Current AffairsSpardha Times

ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

Share With Friends

ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿ ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ನೇಮಕವಾಗಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಪಿ.ಕೆ. ಮಿಶ್ರಾ ಅವರು 2019ರ ಸೆಪ್ಟೆಂಬರ್ 11ರಿಂದ ಪ್ರಧಾನ ಮಂತ್ರಿಯವರ ಮೊದಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈಗ ಎರಡನೇ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಶಕ್ತಿಕಾಂತ ದಾಸ್ ಅವರ ನೇಮಕಾತಿಯು ಪ್ರಧಾನ ಮಂತ್ರಿಯವರ ಅವಧಿ ಮುಗಿಯುವವರೆಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರಿಯಲಿದೆ.

*ಸರ್ಕಾರಿ ಚಿಂತಕರ ಚಾವಡಿ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರ ಅಧಿಕಾರಾವಧಿಯನ್ನು ಫೆಬ್ರವರಿ 24ರಿಂದ ಒಂದು ವರ್ಷ ವಿಸ್ತರಿಸಲಾಗಿದೆ. 1987ರ ಬ್ಯಾಚ್‌ನ ನಿವೃತ್ತ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯನ್ನು ಫೆಬ್ರವರಿ 2023ರಲ್ಲಿ 2 ವರ್ಷಗಳ ಕಾಲ ನೀತಿ ಆಯೋಗದ ಸಿಇಒ ಆಗಿ ನೇಮಿಸಲಾಯಿತು.

*ಶಕ್ತಿಕಾಂತ ದಾಸ್ ಅವರು ಡಿಸೆಂಬರ್ 2018ರಿಂದ 6 ವರ್ಷಗಳ ಕಾಲ ಆರ್‌ಬಿಐ ಮುಖ್ಯಸ್ಥರಾಗಿದ್ದರು. 4 ದಶಕಗಳಲ್ಲಿ ಅವರು ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಣಕಾಸು, ತೆರಿಗೆ, ಕೈಗಾರಿಕೆಗಳು, ಮೂಲಸೌಕರ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

*ಕೊವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಆರ್‌ಬಿಐ ಗವರ್ನರ್ ಆಗಿ ಅವರು ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಭಾರತದ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

*ಆರ್ಥಿಕತೆಯ ಮೇಲೆ ಸಾಂಕ್ರಾಮಿಕ ರೋಗದ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸುವಾಗ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಹಣಕಾಸು ನೀತಿ, ದ್ರವ್ಯತೆ ಪರಿಸ್ಥಿತಿಗಳು ಮತ್ತು ನಿಯಂತ್ರಕ ನೀತಿಗಳನ್ನು ಒಳಗೊಂಡ ಹಲವಾರು ಸಾಂಪ್ರದಾಯಿಕ, ಅಸಾಂಪ್ರದಾಯಿಕ ಮತ್ತು ನವೀನ ನೀತಿ ಕ್ರಮಗಳ ಮೂಲಕ ಅವರು ಕೇಂದ್ರ ಬ್ಯಾಂಕಿನ ಸಾಂಕ್ರಾಮಿಕ ಪ್ರತಿಕ್ರಿಯೆಯನ್ನು ಮುನ್ನಡೆಸಿದ್ದರು.

*1957ರ ಫೆಬ್ರವರಿ 26ರಂದು ಭುವನೇಶ್ವರದಲ್ಲಿ ಜನಿಸಿದ ಶಕ್ತಿಕಾಂತ ದಾಸ್ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

*1980ರ ಬ್ಯಾಚ್ ತಮಿಳುನಾಡು ಕೇಡರ್‌ನ ಮಾಜಿ ಐಎಎಸ್ ಅಧಿಕಾರಿಯಾಗಿರುವ ಅವರು ತಮಿಳುನಾಡು ಮತ್ತು ಕೇಂದ್ರ ಸರ್ಕಾರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. 2021ರಲ್ಲಿ ಸಾರ್ವಜನಿಕ ಆಡಳಿತಕ್ಕೆ ನೀಡಿದ ಕೊಡುಗೆಗಳಿಗಾಗಿ ಶಕ್ತಿಕಾಂತ ದಾಸ್ ಅವರಿಗೆ ಉತ್ಕಲ್ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಲೆಟರ್ಸ್ (ಡಿ ಲಿಟ್) ಪದವಿಯನ್ನು ನೀಡಿತು.

Leave a Reply

Your email address will not be published. Required fields are marked *