಧರ್ಮ ವಿಜಯದ ಕಲ್ಪನೆಯನ್ನು ಜನರಲ್ಲಿ ತುಂಬುತ್ತಿದ್ದರೆನಿಸುತ್ತದೆ.
ಇವರೆಲ್ಲರೊಂದಿಗೆ ಸಂಪರ್ಕವಿಟ್ಟುಕೊಳ್ಳಲೆಂದೇ ಆಗಾಗ ಮಂತ್ರಿ ಪರಿಷದ್ ಸಭೆ ಸೇರುತ್ತಿದ್ದುದು. ಚಾಣಕ್ಯನ ದೃಷ್ಟಿಯಲ್ಲಿ ಮಂತ್ರಿಯೆಂದರೆ ‘ಇನ್ನು ಶುರುವಾಗಿರದ ಕೆಲಸವನ್ನು ಆರಂಭಿಸುವವನು ಮತ್ತು ಆರಂಭಗೊಂಡ ಕೆಲಸವನ್ನು ಪೂರ್ಣಗೊಳಿಸುವವನು’. ಹೀಗೆ ಮಂತ್ರಿ ಪರಿಷದ್ನೊಂದಿಗೆ ನಡೆದ ಚರ್ಚೆ ಮಹಾಮಾತ್ರರವರೆಗೆ ಸಲೀಸಾಗಿ ಮುಟ್ಟುವಂತಹ ವ್ಯವಸ್ಥೆ ಇತ್ತು.

ಬೌದ್ಧಧರ್ಮವನ್ನು ತನ್ನ ದೇಶದಲ್ಲೂ ವಿದೇಶಗಳಲ್ಲೂ ಕ್ರಿ.ಪೂ. 250ರ ಸುಮಾರಿಗೆ ಪ್ರಚಾರ ಮಾಡಿದನು. ಬೌದ್ಧ ನೀತಿಯನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲ ಗಂಭೀರ ಪ್ರಯತ್ನವನ್ನು ಮಾಡಿದ ಕೀರ್ತಿಯು ಚಕ್ರವರ್ತಿ ಅಶೋಕನಿಗೆ ನಿಸ್ಸಂಶಯವಾಗಿ ಸಲ್ಲಬೇಕು. ಅಶೋಕ ಚಕ್ರವರ್ತಿಯು ಬೌದ್ಧಧರ್ಮದ ಅನುಯಾಯಿಗಳಿಗಾಗಿ ಸಾವಿರಾರು ಸ್ತೂಪಗಳನ್ನೂ, ವಿಹಾರಗಳನ್ನೂ ಕಟ್ಟಿಸಿದನು. ಜಗತ್ಪ್ರಸಿದ್ಧ ಬಿಹಾರದ ಸಾಂಚಿಯ ಸ್ತೂಪದ ಮೊದಲನೆಯ ಸ್ತೂಪವನ್ನು ಕಟ್ಟಿಸಿದವನೂ ಅವನೇ.

ತನ್ನ ರಾಜ್ಯಭಾರದ ಉಳಿದ ಅವಧಿಯಲ್ಲಿ ಅಹಿಂಸೆಯನ್ನು ಅಧಿಕೃತ ಧೋರಣೆಯನ್ನಾಗಿ ಮಾಡಿದನು. ಅನಾವಶ್ಯಕ ಪ್ರಾಣಿವಧೆ ಮತ್ತು ಹಿಂಸೆಯನ್ನು ತಕ್ಷಣದಿಂದಲೇ ರದ್ದು ಮಾಡಿದನು.. ಮೃಗಯಾ ವಿನೋದವನ್ನು ಮತ್ತು ಪ್ರಾಣಿಗಳಿಗೆ ಬರೆ ಹಾಕುವದನ್ನು ನಿಷೇಧಿಸಿ ವನ್ಯಜೀವಿಗಳನ್ನು ರಕ್ಷಿಸಿದನು. ಆಹಾರದ ಮಟ್ಟಿಗೆ ಸೀಮಿತವಾದ ಬೇಟೆಯಾಡುವುದನ್ನು ಅವನು ಒಪ್ಪಿದರೂ , ಶಾಖಾಹಾರದ ಪರಿಕಲ್ಪನೆಯನ್ನೂ ಪ್ರೋತ್ಸಾಹಿಸಿದನು.

ಪ್ರಯಾಣಿಕರಿಗೆ, ತೀರ್ಥಯಾತ್ರಿಗಳಿಗೆಂದು, ರಾಜ್ಯಾದ್ಯಂತ ವಿಶಾಲವಾದ ಉಚಿತ ತಂಗುದಾಣಗಳನ್ನು ಕಟ್ಟಿಸಿದನು. ಸೆರೆಯಾಳುಗಳ ಮೇಲೂ ದಯೆ ತೋರಿ, ವರ್ಷದಲ್ಲಿ ಒಂದು ದಿನ ಅವರಿಗೆ ಹೊರಹೋಗುವ ಅವಕಾಶ ಕೊಟ್ಟನು. ಅವನು ಸಾಮಾನ್ಯ ಜನರ ಆಶೋತ್ತರಗಳನ್ನು ಹೆಚ್ಚಿಸಲು ಅಧ್ಯಯನಕ್ಕಾಗಿ ವಿಶ್ವವಿದ್ಯಾನಿಲಯಗಳನ್ನೂ ವ್ಯಾಪಾರ ಮತ್ತು ಕೃಷಿ ಉದ್ದೇಶಗಳಿಗಾಗಿ ಜಲಸಂಚಾರ ಮತ್ತು ನೀರಾವರಿ ವ್ಯವಸ್ಥೆಗಳನ್ನೂ ಏರ್ಪಡಿಸಿದನು.

ಅವನು ತನ್ನ ಪ್ರಜೆಗಳನ್ನು ಅವರ ರಾಜಕೀಯ, ಧರ್ಮ ,ಜಾತಿಗಳೇನೇ ಇದ್ದರೂ ಸಮಾನವಾಗಿ ಪರಿಗಣಿಸಿದನು. ಸುಲಭವಾಗಿ ವಶಪಡಿಸಿಕೊಳ್ಳಬಹುದಾಗಿದ್ದ ತನ್ನ ಸುತ್ತಲಿನ ದುರ್ಬಲ ರಾಜ್ಯಗಳನ್ನು ಗೌರವಾನ್ವಿತ ಮಿತ್ರದೇಶಗಳನ್ನಾಗಿ ಮಾಡಿಕೊಂಡನು. ಈ ಎಲ್ಲದರಲ್ಲೂ ಅಶೋಕನು ಆಧುನಿಕ ಕಾಲದ ವಿಶ್ವನಾಯಕರನ್ನು ಮೀರಿಸಿದನು.

# ಧರ್ಮ ಸಮ್ಮೇಳನ :
ಅಶೋಕನು ಅರಸನಾಗಿ ಹದಿನೇಳೂ ವರ್ಷಗಳಾಗಿರಬಹುದು. ದುರ್ದೈವದಿಂದ ಬೌದ್ಧ ಸಂಘದ ಸಂನ್ಯಾಸಿಗಳಲ್ಲಿ ಭಿನ್ನಾಭಿಪ್ರಾಯ ಬಂದು ಬೇರೆ ಬೇರೆ ಪಂಗಡಗಳಾದವು. ಸಂಘದಲ್ಲಿ ಮೋಸ ಮಾಡುವ ಸೋಮಾರಿಗಳಾದ ಮತ್ತು ಅನಾಚಾರದ ಸಂನ್ಯಾಸಿಗಳ ಸಂಖ್ಯೆಯು ಹೆಚ್ಚಾಗಿದ್ದಿತ್ತು. ತಮಗೆ ತಿಳಿದಂತೆ ನಡೆಯುವ ಈ ಸನ್ಯಾಸಿಗಳು ಬೌದ್ಧ ಧರ್ಮವೆಂಬ ಚಂದ್ರನಿಗೆ ಗ್ರಹಣಗಳಾಗಿ ಪರಿಣಮಿಸಿದ್ದರು. ಅದರಿಂದಾಗಿ ಕ್ರಮೇಣ ಧರ್ಮದ ಬೆಳಕು ಕ್ಷೀಣಿಸಹತ್ತಿತ್ತು. ಇದನ್ನರಿತ ಅಶೋಕನ ಮನ ನೊಂದಿತು.

ಈ ವಿಪತ್ತಿನಿಂದ ಬೌದ್ಧಧರ್ಮವನ್ನು ರಕ್ಷಿಸಿ, ಅದನ್ನು ವೃದ್ಧಿಸುವ ದೃಷ್ಟಿಯಿಂದ ಸೋಮಾರಿ ಸನ್ಯಾಸಿಗಳನ್ನೆಲ್ಲ ಸಂಘದಿಂದ ಹೊರ ಹಾಕಿದನು.ಇನ್ನುಳಿದ ಶೀಲ ಸಂಪನ್ನರರಾದ, ವಿಚಾರವಂತರಾದ ಬೌದ್ಧ ಸಂನ್ಯಾಸಿಗಳ ಧರ್ಮಸಮ್ಮೆಳನವನ್ನು ಪಾಟಲಿಪುತ್ರದ ಅಶೋಕಾ ರಾಮದಲ್ಲಿ ಕರೆದನು. ದೇಶದ ನಾಲ್ಕು ನಿಟ್ಟುಗಳಿಂದಲೂ ಆಗಮಿಸಿದ್ದ ಬೌದ್ಧ ಸಂನ್ಯಾಸಿಗಳ ಈ ಮಹಾ ಸಮ್ಮೆಳನಕ್ಕೆ ಮೊಗ್ಗಲಿಪುತ್ತ ತಿಷ್ಯನು ಅಧ್ಯಕ್ಷನಾಗಿದ್ದರು. ಗುರುಗಳ ಸಂಗಡ ಅಶೋಕನೇ ಕುಳಿತು, ಪ್ರತಿಯೊಬ್ಬ ಭಿಕ್ಷುವನ್ನೂ (ಬೌದ್ಧ ಸಂನ್ಯಾಸಿ) ಕರೆದು, “ಭಗವಾನ್ ಬುದ್ಧ ಏನನ್ನು ಉಪದೇಶಿಸಿದ?” ಎಂದು ಪ್ರಶ್ನಿಸಿದ. ಚರ್ಚೆ ಮಾಡಿದ. ದೀರ್ಘಕಾಲದವರೆಗೆ ಚರ್ಚೆ ನಡೆದು ಬುದ್ಧದೇವನು ಏನು ಉಪದೇಶ ಮಾಡಿದ ಎಂಬುವುದನ್ನು ಸ್ಪಷ್ಟಮಾಡಿದ್ದಾಯಿತು.

ಈ ಮಹಾಸಮ್ಮೆಳನದಿಂದ ಬೌದ್ಧ ಧರ್ಮಕ್ಕೆ ಹೊಸ ಶಕ್ತಿ ಬಂದಿತು. ಅಶೋಕ ಚಕ್ರವರ್ತಿಯು ಇತರೆ ಸಾಮ್ರಾಟರಂತೆ ಬೇರೆ ನಾಡುಗಳನ್ನು ಗೆಲ್ಲಲು ಸೈನ್ಯಗಳನ್ನು ಕಳೂಹಿಸಲಿಲ್ಲ. “ಧರ್ಮ ವಿಜಯವೇ ವಿಜಯ” ಎಂದು ಸಾರಿದ ಆತ ಬೌದ್ಧ ಭಿಕ್ಷುಗಳನ್ನು ಕಳುಹಿಸಿದ: ತಾನು ಕಂಡ ಬೆಳಖನ್ನು ಎಲ್ಲ ನಾಡುಗಳೀಗೆ ಹರಿಸಲು ಶ್ರಮಿಸಿದ. ಸಿರಿಯ, ಈಜಿಪ್ಟ ಮ್ಯಾಸಿಡೋನಿಯಾ, ಬರ್ಮಾ, ಕಾಶ್ಮೀರ ಮುಂತಾದ ಕಡೆ ಬೌದ್ಧ ಮತ ಪ್ರಚಾರಕರನ್ನು ಕಳೂಹಿಸಿದೆ. ಸಿಂಹಳ (ಈಗಿನ ಶ್ರೀಲಂಕಾ)ಕ್ಕೆ ಸ್ವತಃ ತನ್ನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರೆಯರನ್ನು ಕಳುಹಿಸಿಕೊಟ್ಟನು. ಇದರಿಂದಾಗಿ ಪೂರ್ವ ಎಷ್ಯಾದಲ್ಲಿಯೇ ಬೌದ್ಧ ಧರ್ಮ ಹರಡಿತು.

# ಸಾರನಾಥದ ಸ್ಥಂಭ
ಅಶೋಕನು ತನ್ನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಮಗಳು ಹಗೂ ಉಪಗುಪ್ತರೊಂದಿಗೆ ಮತ್ತೊಮ್ಮೆ ಧರ್ಮಯಾತ್ರೆ ಕೈಗೊಂಡುದುದು ಆತನ ಶಾಸನಗಳಿಂದ ತಿಳಿದುಬರುತ್ತದೆ. ಈ ಯಾತ್ರೆಯಲ್ಲಿ ವೈಶಾಲಿನಗರಕ್ಕೆ ಹೋಗಿ, ಅಲ್ಲಿಯ ಗತವೈಭವವನ್ನು, ಬುದ್ಧದೇವನು ವಿಶ್ರಾಂತಿ ಪಡೆದ ಸ್ಥಳಗಳನ್ನು ನೋಡಿದ. ಅಲ್ಲಿಂದ ಪೂರ್ವ ದಿಕ್ಕಿನತ್ತ ಪ್ರಯಾಣ ಮಾಡಿ ರಾಮಗ್ರಾಮಕ್ಕೆ ಬಂದನು. ಬುದ್ಧದೇವನು ನಿರ್ವಾಣ ಹೊಂದಿದ ಮೇಲೆ ಆತನ ಆಸ್ಥಿಗಳನ್ನು ಸಂಗ್ರಹಿಸಿ, ಅರಸನೊಬ್ಬನು ರಾಮಗ್ರಾಮದ ಹತ್ತಿರ ಕಟ್ಟಿಸಿದ ಸ್ಥೂಪವನ್ನು ಕಂಡನು,. ಮುಂದೆ ಲುಂಬಿನಿ, ಕಪಿಲವಸ್ತು, ಶ್ರಾವಂತಿ, ಗಯಾ ಮುಂತಾದ ನಗರ ಹಾಗೂ ಕ್ಷೇತ್ರಗಳಿಗೆ ಭೇಟಿ ಕೊಟ್ಟನು. ತಾನು ಹೋದಕಡೆಗಳಲ್ಲೆಲ್ಲ ತನ್ನ ಯಾತ್ರೆಯ ಸವಿನೆನಪಿಗೆಂದು ಸ್ಥಂಭಗಳನ್ನು ಸ್ಥೂಪಗಳನ್ನು ಕಟ್ಟಿಸಿದನು. ಅವು ಇಂದಿಗೂ ಅಶೋಕ ಚಕವರ್ತಿಯ ಧರ್ಮಯಾತ್ರೆಯ ಸ್ಮರಣೆಯನ್ನು ಸಾರುತ್ತ ನಿಂತಿವೆ.

ಈ ಸ್ಮಾರಕ ಸ್ಥಂಭಗಳಲ್ಲಿ ಕಾಶಿಯ ಹತ್ತಿರದ ಸಾರನಾಥದಲ್ಲಿಯ ಸ್ಥಂಭವು ಒಂದು. ಸುಮಾರು ಐವತ್ತು ಅಡಿಗಳಿಗಿಂತ ಹೆಚ್ಚು ಎತ್ತರವಾಗಿದ್ದ ಈ ಸ್ತಂಭದ ಮೇಲೆ ನಾಲ್ಕು ಸಿಂಹಗಳು ಕೂಡಿ ನಿಂತುಕೊಂಡಿರುವಂತೆ ಬಹು ಸುಂದರವಾಗಿ ಕೆತ್ತಲ್ಪಟ್ಟಿವೆ. ಇಂದು ನಮ್ಮ ಭಾರತ ಸರಕಾರವು ತನ್ನ ಅಧಿಕೃತ ಮುದ್ರಯಲ್ಲಿ ಆ ಸಿಂಹಗಳ ಚಿಹ್ನೆಯನ್ನೂ ರಾಷ್ಟ್ರಧ್ವಜದಲ್ಲಿ “ಅಶೋಕ ಚಕ್ರ”ದ ಗುರುತನ್ನೂ ಉಪಯೋಗಿಸಿಕೊಂಡು ಆದರ್ಶ ಅರಸನಿಗೆ ಉಚಿತವಾದ ಗೌರವ ಸಲ್ಲಿಸಿದೆ. ಆದರೆ ದುರ್ದೈವದಿಂದ ಸಾರನಾಥ ನಾಶವಾದಾಗ ಈ ಸ್ಥಂಬು ಮುರಿದು ಬಿದ್ದಿದ್ದು, ಅದರ ಅಳಿದುಳಿದ ಭಾಗಗಳು ಇಂದೂನಮಗೆ ಕಾಣಸಿಗುತ್ತವೆ. ಅಶೋಕನು ನಿರ್ಮಿಸಿದನೆನ್ನಲಾದ ಎಂಬತ್ತ ನಾಲ್ಕು ಸಾವಿರ ಸ್ಥೂಪಗಳಲ್ಲಿ ಕಾಂಚಿಸ್ತೂಪವು ಬಹು ಪ್ರಸಿದ್ಧವಾಗಿದ್ದು ಮತ್ತು ಭವ್ಯವಾದುದು. ಎತ್ತರವಾದ ಕಟ್ಟೆಯ ಮೇಲೆ ಐವತ್ತು ನಾಲ್ಕು ಆಡಿ ಎತ್ತರವಾಗಿ ಅರ್ಧವರ್ತುಲಾಕಾರದಿಂದ ಇಂದಿಗೂ ನಿಂತಿದೆ. ಈ ಸ್ಥಂಭಗಳಲ್ಲದೆ, ಸ್ತೂಪಗಳಲ್ಲದೆ ಅಶೋಕನು ಗುಹಾಲಯಗಳನ್ನು, ಕುಕ್ಕಟಾರಾಮಗಳನ್ನು, ಬೌದ್ಧ ವಿಹಾರಗಳನ್ನು , ಅಗಣಿತ ಸಂಖ್ಯೆಯಲ್ಲಿ ಕಟ್ಟಿಸಿದನು. ಇವೆಲ್ಲವುಗಳು ಆಗಿನ ಕಾಲದ ಅತ್ಯುಚ್ಛ ಶಿಲ್ಪ ಕಲೆಯನ್ನು ತೋರಿಸಿಕೊಡುವ ನಿದರ್ಶನಗಳಾಗಿವೆ.

# ನೆನಪಿನಲ್ಲಿಡಬೇಕಾದ ಅಂಶಗಳು :
* ಚಂದ್ರಗುಪ್ತ ಮೌರ್ಯನ ಧರ್ಮ ಗುರು – ಭದ್ರಬಾಹು
* ಚಂದ್ರಗುಪ್ತ ಮೌರ್ಯನು ತನ್ನ ಅಂತ್ಯಕಾಲದಲ್ಲಿ ನೆಲೆಸಿದ್ದ ದಕ್ಷಿಣ ಭಾರತದ ಸ್ಥಳ – ಶ್ರವಣಬೆಳಗೊಳ
* ಚಂದ್ರಗುಪ್ತ ಮೌರ್ಯನ ಉತ್ತರಾಧಿಕಾರಿ – ಬಿಂದುಸಾರ
* ಬಿಂದುಸಾರನ ಮಗ – ಅಶೋಕ
* ವಿಶ್ವದ ಗಣ್ಯ ವ್ಯಕ್ತಿಗಳಲ್ಲಿ ಅಶೋಕ ಒಬ್ಬ ಎಂದು ಬಣ್ಣಿಸಿರುವ ಇತಿಹಾಸ ತಜ್ಞ – ಹೆಚ್.ಜಿ.ವೆಲ್ಸ್
* ಅಶೋಕನನ್ನು ಪ್ರೀತಿಯ ಮೂಲಕ ವಿಜಯ ಸಾಧಿಸಿದ ನವಯುಗದ ಪ್ರವರ್ತಕ ಎಂದಿರುವರು – ಹೆಚ್.ಜಿ.ವೆಲ್ಸ್
* ಅಶೋಕನು ಅಧಿಕಾರಕ್ಕೆ ಬಂದಿದ್ದು – ಕ್ರಿ.ಪೂ.273
* ಅಶೋಕನು ಮಾಡಿದ ಪ್ರಥಮ ಯುದ್ಧ – ಕಳಿಂಗ
* ಕಳಿಂಗ ಯುದ್ಧ ನಡೆದ ಸ್ಥಳ- ಈಗಿನ ಓರಿಸ್ಸಾ
* ಅಶೋಕನ ಶಾಸನಗಳು ರಚಿತವಾದ ಲಿಪಿ – ಪ್ರಾಕೃತ ಭಾಷೆಯ ಬ್ರಾಹ್ಮಿ‌ಲಿಪಿ
* ವಾಯುವ್ಯ ಭಾರತದ ಅಶೋಕನ ಶಾಸನಗಳ ಲಿಪಿ – ಖರೋಷ್ಠಿ
ಅಶೋಕನು ಸ್ವೀಕರಿಸಿದ ಧರ್ಮ – ಬೌದ್ಧ
* ಅಶೋಕನಿಂದ ನೇಮಿಸಲ್ಪಟ್ಟ ಪ್ರಮುಖ ಅಧಿಕಾರಿಗಳು – ಧರ್ಮ ಮಹಾಮಾತ್ರರು
* ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತಿರುವ ಜಿಲ್ಲೆಗಳು – ಚಿತ್ರದುರ್ಗ,ಬಳ್ಳಾರಿ,ಕೊಪ್ಪಳ,ರಾಯಚೂರು,ಗುಲ್ಬರ್ಗಾ
* ಅಶೋಕನ ಕಾಲದ ಗುಹಾಲಯಗಳು -ಬಿಹಾರದ ಬರಾಬರ ಬೆಟ್ಟ
ಅಶೋಕನ ಸ್ತೂಪಗಳಿರುವ ಸ್ಥಳಗಳು – ಸಾರಾನಾಥ,ಸಾಂಚಿ
ಭಾರತದ ರಾಷ್ಟ್ರೀಯ ಲಾಂಛನವನ್ನು ಪಡೆದಿರುವುದು – ಸಾರನಾಥದ ಸ್ತಂಭದಿಂದ
* * ಭಾರತದ ರಾಷ್ಟ್ರೀಯ ಲಾಂಛನದಲ್ಲಿ ರುವ ಪ್ರಾಣಿಗಳು
– ಕುದುರೆ,ಆನೆ,ಎತ್ತು,ಮತ್ತು ಸಿಂಹ
ಅಶೋಕನು ಬೌದ್ಧಧರ್ಮ ಪ್ರಚಾರಕ್ಕಾಗಿ ಪ್ರಚಾರಕರನ್ನು ಕಳುಹಿಸಲ್ಪಟ್ಟ ದೇಶಗಳು – ಸಿಂಹಳ,ಗಾಂಧಾರ,ಟಿಬೆಟ್ , ಚೀನಾ,ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ
* ಅಶೋಕನು ಬೌದ್ಧ ಧರ್ಮ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು ಕಳುಹಿಸಿದ ದೇಶ- ಶ್ರೀಲಂಕಾ
* ಶ್ರೀಲಂಕಾಗೆ ಬೌದ್ಧ ಧರ್ಮ ಪ್ರಚಾರಕ್ಕಾಗಿ ತೆರಳಿದ ಅಶೋಕನ ಮಕ್ಕಳು – ಮಹೇಂದ್ರ ಮತ್ತು ಸಂಘಮಿತ್ರ
* ಅಶೋಕನು ಮೂರನೆಯ ಬೌದ್ಧ ಸಮ್ಮೇಳನವನ್ನು ಏರ್ಪಡಿಸಿದ್ದು – ಪಾಟಲಿಪುತ್ರದಲ್ಲಿ

# ಇತಿಹಾಸದ ಪ್ರಮುಖ ವ್ಯಕ್ತಿಗಳು : 
# ಇತಿಹಾಸದ ಪ್ರಮುಖ ವ್ಯಕ್ತಿಗಳು : ರಾಬರ್ಟ್ ಕ್ಲೈವ್
# ಇತಿಹಾಸದ ಪ್ರಮುಖ ವ್ಯಕ್ತಿಗಳು : ಡೂಪ್ಲೆ

error: Content Copyright protected !!