Current AffairsGKSpardha Times

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಿನ್ನೆಲೆ ಗೊತ್ತೇ..?

Share With Friends

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)‌ ಇಂದು ತನ್ನ ಸಂಸ್ಥಾಪನಾ ದಿನವನ್ನು ಆಚರಣೆ ಮಾಡುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ” ವಿಪತ್ತು ನಿರ್ವಹಣಾ ಕಾಯ್ದೆ 2005″ ರ ಕಾನೂನಿನಡಿಯಲ್ಲಿ ರೂಪುಗೊಂಡಿದ್ದು, 23 ಡಿಸೆಂಬರ್ 2005 ರಂದು ಭಾರತ ಸರ್ಕಾರವು ಜಾರಿಗೆ ತಂದ ವಿಪತ್ತು ನಿರ್ವಹಣಾ ಕಾಯ್ದೆಯ ಮೂಲಕ ಎನ್‌ಡಿಎಂಎ ಸ್ಥಾಪಿಸಲಾಯಿತು.  ತುರ್ತು ಅಥವಾ ವಿಪತ್ತಿನ ಸಮಯದಲ್ಲಿ ಪರಿಣತಿ ಮತ್ತು ಬದ್ಧತೆಯೊಂದಿಗೆ ಪೀಡಿತ ಮತ್ತು ಸಾವುನೋವುಗಳ ಯೋಗಕ್ಷೇಮಕ್ಕಾಗಿ ಕೆಲಸ ಮಾಡುತ್ತದೆ. : ಸೆಕ್ಷನ್ 44-45 ಭಾರತದಲ್ಲಿ ವಿಪತ್ತು ನಿರ್ವಹಣೆಯ ಉನ್ನತ ಸಂಸ್ಥೆ – ಎನ್‌ಡಿಎಂಎ ಅಂದರೆ ಪ್ರಧಾನಿ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ.

ಭಾರತದ ಸಂಯುಕ್ತ ರಚನೆಯಲ್ಲಿ ವಿಪತ್ತು ನಿರ್ವಹಣೆ ರಾಜ್ಯ ಸರ್ಕಾರಗಳ ಹೆಗಲ ಮೇಲಿದೆ. ಕೇಂದ್ರದಲ್ಲಿ, ಗೃಹ ಸಚಿವಾಲಯ, ಭಾರತ ಸರ್ಕಾರವು ಎಲ್ಲಾ ರಾಜ್ಯ ಘಟಕಗಳೊಂದಿಗೆ ಸಮನ್ವಯಗೊಳಿಸುತ್ತದೆ.ಅತ್ಯಂತ ಗಂಭೀರ ವಿಪತ್ತುಗಳಲ್ಲಿ, ಮಿಲಿಟರಿ ಪಡೆ, ಎನ್‌ಡಿಆರ್‌ಎಫ್, ವೈಜ್ಞಾನಿಕ ಉಪಕರಣಗಳು, ಆರ್ಥಿಕ ಸಹಾಯ, ಕೇಂದ್ರ ಅರೆಸೈನಿಕ ಪಡೆ ಮತ್ತು ಇತರ ಎಲ್ಲ ಪ್ರಕಾರಗಳು ಸೇರಿದಂತೆ ಪೀಡಿತ ರಾಜ್ಯದ ಕೋರಿಕೆಯ ಮೇರೆಗೆ ರಾಜ್ಯಕ್ಕೆ ಅಪಾರ ಪ್ರಮಾಣದ ಸಹಾಯವನ್ನು ಕಳುಹಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.

ಎನ್‌ಡಿಆರ್‌ಎಫ್‌ನ ಉನ್ನತ ಅಧಿಕಾರಿಯನ್ನು ಡೈರೆಕ್ಟರ್ ಜನರಲ್ ಎಂದು ಕರೆಯಲಾಗುತ್ತದೆ. ಎನ್‌ಡಿಆರ್‌ಎಫ್ ಮಹಾನಿರ್ದೇಶಕರು ಭಾರತೀಯ ಪೊಲೀಸ್ ಪಡೆಗಳಿಂದ ಆಯ್ಕೆಯಾದ ಐಪಿಎಸ್ ಅಧಿಕಾರಿಗಳು.ಎನ್‌ಡಿಆರ್‌ಎಫ್ ಬೆಟಾಲಿಯನ್‌ಗಳನ್ನು ದೇಶಾದ್ಯಂತ 4 ವಿವಿಧ ಸ್ಥಳಗಳಲ್ಲಿ ಇರಿಸಲಾಗಿದೆ. ವಿಪತ್ತು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ಹತ್ತಿರ ಇಡಲಾಗುತ್ತದೆ ಇದರಿಂದ ಪ್ರತಿಕ್ರಿಯೆ ಸಮಯವನ್ನು ಕಡಿಮೆ ಮಾಡಬಹುದು. ಈ ಪಡೆಗಳನ್ನು ಪೀಡಿತ ಪ್ರದೇಶಗಳಿಗೆ ರಾಜ್ಯ ಅಧಿಕಾರಿಗಳ ಅನುಮೋದನೆಯೊಂದಿಗೆ ಕಳುಹಿಸಲಾಗುವುದು. ಎನ್‌ಡಿಆರ್‌ಎಫ್ ಬೆಟಾಲಿಯನ್‌ಗಳ ಪ್ರಸ್ತುತ ಪೋಸ್ಟ್‌ಗಳು ಈ ಕೆಳಗಿನ ಪ್ರದೇಶಗಳಲ್ಲಿವೆ.

# ವಿಪತ್ತು ನಿರ್ವಹಣಾ ಕಾಯ್ದೆ – 2005 : ಹಿನ್ನೆಲೆ

ಭಾರತ ದೇಶವು ಭೌಗೋಳಿಕವಾಗಿ ಪ್ರಾಕೃತಿಕವಾಗಿ ಬೇರೆ ಬೇರೆ ತರಹದ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳಿಗೆ ಒಳಗಾಗಬಹುದಾದ ಪ್ರದೇಶಗಳಲ್ಲಿ ಒಂದಾಗಿದೆ. ದೇಶದ ಸುಮಾರು ಶೇ.58 ಭೂಭಾಗವು ಭೂಕಂಪ ಸಂಭವಿಸಬಹುದಾದ ಪ್ರದೇಶವಾಗಿದ್ದು, 40 ಮಿಲಿಯನ್‌ ಹೆಕ್ಟೇರ್‌ಗಳು (ದೇಶದ ಶೇ.12 ಭೂ ಪ್ರದೇಶ) ನೆರೆ ಅಥವಾ ತುಂಬಿದ ನದಿ ನೀರಿನಿಂದ ಹಾನಿಗೊಳಗಾಗಬಹುದಾದ ಪ್ರದೇಶಗಳಾಗಿದ್ದರೆ, 7,516 ಕಿ.ಮೀ ಕರಾವಳಿ ಭಾಗದಲ್ಲಿ ಸುಮಾರು 5,700 ಕಿ.ಮೀ. ಕರಾವಳಿ ಪ್ರದೇಶ ಚಂಡಮಾರುತ ಮತ್ತು ಸುನಾಮಿಗೆ ತುತ್ತಾಗಬಹುದಾದ ಪ್ರದೇಶವಾಗಿದೆ. ಶೇ.68 ಕೃಷಿ ಭೂಮಿ ಸಾಮಾನ್ಯ ಮಳೆ ಕಡಿಮೆಯಾದಲ್ಲಿ ಬರಗಾಲ ಪೀಡಿತಗೊಳ್ಳಬಹುದಾಗಿದೆ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ವೈಜ್ಞಾನಿಕವಾದ ನಗರ ಅಭಿವೃದ್ಧಿ ಯೋಜನೆಗಳಿಲ್ಲದೆ ನಡೆಯುತ್ತಿರುವ ನಗರೀಕರಣ, ಕೈಗಾರೀಕರಣಗಳು, ಭಯೋತ್ಪಾದನೆ, ಅಂತರಾಷ್ಟ್ರೀಯ ಗಡಿ ತಂಟೆಗಳು, ರಾಸಾಯನಿಕ, ಜೈವಿಕ, ನ್ಯೂಕ್ಲಿಯರ್‌, ರೇಡಿಯಲಾಜಿಕಲ್‌ (CBRM)ವಿಪತ್ತುಗಳ ಭಯ ಹೆಚ್ಚಿಸಿದೆ.

1984ರಲ್ಲಿ ನಡೆದ ಭೂಪಾಲ ವಿಷಾನಿಲ ದುರಂತ, 1993ರ ಲಾತೂರ್‌ ಭೂಕಂಪ, 1999ರ ಒರಿಸ್ಸಾ ಚಂಡಮಾರುತ, 2001ರ ಗುಜರಾತ್‌ನಲ್ಲಿ ನಡೆದ ಭೂಕಂಪಗಳಲ್ಲಿ ಸಾವಿರಾರು ಸಾವು-ನೋವುಗಳು ಉಂಟಾಗಿದೆ. ಭಾರತ ಸರಕಾರವು ಅಂತಹ ವಿಪತ್ತುಗಳು ಸಂಭವಿಸಿದಾಗ ವಿಪತ್ತು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ, ಯೋಜನೆ, ನುರಿತ ರಕ್ಷಣಾ, ಚಿಕಿತ್ಸಾ ತಂಡಗಳು ಇರಬೇಕಾದ ಅಗತ್ಯವನ್ನು ಮನಗಂಡು, ಸಂಸತ್ತಿನಲ್ಲಿ ಡಿಸೆಂಬರ್‌ 2005ರಲ್ಲಿ ವಿಪತ್ತು ನಿರ್ವಹಣಾ ಮಸೂದೆ ಅಂಗೀಕಾರಗೊಂಡು ವಿಪತ್ತು ನಿರ್ವಹಣ ಕಾಯ್ದೆಯಾಗಿ 26 ಡಿಸೆಂಬರ್‌ 2005ರಲ್ಲಿ ಹೊರಬಂದಿದೆ.

ಈ ಕಾಯ್ದೆಯಲ್ಲಿ 11 ಅಧ್ಯಾಯಗಳಿದ್ದು 79 ಕಲಂ/ವಿಧಿಗಳಿವೆ. ಈ ಕಾಯ್ದೆಯು ವಿಪತ್ತು ಪದಕ್ಕೆ ಕಾನೂನಾತ್ಮಕ ವ್ಯಾಖ್ಯಾನ ನೀಡಿದೆ ಮತ್ತು ವಿಪತ್ತುಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಹೊಸ ಸಂಸ್ಥೆಗಳ ಸೃಷ್ಠಿಗೆ ಅನುವು ಮಾಡಿಕೊಟ್ಟಿದೆ. ಅವುಗಳೆಂದರೆ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ (NDMA) ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA), ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA), ರಾಷ್ಟ್ರೀಯ ಕಾರ್ಯಕಾರಿ ಸಮಿತಿ (NEC), ರಾಜ್ಯ ಕಾರ್ಯಕಾರಿ ಸಮಿತಿ (SEC), ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (NIDM), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಇವುಗಳಲ್ಲದೆ ಸರಕಾರ ಮತ್ತು ಸ್ಥಳೀಯಾಡಳಿತಗಳು ವಿಪತ್ತಿನ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ, ಅಧಿಕಾರದ ಬಗ್ಗೆ, ಹಣಕಾಸು ನಿರ್ವಹಣೆ ಬಗ್ಗೆ ಹಾಗೂ ಕಾಯ್ದೆ ಉಲ್ಲಂಘನೆ/ತಪ್ಪಿತಸ್ಥರಿಗೆ ಶಿಕ್ಷೆ, ಶಿಕ್ಷೆ ಪ್ರಮಾಣವನ್ನು ನಿರ್ದೇಶಿಸಿದೆ. ಕಾಯ್ದೆಯ 9ನೇ ಅಧ್ಯಾಯವು ಹಣಕಾಸಿನ ನಿರ್ವಹಣೆ ಬಗ್ಗೆ ಮಾರ್ಗಸೂಚಿ ನೀಡಿದರೆ 10ನೇ ಅಧ್ಯಾಯದ 51-60 ಕಲಂಗಳು ಕಾಯ್ದೆಯ ಅನುಷ್ಠಾನಕ್ಕೆ ವಿಫ‌ಲವಾದ ವ್ಯಕ್ತಿ/ಅಧಿಕಾರಿ/ ಸಂಸ್ಥೆಗೆ ಅನುವಾಗುವ ಶಿಕ್ಷಾರ್ಹ ಕ್ರಮಗಳನ್ನು ವಿವರಿಸಿದೆ.

ಈ ಕಾಯ್ದೆ ಪ್ರಕಾರ ಯಾವುದೇ ತರಹದ ಅನಾಹುತ/ಗಂಭೀರ ಘಟನೆ, ಯಾವುದೇ ಕಾರಣದಿಂದ ಗಮನಾರ್ಹ ಪ್ರಮಾಣದಲ್ಲಿ ಪ್ರಾಣ ಹಾನಿ, ಆಸ್ತಿಹಾನಿ, ಕಷ್ಟ-ನಷ್ಟ, ಪರಿಸರ ನಾಶಗಳು ಯಾವುದೇ ಪ್ರದೇಶದಲ್ಲಿ ನಡೆಯುತ್ತದೆಯೋ ಆ ದುರ್ಘ‌ಟನೆಯ ಪ್ರಭಾವಕ್ಕೆ ಒಳಗಾದ ಪ್ರದೇಶದಲ್ಲಿ ವಾಸಿಸುವ ಸಮುದಾಯದ ನಿರ್ವಹಣೆಗೆ ಮೀರಿದ ಘಟನೆಯಾಗಿದ್ದರೆ ಅದನ್ನು ವಿಪತ್ತು ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲಾಗಿದೆ.

* ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ :
ಈ ಪ್ರಾಧಿಕಾರಕ್ಕೆ ಪ್ರಧಾನ ಮಂತ್ರಿ ಸಭಾಧ್ಯಕ್ಷರಾಗಿದ್ದು ಇತರೆ 9 ಚುನಾಯಿತ ಸದಸ್ಯರಿದ್ದು ವ್ಯಾಪಕ ಅಧಿಕಾರ ಹೊಂದಿರುವ ಸಂಸ್ಥೆಯಾಗಿದೆ. ಈ ಪ್ರಾಧಿಕಾರವು ದೇಶದ ಯಾವುದೇ ಆಡಳಿತಕ್ಕೆ ವಿಪತ್ತು ನಿರ್ವಹಣೆಗಾಗಿ ಯಾವುದೇ ನಿರ್ದೇಶನ ನೀಡಬಹುದಾಗಿದೆ. ಪ್ರಾಧಿಕಾರವು ಕಾಲ ಕಾಲಕ್ಕೆ ಭೇಟಿಯಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಪರಿಶೀಲಿಸುತ್ತದೆ ಅಲ್ಲದೇ ಅದನ್ನು ಅನುಷ್ಠಾನಗೊಳಿಸಲು ಸಲಹೆಗಾರರ, ಅಧಿಕಾರಿಗಳ, ಮಾನವ, ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುತ್ತದೆ. ದೇಶಾದ್ಯಂತ ಈ ಪ್ರಾಧಿಕಾರವು ವಿಪತ್ತು ನಿರ್ವಹಣೆಗೆ ನೀತಿ ಮಾರ್ಗ ರೂಪಿಸಿ ಪ್ರಾಧಿಕಾರದ ಒಪ್ಪಿಗೆ ಪಡೆದುಕೊಳ್ಳುತ್ತದೆ.

ಅಲ್ಲದೇ ಬೇರೆ ಬೇರೆ ವಿಪತ್ತು ನಿರ್ವಹಣಾ ಯೋಜನೆ ಹಾಗೂ ಅವುಗಳನ್ನು ತಡೆಯುವ ಅಥವಾ ಅವುಗಳ ಪರಿಣಾಮವನ್ನು ತಗ್ಗಿಸಬಹುದಾದ ಕ್ರಮಗಳನ್ನು, ವಿಪತ್ತುಗಳು ಉಂಟಾದರೆ ಜನರ ರಕ್ಷಣೆ, ಅವರ ಪುನರ್ವಸತಿ ಕೇಂದ್ರಗಳನ್ನು ತೆರೆಯುವುದು ಮತ್ತು ಅಲ್ಲಿರುವ ಜನರಿಗೆ ನೀಡಬೇಕಾದ ಕನಿಷ್ಠ ಸೌಲಭ್ಯಗಳ (ಆಹಾರ, ನೀರು, ವೈದ್ಯಕೀಯ ಸೌಲಭ್ಯ, ಸ್ವತ್ಛತೆ) ಮಟ್ಟದ ಬಗ್ಗೆ ನಿರ್ಧರಿಸುತ್ತದೆ. ಯಾವುದೇ ತೆರನಾದ ವಿಪತ್ತು ಉಂಟಾಗಿ ಬೃಹತ್‌ ಪ್ರಮಾಣದಲ್ಲಿ ಸಾವು-ನೋವು ಉಂಟಾದಾಗ ಆಸ್ಪತ್ರೆಗಳು ಹಾಗೂ ಆಸ್ಪತ್ರೆಗೆ ಸಾಗಿಸುವ ಮೊದಲು ನೀಡಬೇಕಾದ (ಪ್ರೀ ಹಾಸ್ಪಿಟಲ್‌) ಆರೈಕೆ ಮತ್ತು ಟ್ರಯಾಜ್‌ ವ್ಯವಸ್ಥೆಗಳಿಂದ ಜೀವ ಹಾನಿ ಕಡಿಮೆ ಮಾಡಬಹುದಾದ ವಿಧಗಳ ಬಗ್ಗೆ ಮಾರ್ಗಸೂಚಿ ನೀಡಿದೆ.

ಪ್ರಾಧಿಕಾರವು ಈವರೆಗೆ ಬೇರೆ ಬೇರೆ ತರಹದ ವಿಪತ್ತುಗಳ ನಿರ್ವಹಣೆಗೆ 30ಕ್ಕೂ ಅಧಿಕ ಮಾರ್ಗಸೂಚಿಗಳನ್ನು ನೀಡಿದೆ. ಅದೇ ತರಹ ಪ್ರತೀ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರತೀ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇರುತ್ತದೆ. ಹಾಗಾಗಿ ಪ್ರತೀ ರಾಜ್ಯದಲ್ಲಿ, ಪ್ರತೀ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆ ಬೇರೆ ಬೇರೆ ತರಹದ ವಿಪತ್ತಿಗೊಳಗಾಗಬಹುದಾದ ಪ್ರದೇಶದ ನಕ್ಷೆ ರೂಪುಗೊಂಡು ದಾಖಲೆ ರೂಪದಲ್ಲಿರಿಸಿ ಆಗಿಂದಾಗ್ಗೆ ಸ್ಥಿತಿಗಳನ್ನು ಅನುಸರಿಸಿ ವಿಪತ್ತಿನ ಸಂದರ್ಭಗಳಲ್ಲಿ ಮಾನವ ಮತ್ತು ಹಣಕಾಸಿನ ಸಂಪನ್ಮೂಲಗಳನ್ನು ಒದಗಿಸುವುದು. ಹಾಗೆಯೇ ಪ್ರತೀ ಸಂಸ್ಥೆಗಳು ಸಹ ವಿಪತ್ತು ನಿರ್ವಹಣಾ ಯೋಜನೆಯನ್ನು ತಯಾರಿಸಿ ದಾಖಲೆ ರೂಪದಲ್ಲಿ ಇಟ್ಟಿರಬೇಕು ಅಲ್ಲದೇ ಆಗಿಂದಾಗ್ಗೆ ಅದನ್ನು ಪರೀಷ್ಕರಣೆ ಅದಕ್ಕೆ ಬೇಕಾದ ಹಣಕಾಸು, ತರಬೇತಿ, ಮಾನವ ಸಂಪನ್ಮೂಲಗಳನ್ನು ಒದಗಿಸುತ್ತಿರಬೇಕು.

* ರಾಷ್ಟ್ರೀಯ ಕಾರ್ಯಕಾರಿ ಸಮಿತಿ :
ಇದೊಂದು ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯಾಗಿದ್ದು ಕೇಂದ್ರದ ಕ್ಯಾಬಿನೆಟ್‌ ಕಾರ್ಯದರ್ಶಿ ಸಭಾಧ್ಯಕ್ಷ, ರಕ್ಷಣಾ ಪ್ರಮುಖರು, ಗೃಹ, ಅಣುಶಕ್ತಿ, ಆರೋಗ್ಯ, ಪರಿಸರ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಯನ್ನು ಪಾಲಿಸಲು ರಾಷ್ಟ್ರೀಯ ಪ್ರಾಧಿಕಾರಕ್ಕೆ ಸಲಹೆ ಮಾಡುವುದಲ್ಲದೇ ರಾಜ್ಯಗಳಲ್ಲಿ ಸಹ ಯೋಜನೆ ತಯಾರಿ ಹಾಗೂ ಅನುಷ್ಠಾನಕ್ಕೆ ಸಹಾಯ ಮಾಡುತ್ತದೆ. ವಿಪತ್ತು ಸಂಭವಿಸಿದಾಗ ಪರಿಹಾರ ಕಾರ್ಯಕ್ರಮಗಳ ಅನುಷ್ಠಾನಗಳನ್ನು ಉಸ್ತುವಾರಿ ನೋಡಿಕೊಳ್ಳುವುದು. ಇದೇ ತೆರನಾಗಿ ಪ್ರತೀ ರಾಜ್ಯಗಳಲ್ಲಿ ಸಹ ರಾಜ್ಯದ ಮಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಗಳಿವೆ. ಪ್ರಧಾನ ಮಂತ್ರಿಗಳ ಹತ್ತು ವಿಪತ್ತುಗಳ ಆಪತ್ತುಗಳನ್ನು ತಡೆಯಲು ಇರುವ ಹತ್ತು ಅಂಶಗಳ ಕಾರ್ಯಸೂಚಿ ಹಾಗೂ ವಿಶ್ವ ಸಂಸ್ಥೆಯ ಸೆಂದಾಯಿ (SENDAI) ಚೌಕಟ್ಟಿನ ಅಡಿಯಲ್ಲಿ ಈ ಸಮಿತಿಗಳು ಕಾರ್ಯಸೂಚಿಯನ್ನು ತಯಾರಿಸುತ್ತವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ : ಕಾಯ್ದೆಯು ಈ ಸಂಸ್ಥೆಗೆ ವಿಪತ್ತು ನಿರ್ವಹಣಾ ಯೋಜನೆ, ತರಭೇತಿ, ಸಂಶೋಧನೆ, ರಾಷ್ಟ್ರೀಯ ಮಟ್ಟದಲ್ಲಿ ವಿಪತ್ತುಗಳ ನಿರ್ವಹಣೆ ವಿಷಯಗಳನ್ನು ಸಂಗ್ರಹಣೆ ಮಾಡುವ ಜವಾಬ್ದಾರಿ ಹೊಂದಿದೆ. ದಿಲ್ಲಿಯಲ್ಲಿರುವ ಈ ಸಂಸ್ಥೆಯು ದೇಶ ಹಾಗೂ ರಾಜ್ಯಗಳಲ್ಲಿ ವಿಪತ್ತುಗಳ ಅಪಾಯವನ್ನು ಕಡಿಮೆ ಮಾಡಲು/ತಗ್ಗಿಸಲು ಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡುವುದಲ್ಲದೇ ದೇಶಾದ್ಯಂತ ವಿಪತ್ತು ನಿರ್ವಹಣೆಗೆ ಅಗತ್ಯವಿರುವ ಮಾನವ ಸಂಪನ್ಮೂಲಗಳ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತದೆ.

*  ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ :
ದೇಶದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಬರುವವರೆಗೆ ಸಾಮಾನ್ಯವಾಗಿ ಯಾವುದೇ ವಿಪತ್ತುಗಳು ಸಂಭವಿಸಿದಾಗ ಸ್ಥಳೀಯ ಪೋಲೀಸರು, ಅರೆ ಸೈನಿಕ, ಸೈನ್ಯದ ಪಡೆಗಳು ವಿಪತ್ತು ನಿರ್ವಹಣೆಯಲ್ಲಿ ತೊಡಗುತ್ತಿದ್ದವು. ಆದರೆ ಈ ಪಡೆಗಳು ಅಂತಹ ವಿಪತ್ತು ನಿರ್ವಹಣೆಗಳಲ್ಲಿ ವಿಶೇಷ ತರಬೇತಿ ಪಡೆದವುಗಳಲ್ಲ. ಆದ್ದರಿಂದ ಕಾಯ್ದೆಯ ಅಡಿಯಲ್ಲಿ ಬೇರೆ ಬೇರೆ ತರಹದ ವಿಪತ್ತು ನಿರ್ವಹಣೆಗಾಗಿಯೇ ವಿಶೇಷವಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಯನ್ನು ಸ್ಥಾಪಿಸಲಾಗಿದೆ. ಈ ಪಡೆಯು ಆಯ್ದ ಅರೆ ಸೈನಿಕ ಪಡೆಯ ಯೋಧರಿಂದ ಕೂಡಿದ್ದು ವಿಶೇಷ ತರಬೇತಿ ಮುಖ್ಯವಾಗಿ ಭೂಕಂಪ, ರಾಸಾಯನಿಕ ಅಪಘಾತಗಳು/ ವಿಪತ್ತು, ಜೈವಿಕ ಯುದ್ಧ/ವಿಪತ್ತು, ರೇಡಿಯಲಾಜಿಕಲ್‌, ನ್ಯೂಕ್ಲಿಯರ್‌ ಯುದ್ಧ/ವಿಪತ್ತುಗಳನ್ನು ಎದುರಿಸುವಲ್ಲಿ/ ತಡೆಯುವಲ್ಲಿ ವಿಶೇಷ ಪರಿಣಿತಿ ಹೊಂದಿರುವ ಪಡೆ ಆಗಿದೆ. ಸದ್ಯ ನಮ್ಮ ದೇಶದಲ್ಲಿ ಅಂತಹ ತರಬೇತಿ ಪಡೆದ 12 ಬೆಟಾಲಿಯನ್‌ಗಳು ಇದ್ದು ಅವುಗಳು ತರಬೇತಿ ಹೊಂದಿರುವ ಎಂಜಿನಿಯರ್, ಟೆಕ್ನಿಷಿಯನ್ಸ್‌, ವೈದ್ಯರು, ಅರೆ ವೈದ್ಯಕೀಯ, ಶ್ವಾನ ದಳಗಳನ್ನು, ಜೀವ ರಕ್ಷಕಾ ವಿಶೇಷ ಪರಿಕರಗಳನ್ನು ಹೊಂದಿರುವ ಸುಸಜ್ಜಿತ ಪಡೆಯಾಗಿದೆ. ಕನಾಟಕಕ್ಕೆ ಅತೀ ಸಮೀಪವಾಗಿರುವ ಇಂತಹಎನ್‌.ಡಿ.ಆರ್‌.ಎಫ್. ಬೆಟಾಲಿಯನ್‌ ಪುಣೆಯಲ್ಲಿದೆ. ಪ್ರತೀ ರಾಜ್ಯದಲ್ಲಿಯೂ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ ರಚಿಸಬೇಕಾಗಿದ್ದು, ದೇಶದ ಹಲವು ರಾಜ್ಯಗಳಲ್ಲಿ ಇನ್ನೂ ಅಂತಹ ಪಡೆಗಳ ರಚನೆ, ತರಬೇತಿ, ತಯಾರಿ ನಡೆದಿಲ್ಲ.

*  ಕೋವಿಡ್‌ ಸಂದರ್ಭ ಬಳಕೆ :
ಕೋವಿಡ್‌ನ‌ ಈ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ಡೌನ್‌ನ್ನು ಈ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಹೇರಲಾಗಿದೆ. ಅಲ್ಲದೇ ಈ ಸಾಂಕ್ರಾಮಿಕ ರೋಗ ಎದುರಿಸಲು ಕೆಲವು ರಾಜ್ಯಗಳು 1897ರ ಸಾಂಕ್ರಾಮಿಕ ರೋಗ ಕಾಯ್ದೆಯನ್ನು, ಭಾರತೀಯ ದಂಡ ಸಂಹಿತೆಯ 269ನೇ ವಿಧಿ (ರೋಗ ತಡೆಯುವಲ್ಲಿ ನಿರ್ಲಕ್ಷ್ಯ), 270 (ರೋಗ ಹರಡುವಂತಹ ಮಾರಕ ಕ್ರಿಯೆ), 271(ಕ್ವಾರಂಟೈನ್‌ ನಿಯಮ ಉಲ್ಲಂಘನೆ)ಮತ್ತು ಕೆಲವು ರಾಜ್ಯಗಳು ಆ ರಾಜ್ಯಗಳಲ್ಲಿರುವ ಇನ್ನೂ ಕೆಲವು ಕಾಯ್ದೆಗಳನ್ನು, ಅಧ್ಯಾದೇಶಗಳನ್ನು ಮಾಡಿ ಬಳಸಿಕೊಂಡಿವೆ.

# ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ರಚನೆ : 2005
ಪ್ರಧಾನ ಕಚೇರಿ : NDMA ಭವನ, ಸಫ್ದರಜಂಗ್ ಎನ್ಕ್ಲೇವ್
ವಾರ್ಷಿಕ ಬಜೆಟ್: ₹3.56 ಶತಕೋಟಿ (US$೭೯.೦೩ ದಶಲಕ್ಷ) ( 2013–14)
ಕಾರ್ಯನಿರ್ವಾಹಕ ಸಂಸ್ಥೆ : ಪ್ರಧಾನಮಂತ್ರಿ ಮಂತ್ರಾಲಯ (ಪೋಷಕ ಇಲಾಖೆ-ಗೃಹ ಸಚಿವಾಲಯ)

# ಎನ್‌ಡಿಆರ್‌ಎಫ್ ಬೆಟಾಲಿಯನ್‌ಗಳು-ರಾಜ್ಯ-ಸಿಪಿಎಫ್
* ಎನ್‌ಡಿಆರ್‌ಎಫ್ ಗಾಜಿಯಾಬಾದ್-ಉತ್ತರ ಪ್ರದೇಶ-ಐಟಿಬಿಪಿ
* ಎನ್‌ಡಿಆರ್‌ಎಫ್, ಬಟಿಂಡಾ -ಪಂಜಾಬ್-ಐಟಿಬಿಪಿ
* ಎನ್‌ಡಿಆರ್‌ಎಫ್-ಕೋಲ್ಕತಾ
* ಎನ್‌ಡಿಆರ್‌ಎಫ್ ಬೆಟಾ,ಗುವಾಹಟಿ-ಅಸ್ಸಾಂ-ಎಸ್.ಎಸ್.ಬಿ
* ಎನ್‌ಡಿಆರ್‌ಎಫ್ ಬೆಟಾ., ಮುಂಡಾಲಿ-ಒರಿಸ್ಸಾ-ಸಿಐಎಸ್ಎಫ್
* ಎನ್‌ಡಿಆರ್‌ಎಫ್ ಬೆಟಾ., ಅರಕೋಣಂ-ತಮಿಳುನಾಡು -ಸಿಐಎಸ್ಎಫ್
* ಎನ್‌ಡಿಆರ್‌ಎಫ್ ಬೆಟಾ., ಪುಣೆ-ಮಹಾರಾಷ್ಟ್ರ-ಸಿಆರ್ಪಿಎಫ್
* ಎನ್‌ಡಿಆರ್‌ಎಫ್ ಬೆಟಾ., ಗಾಂಧಿನಗರ-ಗುಜರಾತ್-ಸಿಆರ್ಪಿಎಫ್
* ಎನ್‌ಡಿಆರ್‌ಎಫ್ ಬೆಟಾ., ಪಾಟ್ನಾ – ಬಿಹಾರ-ಸಿಸೂಬ್
* ಎನ್‌ಡಿಆರ್‌ಎಫ್ ಬೆಟಾ., ವಿಜಯವಾಡ -ಆಂಧ್ರಪ್ರದೇಶ -ಸಿಆರ್ಪಿಎಫ್

error: Content Copyright protected !!