ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
1. 1773 ರ ರೆಗ್ಯುಲೇಟಿಂಗ್ ಆಕ್ಟ್
• ರೇಗ್ಯುಲೇಟಿಂಗ್ ಆಕ್ಟ್ನ್ನು ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವನ್ನು ಶಿಶ್ತುಬದ್ದಗೊಳಿಸಲು ಜಾರಿಗೆ ತರಲಾಯಿತು.
• ರೆಗ್ಯುಲೇಟಿಂಗ್ ಆಕ್ಟ್ ‘ಬಂಗಾಳದ ಗವರ್ನರ್’ ಅನ್ನು ‘ಭಾರತದ ಗವರ್ನರ್ ಜನರಲ್’ ಎಂದು ಪರಿವರ್ತಿಸಿತು. ಮದ್ರಾಸ್, ಬೊಂಬಾಯಿ ಪ್ರಾಂತ್ಯಗಳು ಗವರ್ನರ್ ಜನರಲ್ ಅಧೀನವಾದವು.
• ಕಲ್ಕತ್ತಾದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಸ್ಥಾಪಿಸಲಾಯಿತು.
• ರಾಬರ್ಟ್ ಕ್ಲೈವ್ನು ಪ್ರಾರಂಭಿಸಿದ ದ್ವಿಮುಖ ಸರ್ಕಾರ ಪದ್ದತಿಯನ್ನು ರೆಗ್ಯುಲೇಟಿಂಗ್ ಆಕ್ಟ್ ಶಾಸನವು ರದ್ದುಗೊಳಿಸಿತು.
2. 1784 ರ ಪಿಟ್ಸ್ ಇಂಡಿಯಾ ಆಕ್ಟ್
ರೆಗ್ಯುಲೇಟಿಂಗ್ ಶಾಸನದ ದೋಷಗಳನ್ನು ಸರಿಪಡಿಸಲು ಪಿಟ್ಸ್ ಇಂಡಿಯಾ ಶಾಸನವನ್ನು ಜಾರಿಗೆ ತರಲಾಯಿತು.
ಇದರ ಪ್ರಮುಖ ಅಂಶಗಳು
• ಲಂಡನ್ನಲ್ಲಿ ‘ಆರು ಜನ’ ಸದಸ್ಯರ ಒಂದು ಬೋರ್ಡ್ ಆಫ್ ಕಂಟ್ರೋಲ್ ಸ್ಥಾಪನೆಯಾಗಿ ಕಂಪೆನಿಯ ಆಡಳಿತದ ಮೇಲೆ ಹತೋಟಿ ಹೊಂದಿತು.
• ಗವರ್ನರ್ ಜನರಲ್ನ ಸಲಹಾ ಸಮಿತಿಯ ಸದಸ್ಯರ ಸಂಖ್ಯೆಯನ್ನು ಮೂರಕ್ಕೆ ಇಳಿಸಲಾಯಿತು.
• ಈಸ್ಟ್ ಇಂಡಿಯಾ ಕಂಪೆನಿಯನ್ನು ಬ್ರಿಟಿಷ್ ಸರಕಾರದ ನಿಯಮಗಳಿಗೆ ಒಳಪಡಿಸಿ, ಹೆಚ್ಚಿನ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು.
3. 1813 ರ ಚಾರ್ಟ್ರ್ ಆಕ್ಟ್ ಶಾಸನ
• ಭಾರತದ ಬ್ರಿಟಿಷ್ ಸಾಮ್ರಾಜ್ಯವು ಬ್ರಿಟಿಷ್ ಸಾರ್ವಭೌಮರ ಅಧೀನಕ್ಕೆ ಒಳಪಟ್ಟಿದೆ ಎಂದು ತಿಳಿಸಿತು.
• ಕ್ರೈಸ್ತ ಮತ ಪ್ರಚಾರಕರ ಪ್ರವೇಶದ ಮೇಲೆ ಇದ್ದ ಪ್ರತಿಬಂಧಕವನ್ನು ತೆಗೆದುಹಾಕಿ ಇಲ್ಲಿ ಶಾಲೆ ಕಾಲೇಜುಗಳನ್ನು ತೆರೆಯಲು ಅವರಿಗೆ ಅನುವು ಮಾಡಲಾಯಿತು.
• ಒಂದು ಲಕ್ಷ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ಖರ್ಚು ಮಾಡಬೇಕೆಂದು ನಿರ್ದೇಶನ ನೀಡಲಾಯಿತು. ಶಿಕ್ಷಣದ ಬೆಳವಣಿಗೆಗೆ ಪ್ರೋತ್ಸಾಹ ನೀಡಿತು.
4. 1833 ರ ಶಾಸನ
• ಕಂಪೆನಿಯ ವ್ಯಾಪಾರ ಮಾಡದಂತೆ ನಿಷೇಧಿಸಲಾಯಿತು. ಅದು ಭಾರತದಲ್ಲಿ ಆಡಳಿತವನ್ನು ಮಾತ್ರ ನೋಡಿಕೊಳ್ಳುವಂತೆ ಸೂಚಿಸಲಾಯಿತು.
• ಸರ್ಕಾರಿ ಉದ್ಯೋಗಗಳನ್ನು ವ್ಯಕ್ತಿಯ ಅರ್ಹತೆ ಮತ್ತು ಯೋಗ್ಯತೆಯ ಆಧಾರದಲ್ಲಿ ನೀಡಬೇಕಾಯಿತು.
• ಗವರ್ನರ್ ಜನರಲ್ ಸಲಹಾ ಸಮಿತಿಗೆ ಕಾನೂನು ಸದಸ್ಯನ ಸೇರ್ಪಡೆಯಾಯಿತು. ಮತ್ತು ಇದರಿಂದ ಈ ಸಲಹಾ ಸಮಿತಿಯಲ್ಲಿ ನಾಲ್ಕು ಜನ ಸದಸ್ಯರಿರುವಂತಾಯಿತು.
5. 1853 ಶಾಸನ
* ಈ ಶಾಸನವನ್ನು ಭಾರತೀಯ ಇತಿಹಾಸದಲ್ಲೊಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಭಾರತದಲ್ಲಿ ಇಂದಿನ ಪಾರ್ಲಿಮೆಂಟ್ನ ಮೂಲ ಎಂದು ಕರೆಯಲ್ಪಡುವ ಶಾಸನವಾಗಿದೆ.
• ಕೆಂದ್ರದಲ್ಲಿ ಶಾಸನ ಸಭೆಯ ಸ್ಥಾಪನೆಯಾಯಿತು. ಇದರಿಂದ ಯಶಸ್ವಿ ಶಾಸಕಾಂಗದ ರಚನೆಯಾಯಿತು. ಗವರ್ನರ್ ಜನರಲ್ನ ಸಲಹಾ ಮಂಡಳಿಗೆ ಆರು ಜನ ಶಾಸಕರ ಸೇರ್ಪಡೆಯಾಯಿತು. ಪರಿಣಾಮಾಕಾರಿ ಶಾಸಕಾಂಗವನ್ನು ರಚಿಸಿತು. ಇದು ನಮ್ಮ ಸಂವಿಧಾನದ ಬೆಳವಣಿಗೆಯಲ್ಲಿ ಒಂದು ಮೈಲಿಗಲ್ಲಾಯಿತು.
• ಸರ್ಕಾರಿ ಸೇವೆಗಾಗಿ (ಸಿವಿಲ್ ಸರ್ವಿಸ್) ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತರಲು ಅವಕಾಶ ನೀಡಲಾಯಿತು.
6. 1858 ರ ಭಾರತ ಸರ್ಕಾರದ ಕಾನೂನು
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತದ ಆಡಳಿತ ಬ್ರಿಟಿಷ್ ಪ್ರಭುತ್ವಕ್ಕೆ ಒಳಪಟ್ಟಿತು. ಹೊಸ ಆಡಳಿತ ವ್ಯವಸ್ಥೆಯನ್ನು ರಚಿಸಲು ಈ ಕಾನೂನನ್ನು ತರಲಾಯಿತು.
• ಭಾರತದ ವ್ಯವಹಾರಗಳ ಕಾರ್ಯದರ್ಶಿಯ ನೆರವಿಗೆ 15 ಜನ ಸದಸ್ಯನ್ನೊಳಗೊಂಡ ಸಮಿತಿಯ ಸ್ಥಾಪನೆಯಾಯಿತು.
• ಗವರ್ನರ್ ಜನರಲನು ‘ವೈಸರಾಯ್’ ಎಂಬ ಪದನಾಮವನ್ನು ಹೊಂದಿ ಬ್ರಿಟಿಷ್ ರಾಣಿಯ ಅಧಿಕಾರದ ಪ್ರತಿನಿಧಿಯಾದನು.
• 1858ರಲ್ಲಿ ಬ್ರಿಟನ್ನ ವಿಕ್ಟೋರಿಯಾ ರಾಣಿ ಒಂದು ಘೋಷಣೆ ಹೊರಡಿಸಿ ದೇಶೀಯ ರಾಜರಿಗೆ ಮತ್ತು ಭಾರತದ ಜನರಿಗೆ ಬ್ರಿಟಿಷ್ ಸರ್ಕಾರದಿಂದ ನಿಷ್ಪಕ್ಷ ನಡಾವಳಿಯ ಆಶ್ವಾಸನೆ ಇತ್ತಳು.
7. 1909 ರ ಭಾರತದ ಕೌನ್ಸಿಲ್ ಆಕ್ಟ್
1909 ರ ಭಾರತದ ಕೌನ್ಸಿಲ್ ಆಕ್ಟ್ನ್ನು ‘ಮಾರ್ಲೆ- ಮಿಂಟೋ ಸುಧಾರಣೆಗಳು’ ಎಂದು ಕರೆಯುತ್ತಾರೆ. ಕಾರಣ ಈ ಶಾಸನವನ್ನು ಆಗಿನ ‘ಭಾರತ ವ್ಯವಹಾರಗಳ ಕಾರ್ಯದರ್ಶಿ ಮಾರ್ಲೆ ಮತ್ತು ವೈಸರಾಯ್ ಮಿಂಟೋ’ ಅವರ ಸಲಹೆಗಳ ಆಧಾರದಲ್ಲಿ ರೂಪಿಸಲಾಗಿತ್ತು.
ಇದರ ಪ್ರಮುಖ ಅಂಶಗಳು
• ಇದು ಕೇಂದ್ರ ಶಾಸಕಾಂಗದ ವಿಸ್ತರಣೆಗೆ ಅವಕಾಶ ನೀಡಿತು. ಇದರ ಸದಸ್ಯರ ಸಂಖ್ಯೆ 16 ರಿಂದ 60 ಕ್ಕೆ ಏರಿತು.
• ಪ್ರಾಂತ್ಯಗಳ ಶಾಸನಸಭೆಯ ವಿಸ್ತಾರವಾಯಿತು. ಇಲ್ಲಿ ಚುನಾಯಿತರಿಗು ಅವಕಾಶವಾಯಿತು.
• ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಎರ್ಪಡಿಸಿ ಪರಿಚಯಿಸಲಾಯಿತು.
8. 1919 ರ ಭಾರತ ಸರ್ಕಾರ ಶಾಸನ
ಈ ಶಾಸನವನ್ನು ‘ಮಾಂಟೆಗ್ಯೂ ಮತ್ತು ಚೆಮ್ಸ್ಫರ್ಡ್ ಸುಧಾರಣೆಗಳೆಂದೂ’ ಕರೆಯುತ್ತಾರೆ.
ಇದರ ಪ್ರಮುಖ ಅಂಶಗಳು
• ಭಾರತಕ್ಕೆ ಕ್ರಮೇಣ ಜವಾಬ್ದಾರಿ ಸರ್ಕಾರ ನೀಡುವುದು.
• ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಆಶ್ವಾಸನೆ.
• ಭಾರತದ ವ್ಯವಹಾರಗಳ ಕಾರ್ಯದರ್ಶಿಯ ಅಧಿಕಾರ ಮೊಟಕುಗೊಳಿಸಿ ಭಾರತಕ್ಕೆ ಒಬ್ಬ ‘ಹೈಕಮೀಷನರ್’ ನೇಮಕ ಮಾಡಲಾಯಿತು.
• ವೈಸರಾಯರ ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯ ಸದಸ್ಯರ ಸಂಖ್ಯೆ ಹೆಚ್ಚಿಸಲಾಯಿತು.
• ಕೇಂದ್ರದಲ್ಲಿ ‘ದ್ವಿ ಸದನಗಳ ಶಾಸನಸಭೆ’ ರಚಿಸಲಾಯಿತು. ಅವೆಂದರೆ ಮೇಲ್ಮನೆ(ಕೌನ್ಸಿಲ್ ಆಫ್ ಸ್ಟೇಟ್ಸ್) ಇದರ ಅವಧಿ ಮೂರು ವರ್ಷ. ಕೆಳಮನೆ(ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿ) ಇದರ ಅವಧಿ ಐದು ವರ್ಷ.
• ಈ ಶಾಸನವು ಆಡಳಿತ ವಿಷಯಗಳನ್ನು ಪ್ರತ್ಯೇಕವಾಗಿ ಕೇಂದ್ರದ ಪಟ್ಟಿ ಮತ್ತು ಪ್ರಾಂತಗಳ ಪಟ್ಟಿಗಳಾಗಿ ವಿಂಗಡಿಸಿತು.
• ಪ್ರಾಂತ್ಯಗಳಲ್ಲಿ ದ್ವಿಮುಖ ಸರ್ಕಾರ ಜಾರಿಗೆಗೊಳಿಸಲಾಯಿತು. ಇದರಂತೆ ಆಡಳಿತ ಇಲಾಖೆಯಲ್ಲಿ ಮೀಸಲು ವಿಷಯ ಮತ್ತು ವರ್ಗಾಯಿತ ವಿಷಯ ಎಂಬ ವಿಂಗಡನೆಯಾಯಿತು. ಹಣಕಾಸು, ಪೋಲಿಸ್ ಇತ್ಯಾದಿ ಮೀಸಲು ವಿಷಯಗಳಾದರೆ, ಅರಣ್ಯ , ವಿದ್ಯಾಭ್ಯಾಸ, ಆರೋಗ್ಯ, ಭೂಕಂದಾಯ ಇತ್ಯಾದಿ ವರ್ಗಾಯಿತ ವಿಷಯಗಳಾದವು. ಗವರ್ನರ್ ಮತ್ತು ಆತನ ಕಾರ್ಯಕಾರಿ ಸಮಿತಿಗೆ ಮೀಸಲು ವಿಷಯಗಳ ಜವಾಬ್ದಾರಿ ಇದ್ದಿತು. ಚುನಾಯಿತ ಸಚಿವರು ವರ್ಗಾಯಿತ ವಿಷಯಗಳ ಜವಾಬ್ದಾರಿ ಹೊಂದಿದ್ದರು.
9. 1935 ರ ಭಾರತ ಸರಕಾರದ ಶಾಸನ
ಇದರ ಪ್ರಮುಖ ಅಂಶಗಳು
• ಈ ಶಾಸನವು ಬ್ರಿಟಿಷ್ ಇಂಡಿಯಾ ಹಾಗೂ ದೇಶೀಯ ಸಂಸ್ಥಾನಗಳನ್ನೊಳಗೊಂಡ ಒಂದು ಒಕ್ಕೂಟ ಸ್ಥಾಪಿಸುವಂತೆ ಸೂಚಿಸಿತು.
• ದೇಶೀಯ ಸಂಸ್ಥಾನ ಮತ್ತು ಪ್ರಾಂತ್ಯಗಳ ಪರಿಮಿತಿಗೆ ಒಳಪಟ್ಟ ಒಂದು ಫೆಡರಲ್ ನ್ಯಾಯಾಲಯವನ್ನು ಸ್ಥಾಪಿಸಿತು.
• ಪ್ರಾಂತ್ಯಗಳಿದ್ದ ದ್ವಿಮುಖ ಸರ್ಕಾರ ವ್ಯವಸ್ಥೆಯನ್ನು ಕೊನೆಗೊಳಿಸಿತು. ಪ್ರಾಂತ್ಯಗಳಿಗೆ ಸ್ವಾಯತ್ತತೆಯನ್ನು ನೀಡಿತು.
• ಈ ಶಾಸನವು ಆಡಳಿತ ಇಲಾಖೆಗಳನ್ನು ಕೇಂದ್ರಪಟ್ಟಿ , ರಾಜ್ಯಪಟ್ಟಿ ಮತ್ತು ಸಮವರ್ತಿ ಪಟ್ಟಿಗಳಾಗಿ ವಿಂಗಡಿಸಿತು. ಆದರೆ ‘ದ್ವಿಮುಖ ವ್ಯವಸ್ಥೆ’ಯನ್ನು ‘ಕೇಂದ್ರ’ದಲ್ಲಿ ಪ್ರಾರಂಭಿಸಿತು.
• ಭಾರತದಲ್ಲಿ ರಿಸರ್ವ್ ಬ್ಯಾಂಕನ್ನು ಸ್ಥಾಪಿಸಲಾಯಿತು.
10. 1947 ರ ಭಾರತ ಸ್ವಾತಂತ್ರ್ಯದ ಶಾಸನ
ಇದರ ಪ್ರಮುಖ ಅಂಶಗಳು
• ಭಾರತ ದೇಶವು ಸ್ವತಂತ್ರ್ಯವಾಯಿತು. ಅನ್ನು ಇಬ್ಬಾಗವಾಗಿ ಮಾಡಿ ಆಭರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ್ಯ ದೇಶಗಳನ್ನು ರಚಿಸಲಾಯಿತು.
• ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಕೊನೆಗೊಂಡಿತು.
• ಪ್ರಾಂತ್ಯಗಳು ಮತ್ತು ದೇಶೀಯ ಸಂಸ್ಥಾನಗಳಿಗೆ ಭಾರತ ಮತ್ತು ಪಾಕಿಸ್ತಾನಗಳಿಗೆ ಸೇರಲು ಅವಕಾಶವಾಯಿತು.
• ಸಂವಿಧಾನ ರಚನೆಗೆ ಸಂವಿಧಾನ ಸಭೆಯನ್ನು ರಚಿಸಲಾಯಿತು.
✦ 40 ಸಾಮಾನ್ಯ ಜ್ಞಾನ ಪ್ರಶ್ನೆಗಳು : ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ