ಭಾರತದ ಅಧಿಕೃತ ಭಾಷೆಯ ಬಗ್ಗೆ ಒಂದಿಷ್ಟು ಮಾಹಿತಿ
ಸಂವಿಧಾನದ 343ನೇ ವಿಧಿಯು ದೇಶದ ಅಧಿಕೃತ ಭಾಷೆಯ ಕುರಿತು ವಿವರಿಸುತ್ತದೆ. (ಅಧಿಕೃತ ಭಾಷೆ ಎಂದರೆ ಸರ್ಕಾರದ ಹಾಗೂ ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವ ಮತ್ತು ಕಾನೂನಾತ್ಮಕ ವಿಷಯಗಳಲ್ಲಿ ಬಳಸುವ ಭಾಷೆ).
ಈ ವಿಧಿಯ ಪ್ರಕಾರ, ದೇವನಾಗರಿ ಲಿಪಿಯಲ್ಲಿರುವ ಹಿಂದಿಭಾಷೆಯು ಅಧಿಕೃತ ಭಾಷೆ. ಆದರೆ, ಈ ಭಾಷೆಯ ಜೊತೆಗೆ ಸರ್ಕಾರಿ ಉದ್ದೇಶಗಳಿಗಾಗಿ ಹಿಂದಿಯ ಜೊತೆ ಇಂಗ್ಲಿಷ್ ಭಾಷೆಯನ್ನು ಕೇಂದ್ರಾಡಳಿತ ಹಾಗೂ ಸಂಸತ್ತಿನಲ್ಲಿ ಅಧಿಕೃತ ಭಾಷೆಯನ್ನಾಗಿ ಸಂವಿಧಾನ ಆರಂಭದ (26ನೇ ಜನವರಿ 1965) 15 ವರ್ಷಗಳವರೆಗೆ ಮಾತ್ರ ಮುಂದುವರಿಸಿಕೊಂಡು ಹೋಗಬಹುದು (ಸಂವಿಧಾನ ನೀಡಿರುವ ಈ ಅವಧಿ 1980ಕ್ಕೆ ಮುಕ್ತಾಯಗೊಂಡಿದೆ). 15 ವರ್ಷ ಪೂರ್ಣಗೊಂಡ ಮೇಲೆ ಭಾಷೆಗೆ ಸಂಬಂಧಿಸಿದಂತೆ ಒಂದು ಆಯೋಗವನ್ನು ರಾಷ್ಟ್ರಪತಿಯವರು ರಚಿಸಬೇಕು.
ಅದರಲ್ಲಿ ಹಿಂದಿ ಸೇರಿದಂತೆ ಆಯಾ ರಾಜ್ಯಗಳಲ್ಲಿ ಬಳಸಬಹುದಾದ ಭಾಷೆಗಳ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಇಂಗ್ಲಿಷ್ ಬಿಟ್ಟು ಇತರ ಭಾಷೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವುದು ಹಾಗೂ ಅಧಿಕೃತ ಬಳಕೆಗಾಗಿ ಇಂಗ್ಲಿಷ್ ಭಾಷೆಗೆ ಆದಷ್ಟು ಕಡಿವಾಣ ಹಾಕುವುದು ಈ ಆಯೋಗದ ಮುಖ್ಯ ಉದ್ದೇಶ ಆಗಿರಬೇಕು ಎಂದು 344ನೇ ವಿಧಿಯಲ್ಲಿ ಉಲ್ಲೇಖಿಸಲಾಗಿದೆ.
ಇದರಲ್ಲಿ ಹಿಂದಿಯ ಜೊತೆಗೆ ಬೇರೆಬೇರೆ ರಾಜ್ಯಗಳ 22 ಭಾಷೆಗಳನ್ನು ಅಧಿಕೃತ ಭಾಷೆಗಳು ಎಂದು ವಿವರಿಸಲಾಗಿದೆ. ರಾಜ್ಯಗಳು ಪರಸ್ಪರ ವ್ಯವಹರಿಸುವಾಗ ಅಥವಾ ಕೇಂದ್ರದ ಜೊತೆ ವ್ಯವಹಾರ ಮಾಡುವ ಸಂದರ್ಭಗಳಲ್ಲಿ ಈ 22 ಭಾಷೆಗಳನ್ನು ಬಳಸಬಹುದು ಎಂದು 344(1)ರಲ್ಲಿ ಸ್ಪಷ್ಟಪಡಿಸಲಾಗಿದೆ.
ಅದರಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಮಲಯಾಳಂ, ಗುಜರಾತಿ ಇತ್ಯಾದಿ ಭಾಷೆಗಳಿವೆ. ಹೀಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದು ರಾಜ್ಯಕ್ಕೆ ಅಧಿಕೃತ ಭಾಷೆ ಎಂದು ಘೋಷಿಸುವಾಗ ಹಿಂದಿ ಬಾರದ ವ್ಯಕ್ತಿಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಇದೇ ವಿಧಿಯ ‘ಇ‘ ಉಪವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಹಿಂದಿಯು ಅಧಿಕೃತ ಭಾಷೆ (official language) ಎಂದಿದೆಯೇ ಹೊರತು ರಾಷ್ಟ್ರೀಯ ಭಾಷೆ (national language) ಎಂದು ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ.
ಸಂವಿಧಾನದ ಎಂಟನೇ ಅನುಬಂಧದಲ್ಲಿ ಇಂಗ್ಲಿಷ್ ಬಿಟ್ಟು 15 ಭಾರತೀಯ ಭಾಷೆಗಳನ್ನು ಮಾತ್ರಾ ಸೇರಿಸಲಾಗಿತ್ತು. (ನಂತರ ಇತರ ಕೆಲವು ಭಾಷೆಗಳನ್ನು ಸೇರಿಸಿದೆ)
# ಸಂವಿಧಾನದ 8ನೇ ಪರಿಚ್ಛೇದದಲ್ಲಿ ಗುರುತಿಸಿದ ಅಧಿಕೃತ ಭಾರತೀಯ ಭಾಷೆಗಳ ಪಟ್ಟಿ
ಅಸ್ಸಾಮಿ, ಬೆಂಗಾಲಿ, ಬೋಡೊ,ಡೋಗ್ರಿ,ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು, ಉರ್ದು
# 8ನೇ ಸ್ಥಾನದಲ್ಲಿ ಕನ್ನಡ :
ಭಾರತದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ದೇಶದಲ್ಲಿ ಕನ್ನಡ 8ನೇ ಸ್ಥಾನದಲ್ಲಿದೆ. 2001ರಿಂದ 2011ರವರೆಗೆ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ 4,37,06,512. ಭಾರತದ ಜನಸಂಖ್ಯೆಯ ಶೇ. 3.37 ರಷ್ಟು.
# 2011ರ ಜನಗಣತಿ ವರದಿ ಪ್ರಕಾರ
➤ ದೇಶದಲ್ಲಿ ಒಟ್ಟು ಭಾಷೆಗಳು- 19,569
➤ ಸಾವಿರಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಗಳ ಸಂಖ್ಯೆ-121.
➤ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಿರುವ ಭಾಷೆಗಳು-22
➤ಗುರುತಿಸಬಲ್ಲ ಮಾತೃಭಾಷೆಗಳು-1,369
➤ಇತರ ಭಾಷೆಗಳು -1,474
➤ 10 ಸಾವಿರಕ್ಕಿಂತ ಹೆಚ್ಚು ಜನರು ಮಾತನಾಡುವ ಗುರುತಿಸಬಹುದಾದ ಮಾತೃಭಾಷೆಗಳು-270
➤8ನೇ ಪರಿಚ್ಛೇದದಲ್ಲಿ ಸೇರಿದ ಭಾಷೆಗಳ ಗುಂಪಿಗೆ ಸೇರಿದ ಭಾಷೆಗಳು : 123
➤ ಪರಿಚ್ಛೇದದಲ್ಲಿ ಸೇರದ ಮಾತೃಭಾಷೆ ಗುಂಪಿನಲ್ಲಿರುವ ಭಾಷೆಗಳು – 147
# ಭಾಷೆಗಳ ಸಮೀಕ್ಷೆ :
ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾವನ್ನು ಜಗತ್ತಿನಲ್ಲಿ ಈವರೆಗೆ ನಡೆದಿರುವ ಭಾಷಾ ಸಮೀಕ್ಷೆಗಳಲ್ಲೇ ಅತ್ಯಂತ ದೊಡ್ಡ ಸಮೀಕ್ಷೆ ನಡೆಸಿದೆ. ಇದೇ ಸಂದರ್ಭದಲ್ಲಿ ಭಾರತದ ಒಳನಾಡಿನಲ್ಲಿರುವ ಕೆಲವು ಬುಡಕಟ್ಟು ಭಾಷೆಗಳು ಬೆಳವಣಿಗೆಯನ್ನು ದಾಖಲಿಸಿದೆ.
ಭಾರತದಲ್ಲಿ 780 ಭಾಷೆಗಳನ್ನು ಗುರುತಿಸಲಾಗಿದೆ. ಅವಲ್ಲದೆ 100 ಪ್ರತ್ಯೇಕ ಅಸ್ತಿತ್ವ ಪತ್ತೆಯಾಗದೇ ಉಳಿದಿರಬಹುದಾದ ಭಾರತದ ಭಾಷೆಗಳು ಇವೆ ಎಂದು ಅಂದಾಜಿಸಿದೆ. 780 ಭಾಷೆಗಳಲ್ಲಿ 400 ಭಾರತದ ಭಾಷೆಗಳು ಅಳಿವಿನಂಚಿನಲ್ಲಿವೆ. ಇವು ಮುಂದಿನ 50 ವರ್ಷಗಳಲ್ಲಿ ನಶಿಸಿ ಹೋಗುವ ಅಪಾಯ ಎದುರಿಸುತ್ತಿವೆ’ ಎಂದು ಭಾಷಾಶಾಸ್ತ್ರಜ್ಞ ಗಣೇಶ್ ಎನ್. ದೇವಿ ಅವರ ಅಭಿಪ್ರಾಯ.
ಕನ್ನಡಕ್ಕೆ ಅಳಿವಿಲ್ಲವೆಂದು ಹೇಳಲಾಗಿದೆ. ಕನ್ನಡ, ಹಿಂದಿ, ಮರಾಠಿ, ಬಂಗಾಳಿ, ತೆಲುಗು, ತಮಿಳು, ಪಂಜಾಬಿ ಮತ್ತು ಮಲಯಾಳದಂತಹ ಭಾಷೆಗಳಿಗೆ ಇಂಗ್ಲಿಷ್ನಿಂದ ಅಪಾಯವಿಲ್ಲ.
ಇವುಗಳನ್ನು ಜಗತ್ತಿನ ಅತ್ಯಂತ ದೊಡ್ಡ, ಪ್ರಬಲ ಮತ್ತು ಪ್ರಮುಖ 30 ಭಾಷೆಗಳೆಂದು ಪರಿಗಣಿಸಲಾಗಿದೆ. ಇವುಗಳಿಗೆ 1,000 ವರ್ಷಗಳಿಗಿಂತಲೂ ದೀರ್ಘಾವಧಿಯ ಇತಿಹಾಸವಿದೆ.