GKHistorySpardha Times

ಕರ್ನಾಟಕದ ಇತಿಹಾಸ : ಹೊಯ್ಸಳರು

Share With Friends

ಹೊಯ್ಸಳರು (1006 – 1346): ದಂತಕಥೆಯ ಪ್ರಕಾರ ಜೈನ ಗುರು ಸುದಾತ್ತನು ಸೊಸೆವೂರಿನ ವಾಸಂತಿಕಾ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ ಸಳನಿಗೆ “ಹೊಯ್ ಸಳ” ಎಂದು ಆಜ್ಞಾಪಿಸಿದನು. ಇದೆ ಹೊಯ್ಸಳ ಶಬ್ಧದ ಮೂಲ ಎನ್ನುತ್ತಾರೆ.

ಇತಿಹಾಸಕಾರರು ಈ ರಾಜವಂಶದ ಸ್ಥಾಪಕರನ್ನು ಮಲೆನಾಡ ಮೂಲದವರೆಂದು ಮಾಹಿತಿ ನೀಡಿರುತ್ತಾರೆ (ಹಲವಾರು ಶಾಸನಗಳಲ್ಲಿ ಇವರನ್ನು ಮಲೆಪರೊಲ್ಗಂಡ ಎಂದು ಸಂಬೋದಿಸಿದ್ದಾರೆ). ವಿಷ್ಣುವರ್ಧನ ಅವರ ವಿಸ್ತೃತ ಸೇನಾ ವಿಜಯದ ಮೂಲಕ ಹೊಯ್ಸಳರು ಸ್ವತಂತ್ರ ರಾಜ್ಯವಾಗಿ ಹೊಮ್ಮಿದರು. ಚೋಳರಿಂದ ಗಂಗಾವತಿಯನ್ನು ಜಯಿಸಿ ರಾಜಧಾನಿಯನ್ನು ಬೇಲೂರಿನಿಂದ ಹಳೆಬೀಡಿಗೆ ಸ್ಥಳಾಂತರಿಸಿದರು. ಸ್ವತಂತ್ರ ಸಾಮ್ರಾಜ್ಯವನ್ನು  ರಚಿಸುವ ವಿಷ್ಣುವರ್ಧನನ  ಮಹತ್ವಾಕಾಂಕ್ಷೆಯನ್ನು ಅವರ  ಮೊಮ್ಮಗ  ವೀರ ಬಲ್ಲಾಳ- 2, 1187 – 1193 ರಲ್ಲಿ ಅಧೀನತೆಯಿಂದ ಬಿಡುಗಡಿಸುವುದರ ಮೂಲಕ ಈಡೇರಿಸಿದನು. ವೀರ ಬಲ್ಲಾಳ- 2, ಇವನು ಚೋಳ ಸಾಮ್ರಾಜ್ಯವನ್ನು ಆಕ್ರಮಿಸಿ ಆಕ್ರಮಣಕಾರಿ ಪಾಂಡ್ಯರನ್ನು  ಸೋಲಿಸಿ ಚೋಳರಾಜ್ಯಪ್ರತಿಷ್ಠಾಚಾರ್ಯ, ದಕ್ಷಿಣ ಚಕ್ರವರ್ತಿ ಮತ್ತು  ಹೊಯ್ಸಳ ಚಕ್ರವರ್ತಿ ಎಂಬ ಬಿರುದುಗಳನ್ನು ಗಳಿಸಿದನು. ದಂತಕಥೆಯ ಪ್ರಕಾರ ಬೆಂಗಳೂರನ್ನು ವೀರ ಬಲ್ಲಾಳ- 2 ಸ್ಥಾಪಿಸಿದನು.

ದಾಖಲೆಗಳು ಹಲವಾರು ಉನ್ನತ ಸ್ಥಾನಗಳು /ಅಧಿಕಾರಿಗಳು ರಾಜನಿಗೆ ನೇರವಾಗಿ ವರದಿ ಮಾಡುವುದನ್ನು ತಿಳಿಸಿಕೊಡುತ್ತವೆ. ಹಿರಿಯ ಮಂತ್ರಿಗಳನ್ನು ಮಹಾಪ್ರಧಾನವೆಂದು, ವಿದೇಶಾಂಗ ವ್ಯವಹಾರಕ್ಕೆ ಸಂಧಿವಿಗ್ರಹಿಯೆಂದು ಮತ್ತು ಮುಖ್ಯ ಖಜಾಂಚಿಯನ್ನು ಮಹಾಭಂಡಾರಿ / ಹಿರಣ್ಯಭಂಡಾರಿಯೆಂದು ಕರೆಯಲಾಗುತ್ತಿತ್ತು. ಸೇನೆಗಳ ಉಸ್ತುವಾರಿಯನ್ನು ದಂಡನಾಯಕ ಮತ್ತು ಹೊಯ್ಸಳ ನ್ಯಾಯಾಲಯದ ಉಸ್ತುವಾರಿಯನ್ನು ಧರ್ಮಾಧಿಕಾರಿ ಹೊತ್ತಿದ್ದರು. ಸಾಮ್ರಾಜ್ಯವನ್ನು ನಾಡು, ವಿಷಯ, ಕಂಪನ, ಮತ್ತು ದೇಶಗಳಾಗಿ ವಿಭಜಿಸಲಾಗಿದ್ದು ಪ್ರತಿಯೊಂದು ಪ್ರಾಂತ್ಯದಲ್ಲಿ ಒಂದು ಸ್ಥಳೀಯ ಆಡಳಿತವಿದ್ದು ಅದರಲ್ಲಿನ ಮಹಾಪ್ರಧಾನ ಮತ್ತು ಭಂಡಾರಿಯರು ದಂಡನಾಯಕನಿಗೆ ವರದಿ ಸಲ್ಲಿಸುತ್ತಿದರು.

ಉತ್ತಮ ತರಬೇತಿ ಬಲ ಹೊಂದಿದ್ದ ಗಣ್ಯ ಅಂಗರಕ್ಷಕ ದಳ (ಗರುಡ) ರಾಜವಂಶ ಮತ್ತು ಅವರ ಕುಟುಂಬವನ್ನು ರಕ್ಷಿಸುತ್ತಿದ್ದರು. ಗರುಡ ಕಂಬಗಳು (ವೀರಕಲ್ಲುಗಳು) ಇವರ ನೆನಪಿನಲ್ಲಿ ಸ್ಥಾಪಿಸಲಾಗಿದೆ. ಕುವರ ಲಕ್ಷ್ಮ, ಮಂತ್ರಿ ಮತ್ತು ವೀರ ಬಲ್ಲಾಳ-2  ಅವರ ಅಂಗರಕ್ಷಕನ ನೆನಪಿನಲ್ಲಿ ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನದಲ್ಲಿ ಒಂದು ಗರುಡ ಕಂಬವನ್ನು ಸ್ಥಾಪಿಸಲಾಗಿದೆ.

ಹೊಯ್ಸಳರ ಆಳ್ವಿಕೆಯ ಸಮಯದಲ್ಲಿ ಮೂರು ಪ್ರಮುಖ ಧಾರ್ಮಿಕ ಬೆಳವಣಿಗೆಗಳು ( ಬಸವ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯ  ರಿಂದ) ನಡೆಯಿತು. ಮಧ್ವಾಚಾರ್ಯರ ಆದಿ ಶಂಕರರ ಬೋಧನೆಗಳನ್ನು ಟೀಕಿಸಿ ಜಗತ್ತು ನಿಜ (ಭ್ರಮೆ ಅಲ್ಲವೆಂದು) ಎಂದು ವಾದಿಸಿದರು. ಅವರ ತತ್ವಜ್ಞಾನ ಜನಪ್ರಿಯತೆಯನ್ನು ಗಳಿಸಿ ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು. ವೈಷ್ಣವರ ಮುಖ್ಯಸ್ತ ರಾಮಾನುಜುಚಾರ್ಯರು ಶ್ರೀಭಾಷ್ಯದಲ್ಲಿ (ಅದ್ವೈತ ವೇದಾಂತ ಮೇಲೆ ವಿಮರ್ಶೆ) ಭಕ್ತಿ ಮಾರ್ಗವನ್ನು ಭೋದಿಸಿದರು.

ರಾಜ ವಿಷ್ಣುವರ್ಧನ ಜೈನ ಮತದಿಂದ ವೈಷ್ಣವ ಮತಕ್ಕೆ ಮತಾಂತರಗೊಂಡ ನಂತರ ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದನು. ಮಧ್ವಾಚಾರ್ಯರ ನಂತರದವರಾದ ಜಯತೀರ್ಥ,ವ್ಯಾಸತೀರ್ಥ, ಶ್ರೀಪಾದರಾಜ, ವಾದಿರಾಜತೀರ್ಥ, ದಾಸರುಗಳಾದ ವಿಜಯದಾಸ, ಗೋಪಾಲದಾಸರು ಇವರ ಬೋಧನೆಗಳನ್ನು ಹಲವಾರು ಕಡೆ ಹರಡಿದರು. ಗುಜರಾತಿನ ವಲ್ಲಭ ಆಚಾರ್ಯ ಮತ್ತು ಬಂಗಾಳಿನ ಚೈತನ್ಯ ಮಹಾಪ್ರಭುಗಳು ಇವರಿಂದ ಪ್ರಭಾವಿತಗೊಂಡರು.

ಹೊಯ್ಸಳರು ವಿದ್ವಾಂಸರಾದ ಜನ್ನ, ರುದ್ರಭಟ್ಟ, ಹರಿಹರ,ರಾಘವಾಂಕ ರನ್ನು (ಇವರುಗಳ ಕೃತಿಗಳು ಕನ್ನಡದ ಮೇರುಕೃತಿಗಳೆಂದ ಹೆಸರುವಾಸಿಯಾಗಿವೆ) ಪೋಷಿಸಿದರು. ಹರಿಹರ (ಹರಿಸ್ವರ) ಹಳೆಯ ಜೈನ ಚಂಪು ಶೈಲಿಯಲ್ಲಿ ಗಿರಿಜಾಕಲ್ಯಾಣ (ಶಿವ ಮತ್ತು ಪಾರ್ವತಿಯ ಮದುವೆಯನ್ನು ಹತ್ತು ವಿಭಾಗಗಳಲ್ಲಿ ವರ್ಣಿಸಿದ್ದಾರೆ) ರಚಿಸಿದರು.  ಹರಿಶ್ಚಂದ್ರ ಕಾವ್ಯ ಎಂಬ ಕನ್ನಡ ಕೃತಿಯ ಮೂಲಕ ರಾಘವಾಂಕ ಮೊದಲ ಬಾರಿಗೆ ಷಟ್ಪದಿಯನ್ನು  ಪರಿಚಯಿಸಿದರು

ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನು ಕರ್ನಾಟ ದ್ರಾವಿಡ ಶೈಲಿಯೆಂದು ಕರೆಯಲಾಗಿದ್ದು ಇದು ಸ್ವತಂತ್ರ ವಾಸ್ತುಶಿಲ್ಪದ ಸಂಪ್ರದಾಯವಾಗಿದ್ದು ಅನೇಕ ಅನನ್ಯ ಲಕ್ಷಣಗಳನ್ನು ಹೊಂದಿದೆ. ಬೇಲೂರಿನ ಚೆನ್ನಕೇಶವ ದೇವಸ್ಥಾನ, ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ, ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ, ಅರಸಿಕೆರೆಯ ದೇವಸ್ಥಾನಗಳು, ಅಮೃತಪುರ, ಬೆಳವಾಡಿ, ನುಗ್ಗೆಹಳ್ಳಿ, ಹೊಸಹೊಳಲು, ಅರಳಗುಪ್ಪೆ, ಕೊರ್ವಂಗಳ, ಇತ್ಯಾದಿಗಳು ಇವರ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿ. ಬೇಲೂರು ಹಳೇಬೀಡು  ಶಿಲ್ಪಕಲೆಗಳ ಸೌಂದರ್ಯಕ್ಕೆ ಹೆಸರುವಾಸಿಯಾದರೆ, ಹೊಯ್ಸಳ ಕಲೆಯ ಸಂಪೂರ್ಣ ಅಭಿವ್ಯಕ್ತಿಯನ್ನು ಇತರ ಸಣ್ಣ ದೇವಸ್ಥಾನಗಳಲ್ಲಿ ಕಾಣಬಹುದು. ಹಳೇಬೀಡು ದೇವಾಲಯವು  ಹಿಂದೂ ವಾಸ್ತುಶಿಲ್ಪದ ಮಹೋನ್ನತ ಉದಾಹರಣೆಯಾಗಿದ್ದು ಭಾರತೀಯ ವಾಸ್ತುಶಿಲ್ಪಕ್ಕೆ  ಒಂದು ಪ್ರಮುಖ ಮೈಲಿಗಲ್ಲಾಗಿದೆ. ಬೇಲೂರು ಮತ್ತು ಹಳೇಬೀಡಿನ ದೇವಸ್ಥಾನಗಳು ಪ್ರಸ್ತಾಪಿತ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿವೆ. ಆಗಿನ ಕಾಲದಲ್ಲಿ ಬೇಲೂರಿನ  ದೇವಾಲಯದ ಸೊಬಗನ್ನು ನೋಡಿದ ಜನರು ಇವು ಸ್ವರ್ಗದಿಂದ ಭೂಮಿಗೆ ಬಂದಿಳಿದಿವೆ ಮತ್ತೆ ಹಾರಿ ಹೋಗಬಹುದೇನೋ ಎಂದು ಮಾತನಾಡುತಿದ್ದರು.

ಇತಿಹಾಸಕಾರ ಶೆಲ್ಡನ್ ಪೊಲ್ಲಾಕ್ ಪ್ರಕಾರ ಹೊಯ್ಸಳರ ಆಳ್ವಿಕೆಯಲ್ಲಿ ಸಂಸ್ಕೃತ ಸಂಪೂರ್ಣವಾಗಿ  ಸ್ಥಳಾಂತರಗೊಂಡು ಕನ್ನಡ ಆಸ್ಥಾನದ ಭಾಷೆಯಾಗಿ ಪ್ರಾಬಲ್ಯ ಪಡೆದುಕೊಂಡಿತು. ಶಾಸನಗಳು ಹೆಚ್ಚಾಗಿ ಕಲ್ಲು (ಶಿಲಾಶಾಸನ) ಮತ್ತು ತಾಮ್ರದ ಫಲಕಗಳಾಗಿದ್ದು (ತಾಮ್ರಶಾಸನ) ಇವುಗಳಲ್ಲಿ ಹೆಚ್ಚಾಗಿ ಕನ್ನಡವನ್ನು ಉಪಯೋಗಿಸಲಾಗಿದ್ದು ಕೆಲವು ಸಂಸ್ಕೃತದಲ್ಲಿ ಮತ್ತು ಕೆಲವು ದ್ವಿಭಾಷೆಗಳಲ್ಲಿ ಇವೆ.

# ಹೊಯ್ಸಳ ವಾಸ್ತುಶಿಲ್ಪ
ಕರ್ನಾಟಕವನ್ನು ಬಹುಕಾಲದವರೆವಿಗೆ ಆಳಿದವರಲ್ಲಿ ಹೊಯ್ಸಳರೂ ಪ್ರಮುಖರು. ಕದಂಬರು ಮತ್ತು ಚಾಲುಕ್ಯರಂತೆ ಇವರೂ ಸಹ ಕನ್ನಡನಾಡಿನಾದ್ಯಂತ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಕನ್ನಡನಾಡಿನಲ್ಲಿ ಸುಮಾರು 92 ದೇವಾಲಯಗಳನ್ನು ಹೊಯ್ಸಳರು ನಿರ್ಮಿಸಿದ್ದಾರೆ. ಇದರಲ್ಲಿ ಸುಮಾರು 40 ದೇವಾಲಯಗಳು ಹೊಯ್ಸಳರ ರಾಜಕೀಯ ಕಾರ್ಯಕ್ಷೇತ್ರವಾಗಿದ್ದ ಹಾಸನ ಜಿಲ್ಲೆಯೇ ಇವೆ.ಅವುಗಳಲ್ಲಿ ಮುಖ್ಯವಾದುದು ಬೇಲೂರು ಮತ್ತು ಹಳೆಬೀಡುದೇವಾಲಯಗಳು. ದ್ರಾವಿಡ ಮತ್ತು ನಾಗರ ಶೈಲಿಯ ಮಿಶ್ರಣವನ್ನು ಹೊಯ್ಸಳ ವಾಸ್ತುಶೈಲಿಯಲ್ಲಿ ನಾವು ಕಾಣಬಹುದು. ಕೆಲವು ಪಾಶ್ಚಾತ್ಯ ಪಂಡಿತರು, ವಿದ್ವಾಂಸರು ಚಾಲುಕ್ಯರ ವಾಸ್ತುಶೈಲಿಗೆ ಕೊಟ್ಟ ಮಹತ್ವವನ್ನು ಹೊಯ್ಸಳ ಶೈಲಿಗೆ ಕೊಡದೆ ಚಾಲುಕ್ಯ ಸಂಸ್ಕೃತಿಯೊಳಗೆ ಇದನ್ನೂ ಸೇರಿಸಿ ಬದಿಗಿರಿಸಿದ್ದಾರೆ. ಆದರೆ, ಅನೇಕ ಭಾರತೀಯ ಮತ್ತು ಪಾಶ್ಚಾತ್ಯ ವಿದ್ವಾಂಸರು ಹೊಯ್ಸಳ ಶೈಲಿಯನ್ನು ಮರು ವಿಮರ್ಶಿಸಿ ಈ ಶೈಲಿಯ ಬೆರಗನ್ನು ಕಂಡು ವಿಸ್ಮಿತರಾಗಿದ್ದಾರೆ. ಹೊಯ್ಸಳ ದೇವಾಲಯಗಳಲ್ಲಿ ಕಂಡುಬರುವ ಅನೇಕಾನೇಕ ಸೂಕ್ಷ್ಮ ಕೆತ್ತನೆಗಳಿರುವ ವಿಗ್ರಹಗಳು, ಶಿಲಾಬಾಲಿಕೆಯರು ಮತ್ತು ರಾಮಾಯಣ , ಮಹಾಭಾರತದಂತಹ ಪುರಾಣ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಕಲ್ಲಿನಲ್ಲಿ ಕಡೆದಿರುವುದನ್ನು ಕಂಡಾಗ ಹೊಯ್ಸಳ ವಾಸ್ತುಶೈಲಿಯನ್ನು ಪ್ರತ್ಯೇಕವಾಗಿಯೇ ನೋಡಬೇಕೆಂಬುದು ಮನದಟ್ಟಾಗುತ್ತದೆ. ಹೊಯ್ಸಳ ದೇವಾಲಯಗಳ ತಲವಿನ್ಯಾಸವು ಸಾಮಾನ್ಯವಾಗಿ ಬಹುಕೋನಾಕೃತಿ ಅಥವಾ ನಕ್ಷತ್ರಾಕೃತಿಯಲ್ಲಿ ಇರುತ್ತದೆ. ಎತ್ತರವಾದ ಜಗತಿಯ ಮೇಲೆ ತಲವಿನ್ಯಾಸದ ಆಕಾರದಲ್ಲಿಯೆ ದೇವಾಲಯದ ಆಕಾರವು ರೂಪುಗೊಂಡಿರುತ್ತದೆ. ಜಗತಿಯು ವಿಶಾಲವಾಗಿದ್ದು ಸಲೀಸಾಗಿ ಓಡಾಡುವಷ್ಟು ಅನುಕೂಲಕರವಾಗಿರುತ್ತದೆ. ದೇವಾಲಯಕ್ಕೆ ಒಳಬರುವ ಮೊದಲು ಕೆಲವು ಮೆಟ್ಟಿಲುಗಳನ್ನು ಹತ್ತಿ ಪ್ರವೇಶಿಸಬೇಕಾಗುತ್ತದೆ. ಈ ರಚನೆಯು ಹೊಯ್ಸಳರ ಎಲ್ಲಾ ಆಲಯಗಳಲ್ಲೂ ಕಂಡುಬರುತ್ತದೆ. ಮೊದಲಿಗೆ ಸಿಗುವ ವಿಶಾಲವಾದ ಜಗತಿಯೇ ಪ್ರದಕ್ಷಿಣಾ ಪಥವೂ ಆಗಿರುತ್ತದೆ. ಚಾಲುಕ್ಯರ ದೇವಾಲಯಗಳಲ್ಲಿರುವಂತೆ ಗರ್ಭಗೃಹದ ಸುತ್ತಲಿನ ಸುತ್ತುಗಟ್ಟುವ ಹಾದಿಯು ಇಲ್ಲಿ ಕಾಣುವುದಿಲ್ಲ. ಹೊಯ್ಸಳರ ಎಲ್ಲಾ ದೇವಾಲಯಗಳೂ ಬಳಪದ ಕಲ್ಲಿನಿಂದಲೇ ನಿರ್ಮಾಣವಾಗಿರುತ್ತದೆ.

ಹೊಯ್ಸಳರ ದೇವಾಲಯದ ಗೋಡೆಗಳ ರಚನೆಯು ಜಗತಿಯ ಒಟ್ಟು ಎತ್ತರದ ಎರಡಷ್ಟಿರುತ್ತದೆ. ಗೋಡೆಗಳ ಮೇಲಿನ ಅಲಂಕಾರವು ತಲಭಾಗದಿಂದ ಆರಂಭವಾಗಿ ಶಿಖರದಲ್ಲಿ ಕೊನೆಗೊಳ್ಳುತ್ತದೆ. ಮೊದಲಿಗೆ ದೇವಾಲಯಗಳ ಸುತ್ತಲೂ ಬಳಸಿ ಬರುವ ಅಲಂಕಾರ ಪಟ್ಟಿಕೆಗಳು ಈ ಗೋಡೆಗಳ ವಿಶಿಷ್ಟತೆ. ಜಗತಿಯ ಬುಡದಿಂದ ಸುಮಾರು ಐದು ಅಡಿಗಳಷ್ಟು ಎತ್ತರದವರೆಗೆ ಒಂದರ ಮೇಲೊಂದರಂತೆ ಪಟ್ಟಿಕೆಗಳು ಕಂಡುಬರುತ್ತದೆ. ಬುಡದಿಂದ ಮೊದಲನೆಯ ಪಟ್ಟಿಯಲ್ಲಿ ಆನೆಗಳ ಸಾಲು ಮತ್ತು ಎರಡನೆಯ ಪಟ್ಟಿಯಲ್ಲಿ ಕುದುರೆಗಳ ಮೇಲೆ ಏರಿ ಹೊರಟಿರುವ ರಾವುತರನ್ನು ನೋಡಬಹುದು. ದೇವಾಲಯದ ಸುತ್ತ ಮೆರವಣಿಗೆ ಹೊರಟಿರುವಂತೆ ಈ ಸಾಲುಗಳು ಕಂಡುಬರುತ್ತವೆ. ಮುಂದಿನ ಪಟ್ಟಿಯಲ್ಲಿ ಶಾರ್ದೂಲಗಳು, ಹಂಸಗಳು ಮತ್ತು ಬಳ್ಳಿಯ ರಚನೆಯು ಕಾಣಸಿಗುತ್ತದೆ. ಈ ಪಟ್ಟಿಗಳು ದೇವಾಲಯದ ಅಂದವನ್ನು ಹೆಚ್ಚಿಸುವಂತಿರುತ್ತದೆ. ಅಗಲದಲ್ಲಿ ಒಂದು ಅಡಿಗಿಂತಲೂ ಕಿರಿದಾಗಿರುವ ಈ ಪಟ್ಟಿಕೆಗಳಲ್ಲಿ ರಾಮಾಯಣ-ಮಹಾಭಾರತದ ಕತೆಗಳೂ ಸಹ ಕೆತ್ತಲ್ಪಟ್ಟಿವೆ. ನಮ್ಮ ಕಣ್ಣಿನ ಮಟ್ಟಕ್ಕೆ ಇವು ಬರುವುದರಿಂದ ಚಿಕ್ಕದಾಗಿದ್ದರೂ ಸ್ಪಷ್ಟವಾಗಿ ನೋಡಿದ ತಕ್ಷಣ ಶಿಲ್ಪಗಳ ಹಿಂದಿನ ಕತೆಯನ್ನು ಅರಿತುಕೊಳ್ಳಬಹುದು. ನಮ್ಮ ತಲೆಯ ಮೇಲಿನ ಅಥವಾ ನಮಗಿಂತಲೂ ಎತ್ತರದಲ್ಲಿರುವ ಗೋಡೆಯ ಸಾಲನ್ನು ದೊಡ್ಡ ವಿಗ್ರಹಗಳಿಂದ ಅಲಂಕಾರಿಸಲಾಗಿದೆ. ಪಟ್ಟಿಕೆಯ ಕೊಲೆಯ ಸಾಲಿನಲ್ಲಿ ಕಾಮಸೂತ್ರದ ವಿವಿಧ ಚಿತ್ರಗಳನ್ನು ತೊರಿಸಲಾಗಿದೆ ನೋಡುಗನ ಒಳತೋಟಿಯನ್ನು ಶಿಲ್ಪಿಗಳು ಅದೆಷ್ಟು ಚೆನ್ನಾಗಿ ಬಲ್ಲವರಾಗಿದ್ದರು ಎಂದು ಇಲ್ಲಿ ತಿಳಿಯಬಹುದು. ಪೂರ್ವ ಭಾಗದಲ್ಲಿ ಪಟ್ಟಿಕೆಗಳನ್ನು ಬಿಟ್ಟರೆ ದೊಡ್ಡ ವಿಗ್ರಹಗಳು ಕಂಡುಬರುವುದಿಲ್ಲ. ಗೋಡೆಗಳನ್ನು ರಚಿಸುವುದರ ಬದಲು ಆ ಸ್ಥಳದಲ್ಲಿ ದೊಡ್ದ ಕಿಟಕಿಗಳನ್ನು (ಜಾಲಂಧ್ರ) ನಿರ್ಮಿಸಲಾಗಿರುತ್ತದೆ. ಗಾಳಿ ಮತ್ತು ಬೆಳಕಿನ ವೈಜ್ಞಾನಿಕ ವ್ಯವಸ್ಥೆಗೆ ಇದೊಂದು ನಿದರ್ಶನ. ದೇವಾಲಯಗಳ ಪಶ್ಚಿಮದ ಭಾಗವು ವಿಗ್ರಹಗಳಿಂದ ಅಲಂಕೃತವಾಗಿ ಪೂರ್ಣ ಮುಚ್ಚಲ್ಪಟ್ಟಿರುತ್ತದೆ. ದೇವಾಲಯದ ನಕ್ಷತ್ರಾಕಾರದ ರಚನೆ ಮತ್ತು ಗೋಡೆ.

# ಸಾಹಿತ್ಯ :
ಹೊಯ್ಸಳ ಆಡಳಿತದ ಕಾಲದಲ್ಲಿ ಸಂಸ್ಕೃತ ಸಾಹಿತ್ಯ ಜನಪ್ರಿಯವಾಗಿದ್ದರೂ, ಕನ್ನಡ ವಿದ್ವಾಂಸರಿಗೆ ರಾಜಾಶ್ರಯ ಹೆಚ್ಚಾಯಿತು. 12ನೆಯ ಶಶತಮಾನದಲ್ಲಿ ಕೆಲ ಸಾಹಿತ್ಯ ಕೃತಿಗಳು ಚಂಪೂ ಶೈಲಿಯಲ್ಲಿ ಬರೆಯಲ್ಪಟ್ಟರೂ , ಇತರ ವಿಶಿಷ್ಟ ಶೈಲಿಗಳೂ ಜನಪ್ರಿಯವಾಗಿದ್ದವು. ಸಾಂಗತ್ಯ, ಷಟ್ಪದಿ, ತ್ರಿಪದಿ ಮತ್ತು ರಗಳೆ ಶೈಲಿಗಳು ಆಧುನಿಕವೆನಿಸಿದ್ದವು. ತೀರ್ಥಂಕರರ (ಜೈನ ಮುನಿಗಳು)ಮಹಿಮೆಯನ್ನು ಎತ್ತಿಹಿಡಿಯುವುದನ್ನು ಜೈನ ಕೃತಿಗಳು ಮುಂದುವರಿಸಿದವು.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇಂದಿಗೂ ಹಸಿರಾಗಿರುವ ಜನ್ನ,ರುದ್ರಭಟ್ಟ,ನಾಗಚಂದ್ರ,ಹರಿಹರ ಮತ್ತು ,ಅವನ ಸೋದರಸಂಬಂಧಿ, ರಾಘವಾಂಕ ಇವರೆಲ್ಲರಿಗೂ ಹೊಯ್ಸಳ ರಾಜಾಸ್ಥಾನವು ಆಶ್ರಯವಿತ್ತು ಪ್ರೋತ್ಸಾಹಿಸಿತು. 1209ರಲ್ಲಿ ಜೈನ ಕವಿ ಜನ್ನನು ಯಶೋಧರಚರಿತೆ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದನು. ಊರ ದೇವರು ಮಾರಿಗೆ ಇಬ್ಬರು ಬಾಲಕರನ್ನು ಬಲಿಕೊಡಲು ಹೊರಟ ರಾಜನೊಬ್ಬನ ಕಥೆಯಿದು. ಆ ಬಾಲಕರ ಮೇಲೆ ಕನಿಕರ ಬಂದು , ರಾಜನು ಅವರಿಬ್ಬರನ್ನೂ ಬಿಡುಗಡೆ ಮಾಡಿ , ನರಬಲಿಯ ಪದ್ಧತಿಗೆ ವಿದಾಯ ಹೇಳುತ್ತಾನೆ. ಈ ಕೃತಿಗಾಗಿ ಹೊಯ್ಸಳ ರಾಜ ವೀರಬಲ್ಲಾಳನಿಂದ ಜನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದು ಪ್ರಾಪ್ತವಾಯಿತು.

ಎರಡನೆಯ ವೀರಬಲ್ಲಾಳನ ಆಸ್ಥಾನದಲ್ಲಿಯ ಮಂತ್ರಿ ಚಂದ್ರಮೌಳಿಯ ಆಶ್ರಯದಲ್ಲಿದ್ದ ಸ್ಮಾರ್ಥ ಬ್ರಾಹ್ಮಣ ರುದ್ರಭಟ್ಟನು ಹೆಸರಾಂತ ಬ್ರಾಹ್ಮಣ ಕವಿಗಳಲ್ಲಿ ಮೊದಲನೆಯವನು. ಆತನ ಪ್ರಸಿದ್ಧ ಚಂಪೂ ಶೈಲಿಯ ಜಗನ್ನಾಥ ವಿಜಯ ಕೃತಿಯು ವಿಷ್ಣು ಪುರಾಣ ಆಧಾರಿತವಾಗಿದ್ದು ಇದರ ಕಥಾವಸ್ತು ಶ್ರೀಕ್ರಷ್ಣನಿಂದ ಬಾಣಾಸುರನ ಸಂಹಾರ.

ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದ ವೀರಶೈವ ಕವಿ ಹರಿಹರ , (ಹರೀಶ್ವರ ಎಂದೂ ಕರೆಯುವುದುಂಟು ) ಹಳೆಯ ಜೈನ ಚಂಪೂ ಶೈಲಿಯಲ್ಲಿ ಗಿರಿಜಾಕಲ್ಯಾಣ ಕೃತಿಯನ್ನು ರಚಿಸಿದನು. ಹತ್ತು ಭಾಗಗಳಿರುವ ಇದರ ಕಥಾವಸ್ತು ಶಿವ ಪಾರ್ವತಿಯರ ಪರಿಣಯ. ವಚನ ಸಾಹಿತ್ಯ ಪರಂಪರೆಯ ಭಾಗವಾಗಿರದಿದ್ದ ಮೊದಮೊದಲ ವೀರಶೈವ ಕವಿಗಳಲ್ಲಿ ಇವನೂ ಒಬ್ಬ. ಹಳೇಬೀಡಿನ ಕರಣಿಕರ ಕುಟುಂಬದಿಂದ ಬಂದ ಹರಿಹರನು ಹಂಪೆಯಲ್ಲಿ ಅನೇಕ ವರ್ಷಗಳನ್ನು ಕಳೆದು , ನೂರಕ್ಕೂ ಹೆಚ್ಚು ರಗಳೆಗಳನ್ನು ರಚಿಸಿದನು. ಇವು ವಿರೂಪಾಕ್ಷ ದೇವರ ಗುಣಗಾನ ಮಾಡುವ ರಗಳೆಗಳಾಗಿವೆ. ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದ ಮೂಲಕ ಷಟ್ಪದಿಯ ಬಳಕೆಯನ್ನು ಮೊಟ್ಟಮೊದಲ ಬಾರಿಗೆ ಮಾಡಿದ. ಕನ್ನಡ ವ್ಯಾಕರಣದ ನಿಯಮಗಳನ್ನು ಕೆಲವೊಮ್ಮೆ ಉಲ್ಲಂಘಿಸಿದ್ದರೂ, ಇದು ಕನ್ನಡ ಸಾಹಿತ್ಯದ ಅತಿಶ್ರೇಷ್ಟ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.

ಇನ್ನು ಸಂಸ್ಕೃತದಲ್ಲಿ , ಮಧ್ವಾಚಾರ್ಯರು , ಬ್ರಹ್ಮಸೂತ್ರಗಳಿಗೆ ಋಗ್ಭಾಷ್ಯವನ್ನು ಬರೆದರು. ಇದಲ್ಲದೇ, ಇತರ ವೈದಿಕ ಶಾಖೆಗಳನ್ನು ಟೀಕಿಸುವ ವಿಮರ್ಶೆಗಳನ್ನೂ ಅವರು ಬರೆದರು. ತಮ್ಮ ತತ್ವಗಳಿಗೆ ಪ್ರಮಾಣಗ್ರಂಥಗಳಾಗಿ , ವೇದಗಳ ಬದಲಾಗಿ , ಪುರಾಣಗಳನ್ನು ಆರಿಸಿಕೊಂಡರು. ವಿದ್ಯಾತೀರ್ಥ ಬರೆದ ರುದ್ರಪ್ರಶ್ಣಾಭಾಷ್ಯವು ಆ ಕಾಲದ ಮತ್ತೊಂದು ಪ್ರಸಿದ್ಧ ಗ್ರಂಥ.

# ಅರ್ಥವ್ಯವಸ್ಥೆ :
ಹೊಯ್ಸಳ ಆಡಳಿತದ ಮುಖ್ಯ ಆದಾಯ ಮೂಲ ಕೃಷಿ ಆಧಾರಿತ ಅರ್ಥವ್ಯವಸ್ಥೆಯಾಗಿತ್ತು. ತಮಗೆ ಸಲ್ಲಿಸಿದ ಸೇವೆಗೆ ಪ್ರತಿಯಾಗಿ ರಾಜರುಗಳು ಜಮೀನುಗಳನ್ನು ಜಹಗೀರು ನೀಡುತ್ತಿದ್ದರು. ಈ ಜಹಗೀರದಾರರು ಆ ಜಮೀನಿನ ಒಕ್ಕಲುಗಳು ಉತ್ಪಾದಿಸಿದ ಕೃಷಿ ಮತ್ತು ವನೋತ್ಪನ್ನಗಳ ಒಡೆತನ ಗಳಿಸಿಕೊಳ್ಳುತ್ತಿದ್ದರು.

ಈ ಜಮೀನುದಾರರಲ್ಲಿ ಎರಡು ವಿಧಗಳಿದ್ದವು. ಪ್ರಜಾ ಗವುಂಡರು ಅಂತಸ್ತಿನಲ್ಲಿ , ಧನಾಡ್ಯ ಪ್ರಭು ಗವುಂಡರಿಗಿಂತ ಕೆಳಗಿದ್ದರು. ಮಲೆನಾಡು ಪ್ರದೇಶದಲ್ಲಿ , ಸೂಕ್ತ ಹವಾಮಾನದ ಕಾರಣ, ಪಶುಪಾಲನೆ, ತೋಟಗಾರಿಕೆ ಮತ್ತು ಸಾಂಬಾರ ಪದಾರ್ಥಗಳ ಕೃಷಿ ನಡೆಯುತ್ತಿತ್ತು. ಬಯಲುನಾಡಿನಲ್ಲಿ ಭತ್ತ ಮತ್ತು ಜೋಳವನ್ನು ಬೆಳೆಯಲಾಗುತ್ತಿತ್ತು. ಸ್ಥಳೀಯರ ಖರ್ಚಿನಲ್ಲಿ ಕಟ್ಟಿ , ದುರಸ್ತಿ ಮಾಡಲಾಗುತ್ತಿದ್ದ ಕೆರೆ ಕಟ್ಟೆಗಳು, ಕಾಲುವೆಗಳು , ಬಾವಿಗಳು ಇವುಗಳ ಮೇಲೆ ಹೊಯ್ಸಳ ರಾಜರು ಸುಂಕ ವಿಧಿಸಿದ್ದರು. ದೊಡ್ಡ ನೀರಾವರಿಗೆ ವಿಷ್ಣುಸಾಗರ,ಶಾಂತಿಸಾಗರ, ಬಲ್ಲಾಳರಾಯಸಾಗರ ಇತ್ಯಾದಿ ಕೆರೆಗಳನ್ನು ರಾಜ್ಯದ ಖರ್ಚಿನಲ್ಲಿ ಕಟ್ಟಿಸಲಾಗಿತ್ತು.

ಪಶ್ಚಿಮ ಕರಾವಳಿಯಲ್ಲಿ , ಜನಸಾಮಾನ್ಯರ ಪ್ರಯಾಣಕ್ಕೆ ಮತ್ತು ಅಶ್ವಸೇನೆಗಳಿಗೆ , ಕುದುರೆಗಳನ್ನು ಆಮದು ಮಾಡಿ ಸರಬರಾಜು ಮಾಡುವುದು ದೊಡ್ಡ ವ್ಯಾಪಾರೋದ್ಯಮವಾಗಿತ್ತು. ಕಾಡುಗಳಲ್ಲಿನ ಬೆಲೆಬಾಳುವ ತೇಗವೇ ಮೊದಲಾದ ಮರಗಳ ನಾಟಾ ತಯಾರಿಸಿ , ಇಂದಿನ ಕೇರಳದಲ್ಲಿದ್ದ ಬಂದರುಗಳ ಮೂಲಕ ರಫ್ತು ಮಾಡಲಾಗುತ್ತಿತ್ತು.

ಚೀನಾದಲ್ಲಿ ದೊರೆತ ಶುಂಗ ಸಾಮ್ರಾಜ್ಯದ ದಾಖಲೆಗಳ ಪ್ರಕಾರ, ಉತ್ತರ ಚೀನಾದಲ್ಲಿ ಭಾರತದ ವ್ಯಾಪಾರಿಗಳು ಕಾಣಸಿಗುತ್ತಿದ್ದು , ಇದು ಸಮುದ್ರದಾಚೆಯ ಪ್ರದೇಶಗಳೊಂದಿಗೆ ಸಕ್ರಿಯ ವ್ಯಾಪಾರ ಸಂಪರ್ಕವಿದ್ದುದನ್ನು ಸೂಚಿಸುತ್ತದೆ. ದಕ್ಷಿಣ ಭಾರತದಿಂದ ಜವಳಿ, ಸಾಂಬಾರ ಪದಾರ್ಥಗಳು, ಔಷದೀಯ ಸಸ್ಯಗಳು, ರತ್ನಗಳು, ಮಣ್ಣಿನ ಸಾಮಗ್ರಿಗಳು, ಉಪ್ಪು, ಆಭರಣಗಳು, ಬಂಗಾರ, ದಂತ, ಖಡ್ಗಮೃಗದ ಕೊಂಬು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಕರ್ಪೂರ ಮೊದಲಾದ ವಸ್ತುಗಳು ಚೀನಾ, ಧೋಫರ್, ಏಡನ್ ಮತ್ತು ಸಿರಾಫ್ ( ಈಜಿಪ್ಟ್, ಅರೇಬಿಯಾ ಮತ್ತು ಪರ್ಶಿಯಾ ದೇಶಗಳಿಗೆ ಹೋಗಲು ಪ್ರವೇಶಬಂದರು)ಗಳಿಗೆ ರಫ್ತಾಗುತ್ತಿತ್ತು. ವಾಸ್ತುತಜ್ಞರು (ವಿಶ್ವಕರ್ಮರು), ಶಿಲ್ಪಿಗಳು, ಕಲ್ಲು ಕಡೆಯುವವರು, ಚಿನಿವಾರರು ಇತ್ಯಾದಿ ದೇವಾಳಯಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಕುಶಲಕರ್ಮಿಗಳು, ಬಿರುಸಿನಿಂದ ನಡೆಯುತ್ತಿದ್ದ ದೇವಾಲಯ ನಿರ್ಮಾಣದ ಕಾರ್ಯದಿಂದ , ಸಾಕ್ಡು ಸ್ಥಿತಿವಂತರಾಗಿದ್ದರು.

ನೆಲಗಂದಾಯವನ್ನು ಒಟ್ಟುಮಾಡುವ ಜವಾಬ್ದಾರಿ ಗ್ರಾಮ ಪಂಚಾಯತಿಗಳದ್ದಾಗಿತ್ತು. ಸಿದ್ಧಾಯ ಎಂದು ಕರೆಯಲಾಗುತ್ತಿದ್ದ ನೆಲಗಂದಾಯದಲ್ಲಿ ಕುಲ ಎಂಬ ಮೂಲತಃ ಬೆಲೆಕಟ್ಟಿದ್ದಲ್ಲದೇ, ವಿವಧ ಮೇಲುಗಂದಾಯವೂ ಅಡಕವಾಗಿತ್ತು. ವಿವಿಧ ವ್ಯವಸಾಯಗಳು, ವಿವಾಹಗಳು, ಗಾಡಿ ಅಥವಾ ರಥಗಳ ಮೇಲೆ ಒಯ್ಯಲಾಗುತ್ತಿದ್ದ ಸರಕುಗಳು, ಸಾಕುಪ್ರಾಣಿಗಳು ಇವೆಲ್ಲದರ ಮೇಲೂ ಸುಂಕ ಹೇರಲಾಗಿತ್ತು.

ಬಂಗಾರ, ರತ್ನಗಳು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಹಗ್ಗಗಳು, ನಾರು, ಮನೆ, ಕುಲುಮೆ, ಅಂಗಡಿ, ಪಶುಮಂದೆಗಳು, ಕಬ್ಬಿನ ಗಾಣಗಳು ಇಂಥಾ ಪದಾರ್ಥಗಳಲ್ಲದೆ ಕರಿಮೆಣಸು, ವೀಳ್ಯದೆಲೆ, ತುಪ್ಪ, ಭತ್ತ,ಸಾಂಬಾರ ದಿನಸಿಗಳು, ತಾಳೆಗರಿ, ತೆಂಗಿನಕಾಯಿ, ಸಕ್ಕರೆ ಇತ್ಯಾದಿ ಕೃಷ್ಯುತ್ಪನ್ನಗಳ ಮೇಲೂ ಸುಂಕ ವಸೂಲಿ ಮಾಡಿದ ಹಳ್ಳಿ ದಾಖಲೆಗಳು ದೊರೆಯುತ್ತವೆ. ಕೆರಗಳ ನಿರ್ಮಾಣ ಮೊದಲಾದ ನಿರ್ದಿಷ್ಟ ಕೆಲಸಗಳಿಗಾಗಿ ಗ್ರಾಮ ಪಂಚಾಯತಿಗೆ ಸುಂಕ ವಿಧಿಸುವ ಹಕ್ಕಿತ್ತು.

# ಧರ್ಮ : 
ರಾಮಾನುಜಾಚಾರ್ಯ, ಬಸವಣ್ಣ, ಮಧ್ವಾಚಾರ್ಯ 11ನೆಯ ಶತಮಾನದ ಮೊದಲಭಾಗದಲ್ಲಿ ಚೋಳರಿಂದ ಜೈನಧರ್ಮೀಯರಾಗಿದ್ದ ಪಶ್ಚಿಮ ಗಂಗರ ಪರಾಭವ ಹಾಗೂ 12ನೆಯ ಶತಮಾನದಲ್ಲಿ ವೀರಶೈವ ಮತ್ತು ವೈಷ್ಣವ ಮತಗಳಲ್ಲಿ ಅನುಯಾಯಿಗಳ ಏರುತ್ತಿದ್ದ ಸಂಖ್ಯೆ , ಇವುಗಳಿಂದಾಗಿ ಜೈನಧರ್ಮದಲ್ಲಿ ಆಸಕ್ತಿ ಇಳಿಮುಖವಾಯಿತು.

ಕಂಬದಹಳ್ಳಿ ಮತ್ತು ಶ್ರವಣಬೆಳಗೊಳ ಹೊಯ್ಸಳ ರಾಜ್ಯದ ಎರಡು ಉಲ್ಲೇಖನಾರ್ಹ ಜೈನ ಧರ್ಮಕೇಂದ್ರಗಳು. 8ನೆಯ ಶತಮಾನದಲ್ಲಿ ಆದಿ ಶಂಕರರ ಅದ್ವೈತ ಮತ ಪ್ರಸಾರದೊಂದಿಗೆ ದಕ್ಷಿಣ ಭಾರತದಲ್ಲಿ ಬೌದ್ಧಧರ್ಮದ ಅವನತಿ ಪ್ರಾರಂಭವಾಯಿತು. ಹೊಯ್ಸಳರ ಕಾಲದಲ್ಲಿ ಬಳ್ಳಿಗಾವಿ ಮತ್ತು ಡಂಬಳ ಇವೆರಡೇ ಬೌದ್ಧರ ಧಾರ್ಮಿಕ ಸ್ಥಳಗಳಾಗಿದ್ದವು. ವಿಷ್ಣುವರ್ಧನನ ರಾಣಿ ಶಾಂತಲಾದೇವಿ ,ಸ್ವತಃ ಜೈನಧರ್ಮೀಯಳಾಗಿದ್ದರೂ , ವಿಷ್ಣುವಿನ ಕಪ್ಪೆ ಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದ್ದು , ರಾಜಮನೆತನದ ಪರಮತ ಸಹಿಷ್ಣುತೆಗೆ ಉದಾಹರಣೆಯಾಗಿದೆ. ಬಸವಣ್ಣ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯರಿಂದ ಪ್ರೇರಿತರಾದ ಮೂರು ಮುಖ್ಯ ಧಾರ್ಮಿಕ ಬೆಳವಣಿಗೆಗಳು ಹೊಯ್ಸಳರ ಆಡಳಿತದ ಕಾಲದಲ್ಲಿ ಘಟಿಸಿದವು.
ವೀರಶೈವ ಮತದ ಉಗಮ ಚರ್ಚಾಸ್ಪದವಾಗಿದ್ದರೂ, 12ನೆಯ ಶತಮಾನದಲ್ಲಿ ಬಸವಣ್ಣನವರ ಆಗಮನದೊಂದಿಗೆ ಇದು ಪ್ರವರ್ಧಮಾನಕ್ಕೆ ಬಂದಿತು. ಬಸವಣ್ಣಮತ್ತು ಇತರ ವೀರಶೈವ ಶರಣರು ಜಾತಿರಹಿತ ಸಮಾಜವನ್ನು ಪ್ರತಿಪಾದಿಸಿದರು.

“ಕಾಯಕವೇ ಕೈಲಾಸ” ಎಂದು ಬೋಧಿಸಿದ ಬಸವಣ್ಣನವರು ಸರಳರೀತಿಯಲ್ಲಿ ವಚನಗಳನ್ನು ಜನಸಾಮಾನ್ಯರಿಗಾಗಿ ಬರೆದರು. ಆದಿ ಶಂಕರರ ಬೋಧನೆಗಳನ್ನು ಒಪ್ಪದ ಮಧ್ವಾಚಾರ್ಯರು ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದು ಪ್ರತಿಪಾದಿಸಿದರು (ದ್ವೈತ ಸಿದ್ಧಾಂತ). ಈ ಸಿದ್ಧಾಂತವು ಜನಪ್ರಿಯವಾಗಿ, ಮುಂದೆ ಮಧ್ವಾಚಾರ್ಯರು ಉಡುಪಿಯಲ್ಲಿ ಎಂಟು ಮಠಗಳನ್ನು ಸ್ಥಾಪಿಸಿದರು. ಶೀರಂಗದ ವೈಷ್ಣವ ಮಠದ ಗುರುಗಳಾಗಿದ್ದ ರಾಮಾನುಜಾಚಾರ್ಯರು ಭಕ್ತಿ ಮಾರ್ಗವನ್ನು ಬೋಧಿಸಿ, ಆದಿ ಶಂಕರರ ಅದ್ವೈತ ಸಿದ್ಧಾಂತದ ಮೇಲೆ ಶ್ರೀಭಾಷ್ಯ ಎಂಬ ಭಾಷ್ಯವನ್ನು ಬರೆದರು.

ಈ ಧಾರ್ಮಿಕ ಸಿದ್ಧಾಂತಗಳು ಆ ಕಾಲದ ದಕ್ಷಿಣ ಭಾರತದ ಸಂಸ್ಕೃತಿ, ಸಾಹಿತ್ಯ, ಕಾವ್ಯ ಮತ್ತು ಶಿಲ್ಪಕಲೆಗಳ ಮೇಲೆ ಅಪಾರ ಪ್ರಭಾವ ಬೀರಿದವು. ಈ ತತ್ವಜ್ಞಾನಿಗಳ ಬೋಧನೆಯನ್ನು ಆಧರಿಸಿ ಮುಂದಿನ ಶತಮಾನಗಳಲ್ಲಿ ಮಹತ್ವದ ಸಾಹಿತ್ಯ ಮತ್ತು ಕಾವ್ಯ ಕೃತಿಗಳನ್ನು ರಚಿಸಲಾಯಿತು. ವಿಜಯನಗರದ ಸಾಳ್ವ, ತುಳುವ ಮತ್ತು ಅರವೀಡು ರಾಜಮನೆತನಗಳು ವೈಷ್ಣವರಾಗಿದ್ದವು. ವಿಜಯನಗರದ ವಿಠ್ಠಲಪುರ ಪ್ರದೇಶದ ವೈಷ್ಣವ ದೇವಾಲಯವೊಂದರಲ್ಲಿ ರಾಮಾನುಜಾಚಾರ್ಯರರಾಮಾನುಜಾಚಾಯ್ ವಿಗ್ರಹವಿದೆ.

ಮುಂದೆ ಮೈಸೂರು ಸಂಸ್ಥಾನದಲ್ಲಿದ್ದ ವಿದ್ವಾಂಸರುಗಳು ರಾಮಾನುಜಾಚಾರ್ಯರ ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಗ್ರಂಥಗಳನ್ನು ಬರೆದರು. ಜೈನಧರ್ಮದಿಂದ ಮತಾಂತರ ಹೊಂದಿ ವೈಷ್ಣವನಾದ ಮೇಲೆ ಹೊಯ್ಸಳ ರಾಜ ವಿಷ್ಣುವರ್ಧನನು ಅನೇಕ ವೈಷ್ಣವ ದೇವಾಲಯಗಳನ್ನು ಕಟ್ಟಿಸಿದನು. ಮಧ್ವಾಚಾರ್ಯರ ಪರಂಪರೆಯಲ್ಲಿ ಅವರ ನಂತರ ಬಂದ ಜಯತೀರ್ಥ, ವ್ಯಾಸತೀರ್ಥ, ಶ್ರೀಪಾದರಾಯ, ವಾದಿರಾಜತೀರ್ಥ ಮತ್ತು ದಾಸ ಪರಂಪರೆಯ ವಿಜಯದಾಸ, ಗೋಪಾಲದಾಸ ಮತ್ತಿತರರು ಮಧ್ವಾಚಾರ್ಯರ ಬೋಧನೆಗಳನ್ನು ದೂರದೂರಕ್ಕೆ ಪ್ರಸಾರ ಮಾಡಿದರು. ನಂತರದ ತತ್ವಜ್ಞಾನಿಗಳಾದ ಗುಜರಾತಿನ ವಲ್ಲಭಾಚಾರ್ಯ ಮತ್ತು ಬಂಗಾಳದ ಚೈತನ್ಯ ಇವರೂ ಕೂಡ ಮಧ್ವಾಚಾರ್ಯರ ತತ್ವಗಳಿಂದ ಪ್ರಭಾವಿತರಾಗಿದ್ದರು. ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತವಾದ ಮತ್ತೊಂದು ಭಕ್ತಿ ಮಾರ್ಗದ ಅಲೆ 17-18ನೆಯ ಶತಮಾನದಲ್ಲಿ ಬಂದಿತು.

# ಹೊಯ್ಸಳ ವಂಶವೃಕ್ಷ :
ಸಳ > ಎರಡನೆಯ ನೃಪಕಾಮ > ಎರಡನೆಯ ವಿನಯಾದಿತ್ಯ > ಎರೆಯಂಗ
ಒಂದನೆಯ ಬಲ್ಲಾಳ > ವಿಷ್ಣುವರ್ಧನ > ಉದಯಾದಿತ್ಯ > ಕುಮಾರಬಲ್ಲಾಳ > ಒಂದನೆಯ ನರಸಿಂಹ >  ವಿಜಯನಾರಾಯಣ ಏಚಲದೇವಿ > ಎರಡನೆಯ ಬಲ್ಲಾಳ > ಎಱೆಯಂಗದೇವ > ಎರಡನೆಯ ನರಸಿಂಹ > ಎರಡನೆಯ ನರಸಿಂಹ
ಮೂರನೆಯ ನರಸಿಂಹ > ರಾಮನಾಥ > ಮೂರನೆಯ ಬಲ್ಲಾಳ > ವಿರೂಪಾಕ್ಷ (ನಾಲ್ಕನೆಯ ಬಲ್ಲಾಳ)

 

Leave a Reply

Your email address will not be published. Required fields are marked *

error: Content Copyright protected !!