ಜಿ.ಪಿ.ರಾಜರತ್ನಂ ಬಗ್ಗೆ ನಿಮಗೆಷ್ಟು ಗೊತ್ತು..?
ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ ಈ ಪದ್ಯ ಅನೇಕ ದಶಕಗಳು ಕಳೆದರೂ ನಾಲಿಗೆ ಮೇಲೆ ಇಂದಿಗೂ ನಲಿದಾಡುತ್ತಿದೆ. ಅದೇ ರೀತಿ ನರಕಕ್ಕಿಳಿಸಿ, ನಾಲಿಗೆ ಸೀಳಿಸಿ, ಬಾಯಿ ಹೊಲೆಸಿ ಹಾಕಿದರೂ ಮೂಗಿನಲ್ ಕನ್ನಡ ಪದವಾಡ್ತೀನಿ ನನ್ನ ಮನಸಾ ನೀ… ಕಾಣೆ… ಇವು ಕನ್ನಡದ ಪ್ರೀತಿಗೆ ದೊಡ್ಡ ಉದಾಹರಣೆಯಾದರೆ, ಬ್ರಹ್ಮ ನಿನಗೆ ಜೋಡಿಸ್ತೀನಿ ಎಂಡ ಮುಟ್ಟಿದ ಕೈನ ಎಂಬ ರತ್ನನ ಪದಗಳು ಕಾಳಿಂಗ ರಾಯರಿಂದ ಹಿಡಿದು ಇಲ್ಲಿಯ ತನಕ ಎಲ್ಲ ಸುಗಮ ಸಂಗೀತಗಾರರ ಧ್ವನಿಗಳಲ್ಲಿ ನಿರಂತರವಾಗಿ ಹರಿಯುತ್ತಲೇ ಇದೆ. ಹೀಗೆ ಒಬ್ಬ ಸಾಹಿತಿ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನ ಜನರಿಗೂ ಕಾವ್ಯವನ್ನು ಮತ್ತು ಸಾಹಿತ್ಯವನ್ನು ಕೊಟ್ಟದ್ದು ಜಿ.ಪಿ.ರಾಜರತ್ನಂ ಬಿಟ್ಟರೆ ಬೇರೆ ಯಾರಿಂದಲೂ ಇಲ್ಲ ಎಂದು ಹೇಳಬಹುದು. ಮಕ್ಕಳಿಗಾಗಿ ಗಾಂಧಿ, ಬುದ್ಧ, ಮಹಾವೀರ, ಟಿ.ಪಿ.ಕೈಲಾಸಂ ಹೀಗೆ ಅನೇಕರ ವ್ಯಕ್ತಿ ಚಿತ್ರಗಳನ್ನು ನೀಡಿದಂತಹ ಹಿರಿಮೆ ಇವರದು. ಅದೇ ರೀತಿಯಲ್ಲಿ ರತ್ನನ ಪದಗಳು, ನಾಗನ ಪದಗಳು ಇವರ ಭಾಷಾ ಬಳಕೆಗೆ ಅತ್ಯದ್ಭುತವಾದಂತಹ ಉದಾಹರಣೆಗಳಾಗಿವೆ.
ಕನ್ನಡ ಭಾಷೆಯನ್ನು ಎಷ್ಟೆಲ್ಲ ಪ್ರಾಕಾರಗಳಲ್ಲಿ ಕಾವ್ಯದಲ್ಲೂ ಬಳಸಬಹುದು ಎಂದು ತೋರಿಸಿಕೊಟ್ಟವರು ಜಿ.ಪಿ.ರಾಜರತ್ನಂ. ಅನೇಕ ವಿಮರ್ಶಾತ್ಮಕ ಕೃತಿಗಳನ್ನು ಅದರಲ್ಲೂ ಜೈನ ಸಾಹಿತ್ಯ, ಬೌದ್ಧ ಸಾಹಿತ್ಯದ ಬಗ್ಗೆ ಇವರು ಮಾಡಿರುವ ಸಾಧನೆ ಅಪೂರ್ವವಾದದ್ದು. ಅಂಕಣಕಾರರಾಗಿ, ಅನೇಕ ಪ್ರಮುಖ ದಿನಪತ್ರಿಕೆಗಳಿಗೆ ಲೇಖನಗಳನ್ನು ಸಹ ಬರೆದು ಇವುಗಳನ್ನು ಸಂಗ್ರಹ ರೂಪದಲ್ಲಿ ಹೊರತಂದಿದ್ದಾರೆ. ಜಿ.ಪಿ.ರಾಜರತ್ನಂ ನಿಜಕ್ಕೂ ಕನ್ನಡದ ಅಮೂಲ್ಯವಾದ ರತ್ನ ಎಂಬುದರಲ್ಲಿ ಎರಡನೆ ಮಾತಿಲ್ಲ.
1908ರ ಡಿಸೆಂಬರ್ 8ರಂದು ಹುಟ್ಟಿದ ರಾಜರತ್ನಂ ಗುಂಡ್ಲು ಪಂಡಿತರ ವಂಶ ಎಂದೇ ಹೆಸರಾದವರು. ಇವರ ಹಿರಿಯರು ಮೈಸೂರಿನ ಮಹಾರಾಜರ ಆಸ್ಥಾನದಲ್ಲಿ ಪಂಡಿತರಾಗಿದ್ದರು. ತಂದೆ ಜಿ.ಪಿ.ಗೋಪಾಲಕೃಷ್ಣ ಐಯ್ಯಂಗಾರರು ಉಪಾಧ್ಯಾಯರಾಗಿದ್ದರು. ರಾಜರತ್ನಂ ಅವರು ನೇರವಾಗಿ ಲೋಯರ್ ಸೆಕೆಂಡರಿ ಶಿಕ್ಷಣಕ್ಕೆ ಸೇರಿ ವಿದ್ಯಾಭ್ಯಾಸ ಆರಂಭಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಂಎ ಪದವಿ ಪಡೆದ ಇವರು ಅನೇಕ ವರ್ಷಗಳ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಉಪಾಧ್ಯಾಯರಾಗಿ ಕೆಲಸ ನಿರ್ವಹಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಪಂಡಿತರಾಗಿ, ಮೈಸೂರು, ಬೆಂಗಳೂರು, ತುಮಕೂರು ಮುಂತಾದ ಕಡೆಗಳಲ್ಲಿ ಅನೇಕ ಕಾಲೇಜುಗಳಲ್ಲಿ ಕನ್ನಡದ ಪಾಠ ಮಾಡಿ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದರು.
ರಾಜರತ್ನಂ ಅವರನ್ನು ಕವಿ, ನಾಟಕಕಾರ, ವಿಮರ್ಶಕ, ಮಕ್ಕಳ ಸಾಹಿತಿ ಹೀಗೆ ಅನೇಕ ಪ್ರಕಾರಗಳಲ್ಲಿ ಗುರುತಿಸಬಹುದು. ಚೀನಾ ದೇಶದ ಬೌದ್ಧ ಯಾತ್ರಿಕರು ಎಂಬ ಪುಸ್ತಕಕ್ಕೆ ದೇವರಾಜ ಬಹದ್ದೂರ್ ಬಹುಮಾನ ಬಂದಿದೆ. 1978ರಲ್ಲಿ ದೆಹಲಿಯಲ್ಲಿ ನಡೆದ 50ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲ್ಪಟ್ಟಿದ್ದಾರೆ. 1977ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿಲಿಟ್ ಪ್ರಶಸ್ತಿ ಪಡೆದಿದ್ದಾರೆ. ರತ್ನನ ಪದಗಳು, ನಾಗನ ಪದಗಳು, ಜಪಾನಿನ ಹಿಮಗಿರಿ, ಶಾಂತಿ ಇವರ ಕವನ ಸಂಕಲನಗಳಾಗಿದ್ದು, ಮಕ್ಕಳಿಗಾಗಿ ತುತ್ತೂರಿ, ತುಂಟ ಗಣಪತಿ, ಮುದ್ದುಕೃಷ್ಣ, ಕಲ್ಲು-ಸಕ್ಕರೆ, ಕಡಲೆ ಪುರಿ ಎಂಬ ಕವಿತೆಗಳ ಸಂಕಲನಗಳನ್ನು ರಚಿಸಿದ್ದಾರೆ. ಪುರುಷ ಸರಸ್ವತಿ ಎಂಬ ಒಂದು ವಿಡಂಬನಾ ಕೃತಿ ರಚಿಸಿದ್ದಾರೆ. ಗಂಡು ಗೊಡಲಿ, ನರಕದ ನ್ಯಾಯ ಕಂಬಲಿ ಸೇವೆ ಮುಂತಾದವು ಸ್ವತಂತ್ರ ನಾಟಕಗಳಾಗಿದ್ದು, ಮಕ್ಕಳಿಗಾಗಿಯೂ ಅನೇಕ ನಾಟಕ ಕೃತಿಗಳನ್ನು ರಚಿಸಿದ್ದಾರೆ.
ರನ್ನನ ರಸಘಟ್ಟಿ, ಹೊಸಗನ್ನಡ, ಯಶೋಧರ ಚರಿತ್ರೆ, ಚಿಕ್ಕದೇವ ಅರಸ ಬಿನ್ನಪ ಮುಂತಾದ ವಿಮರ್ಶಾತ್ಮಕ ಕೃತಿಗಳನ್ನೂ ನೀಡಿರುವ ರಾಜರತ್ನಂ ಅವರು ಟಿ.ಪಿ.ಕೈಲಾಸಂ ಕುರಿತು ಲೇಖನಗಳನ್ನು ಬರೆದಿದ್ದಲ್ಲದೆ, ಕೂಲಾಸಫಿ ಎಂಬ ಹೊಸ ಪದವನ್ನು ಹುಟ್ಟುಹಾಕಿದರು. ಇವರಿಗೆ ತಂದೆ-ತಾಯಿ ನಾಮಕರಣ ಮಾಡಿದ್ದು ರಾಜ ಎಂದಾದರೆ, ಶಾಲೆಯಲ್ಲಿ ದಾಖಲಾದದ್ದು ಜಿ.ಪಿ.ರಾಜ ಐಯ್ಯಂಗಾರ್ ಎಂದು. ಒಮ್ಮೆ ಇವರು ಇಂಗ್ಲಿಷ್ ಉಪಾಧ್ಯಾಯರಿಗೆ ಅವರ ತಪ್ಪನ್ನು ಎತ್ತಿ ತೋರಿಸಿ ಅವರಿಗೆ ಸಾಕಷ್ಟು ತೊಂದರೆಯನ್ನು ನೀಡಿದರು. ಇದನ್ನು ಅರಿತ ಮತ್ತೊಬ್ಬ ಉಪಾಧ್ಯಾಯರು ವ್ಯಂಗ್ಯಕ್ಕಾಗಿ ರತ್ನಾ ಎಂದು ಕರೆದಂತೆ. ಅಂದಿನಿಂದ ರಾಜ ಅಯ್ಯಂಗಾರ್ ರಾಜರತ್ನಂ ಆದರು. ಸರಳ ಜೀವನದ ಉತ್ತಮ ಮನೋಭಾವದ ಇವರು ಕಷ್ಟಜೀವಿಯಾಗಿದ್ದರು.
ಬಿ.ಎಂ.ಶ್ರೀಕಂಠಯ್ಯ, ಟಿ.ಎಸ್.ವೆಂಕಣ್ಣಯ್ಯ ಮುಂತಾದವರ ಮಾರ್ಗದರ್ಶನದಲ್ಲಿ ಬೆಳೆದವರು. ರಾಷ್ಟ್ರ ಸ್ವಾತಂತ್ರ್ಯದ ಬಗ್ಗೆ ಕವನಗಳನ್ನು ಬರೆದ ಇವರು ಒಮ್ಮೆ ದಾರಿಯಲ್ಲಿ ಬರುತ್ತಿದ್ದಾಗ ಹೆಂಡದ ಅಂಗಡಿಯ ಮುಂದೆ ಕುಡಿದು ಬರುತ್ತಿದ್ದ ವ್ಯಕ್ತಿಯ ಮಾತುಗಳನ್ನು ಆಲಿಸಿ ರತ್ನದ ಪದಗಳು ಹಾಗೂ ನಾಗನ ಪದಗಳು ಎಂಬ ಕವನಗಳನ್ನು ಬರೆಯಲು ಪ್ರೇರಕವಾದವು. ಇಂದು ರಾಜರತ್ನಂ ನಮ್ಮೊಂದಿಗಿಲ್ಲದಿದ್ದರೂ ಅವರ ಕವನ ಸಂಕಲನಗಳು, ನಾಟಕಗಳ ಮೂಲಕ ಎಲ್ಲರ ಮನದಲ್ಲಿದ್ದಾರೆ.