ಚಂದ್ರಶೇಖರ ಪಾಟೀಲ (ಚಂಪಾ) : 1939-2022
ಬಂಡಾಯ ಸಾಹಿತಿ, ನಾಟಕಕಾರ, ಕನ್ನಡಪರ ಹೋರಾಟಗಾರ, ಗೋಕಾಕ್ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಫೊ.ಚಂದ್ರಶೇಖರ್ ಪಾಟೀಲ್(83) ನಿಧನರಾದರು.
# ಜನನ ಮತ್ತು ಆರಂಭಿಕ ಜೀವನ :
ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳ ಚಂದ್ರಶೇಖರ ಪಾಟೀಲರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ 1939ರ ಜೂನ್ 18ರಂದು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ. ಚಂದ್ರಶೇಖರ ಪಾಟೀಲರು ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರು. ಪಾಟೀಲರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಅವರ ತಂದೆಯವರಿಗೆ ಇಂಗ್ಲಿಷ್ ಬಗ್ಗೆ ಅಭಿಮಾನವಿದ್ದುದರಿಂದ ಅದರಿಂದ ಪ್ರೇರಿತರಾಗಿ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದರು. ಇದಲ್ಲದೆ ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್ ಸಂಸ್ಥೆಯಿಂದ ಇಂಗ್ಲಿಷ್ ಅಧ್ಯಯನದ ಡಿಪ್ಲೊಮ ಪಡೆದರು. ಶಿಕ್ಷಣದ ಪ್ರತಿ ಹಂತದಲ್ಲಿಯೂ ಆಗ್ರ ಶ್ರೇಯಾಂಕ ಗಳಿಸಿದ ಕೀರ್ತಿ ಅವರದ್ದಾಗಿತ್ತು.
ಸ್ನೇಹಿತರಾದ ಗೀರೆಡ್ಡಿ ಗೋವಿಂದರಾಜ್, ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಜೊತೆ ಸೇರಿ ಸಂಕ್ರಮಣ(1964) ಹೆಸರಿನಲ್ಲಿ ದ್ವೈಮಾಸಿಕ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದರು. 2018ರವರೆಗೆ ಪತ್ರಿಕೆ ಪ್ರಕಟವಾಗಿದೆ.
ತುರ್ತು ಪರಿಸ್ಥಿತಿಯ ದಿನಗಳಲ್ಲಿ ಜೆಪಿ ಚಳುವಳಿ ಬೆಂಬಲಿಸಿ ಜೈಲುವಾಸ ಅನುಭವಿಸಿದವರು.
ಕನ್ನಡಕ್ಕಾಗಿ ದುಡಿಯುತ್ತಿದ್ದ ಚಂದ್ರಶೇಖರ ಪಾಟೀಲರನ್ನು ಕರ್ನಾಟಕ ಸರ್ಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿತು. 1996-99ರ ಅವಧಿಗೆ ಈ ಜವಾಬ್ಧಾರಿಯನ್ನು ನಿರ್ವಹಿಸುವುದರ ಜೊತೆಗೆ 2004-08 ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಪರಿಷತ್ತನ್ನು ಪ್ರಬಲ ಹೋರಾಟದ ವೇದಿಕೆಯನ್ನಾಗಿ ರೂಪಿಸಿದ್ದು, ಪುಸ್ತಕ ಮಾರಾಟದ ಮೂಲಕ ಸಣ್ಣ ಪ್ರಮಾಣದ ಪ್ರಕಾಶಕರನ್ನು ಉತ್ತೇಜಿಸಲು ‘ಪುಸ್ತಕ ಸಂತೆ’ಯನ್ನು ಪ್ರತಿ ಶನಿವಾರ ಸಂಜೆ ಏರ್ಪಡಿಸಿದ್ದರ ಜೊತೆಗೆ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಕ್ಷಣ ಸಮಸ್ಯೆಯನ್ನು ಪರಿಹರಿಸಲು ಉನ್ನತ ಮಟ್ಟದ ಸಮಾಲೋಚನ ಸಭೆಯನ್ನು ಏರ್ಪಡಿಸಿದ್ದು, ಗಡಿನಾಡ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಅಧ್ಯಕ್ಷರ ಪುಸ್ತಕ ನಿಧಿಯನ್ನು ಪ್ರಾರಂಭಿಸಿದ್ದು, ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ದೊರೆಯುವಂತಾಗಲು ಹೋರಾಟ ನಡೆಸಿದ್ದು, ಪರಿಷತ್ತಿಗೆ ತನ್ನದೇ ಆದ ವೆಬ್ಸೈಟ್, ಅಂತರ್ಜಾಲ ಸೌಲಭ್ಯಗಳು, ಗಣಕ ಸಮ್ಮೇಳನದ ಆಯೋಜನೆ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದರು.
# ಕಾವ್ಯಕೃಷಿ :
ಕಾವ್ಯಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಚಂಪಾರವರು ಹಲವಾರು ಸಮಸ್ಯೆಗಳ ಮಿಡಿತಕ್ಕೆ ಒಳಗಾಗಿ ಕಾವ್ಯ ಮಾಧ್ಯಮದಿಂದ ನಾಟಕಮಾಧ್ಯಮವನ್ನೂ ಆಯ್ದುಕೊಂಡು ಹಲವಾರು ನಾಟಕಗಳನ್ನೂ ರಚಿಸಿದ್ದು ಅವುಗಳಲ್ಲಿ ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮುಂತಾದವುಗಳು ಪ್ರಖ್ಯಾತವಾಗಿವೆ. ಸಂಕ್ರಮಣ ಕಾವ್ಯ, ಗಾಂ ಗಾಂ, ಜೂನ್ 75 ಮಾರ್ಚ್ 77, ಬಂಡಾಯ ಮತ್ತು ಸಾಹಿತ್ಯ, ನೆಲ್ಸನ್ ಮಂಡೇಲ, ಕನ್ನಡ ನಾಡಿಗೊಂದು ಪ್ರಾದೇಶಿಕ ಪಕ್ಷ, ಸಂಕ್ರಮಣ ಸಾಹಿತ್ಯ, ಬೇಂದ್ರೆ ನಾಕಂಡಂತೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಚಂಪಾ ಇವರ ಸಂಪಾದಿತ ಕೃತಿಗಳೆಂದರೆ ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ಜೂನ್ 75-ಮಾರ್ಚ್ 77, ಬಂಡಾಯ ಮತ್ತು ಸಾಹಿತ್ಯ, ನೆಲ್ಸನ್ಮಂಡೇಲಾ, ಕನ್ನಡನಾಡಿಗೊಂದು ಪ್ರಾದೇಶಿಕ ಪಕ್ಷ, ಸಂಕ್ರಮಣ ಸಾಹಿತ್ಯ (3 ಸಂಪುಟಗಳಲ್ಲಿ), ಗಾಂಧಿ ಎನ್ನುವ ಹೆಸರು ಮುಂತಾದವುಗಳು. ಪಾಟೀಲರ ಇತರ ಕೃತಿಗಳೆಂದರೆ ಬೇಂದ್ರೆ-ನಾ ಕಂಡಂತೆ, ನನಗೆ ಕಂಡಷ್ಟು, 26 ದಿನ 25 ರಾತ್ರಿ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಮತ್ತು ಇಂಗ್ಲಿಷ್ನಲ್ಲಿ ರಚಿಸಿದ ಕೃತಿ AT THE OTHER END ಮುಂತಾದವು.
# ಕನ್ನಡ ಹೋರಾಟ :
ಚಂದ್ರಶೇಖರ ಪಾಟೀಲರು ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಧಾರವಾಡದಲ್ಲಿದ್ದಾಗಿನಿಂದಲೂ ಕನ್ನಡ ಪರ ಕಾಳಜಿ ವಹಿಸಿ, ಕನ್ನಡ ಪರ ಹೋರಾಟವನ್ನು ನಡೆಸುತ್ತಾ ಬಂದವರು. ಹಲವಾರು ಸಂಘಟನೆಗಳಲ್ಲಿ ಪ್ರಮುಖ ಪಾತ್ರವಹಿಸಿದವರು. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಧಾರವಾಡ ನಾಟಕ ಕೂಟದ ಕಾರ್ಯದರ್ಶಿಯಾಗಿ, ಮ್ಯಾಳ ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯ ನಿಯೋಜಕರಾಗಿ-ಹೀಗೆ ಹಲವು ಹತ್ತು ಸಂಘಟನೆಗಳಲ್ಲೂ, ಗೋಕಾಕ ಚಳವಳಿ ಮುಂತಾದ ಅನೇಕ ಜನಪರ ಚಳವಳಿಗಳಲ್ಲೂ ತಮನ್ನು ತೊಡಗಿಸಿಕೊಂಡವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 26ದಿನ 25ರಾತ್ರಿ ಜೈಲುವಾಸವನ್ನನುಭವಿಸಿದರು.
# ಪ್ರಶಸ್ತಿಗಳು :
ರಾಜ್ಯ ಸಾಹಿತ್ಯ ಅಕಾಡೆಮಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ನಾಟಕ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ, ಶಂಕರಗೌಡ ರಂಗಭೂಮಿ, ಆಳ್ವಾಸ್ ನುಡಿಸಿರಿ, ಪಂಪ , ಬಸವ ಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.ಕನ್ನಡ ನಾಡು-ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಹೋರಾಡುತ್ತಾ ಬಂದಿರುವ ಚಂಪಾರವರಿಗೆ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು. ಇವುಗಳಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ (1960, 74, 76), ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಮುಂತಾದವುಗಳು ಪ್ರಮುಖವಾಗಿವೆ.2017 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು 2018 ಸಾಲಿನಲ್ಲಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
# ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ :
2017ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಂಡಲ್ ವರದಿಯ ಅನುಷ್ಠಾನ, ರೈತರ ಚಳುವಳಿ, ಗೋಕಾಕ್ ಚಳುವಳಿ ಹಲವು ಬಂಡಾಯ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
# ಶನಿವಾರದ ಪುಸ್ತಕ ಸಂತೆ ಕಾರ್ಯಕ್ರಮ
ಚಂಪಾ ಅವರು ಕೆಲವು ನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದರು ಅದರಲ್ಲಿ, ಶನಿವಾರದ ಪುಸ್ತಕಸಂತೆ ಕಾರ್ಯಕ್ರಮವೂ ಒಂದು. ಪ್ರತಿಶನಿವಾರವೂ ಪರಿಷತ್ತಿನ ಅಂಗಳದಲ್ಲಿ ಕನ್ನಡ ಪುಸ್ತಕ ಪ್ರಕಾಶಕರನ್ನು ಮತ್ತು ಮಾರಾಟಗಾರರನ್ನು ಆಹ್ವಾನಿಸಿ ರಿಯಾಯಿತಿ ದರದಲ್ಲಿ ಓದುಗರಿಗೆ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಿದರು. ಈ ಪುಸ್ತಕಸಂತೆಯಲ್ಲಿ ಹೊಸ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಜತೆಗೆ ಹಳೆ ಪುಸ್ತಕ ವ್ಯಾಪಾರಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು.
ಅಷ್ಟೇ ಅಲ್ಲದೆ ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸುತ್ತಿದ್ದ ಲೇಖಕರೂ ಇಲ್ಲಿ ತಮ್ಮ ಪುಸ್ತಕಗಳನ್ನು ತಂದು ಮಾರುತ್ತಿದ್ದರು. ಅಪರೂಪದ ಮತ್ತು ಅಲಭ್ಯ ಗ್ರಂಥಗಳು ಇಲ್ಲಿ ಸಿಗುತ್ತಿದ್ದವು. ಇದರ ಜತೆಗೆ ಪರಿಷತ್ತಿನ ಮುಂಭಾಗದಲ್ಲಿ ಹಾಡು, ನೃತ್ಯ, ಭಾಷಣ ಇತ್ಯಾದಿ ಕಾರ್ಯಕ್ರಮಗಳನ್ನು ಬಂದ ಜನರಿಗೆ ಮುದನೀಡಲು ವ್ಯವಸ್ಥೆ ಮಾಡಿದ್ದರು. ಸಾಹಿತ್ಯಪ್ರಿಯರ ಮೆಚ್ಚುಗೆ ಪಡೆದ ಈ ಯೋಜನೆ ೨೯ ಜನವರಿ ೨00೫ರಲ್ಲಿ ಪ್ರಾರಂಭವಾಗಿ ಅವರ ಅಧಿಕಾರಾವಧಿಯ ಅಂತ್ಯದವರೆಗೂ ಚಾಲ್ತಿಯಲ್ಲಿತ್ತು.
ಚಂಪಾ ಅವರು “ಅಧ್ಯಕ್ಷರ ಪುಸ್ತಕನಿಧಿ”ಯನ್ನು ಪ್ರಾರಂಭಿಸಿದರು. ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜನ ಗೌರವ-ಸನ್ಮಾನಾರ್ಥವಾಗಿ ಹಾಕುತ್ತಿದ್ದ ಶಾಲು-ಹಾರಗಳ ಬದಲಿಗೆ (ಹಾರವು ಒಣಗುತ್ತದೆ, ಶಾಲು ಮುದುಡುತ್ತೆ) ಕನ್ನಡ ಪುಸ್ತಕಗಳನ್ನು ನೀಡಲು ಬಿನ್ನವಿಸಿದರು. ಸಾರ್ವಜನಿಕವಾಗಿಯೂ ಮನವಿ ಮಾಡಿಕೊಂಡರು. ಸಾವಿರಾರು ಪುಸ್ತಕಗಳು ‘ನಿಧಿ’ಗೆ ಸಂಗ್ರಹವಾದುವು. ಗಡಿನಾಡ ಕನ್ನಡ ಗ್ರಂಥ ಭಂಡಾರಗಳಿಗೆ, ಗ್ರಾಮೀಣ ಗ್ರಂಥಾಲಯಗಳಿಗೆ ಉಚಿತವಾಗಿ `ಪುಸ್ತಕನಿಧಿ’ಯಿಂದ ಗ್ರಂಥಗಳನ್ನು ಕಳುಹಿಸಿದರು.
# Kannada
➤ ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ
➤ ಕವಿಗಳು – ಸಾಹಿತಿಗಳು ಮತ್ತು ಅವರ ಕಾವ್ಯನಾಮ
➤ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು – ನಡೆದ ಸ್ಥಳ ಮತ್ತು ಅಧ್ಯಕ್ಷರ ಪಟ್ಟಿ
➤ ಕನ್ನಡದ ಪ್ರಸಿದ್ಧ ಗಾದೆಗಳ ಸಂಗ್ರಹ
➤ ಶಿವರಾಮ ಕಾರಂತರ ಪರಿಚಯ : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
➤ ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
➤ ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ100 ವಿರುದ್ಧಾರ್ಥಕ ಶಬ್ದಗಳ ಸಂಗ್ರಹ
➤ ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆ (ನೆನಪಿನಲ್ಲಿಡಬೇಕಾದ ಪ್ರಮುಖ ಅಂಶಗಳು)
➤ ಶಬ್ದಮಣಿದರ್ಪಣ ಮತ್ತು ಕೇಶಿರಾಜ
➤ ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು
➤ ಕನ್ನಡ ಪ್ರಮುಖ ಕವಿಗಳ ಬಿರುದುಗಳು
➤ ಪ್ರಮುಖ ಕವಿಗಳು ಮತ್ತು ಅವರ ಪೂರ್ಣ ಹೆಸರುಗಳು
➤ ಕನ್ನಡನಾಡಿನ ಪ್ರಮುಖ ಬಿರುದಾಂಕಿತರು
➤ ಕನ್ನಡದ 100 ಪ್ರಸಿದ್ಧ ಗಾದೆಗಳು
➤ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ, ಅಧ್ಯಕ್ಷರುಗಳ ಪಟ್ಟಿ
➤ ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ
➤ ಗೋಕಾಕ ಚಳುವಳಿ
➤ ಅನ್ಯಭಾಷಾ ಪದಗಳು ( ವಿವಿಧ ಭಾಷೆಗಳಿಂದ ಕನ್ನಡಕ್ಕೆ ಬಂದ ಪದಗಳ ಪಟ್ಟಿ)
➤ ಕನ್ನಡ ವ್ಯಾಕರಣ : ಪ್ರಾಸ
➤ ಕನ್ನಡ ವ್ಯಾಕರಣ : ಅಲಂಕಾರ
➤ ಕನ್ನಡ ವ್ಯಾಕರಣ : ಅವ್ಯಯಗಳು
➤ ಕನ್ನಡ ವ್ಯಾಕರಣ : ಸರ್ವನಾಮಗಳು
➤ ಕನ್ನಡ ವ್ಯಾಕರಣ : ವಿಭಕ್ತಿ ಪ್ರತ್ಯಯಗಳು
➤ ಕನ್ನಡ ವ್ಯಾಕರಣ : ಛಂದಸ್ಸು ಮತ್ತು ಛಂದಸ್ಸಿನ ಕೃತಿಗಳು
➤ ಸಮಾಸ ಎಂದರೇನು..? ಸಮಾಸಗಳ ವಿಧಗಳೆಷ್ಟು..? ಸಮಾಸಗಳು ಹೇಗೆ ಆಗುತ್ತವೆ..?