ದೇಶದಲ್ಲಿ ಕ್ರೆಡಿಟ್ ಕಾರ್ಡ್ ಸಾಲ ಹೆಚ್ಚಳ
ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಾರೆ. ಪಡೆಯುವ ಉದ್ದೇಶ ಇಲ್ಲದೆ ಹೋದರೂ, ನಗದು ಹಣ ಸಿಗುವ ಆಸೆಯಿಂದ ಆಯಾ ಬ್ಯಾಂಕ್ಗಳಲ್ಲಿ ವಿತರಿಸುವ ಕ್ರೆಡಿಟ್ ಕಾರ್ಡ್ಗಳನ್ನು ಪಡೆಯುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಕ್ರೆಡಿಟ್ ಕಾರ್ಡ್ಗಳ ಮೊರೆ ಹೋಗುತ್ತಿದ್ದು, ಇದರ ಬಳಕೆಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುತ್ತಿರುವ ವೆಚ್ಚ ಕಳೆದ ತಿಂಗಳು (2025ರ ಜನವರಿ) 1.84 ಲಕ್ಷ ಕೋಟಿ ರೂಗೆ ಏರಿದೆ. ಹಿಂದಿನ ತಿಂಗಳಿಗೆ (2024ರ ಡಿಸೆಂಬರ್) ಹೋಲಿಸಿದರೆ ವೆಚ್ಚದಲ್ಲಿ ತುಸು ಇಳಿಕೆಯಾಗಿದೆಯಾದರೂ, ಹಿಂದಿನ ವರ್ಷದ ಇದೇ ತಿಂಗಳಿಗೆ (2024ರ ಜನವರಿ) ಹೋಲಿಸಿದರೆ ಕ್ರೆಡಿಟ್ ಕಾರ್ಡ್ ವೆಚ್ಚ ಶೇ. 10.8ರಷ್ಟು ಹೆಚ್ಚಳವಾಗಿದೆ. ಆರ್ಬಿಐ ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶದ ಪ್ರಕಾರ ಎಚ್ಡಿಎಫ್ಸಿ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ಗಳಿಂದ ಜನರು ಮಾಡುತ್ತಿರುವ ವೆಚ್ಚ ಜನವರಿಯಲ್ಲಿ 50,664 ಕೋಟಿ ರೂ ಇದೆ. ಇದರಲ್ಲಿ ಶೇ. 15.91ರಷ್ಟು ಏರಿಕೆ ಆಗಿದೆ.
ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವೆಚ್ ಶೇ. 20.25ರಷ್ಟು ಹೆಚ್ಚಳವಾಗಿ 35,682 ಕೋಟಿ ರೂ ಆಗಿದೆ. ಇನ್ನೊಂದೆಡೆ ಎಸ್ಬಿಐ ಮತ್ತು ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ವೆಚ್ಚದಲ್ಲಿ ಇಳಿಮುಖವಾಗಿದೆ. ಎಸ್ಬಿಐ ಕ್ರೆಡಿಟ್ ಕಾರ್ಡ್ಗಳ ವೆಚ್ಚ ಶೇ. 6ರಷ್ಟು ಕುಸಿತವಾಗಿ 28,976 ಕೋಟಿ ರೂ ಆಗಿದೆ. ಎಕ್ಸಿಸ್ ಬ್ಯಾಂಕ್ ಶೇ. 7.38ರಷ್ಟು ಕುಸಿತ ಕಂಡಿದೆ. ಜನವರಿಯಲ್ಲಿ ಅದರ ಕ್ರೆಡಿಟ್ ಕಾರ್ಡ್ಗಳ ವೆಚ್ಚ 13,673.41 ಕೋಟಿ ರೂಗೆ ಇಳಿದಿದೆ.
ಪ್ರತೀ ಕಾರ್ಡ್ನ ಸರಾಸರಿ ವೆಚ್ಚದಲ್ಲಿ ಶೇ. 1.09ರಷ್ಟು ಏರಿಕೆ ಆಗಿದೆ. 2025ರ ಜನವರಿಯಲ್ಲಿ ಒಂದು ಕಾರ್ಡ್ಗೆ ಸರಾಸರಿಯಾಗಿ 16,910 ರೂ ಬಳಕೆ ಆಗಿರುವುದು ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬರುತ್ತದೆ. ಪ್ರಮುಖ ಕ್ರೆಡಿಟ್ ಕಾರ್ಡ್ಗಳ ಪೈಕಿ ಐಸಿಐಸಿಐ ಮಾತ್ರವೇ ಸರಾಸರಿ ಕಾರ್ಡ್ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡಿರುವುದು. ಜನವರಿ ತಿಂಗಳಲ್ಲಿ ಐಸಿಐಸಿಐ ಕಾರ್ಡ್ನ ಸರಾಸರಿ ಬಳಕೆ ಶೇ. 11.69ರಷ್ಟು ಏರಿಕೆ ಆಗಿ 19,730 ರೂ ಮುಟ್ಟಿದೆ. ಎಚ್ಡಿಎಫ್ಸಿ ಬ್ಯಾಂಕ್, ಎಸ್ಬಿಐ, ಎಕ್ಸಿಸ್ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ಗಳ ಸರಾಸರಿ ವೆಚ್ಚವು ಹಿಂದಿನ ವರ್ಷದಕ್ಕಿಂತ ಕಡಿಮೆ ಇದೆ.
ಜನವರಿ ತಿಂಗಳಲ್ಲಿ ಹೊಸ ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ ಶೇ. 9.4ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಚಾಲನೆಯಲ್ಲಿರುವ ಒಟ್ಟು ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ 10.9 ಕೋಟಿಗೆ ಏರಿದೆ. ಜನವರಿಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್ 2,99,761 ಹೊಸ ಕಾರ್ಡ್ಗಳನ್ನು ಮಾರಿದೆ. ಎಸ್ಬಿಐ 2,34,537 ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಿದೆ. ಐಸಿಐಸಿಐ ಬ್ಯಾಂಕ್ನ 1,83,157 ಕ್ರೆಡಿಟ್ ಕಾರ್ಡ್ಗಳು ಮಾರಾಟವಾಗಿವೆ. ಆದರೆ, ಎಕ್ಸಿಸ್ ಬ್ಯಾಂಕ್ನ ಬಳಕೆ ಇರುವ ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ 14,862ರಷ್ಟು ಕಡಿಮೆ ಆಗಿದೆ.
ಜೂನ್ 2018 ರ ಹೊತ್ತಿಗೆ, ಪ್ರಪಂಚದಲ್ಲಿ 7.753 ಬಿಲಿಯನ್ ಕ್ರೆಡಿಟ್ ಕಾರ್ಡ್ಗಳು ಇದ್ದವು. 2020 ರಲ್ಲಿ, ಯುನೈಟೆಡ್ ಸ್ಟೇಟ್ಸ್ನಲ್ಲಿ 1.09 ಬಿಲಿಯನ್ ಕ್ರೆಡಿಟ್ ಕಾರ್ಡ್ಗಳು ಚಲಾವಣೆಯಲ್ಲಿದ್ದವು ಮತ್ತು ದೇಶದಲ್ಲಿ 72.5% ವಯಸ್ಕರು (187.3 ಮಿಲಿಯನ್) ಕನಿಷ್ಠ ಒಂದು ಕ್ರೆಡಿಟ್ ಕಾರ್ಡ್ ಹೊಂದಿದ್ದರು.
ಕ್ರೆಡಿಟ್ ಕಾರ್ಡ್ ಪ್ರಯೋಜನಗಳೇನು?
ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗಳಿಂದ ರಿಯಾಯಿತಿ ಕೊಡುಗೆ, ರಿವಾರ್ಡ್ ಪಾಯಿಂಟ್ಸ್ ಸೇರಿದಂತೆ ಹಲವು ಪ್ರಯೋಜನಗಳನ್ನು ನೀವು ಪಡೆಯಬಹುದಾಗಿದೆ. ಆದರೆ, ನೀವು ಕ್ರೆಡಿಟ್ ಕಾರ್ಡ್ನೊಂದಿಗೆ ಎಟಿಎಂಗಳಿಂದ ಎಂದಿಗೂ ಹಣವನ್ನು ಡ್ರಾ ಮಾಡಬೇಡಿ. ಕೇವಲ ತುರ್ತು ಸಂದರ್ಭದಲ್ಲಿ ಮಾತ್ರ ಈ ಆಯ್ಕೆ ಬಳಸುವುದು ಉತ್ತಮ. ಇದಲ್ಲದೆ, ನಿಮ್ಮ ಡೆಬಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿದಂತೆ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿದರೆ, ಭಾರೀ ಮೊತ್ತದ ಬಿಲ್ ಬರುವುದು ಖಚಿತ. ಈ ವಿಷಯ ನಿಮಗೆ ಗೊತ್ತಿರಲಿ.
ವಾಸ್ತವವಾಗಿ, ಅನೇಕರು ಕ್ರೆಡಿಟ್ ಕಾರ್ಡ್ ಬಳಸಿದರೂ ಸಹ ನಂತರದಲ್ಲಿ ಅದರಿಂದ ಪಡೆದ ಹಣವನ್ನು ಪಾವತಿಸಲು ಮರೆತೇ ಹೋಗುತ್ತಾರೆ. ತಾವು ಪಡೆದಿರುವ ಹಣ ಸಾಲದ ರೂಪದಲ್ಲಿ ಎಂಬುದನ್ನೇ ಮರೆತಿರುತ್ತಾರೆ. ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಅನುಕೂಲಗಳು ಹೇಗಿದೆಯೋ, ಹಾಗೆಯೇ ಅನಾನುಕೂಲಗಳೂ ಇವೆ. ಈ ಕಾರ್ಡ್ಗಳನ್ನು ಬಳಸಿ ಹಣವನ್ನು ಡ್ರಾ ಮಾಡಿಕೊಳ್ಳವವರ ಸಂಖ್ಯೆ ಹೆಚ್ಚಿದೆ. ಆದಾಗ್ಯೂ, ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಪಡೆಯುವುದು ಅಪಾಯಕಾರಿ. ಹೀಗೆ ಮಾಡುವುದರಿಂದ ಅನಾವಶ್ಯಕವಾಗಿ ಹೆಚ್ಚಿನ ಹಣವನ್ನು ನೀವು ಕಟ್ಟುತ್ತೀರಿ.
ಕ್ರೆಡಿಟ್ ಕಾರ್ಡ್ ಶುಲ್ಕಗಳು
ಕ್ರೆಡಿಟ್ ಕಾರ್ಡ್ ಬಳಸುವಾಗ, ನೀವು ವಿವಿಧ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಮೊತ್ತದ ಮೇಲೆ ವಿಧಿಸಲಾಗುವ ಬಡ್ಡಿದರಗಳು ನಿರೀಕ್ಷೆಗಿಂತ ಹೆಚ್ಚಿರುತ್ತವೆ. ಇದಲ್ಲದೆ, ನೀವು ಹಣವನ್ನು ಡ್ರಾ ಮಾಡಿಕೊಂಡ ನಂತರ ಪಾವತಿಯನ್ನು ವಿಳಂಬ ಮಾಡಿದರೆ, ವಿಶೇಷ ದಂಡವನ್ನೇ ಕಟ್ಟಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ನಲ್ಲಿ ನಗದು ಮುಂಗಡ ಶುಲ್ಕ
ನಿಮ್ಮ ಕ್ರೆಡಿಟ್ ಕಾರ್ಡ್ನಿಂದ ಹಣವನ್ನು ಡ್ರಾ ಮಾಡಿಕೊಂಡಾಗ ನೀವು ನಗದು ಮುಂಗಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಶುಲ್ಕವು ಡ್ರಾ ಮಾಡಿದ ಮೊತ್ತದ ಸುಮಾರು 2.5ರಿಂದ 3 ಪ್ರತಿಶತದಷ್ಟಿದೆ. ಇದರ ಹೊರತಾಗಿ, ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಇತರ ಪಾವತಿಗಳ ಮೇಲೆ ವಿವಿಧ ಶುಲ್ಕಗಳು ಸಹ ಬೀಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ನೀವು ಖರ್ಚು ಮಾಡಿದ ಮೊತ್ತಕ್ಕಿಂತ ಹೆಚ್ಚಿನದ್ದೇ ಆಗಿರಬಹುದು ಎಂಬುದು ಗಮನಾರ್ಹ.