ಕಂಪ್ಯೂಟರ್ ಜ್ಞಾನ : ಮೈಕ್ರೋಸಾಫ್ಟ್ ವರ್ಡ್ (ಭಾಗ-1)
ಮೈಕ್ರೋಸಾಫ್ಟ್ ವರ್ಡ್ ಎನ್ನುವುದು ವೃತ್ತಿಪರ ಗುಣಮಟ್ಟದ ಪಠ್ಯ ರೂಪದ ದಸ್ತಾವೇಜುಗಳನ್ನು (Text Document) ಕಂಪ್ಯೂಟರ್ ಮೂಲಕ ಸಿದ್ಧ ಪಡಿಸಲು ನೆರವಾಗುವ ಒಂದು ತಂತ್ರಾಂಶ ಪ್ರೋಗ್ರಾಂ. ಇದರ ಮೂಲಕ ಅಕ್ಷರ ಮತ್ತು ಅಂಕಿಗಳಿರುವ ಪಠ್ಯರೂಪದ ದಸ್ತಾವೇಜನ್ನು ಕಂಪ್ಯೂಟರ್ನಲ್ಲಿ ಟೈಪು ಮಾಡಬಹುದು, ಅದರಲ್ಲಿರುವ ತಪ್ಪುಗಳನ್ನು ತಿದ್ದಬಹುದು, ಚಿತ್ರಗಳನ್ನು ಸೇರಿಸಿ ವೈವಿದ್ಯಮಯವಾಗಿ ಅಕ್ಷರ, ಸಾಲು, ಪ್ಯಾರಾ ಇತ್ಯಾದಿಗಳನ್ನು ಜೋಡಿಸಬಹುದು, ವಿನ್ಯಾಸಗೊಳಿಸಬಹುದು, ದಸ್ತಾವೇಜಿನ
ಒಟ್ಟು ಸ್ವರೂಪದ ನೋಟವನ್ನು ಪರದೆಯ ಮೇಲೆ ವೀಕ್ಷಿಸಬಹುದು ಮತ್ತು ಮುದ್ರಿಸಬಹುದು.
ಈ ರೀತಿಯಾಗಿ ಪಠ್ಯರೂಪದ ಮಾಹಿತಿಯನ್ನು ಕಂಪ್ಯೂಟರ್ ಮೂಲಕ ಸಂಸ್ಕರಿಸುವುದಕ್ಕೆ ಪದ ಸಂಸ್ಕರಣೆ (Word Processing) ಎನ್ನುತ್ತಾರೆ. ಇದಕ್ಕೆ ನೆರವಾಗುವ ವರ್ಡ್ ಪ್ರೋಗ್ರಾಂನ್ನು ಪದ ಸಂಸ್ಕಾರಕ (Word Processer) ಎಂದೂ ಕರೆಯಬಹುದು. ಈ ತಂತ್ರಾಂಶ ಪ್ರೋಗ್ರಾಂನ್ನು ಸರಳವಾಗಿ ಎಂಎಸ್ ವರ್ಡ್ (MS Word) ಅಥವಾ ವರ್ಥ್ (Word) ಎಂದು ಕರೆಯಲಾಗುತ್ತದೆ (ಈ ಅಧ್ಯಾಯದಲ್ಲಿ ಇನ್ನು ಮುಂದೆ ಇದನ್ನು ಕೇವಲ ವರ್ಡ್ ಎಂದೇ ಕರೆಯಲಾಗುವುದು).
ವರ್ಡ್ ಪ್ರೋಗ್ರಾಂ ಮೈಕ್ರೋಸಾಫ್ಟ್ ಆಫೀಸ್ (MS office) ತಂತ್ರಾಂಶ ಕುಟುಂಬದ ಸದಸ್ಯ, ಮೈಕ್ರೋಸಾಫ್ಟ್ ಆಫೀಸ್ ಎನ್ನುವುದು ಇಂತಹ ಹಲವಾರು ಕಾರ್ಯಾನ್ವಯ ಪ್ರೋಗ್ರಾಂಗಳನ್ನು ಒಳಗೊಂಡಿರುವ ಖ್ಯಾತ ಮೈಕ್ರೋಸಾಫ್ಟ್ ಕಂಪೆನಿಯವರ ಉತ್ಪನ್ನವಾದ ಒಂದು ತಂತ್ರಾಂಶ ಗೊಂಚಲು (Software Package), ಇದರಲ್ಲಿ ವರ್ಡ್ನ ಜೊತೆಗೆ, ಇನ್ನಿತರ ನಿರ್ದಿಷ್ಟ ಬಗೆಯ ಮಾಹಿತಿ ಸಂಸ್ಕರಣೆ ಕಾರ್ಯಗಳಿಗೆ ನೆರವಾಗುವ ಎಕ್ಸೆಲ್ (Excel), ಪವರ್ ಪಾಯಿಂಟ್ (PowerPoint), ಆಕ್ಸೆಸ್(Access), ಔಟ್ಲುಕ್ (Outlook), ಇತ್ಯಾದಿ ಹೆಸರಿನ ಹಲವು ಪ್ರೋಗ್ರಾಂಗಳು ಒಳಗೊಂಡಿವೆ. ಇವುಗಳ ಕುರಿತು ವಿವರವಾಗಿ ಮುಂದಿನ ಅಧ್ಯಾಯಗಳಲ್ಲಿ ಮಾಹಿತಿ ನೀಡಲಾಗಿದೆ.