ಮೊಬೈಲ್ ನಂಬರ್ ಪೋರ್ಟಿಬಿಲಿಟಿ (MNP)
ಮೊಬೈಲ್ ನಂಬರ್ ಪೋರ್ಟಿಬಿಲಿಟಿ – ಮೊಬೈಲ್ ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಂಡು ಸೇವಾ ಸಂಸ್ಥೆಯನ್ನು ಬದಲಿಸಲು ಅನುವು ಮಾಡಿಕೊಡುವ ವ್ಯವಸ್ಥೆ.
ನಾವು ಯಾವುದೋ ಸಂಸ್ಥೆಯ ಮೊಬೈಲ್ ಸಂಪರ್ಕ ಬಳಸುತ್ತಿರುತೆವಲ್ಲ, ಅದಕ್ಕಿಂತ ಉತ್ತಮ ಗುಣಮಟ್ಟದ ಸೇವೆ ಹಾಗೂ ಕಡಿಮೆ ದರ ಇನ್ನೊಂದು ಸಂಸ್ಥೆಯಲ್ಲಿ ದೊರಕುತ್ತಿವೆ ಎಂದರೆ ನಮ್ಮ ಈಗಿನ ಮೊಬೈಲ್ ಸಂಖ್ಯೆಯನ್ನು ಉಲಿಸಿಕೊಂಡೆ ಆ ಹೊಸ ಸಂಸ್ಥೆಯತ್ತ ಮುಖಮಾಡುವುದು ಸಾಧ್ಯವಿದೆ. ಇದನ್ನು ಸಾಧ್ಯವಾಗಿಸಿರುವುದು .‘ ಮೊಬೈಲ್ ನಂಬರ್ ಪೋರ್ಟಬಿಲಿಟಿ’( ಎಂಎನ್ಪಿ) ಎನ್ನುವ ಕಲ್ಪನೆ.
ಸೇವೆ ಬದಲಾದರೂ ಮೊಬೈಲ್ ಸಂಖ್ಯೆ ಬದಲಾಗದಂತೆ ನೋಡಿಕೊಳ್ಳುವುದು, ಆ ಮೂಲಕ ಎಲ್ಲರಿಗೂ ನಮ್ಮ ಸಂಖ್ಯೆಯನ್ನು ಮತ್ತೊಮ್ಮೆ ತಿಳಿಸಬೇಕಾದ ಅನಿವಾರ್ಯತೆಯನ್ನು ತಪ್ಪಿಸುವುದು ಎಂಎನ್ಪಿಯ ವೈಶಿಷ್ಟ್ಯ. ಬಳಕೆದಾರರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವ ಮೂಲಕ ಈ ವ್ಯವಸ್ಥೆ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಫರ್ಧೆ ಯಾವಾಗಲೂ ಇರುವಂತೆ ನೋಡಿಕೊಳ್ಳುತ್ತದೆ.
ನಮ್ಮ ಸದ್ಯದ ಮೊಬೈಲ್ ಸಂಪರ್ಕವನ್ನು ಭಾರತದ ಯಾವುದೇ ಮೊಬೈಲ್ ಸೇವೆಗೆ ವರ್ಗಾಯಿಸಲು ‘ ಯುನೀಕ್ ಪೋರ್ಟಿಂಗ್ ಕೋಡ್’ ಎಂಬ ಸಂಖ್ಯೆ ಇದ್ದರೆ ಸಾಕು. ಈ ಸಂಖ್ಯೆಯನ್ನು ನಮ್ಮ ಮೊಬೈಲನಿಂದ ಎಸ್ಎಮ್ಎಸ್ ಕಳಿಸುವ ಮೂಲಕ ಪಡೆದುಕೊಳ್ಳಬಹುದು. ನಾವು ಯಾವ ಸೇವೆಯನ್ನು ಬದಲಿಸಬೇಕೆಂದಿದ್ದೇವೋ ಆ ಸಂಸ್ಥೆಯವರು ಈ ಸಂಖ್ಯೆಯನ್ನು ಪಡೆದು ನಮ್ಮ ಮೊಬೈಲನ್ನು ತಮ್ಮ ಜಾಲಕ್ಕೆ ಸೇರಿಸಿಕೊಳ್ಳುತ್ತಾರೆ.
ಬೇರೆ ಸಂಸ್ಥೆಯ ಗ್ರಾಹಕರನ್ನು ತಮ್ಮತ್ತ ಸೆಳೆಯಲು, ತಮ್ಮ ಗ್ರಾಹಕರು ಬೇರೆ ಸಂಸ್ಥೆಯತ್ತ ಹೋಗದಂತೆ ತಡೆಯಲು ಮೊಬೈಲ್ ಸಂಸ್ಥೆಗಳು ಆಗಿಂದಾಗ್ಗೆ ವಿಶೆಷ ಕೊಡುಗೆಗಳನ್ನು ಘೋಷಿಸುತ್ತಲೇ ಇರುತ್ತವೆ. ಪೋರ್ಟ್ ಎಂದು ಸಂದೇಶ ಕಳಿಸಿದ ನಂತರವೂ ನಿರ್ಧಾರ ಬದಲಿಸುವಂತೆ ಗ್ರಾಹಕರ ಮನವೊಲಿಸುವ ಪ್ರಯತ್ನಗಳು ನಡೆಯುವುದು ಇಲ್ಲಿ ಸಾಮಾನ್ಯ.