UPSC Chairman : ಯುಪಿಎಸ್‌ಸಿ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಅಜಯಕುಮಾರ್ ನೇಮಕ
UPSC Chairman: Retired IAS officer Ajay Kumar appointed as new UPSC chairman
ಭಾರತದ ಅತ್ಯುನ್ನತ ಹುದ್ದೆಗಳಿಗೆ ಆಯ್ಕೆ ಮಾಡುವ ಕೇಂದ್ರೀಯ ಲೋಕಸೇವಾ ಆಯೋಗ(UPSC)ದ ಅಧ್ಯಕ್ಷರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಅಜಯಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಎರಡು ವಾರದಿಂದ ಕೇಂದ್ರೀಯ ಲೋಕಸೇವಾ ಆಯೋಗದ ಅಧ್ಯಕ್ಷರ ಹುದ್ದೆ ಖಾಲಿ ಇತ್ತು. ಒಂದು ವರ್ಷ ಕಾಲ ಅಧ್ಯಕ್ಷರಾಗಿದ್ದ ಮತ್ತೊಬ್ಬ ಹಿರಿಯ ನಿವೃತ್ ಐಎಎಸ್ ಅಧಿಕಾರಿ ಪ್ರೀತಿ ಸೂದನ್ ಅವರ ಅವಧಿ ಕಳೆದ ತಿಂಗಳೇ ಮುಗಿದಿತ್ತು. ಈಗ ಹೊಸ ಅಧ್ಯಕ್ಷರನ್ನು ಯುಪಿಎಸ್ಸಿಗೆ ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ.
ಕೇಂದ್ರ ಸಿಬ್ಬಂದಿ ಸಚಿವಾಲಯ ಮಂಗಳವಾರ ( 13-05-2025) ಹೊರಡಿಸಿರುವ ಆದೇಶದ ಪ್ರಕಾರ, ಮಾಜಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಅವರನ್ನು ಯುಪಿಎಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 1985ನೇ ತಂಡದ, ಕೇರಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದ ಅಜಯ್ ಕುಮಾರ್, 2019ರ ಅಗಸ್ಟ್ 23ರಿಂದ 2022ರ ಅಕ್ಟೋಬರ್ 31ರವರೆಗೂ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ, ಕೇಂದ್ರ ಲೋಕಸೇವಾ ಆಯೋಗದಲ್ಲಿ (ಯುಪಿಎಸ್‌ಸಿ) ಇಬ್ಬರು ಸದಸ್ಯರ ಸ್ಥಾನಗಳು ಖಾಲಿ ಇವೆ. ಯುಪಿಎಸ್‌ಸಿ ಅಧಿಕಾರ ಅವಧಿಯು ಆರು ವರ್ಷ ಕಾಲ ಅಥವಾ 65 ವರ್ಷ ಆಗುವವರೆಗೂ ಇರುತ್ತದೆ. ಐಎಎಸ್, ಐಪಿಎಸ್, ಐಎಫ್‌ಎಸ್ ಸೇರಿದಂತೆ ಕೇಂದ್ರ ಆಡಳಿತಾತ್ಮಕ ಹುದ್ದೆಗಳಿಗೆ ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಯುಪಿಎಸ್‌ಸಿ ಕೈಗೊಳ್ಳಲಿದೆ.
ರಕ್ಷಣಾ ಕಾರ್ಯದರ್ಶಿಯಾಗಿ ನಿವೃತ್ತರಾದ ಅವರು ಭಾರತದ ಅತ್ಯಂತ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ರಚನೆ, ಅಗ್ನಿವೀರ್ ಯೋಜನೆ ಆತ್ಮನಿರ್ಭರ ಭಾರತ್ ಉಪಕ್ರಮಗಳು ಮತ್ತು ಆರ್ಡನೆನ್ಸ್ ಕಾರ್ಖಾನೆಗಳ ಕಾರ್ಪೊರೇಟೀಕರಣದಂತಹ ಪರಿವರ್ತನಾತ್ಮಕ ರಕ್ಷಣಾ ಸುಧಾರಣೆಗಳನ್ನು ಅವರು ಮುನ್ನಡೆಸಿದ್ದರು.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದಲ್ಲಿ ಉನ್ನತ ಅಧಿಕಾರಿಯಾಗಿ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಯುಪಿಐ, ಆಧಾರ್, ಮೈಗನ್ ಮತ್ತು ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ ನಂತಹ ಡಿಜಿಟಲ್ ಇಂಡಿಯಾ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನಾ ಉದ್ಯಮವನ್ನು ಉತ್ತೇಜಿಸುವ ಮೂಲಕ ಅವರು ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿ 2012 ಅನ್ನು ಸಹ ರೂಪಿಸಿದ್ದರು. ಅಜಯ್ ಕುಮಾರ್ ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಂಥೀಯ ನೇತೃತ್ವದ ಸರ್ಕಾರಗಳೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಭಾರತ ಸರ್ಕಾರ ಮತ್ತು ಕೇರಳ ಸರ್ಕಾರ ಎರಡರಲ್ಲೂ ನಿರ್ಣಾಯಕ ಹುದ್ದೆಗಳನ್ನು ಅಲಂಕರಿಸಿದ್ದರು. ಇದರಲ್ಲಿ ಕೆಲ್ಸಾನ್ನ ಪ್ರಧಾನ ಕಾರ್ಯದರ್ಶಿ ಮತ್ತು ಎಂಡಿ ಹುದ್ದೆಯೂ ಸೇರಿದೆ. ಅದನ್ನು ಪುನರುಜ್ಜಿವನಗೊಳಿಸಲು ಅವರು ಸಹಾಯ ಮಾಡಿದ್ದರು.
ಮಿನ್ನೇಸೋಟ ವಿಶ್ವವಿದ್ಯಾಲಯದಿಂದ ವ್ಯವಹಾರ ಆಡಳಿತದಲ್ಲಿ ಪಿಎಚ್ಡಿ ಮತ್ತು ಅನ್ವಯಿಕ ಅರ್ಥಶಾಸ್ತ್ರದಲ್ಲಿ ಎಂಎಸ್ ಪದವಿ ಪಡೆದಿದ್ದಾರೆ, ಕೇವಲ ಮೂರು ವರ್ಷಗಳಲ್ಲಿ ಎರಡನ್ನೂ ಪೂರ್ಣಗೊಳಿಸಿದ್ದರು. ಅಲ್ಲದೆ, ಐಐಟಿ ಕಾನ್ಸುರ ಬಿಟೆಕ್ ಪದವೀಧರ ಮತ್ತು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರ್‌ಗಳ ಫೆಲೋ ಪಡೆದಿದ್ದಾರೆ.
ಐಎಎಸ್, ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ಇತರ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುವ ಯುಪಿಎಸ್ಸಿಗೆ ಒಬ್ಬ ಅಧ್ಯಕ್ಷರು ನೇತೃತ್ವ ವಹಿಸುತ್ತಾರೆ ಮತ್ತು ಗರಿಷ್ಠ 10 ಸದಸ್ಯರನ್ನು ಹೊಂದಬಹುದು. ಪ್ರಸ್ತುತ, ಆಯೋಗದಲ್ಲಿ ಇಬ್ಬರು ಸದಸ್ಯರ ಖಾಲಿ ಹುದ್ದೆ ಇದೆ. ಯುಪಿಎಸ್ಸಿ ಅಧ್ಯಕ್ಷರನ್ನು ಆರು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಾಗುವವರೆಗೆ ನೇಮಿಸಲಾಗುತ್ತದೆ.