ಭಾರತದ ಪ್ರಮುಖ ಬೆಳೆಗಳ ಕುರಿತ ಮಾಹಿತಿ
ಭಾರತದಲ್ಲಿ ಬೆಳೆಗಳನ್ನು ಎರಡು ವಿಧಗಳಾಗಿ ವಿಂಗಡಿಸಿದ್ದಾರೆ.
1.ಆಹಾರದ ಬೆಳೆಗಳು
2.ವಾಣಿಜ್ಯ ಬೆಳೆಗಳು
1.ಆಹಾರದ ಬೆಳೆಗಳು
✦ ಪ್ರಮುಖ ಆಹಾರ ಬೆಳೆಗಳೆಂದರೆ- ಭತ್ತ, ಗೋಧಿ,ರಾಗಿ, ಜೋಳ, ತರಕಾರಿ, ಹಣ್ಣುಗಳು, ದ್ವಿದಳ ಧಾನ್ಯಗಳು.
ಭತ್ತ –
✦ಭತ್ತವು ಭಾರತದ ಜನರ ಪ್ರಮುಖ ಆಹಾರ ಧಾನ್ಯವಾಗಿದೆ.
✦ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಭತ್ತದ ಕ್ಷೇತ್ರವನ್ನು ಹೊಂದಿದ್ದು, ಉತ್ಪಾದನೆಯಲ್ಲಿ ಎರಡನೆಯ ಸ್ಥಾನವನ್ನು ಹೊಂದಿದೆ. ಚೀನಾ ಮೊದಲ ಸ್ಥಾನದಲ್ಲಿದೆ.
✦ಭತ್ತವು ಮುಖ್ಯವಾಗಿ “ಖಾರಿಫ್ ಬೆಳೆಯಾಗಿದ್ದು, ನೀರಾವರಿ ಪ್ರದೇಶಗಳಲ್ಲಿ “ರಾಬಿ” ಕಾಲದಲ್ಲಿಯೂ ಬೆಳೆಯುತ್ತಾರೆ.
✦ಭತ್ತವು ಉಷ್ಣವಲಯದ ಬೆಳೆಯಾಗಿದ್ದು, 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 100ರಿಂದ 200 ಸಂ.ಮೀ ವಾರ್ಷಿಕ ಮಳೆಯ ಅವಶ್ಯಕತೆ ಇದೆ.
✦ಫಲವತ್ತಾದ ಮೆಕ್ಕಲು ಮಣ್ಣು ಮತ್ತು ಜೇಡಿಮಣ್ಣು ಭತ್ತದ ಬೆಳೆಗೆ ಸೂಕ್ತವಾಗಿರುತ್ತವೆ.
✦ಬೆಳೆಯು ಕೊಯ್ಲಿಗೆ ಬರುವವರೆಗೂ ಪೈರಿನ ತಳದಲ್ಲಿ ನೀರು ನಿಂತಿರಬೇಕಾದುದರಿಂದ ಸಮತಟ್ಟಾದ ಭೂಮಿ ಬೇಕಾಗುತ್ತದೆ.
✦ಪಶ್ಚಿಮ ಬಂಗಾಳವು ಭಾರತದಲ್ಲಿ ಹೆಚ್ಚು ಭತ್ತವನ್ನು ಬೆಳೆಯುವ ರಾಜ್ಯವಾಗಿದೆ.
ಗೋಧಿ
✦ ಭಾರತವು ಉತ್ಪಾದಿಸುತ್ತಿರುವ ಆಹಾರ ಧಾನ್ಯಗಳಲ್ಲಿ ಕ್ಷೇತ್ರ ಮತ್ತು ಉತ್ಪಾದನೆಗಳೆರಡರಲ್ಲಿಯೂ ಗೋಧಿಯು ಎರಡನೆ ಸ್ಥಾನ ಪಡೆದಿದೆ.
✦ ಇದು ಭಾರತದ ಮುಖ್ಯ ರಾಬಿ ಬೆಳೆಯಾಗಿದೆ.
✦ ಗೋಧಿ ಬೆಳೆಗೆ 10ಡಿಗ್ರಿಯಿಂದ 15 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 50 ರಿಂದ 70 ಸಂ.ಮೀ. ವಾರ್ಷಿಕ ಮಳೆ ಅವಶ್ಯಕ.
✦ ಜೇಡಿಮಣ್ಣು ಮತ್ತು ಕಪ್ಪು ಮಣ್ಣಿನಲ್ಲಿ ಚೆನ್ನಾಗಿ ಗೋಧಿಯು ಬೆಳೆಯುತ್ತದೆ.
✦ ಉತ್ತರದ ಮೈದಾನಗಳಾದ ಪಂಜಾಬ್,ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ಗೋಧಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಪಂಜಾಬ್ ಗೋಧಿಯ ಕಣಜ” ವೆನಿಸಿದೆ.
✦ ಭಾರತದಲ್ಲಿ ‘ಹಸಿರು ಕ್ರಾಂತಿಯುಗಕ್ಕೆ ನಾಂದಿಯಾದುದು ಗೋಧಿಯ ಅಧಿಕ ಇಳುವರಿಯ ತಳಿಗಳಿಂದ.
ಜೋಳ
✦ ಇದು “ಖಾರಿಫ್ ಬೆಳೆಯಾಗಿದೆ.
✦ ಇದನ್ನು ಮಧ್ಯ ಮತ್ತು ದಕ್ಷಿಣ ಭಾರತದ ಒಣಹವೆಯಿರುವ ಪ್ರದೇಶಗಳಲ್ಲಿ ಬೆಳೆಯುತ್ತಾರೆ.
✦ ಈ ಬೆಳೆಗೆ ಹೆಚ್ಚು ಉಷ್ಣಾಂಶ ಮತ್ತು ಸಾಧಾರಣ ಮಳೆ ಬೇಕಾಗುತ್ತದೆ.
✦ ಕಪ್ಪು ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ.
✦ ಕರ್ನಾಟಕ, ಮಹಾರಾಷ್ಟ್ರ, ಮತ್ತು ಮಧ್ಯಪ್ರದೇಶಗಳು ಜೋಳವನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳು.
ರಾಗಿ
✦ ರಾಗಿಯು ಹೆಚ್ಚು ಪೋಷಕಾಂಶವನ್ನು ಹೊಂದಿರುವ ಆಹಾರ ಧಾನ್ಯವಾಗಿದೆ.
✦ ಇದನ್ನು ಕಡಿಮೆ ಮಳೆ ಮತ್ತು ಕಡಿಮೆ ಭೂಸಾರ ಇರುವ ಮಣ್ಣಿನಲ್ಲೊ ಒಣ ಬೆಳೆಯಾಗಿ ಬೆಳೆಯಲಾಗುತ್ತದೆ.
✦ ಇದನ್ನು ಕರ್ನಾಟಕ, ತಮಿಳುನಾಡು, ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚು ಬೆಳೆಯುತ್ತಿದ್ದು ಇಲ್ಲಿನ ಜನರ ಮುಖ್ಯ ಆಹಾರ ಬೆಳಯಾಗಿದೆ.
✦ ಇದೊಂದು ಪ್ರಮುಖ ಖಾರಿಫ್ ಬೆಳೆಯಾಗಿದೆ.
✦ ಉತ್ರ ಕರ್ನಾಟಕದಲ್ಲಿ ‘ಜೋಳ’ ಮತ್ತು ದಕ್ಷಿಣ ಕರ್ನಾಟಕದಲ್ಲಿ ‘ರಾಗಿ’ ಅತಿ ಮುಖ್ಯ ಆಹಾರ ಧಾನ್ಯಗಳಾಗಿವೆ.
ದ್ವಿದಳ ಧಾನ್ಯಗಳು
ಭಾರತದಲ್ಲಿ ಬೆಳೆಯುವ ಪ್ರಮುಖ ದ್ವಿದಳಧಾನ್ಯಗಳೆಂದರೆ – ಹೆಸರು, ಉದ್ದು, ಹುರುಳಿ, ಕಡಲೆ, ತೊಗರಿ ಮುಂತಾದವು. ಇವು ಪ್ರೋಟಿನ್ಯುಕ್ತ ಧಾನ್ಯವಾಗಿದೆ.
✦ ಈ ಬೆಳೆಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತದೆ. ಆದ್ದರಿಂದ ಇತರ ಬೆಳೆಗಳ ಜೊತೆಯಲ್ಲಿ ಇಲ್ಲವೇ ಬೆಳೆಗಳ ಆವರ್ತದ ಕ್ರಮದಲ್ಲಿ ಬೆಳೆಯುತ್ತಾರೆ.
✦ ರಾಜಸ್ತಾನವು ಧಾನ್ಯಗಳ ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ “ ಕರ್ನಾಟಕವಿದೆ.
ಮೆಕ್ಕೆಜೋಳ
✦ ಇದನ್ನು ಉಪ ಆಹಾರ ಧಾನ್ಯವಾಗಿ ಮತ್ತು ದನಕರುಗಳ ಮೇವಿಗಾಗಿ ಬಳಸುತ್ತಾರೆ.
✦ ಇದು ಹೆಚ್ಚು ಇಳುವರಿಯನ್ನು ಕೊಡುವ “ಖಾರೀಫ್” ಬೆಳೆಯಾಗಿದೆ.
✦ ಇದನ್ನು ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಹಿಮಾಚಲ ಪ್ರದೇಶ, ಆಂದ್ರಪ್ರದೇಶ, ಉತ್ತರಪ್ರದೇಶ, ಕರ್ನಾಟಕ, ರಾಜ್ಯಗಳಲ್ಲಿ ಬೆಳೆಯುತ್ತಾರೆ.
ನವಣೆ
✦ ನವಣೆಯನ್ನು ಕಡಿಮೆ ಮಳೆಬೀಳುವ ಮತ್ತು ಭೂಸಾರ ಕಡಿಮೆ ಇರುವ ಭಾಗಗಳಲ್ಲಿ ಬೆಳೆಯುತ್ತಾರೆ.
ವಾಣಿಜ್ಯ ಬೆಳೆಗಳು
ಕಬ್ಬು, ಹತ್ತಿ, ಸೆಣಬು, ಚಹ, ಕಾಫಿ, ಎಣ್ಣೆಕಾಳುಗಳು, ಹೊಗೆಸೊಪ್ಪು, ಮತ್ತು ಸಾಂಬಾಋ ಪದಾರ್ಥಗಳು
ಕಬ್ಬು
✦ ಇದು ಭಾರತದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ.
✦ ಪ್ರಪಂಚದಲ್ಲೇ ಕಬ್ಬಿನ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ.
✦ ಕಬ್ಬನ್ನು ಸಕ್ಕರೆ, ಬೆಲ್ಲ ಹಾಗೂ ಕಾಗದ ಕೈಗಾರಿಕೆಗಳಲ್ಲಿ ಕಚ್ಚಾವಸ್ತುವನ್ನಾಗಿ ಬಳಸಲಾಗುತ್ತದೆ.
✦ ಈ ಬೆಳೆಗೆ ಹೆಚ್ಚು ಉಷ್ಣಾಂಶ ಮತ್ತು ತೇವಾಂಶ ಹೊಂದಿರುವ ವಾಯುಗುಣ ಅವಶ್ಯಕ. ಇದಕ್ಕೆ 21 ಡಿಗ್ರಿ ಯಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 100 ರಿಂದ 150 ಸೆಂ.ಮೀ ವಾರ್ಷಿಕ ಮಳೆ ಬೇಕಾಗುವುದು.
✦ ಈ ಬೆಳೆಯು ಮೆಕ್ಕಲು ಮತ್ತು ಕಪ್ಪುಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
✦ ಉತ್ತರ ಪ್ರದೇಶ ಭಾರತದಲ್ಲಿ ಅತಿಹೆಚ್ಚು ಕಬ್ಬನ್ನು ಉತ್ಪಾದಿಸುವ ರಾಜ್ಯವಾಗಿದೆ.
✦ ದಕ್ಷಿಣ ಭಾರತದಲ್ಲಿ ಕಬ್ಬಿನ ಇಳುವರಿ ಉತ್ತರ ಭಾರತಕ್ಕಿಂತ ಹೆಚ್ಚಾಗಿದೆ.
ಚಹ ಮತ್ತು ಕಾಫಿ,
✦ ಚಹ ಮತ್ತು ಕಾಫಿ ಭಾರತದ ಪಾನೀಯ ಬೆಳೆಗಳಾಗಿವೆ.
✦ ಭಾರತವು ಪ್ರಪಂಚದಲ್ಲೇ ಅತಿ ಹೆಚ್ಚು “ಚಹಾ” ವನ್ನು ಉತ್ಪಾದಿಸುವ ದೇಶವಾಗಿದೆ.
✦ ಚಹಾ ಮತ್ತು ಕಾಫಿ ಬೆಳೆಗಳು ಒಂದೇ ವಿಧೌಆದ ವಾಯುಗುಣ ಮತ್ತು ಭೂಗುಣಗಳಲ್ಲಿ ಬೆಳೆಯುತ್ತವೆ.
✦ ಇವುಗಳಿಗೆ 15 ಡಿಗ್ರಿ ಯಿಂದ 30ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅವಶ್ಯಕ. ಹಾಗೂ 150 ರಿಂದ 200 ಸೆಂ.ಮೀ ವಾರ್ಷಿಕ ಮಳೆ ಅವಶ್ಯಕ.
✦ ಎರಡಕ್ಕೂ ನೀರು ಚೆನ್ನಾಗಿ ಹರಿದುಹೋಗುವ ಇಳಿಜಾರು ಪ್ರದೇಶ ಮತ್ತು ಸಾವಯವ ಪದಾರ್ಥಗಳಿಂದ ಕೂಡಿದ ಫಲವತ್ತಾದ ಅಣ್ಣು ಅವಶ್ಯಕ.
✦ ಭಾರತದ ಅಸ್ಸಾಂನಲ್ಲಿ ವ್ಯಾಪಕವಾಗಿ “ಚಹ”ವನ್ನು ಬೆಳೆಯಲಾಗುತ್ತದೆ. ಜೊತೆಗೆ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಕರ್ನಾಟಕಗಳಲ್ಲಿಯೂ ಚಹವನ್ನು ಬೆಳೆಯುತ್ತಾರೆ.
✦ ಪಶ್ಚಿಮ ಬಂಗಾಳದ ದಾರ್ಜಿಲಿಂಗ್ನ ಚಹ ಪ್ರಪಂಚದಲ್ಲಿಯೇ ಅತ್ಯುತ್ತಮ ದರ್ಜೆಯಾಗಿದೆ.
✦ ಕರ್ನಾಟಕ ರಾಜ್ಯವು ಭಾರತದಲ್ಲಯೇ ಅತಿ ಹೆಚ್ಚು ಕಾಫಿಯನ್ನು ಉತ್ಪಾದಿಸುವ ರಾಜ್ಯವಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ದಕ್ಷಿಣ ಭಾಗ ಕಾಫಿ ಬೆಳೆಗೆ ಅನುಕೂಲವಾಗಿದೆ.
✦ ಭಾರತವು ಚಹವನ್ನು ರಪ್ತು ಮಾಡುವ ಪ್ರಮುಖ ದೇಶವಾಘಿದೆ.
ಹತ್ತಿ
✦ ಇದು ಭಾರತದ ಪ್ರಮುಖ ನಾರು ಬೆಳೆಯಾಗಿದೆ.
✦ ಭಾರತವು ಹತ್ತಿ ಬೆಳೆಯುವ ಪ್ರದೇಶದಲ್ಲಿ ಪ್ರಪಂಚದಲ್ಲಿ ಮೊದಲ ಹಾಗೂ ಉತ್ಪಾದನೆಯಲ್ಲಿ ಎರಡನೆ ಸ್ಥಾನದಲ್ಲಿದೆ.
✦ ಹತ್ತಿ ಉಷ್ಣವಲಯದ ಬೆಳೆಯಾಗಿದೆ. ಈ ಬೆಳೆಗೆ 20 ಡಿಗ್ರಿ ರಿಂದ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕು.
✦ ಇದು ಚೆನ್ನಾಗಿ ನೀರು ಇಂಗುವ ಕೆಂಪು ಮಣ್ಣು, ಕಪ್ಪು ಮಣ್ಣು ಮತ್ತು ಮೆಕ್ಕಲು ಮಣ್ಣುಗಳಲ್ಲಿ ಚೆನ್ನಾಗಿ ಬೆಳೆಯುವುದು.
✦ ಇದು ಖಾರೀಫ್ ಹಾಗೂ ರಾಬಿ ಬೆಳೆಯಾಗಿದೆ.
✦ ಭಾರತದಲ್ಲಿ ಹೆಚ್ಚಾಗಿ ಮಧ್ಯಮ ಮತ್ತು ತುಂಡು ಎಳೆಯ ಹತ್ತಿಯನ್ನು ಉತ್ಪಾದಿಸಲಾಗುತ್ತದೆ.
✦ ಉದ್ದ ಎಳೆಯ ಹತ್ತಿಯನ್ನು ಇತ್ತೀಚೆಗೆ ನೀರಾವರಿ ಸಹಾಯದಿಂದ ಬೆಳೆಯಲಾಗುತ್ತಿದೆ.( ಪಂಜಾಬ್, ಹರಿಯಾಣ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ)
✦ ಹತ್ತಿ ಉತ್ಪಾದಿಸುವ ಪ್ರಮುಖ ರಾಜ್ಯಗಳು- ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಪಂಜಾಬ್ ಹರಿಯಾಣ, ರಾಜಸ್ತಾನ, ಕರ್ನಾಟಕ, ಮತ್ತು ಉತ್ತರಪ್ರದೇಶ.
✦ ಕಚ್ಚಾ ಹತ್ತಿಯನ್ನು ಗಿರಣಿಗಳಲ್ಲಿ ಕಚ್ಚಾ ವಸ್ತುವಾಗಿ ಬಳಸುವುದಲ್ಲದೆ, ಅದಿಕ ಪ್ರಮಾಣದ ಹತ್ತಿಯನ್ನು ರಪ್ತು ಮಾಡಿ ವಿದೇಶಿ ವಿನಿಮಯ ಗಳಿಸಬಹುದು. ಆದುದರಿಂದಲೇ ಹತ್ತಿಯನ್ನು “ ಬಿಳಿಚಿನ್ನ” ಎಂದು ಕರೆಯುತ್ತಾರೆ.
ಸೆಣಬು
✦ ಸೆಣಬು ಹತ್ತಿಯ ನಂತರ ಎರಡನೆಯ ಸ್ಥಾನ ಪಡೆದಿರುವ ಪ್ರಮುಖ ನಾರು ಬೆಳೆಯಾಗಿದೆ.
✦ ಸೆಣಬು ಬೆಚ್ಚನೆಯ ಹಾಗೂ ತೇವಯುತವಾದ ವಾಯುಗುಣದಲ್ಲಿ ಬೆಳೆಯುತ್ತದೆ.
✦ ಸೆಣಬಿನ ಬೇಸಾಯಕ್ಕೆ 25 ಡಿಗ್ರಿ ಯಿಂದ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು 150 ಸೆಂ.ಮೀಗಿಂತಲೂ ಹೆಚ್ಚು ವಾರ್ಷಿಕ ಮಳೆ ಬೇಕಾಗುವುದು.
✦ ಮರಳು ಮಿಶ್ರಿತ ಜೇಡಿಮಣ್ಣು ಮತ್ತು ಮೆಕ್ಕಲುಮಣ್ಣು ಈ ಬೆಳೆಗೆ ಅತ್ಯಂತ ಸೂಕ್ತ.
✦ ಈ ಬೆಳೆಗೆ ಅಧಿಕ ಪ್ರಮಾಣದಲ್ಲಿ ನೀರು ಮತ್ತು ಹೆಚ್ಚು ಕೆಲಸಗಾರರು ಬೇಕಾಗುತ್ತಾರೆ.
✦ ಪಶ್ಚಿಮ ಬಂಗಾಳವು ಭಾರತದಲ್ಲಯೇ ಅತಿ ಹೆಚ್ಚು ಸೆಣಬನ್ನು ಉತ್ಪಾದಿಸುವ ರಾಜ್ಯವಾಗಿದೆ.
✦ ಅಸ್ಸಾಂ, ಉತ್ತರಪ್ರದೇಶ ಬಿಹಾರ, ಒರಿಸ್ಸಾ, ಮತ್ತು ತ್ರಿಪುರ ಇವು ಸೆಣಬನ್ನು ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ.
✦ ಸೆಣಬನ್ನು “ ಚಿನ್ನದ ಎಳೆ” ಎಂದು ಕರೆಯುತ್ತಾರೆ.
✦ ಭಾರತದ ವಿಭಜನೆಯಿಂದ ಸೆಣಬು ಬೆಳೆಯುವ ಹೆಚ್ಚು ಪ್ರದೇಶಗಳು ಅಂದಿನ ಪೂರ್ವ ಪಾಕಿಸ್ತಾನಕ್ಕೆ ( ಬಾಂಗ್ಲಾದೇಶ) ಕ್ಕೆ ಸೇರಿಹೋದವು.
ಹೊಗೆಸೊಪ್ಪು
✦ ಇದು ನಿಕೋಟಿನ್ ವರ್ಗಕ್ಕೆ ಸೇರಿದ ಸಸ್ಯ. ಈ ಬೆಳೆಯನ್ನು 16 ನೆ ಶತಮಾನದಲ್ಲಿ ಪೋರ್ಚುಗೀಸರು ಭಾರತಕ್ಕೆ ಪರಿಚಯಿಸಿದರೆಂದು ತಿಳಿಯಲಾಗಿದೆ.
✦ ಆರಂಭದಲ್ಲಿ ಇದನ್ನು ಗೋವಾ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಬೆಳೆಯುತ್ತಿದ್ದರು. ನಂತರ ಆಂಧ್ರಪ್ರದೇಶ ಕರ್ನಾಟಕ, ತಮಿಳುನಾಡು, ಅಸ್ಸಾಂ, ಬಿಹಾರ, ಮಹಾರಾಷ್ಟ್ರ, ರಾಜಸ್ತಾನ, ಉತ್ತರಪ್ರದೇಶಗಳಲ್ಲಿ ಇದನ್ನು ಬೆಳೆಯಲಾರಂಭಿಸಿದರು.
✦ ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಹೊಗೆಸೊಪ್ಪನ್ನು ಉತ್ಪಾದಿಸುವ ಪ್ರಮುಖ ರಾಜ್ಯವಾಗಿದೆ.
ಎಣ್ಣೆಕಾಳುಗಳು
✦ ಭಾರತದಲ್ಲಿ ಬೆಳೆಯುವ ಪ್ರಮುಖ ಎಣ್ಣೆಕಾಳುಗಳೆಂದರೆ- ಕಡಲೆಕಾಯಿ (ಶೇಂಗಾ), ಎಳ್ಳು, ಕುಸುಬೆ, ಸಾಸಿವೆ, ಅಗಸೆ, ಔಡಲ( ಹರಳು) ಮುಂತಾದವು.
✦ ತಾಳೆ ಮತ್ತು ತೆಂಗಿನಿಂದಲೂ ಎಣ್ಣೆ ತೆಗೆಯಲಾಗುತ್ತದೆ.
ಇತರ ವಾಣಿಜ್ಯ ಬೆಳೆಗಳು- ಕೋಕೋ, ಮೆಣಸು, ಏಲಕ್ಕಿ, ಲವಂಗ, ಗೋಡಂಬಿ, ಅರಿಸಿನ, ಶುಂಠಿ, ಮತ್ತು ರಬ್ಬರ್.ನೀಲಗೀರಿ ಬೆಟ್ಟಗಳ ಇಳಿಜಾರಿನಲ್ಲಿ ಕೋಕೋ, ಪಶ್ಚಿಮ ಘಟ್ಟಗಳ ತೇವಾಂಶವುಳ್ಳ ಇಳಿಜಾರುಗಳಲ್ಲಿ ಸಾಬಾರ ಪದಾರ್ಥಗಳನ್ನು ಬೆಳೆಯುತ್ತಾರೆ. ರಬ್ಬರ್ ತೋಟಗಳು ಕೇರಳ, ಅಸ್ಸಾಂ, ಕರ್ನಾಟಕ, ಮತ್ತು ತಮಿಳುನಾಡುಗಳಲ್ಲಿ ಕಂಡುಬರುತ್ತವೆ.