Current AffairsSpardha TimesSports

ಐಸಿಸಿ ಮುಖ್ಯಸ್ಥರಾಗಿ ಜಯ್‌ ಶಾ ಅವಿರೋಧ ಆಯ್ಕೆ

Share With Friends

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮುಂದಿನ ಐಸಿಸಿ(ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ) ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ವರ್ಷದ ಡಿಸೆಂಬರ್ 1 ರಂದು ಅವರು ಐಸಿಸಿ ಮುಖ್ಯಸ್ಥ ಗ್ರೆಗ್ ಬಾರ್ಕ್ಲೇ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯು ನವೆಂಬರ್ 30ರಂದು ಕೊನೆಗೊಳ್ಳಲಿದೆ. ಸತತ ಎರಡನೇ ಬಾರಿಗೆ ಹುದ್ದೆ ಅಲಂಕರಿಸಿದ್ದ ಅವರು ಇತ್ತೀಚೆಗೆ ಮೂರನೇ ಅವಧಿಗೆ ಸ್ಪರ್ಧೆಯಿಂದ ದೂರ ಸರಿದಿದ್ದರು. ICC ಅಧ್ಯಕ್ಷರು ತಲಾ ಎರಡು ವರ್ಷಗಳ ಮೂರು ಅವಧಿಗೆ ಅರ್ಹರಾಗಿರುತ್ತಾರೆ. ಆದರೆ ನ್ಯೂಜಿಲೆಂಡ್ ವಕೀಲ ಗ್ರೆಗ್ ಬಾರ್ಕ್ಲೇ ಇದುವರೆಗೆ 4 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ.

ಬಾರ್ಕ್ಲೇ ಅವರನ್ನು 2020ರ ನವೆಂಬರ್ ನಲ್ಲಿ ICC ಯ ಸ್ವತಂತ್ರ ಅಧ್ಯಕ್ಷರಾಗಿ ನೇಮಿಸಲಾಯಿತು. ನಂತರ 2022ರಲ್ಲಿ ಈ ಹುದ್ದೆಗೆ ಮರು ಆಯ್ಕೆಯಾಗಿದ್ದರು. ಪ್ರಸ್ತುತ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಮೂರನೇ ಅವಧಿಯನ್ನು ಬಯಸದಿರಲು ನಿರ್ಧರಿಸಿದ ನಂತರ ಜಯ್‌ ಶಾ ಆ ಸ್ಥಾನಕ್ಕೆ ಏಕೈಕ ನಾಮನಿರ್ದೇಶಿತರಾಗಿದ್ದರು.

ICC ನಿಯಮಗಳ ಪ್ರಕಾರ, ಅಧ್ಯಕ್ಷರ ಚುನಾವಣೆಯಲ್ಲಿ 16 ಮತಗಳಿದ್ದು, ಈಗ ವಿಜೇತರಿಗೆ 9 ಮತಗಳ (51%) ಸರಳ ಬಹುಮತದ ಅಗತ್ಯವಿದೆ. ಈ ಹಿಂದೆ, ಅಧ್ಯಕ್ಷರಾಗಲು, ಹಾಲಿ ಇರುವವರು ಮೂರನೇ ಎರಡರಷ್ಟು ಬಹುಮತವನ್ನು ಹೊಂದಿರಬೇಕಾಗಿತ್ತು. ಪ್ರಸಕ್ತ ನಿರ್ದೇಶಕರು 2024ರ ಆಗಸ್ಟ್ 27ರೊಳಗೆ ಮುಂದಿನ ಅಧ್ಯಕ್ಷಗಾದಿಗೆ ನಾಮನಿರ್ದೇಶನ ಸಲ್ಲಿಸಬೇಕಿತ್ತು ಆದರೆ ಅವರು ಸಲ್ಲಿಸಿಲ್ಲ. ಇನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ಚುನಾವಣೆ ನಡೆಯಲಿತ್ತು. ಆದರೆ ಜಯ್ ಶಾ ಒಬ್ಬರೇ ನಾಮನಿರ್ದೇಶನವಾಗಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರ ಅಧಿಕಾರಾವಧಿಯು 2024ರ ಡಿಸೆಂಬರ್ 1ರಿಂದ ಪ್ರಾರಂಭವಾಗುತ್ತದೆ.

ಅತ್ಯಂತ ಕಿರಿಯ ಅಧ್ಯಕ್ಷ :
ಜಯ್ ಶಾ 35ನೇ ವಯಸ್ಸಿಗೆ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಐಸಿಸಿ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಖ್ಯಾತಿಗೆ ಭಾಜನರಾಗಲಿದ್ದಾರೆ. ಈ ಹಿಂದೆ ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಐಸಿಸಿಯನ್ನು ಮುನ್ನಡೆಸಿದ ಭಾರತೀಯರು.

Leave a Reply

Your email address will not be published. Required fields are marked *

error: Content Copyright protected !!