Friday, November 22, 2024
Latest:
GKSpardha TimesSports

ಹಾಕಿ ಮಾಂತ್ರಿಕ ಧ್ಯಾನ್‌ ಚಂದ್‌ ಹೆಜ್ಜೆ ಗುರುತುಗಳು

Share With Friends

ಧ್ಯಾನ್‌ ಚಂದ್‌ ಹೆಸರು ಕ್ರೀಡಾಪ್ರಿಯರಿಗೆ ಹೆಚ್ಚಾಗಿ ನೆನಪಿಗೆ ಬರುವುದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಂದರ್ಭದಲ್ಲಿ. ಆಗಸ್ಟ್‌ 29ರಂದು ಅವರ ಹುಟ್ಟುಹಬ್ಬವಾಗಿದ್ದು ಅಂದೇ ರಾಷ್ಟ್ರೀಯ ಕ್ರೀಡಾ ದಿನ. 2012ರಲ್ಲಿ ಮೊದಲ ಬಾರಿಗೆ ದೇಶದಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ. ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್‌ ಗಾಂಧಿ ಖೇಲ್‌ರತ್ನ ಜೊತೆಗೆ ಅರ್ಜುನ, ದ್ರೋಣಾಚಾರ್ಯ ಮತ್ತು ಧ್ಯಾನ್‌ ಚಂದ್‌ ಪ್ರಶಸ್ತಿಗಳನ್ನು ಅಂದು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಲಾಗುತ್ತದೆ.

ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ 1905ರ ಆಗಸ್ಟ್ 29ರಂದು ಜನಿಸಿದ ಧ್ಯಾನ್‌ಚಂದ್, ಹಾಕಿ ಸ್ಟಿಕ್‌ನ ಅಪೂರ್ವ ಕೌಶಲ್ಯದಿಂದ ಜಗತ್ತನ್ನೇ ಮಂತ್ರಮುಗ್ಧಗೊಳಿಸಿದ್ದರು. 14ನೇ ವಯಸ್ಸಿನಲ್ಲೇ ಹಾಕಿ ಸ್ಟಿಕ್ ಹಿಡಿದ ಅವರು 1926ರಲ್ಲಿ ಅಂತಾರಾಷ್ಟ್ರೀಯ ಹಾಕಿ ಪ್ರವೇಶಿಸಿದರು.ನಂತರ ತಂಡದ ನಾಯಕರೂ ಆದ ಅವರು 3 ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತರು.42ನೇ ವಯಸ್ಸಿನವರೆಗೂ ಹಾಕಿ ಆಡುತ್ತಿದ್ದ ಅವರು, 1948ರಲ್ಲಿ ನಿವೃತ್ತರಾದರು. 1956ರಲ್ಲಿ ಪದ್ಮಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾದರು. 1979ರ ಡಿ. 3ರಂದು ಪಿತ್ತಜನಕಾಂಗದ ಕ್ಯಾನ್ಸರ್‌ನಿಂದ ಅವರು ಮೃತಪಟ್ಟರು. ಅವರಿಗೆ ಭಾರತರತ್ನ ಗೌರವ ನೀಡದ ಬೇಸರ ಈಗಲೂ ಕ್ರೀಡಾಪ್ರೇಮಿಗಳನ್ನು ಕಾಡುತ್ತಿದೆ.

ಹೆಜ್ಜೆ ಗುರುತುಗಳು :

ಅಲಹಾಬಾದ್‌ನಲ್ಲಿ ಜನಿಸಿದ ಧ್ಯಾನ್‌ ಚಂದ್‌ (1905-1979) ಅವರು ಈ ದೇಶದ ಮೊದಲ ಕ್ರೀಡಾ ಸೂಪರ್‌ಸ್ಟಾರ್‌. ಚೆಂಡಿನ ನಿಯಂತ್ರಣ, ಡ್ರಿಬ್ಲಿಂಗ್ ಕೌಶಲದಿಂದ ‘ಹಾಕಿ ಮಾಂತ್ರಿಕ’ ಎನಿಸಿದ್ದ ಧ್ಯಾನ್‌ ಚಂದ್‌ (ಅವರ ನೈಜ ಹೆಸರು ಧ್ಯಾನ್‌ ಸಿಂಗ್‌) ಅವರ ಅವಧಿಯಲ್ಲಿ ಭಾರತದ ಹಾಕಿ ಸುವರ್ಣ ಯುಗ ಆರಂಭವಾಗಿತ್ತು.ಭಾರತ ಹಾಕಿ ತಂಡ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದು 1928ರಲ್ಲಿ. ಮೊದಲ ಪ್ರಯತ್ನದಲ್ಲೇ ಚಿನ್ನ ಗೆದ್ದ ಆ ತಂಡದಲ್ಲಿ ಧ್ಯಾನ್‌ ಚಂದ್‌ ಕೂಡ ಗಮನಸೆಳೆದಿದ್ದರು. 1932ರ ಲಾಸ್‌ ಏಂಜಲಿಸ್‌ ಒಲಿಂಪಿಕ್ಸ್‌ ವೇಳೆಗೆ ಅವರು ಜಗತ್ಪ್ರಸಿದ್ಧರಾಗಿದ್ದರು.

1936ರ ಬರ್ಲಿನ್‌ ಒಲಿಂಪಿಕ್ಸ್‌ನಲ್ಲಿ ಭಾರತ ಸತತ ಮೂರನೇ ಬಾರಿ ಚಿನ್ನ ಕೊರಳಿಗೇರಿಸಿಕೊಂಡಾಗ ಅವರು ತಂಡದ ನಾಯಕರಾಗಿದ್ದರು. ಸುಮಾರು 22 ವರ್ಷಗಳ ಅಂತರ ರಾಷ್ಟ್ರೀಯ ಕ್ರೀಡಾಜೀವನದಲ್ಲಿ ಅವರು ಗಳಿಸಿದ್ದು 400ಕ್ಕೂ ಅಧಿಕ ಗೋಲುಗಳನ್ನು.ಬರ್ಲಿನ್‌ ಒಲಿಂಪಿಕ್ಸ್‌ ಹಾಕಿ ಫೈನಲ್‌ನಲ್ಲಿ ಭಾರತ ತಂಡ 8-1 ಗೋಲುಗಳಿಂದ ಆತಿಥೇಯ ಜರ್ಮನಿಯ ಮೇಲೆ ಅಮೋಘವಾಗಿ ಜಯಗಳಿಸಿತ್ತು. ಹ್ಯಾಟ್ರಿಕ್‌ ಸಾಧಿಸಿದ್ದ ಧ್ಯಾನ್‌ ಚಂದ್‌ ಆಟವನ್ನು, ಕ್ರೀಡಾಂಗಣದಲ್ಲಿ ಸ್ವತಃ ಉಪಸ್ಥಿತರಿದ್ದ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ಮೆಚ್ಚಿದ್ದರು. ಅವರಿಗೆ ಜರ್ಮನಿಯ ಪೌರತ್ವ, ಸೇನೆಯಲ್ಲಿ ಉತ್ತಮ ಹುದ್ದೆ ನೀಡಲು ಮುಂದಾಗಿದ್ದರಂತೆ. ಅವೆಷ್ಟೊ ದೃಷ್ಟಾಂತಗಳು ಧ್ಯಾನ್‌ ಚಂದ್‌ ಅವರನ್ನು ಹಾಕಿ ದಂತಕತೆಯನ್ನಾಗಿಸಿದೆ.

ಅವರ ಹಾಕಿ ಆಟ ಅರಳಿದ್ದು, 1922ರಲ್ಲಿ ಸೇನೆಯನ್ನು ಸೇರಿದ ಬಳಿಕ. ಅವರು ರಾಷ್ಟ್ರೀಯ ತಂಡಕ್ಕೆ ಕೆಲ ವರ್ಷಗಳಲ್ಲೇ ಆಯ್ಕೆಯಾದರು.ಧ್ಯಾನ್‌ ಚಂದ್‌ ಅವರ ಸೋದರ ರೂಪ್‌ ಸಿಂಗ್‌ ಕೂಡ ಭಾರತ ತಂಡದಲ್ಲಿ ಆಡಿದ್ದರು. ಪುತ್ರ ಅಶೋಕ್‌ ಕುಮಾರ್ ಅವರು 1970ರ ದಶಕದಲ್ಲಿ ದೇಶವನ್ನು ಒಲಿಂಪಿಕ್ಸ್‌, ವಿಶ್ವಕಪ್‌ಗಳಲ್ಲಿ ಪ್ರತಿನಿಧಿಸಿದ್ದರು.

‘ಭಾರತ ರತ್ನ’ದ ಒತ್ತಾಯ: ಧ್ಯಾನ್‌ ಚಂದ್‌ ಅವರಿಗೆ ದೇಶದ ಅತ್ಯುನ್ನತ ಗೌರವವಾದ ‘ಭಾರತ ರತ್ನ’ ನೀಡಬೇಕೆಂಬ ಒತ್ತಾಯ ಕೆಲ ವರ್ಷಗಳಿಂದ ಕೇಳಿಬರುತ್ತಿದೆ. 2014ರಲ್ಲಿ ಕ್ರಿಕೆಟ್‌ ತಾರೆ ಸಚಿನ್‌ ತೆಂಡೂಲ್ಕರ್‌ ಅವರು ಈ ಗೌರವಕ್ಕೆ ಪಾತ್ರರಾಗುವ ಮೊದಲು, ಕ್ರೀಡಾಪಟುಗಳಿಗೆ ಎಂದೂ ‘ಭಾರತ ರತ್ನ’ ಗೌರವ ಸಂದಿರಲಿಲ್ಲ.ಹಲವು ರಾಷ್ಟ್ರನಾಯಕರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗಿದೆ. ಸರ್ಕಾರ ಈ ದಿಸೆಯಲ್ಲಿ ಯೋಚಿಸಬೇಕಷ್ಟೇ. ಈ ಪ್ರಶಸ್ತಿ ಬರಲಿ, ಬರದಿರಲಿ ದೇಶದ ಕ್ರೀಡಾ ಇತಿಹಾಸದಲ್ಲಿ ಅವರ ಸ್ಥಾನ ಅದಕ್ಕಿಂತ ದೊಡ್ಡದು.

ಮೇಜರ್ ಧ್ಯಾನ್‌ಚಂದ್ ಸಾಧನೆ ಹಾದಿ:
*16ನೇ ವಯಸ್ಸಿನಲ್ಲೇ ಸೈನ್ಯಕ್ಕೆ ಸೇರ್ಪಡೆ.
*ತಂದೆ ಸಮೇಶ್ವರ್ ದತ್ ಸಿಂಗ್ ಕೂಡ ಸೈನಿಕರು.
*3 ಒಲಿಂಪಿಕ್ಸ್ ಸ್ವರ್ಣ ಪದಕ (1928, 1932, 1936).
*ಅಂತಾರಾಷ್ಟ್ರೀಯ ಹಾಕಿಯಲ್ಲಿ 400ಕ್ಕೂ ಹೆಚ್ಚು ಗೋಲು.
*ವಿಶ್ವ ಕಂಡ ಸರ್ವಶ್ರೇಷ್ಠ ಹಾಕಿ ಆಟಗಾರ.
*’ಹಾಕಿ ಮಾಂತ್ರಿಕ’ ಎಂಬುದು ಅವರ ಬಿರುದು.
*1926ರಿಂದ 1948ರ ನಡುವಿನ ಹಾಕಿ ವೃತ್ತಿಜೀವನದಲ್ಲಿ ಸಾವಿರಕ್ಕೂ ಅಧಿಕ ಗೋಲು!
*ರಾತ್ರಿ ಚಂದ್ರನ ಬೆಳಕಿನಲ್ಲಿ ಅಭ್ಯಾಸ ನಡೆಸುತ್ತಿದ್ದರಿಂದ ಗೆಳೆಯರು ಅವರನ್ನು ‘ಚಂದ್’ ಎಂದು ಕರೆಯುತ್ತಿದ್ದರು.
*1936ರ ಬರ್ಲಿನ್ ಒಲಿಂಪಿಕ್ಸ್ ಫೈನಲ್‌ನಲ್ಲಿ ಧ್ಯಾನ್‌ಚಂದ್ ಆಟ ಕಂಡು ಬೆರಗಾಗಿದ್ದ ಅಡಾಲ್ಫ್ ಹಿಟ್ಲರ್ ಜರ್ಮನಿ ಪೌರತ್ವದ ಆಹ್ವಾನ ನೀಡಿದ್ದರೂ ಅದನ್ನು ನಿರಾಕರಿಸಿದ್ದರು.
*1936ರ ಒಲಿಂಪಿಕ್ಸ್‌ನಲ್ಲಿ ಧ್ಯಾನ್‌ಚಂದ್ ಭಾರತ ತಂಡದ ನಾಯಕರೂ ಆಗಿದ್ದರು.
*ಭಾರತದಲ್ಲಿ ಹಾಕಿ ರಾಷ್ಟ್ರೀಯ ಕ್ರೀಡೆಯಾಗಿ ಬೆಳೆಯುವಲ್ಲಿ ಧ್ಯಾನ್‌ಚಂದ್ ಕೊಡುಗೆ ಅಪಾರ.
*ಧ್ಯಾನ್‌ಚಂದ್ ಜನ್ಮದಿನವನ್ನು (ಆಗಸ್ಟ್ 29) ರಾಷ್ಟ್ರೀಯ ಕ್ರೀಡಾದಿನವೆಂದು ಆಚರಿಸಲಾಗುತ್ತದೆ.
*’ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಿದಂತೆ ಧ್ಯಾನ್‌ಚಂದ್ ಹಾಕಿಯಲ್ಲಿ ಗೋಲು ಬಾರಿಸುತ್ತಾರೆ’ ಎಂದು 1935ರಲ್ಲಿ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ಧ್ಯಾನ್‌ಚಂದ್‌ರನ್ನು ಪ್ರಶಂಸಿಸಿದ್ದರು.
*’ಹಾಕಿ ಕೇವಲ ಆಟವಲ್ಲ ಜಾದೂ. ಧ್ಯಾನ್‌ಚಂದ್ ಹಾಕಿಯ ಜಾದೂಗಾರ’ ಎಂದು 1928ರ ಒಲಿಂಪಿಕ್ಸ್ ವೇಳೆ ಪತ್ರಿಕೆಗಳಿಂದ ಬಣ್ಣನೆ.
*ಆಸ್ಟ್ರೀಯಾದ ಜನರು 4 ಕೈ ಮತ್ತು 4 ಸ್ಟಿಕ್ ಹೊಂದಿದ ಧ್ಯಾನ್‌ಚಂದ್‌ರ ಪ್ರತಿಮೆಯನ್ನು ಅವರ ಗೌರವಾರ್ಥ ವಿಯೆನ್ನಾದಲ್ಲಿ ಸ್ಥಾಪಿಸಿದ್ದಾರೆ.
*2002ರಿಂದ ಧ್ಯಾನ್‌ಚಂದ್ ಹೆಸರಿನಲ್ಲಿ ಜೀವಮಾನ ಸಾಧನೆ ಕ್ರೀಡಾಪ್ರಶಸ್ತಿಯನ್ನು ನೀಡಲಾಗುತ್ತಿದೆ.
*ದೆಹಲಿಯ ರಾಷ್ಟ್ರೀಯ ಹಾಕಿ ಕ್ರೀಡಾಂಗಣಕ್ಕೆ ಧ್ಯಾನ್‌ಚಂದ್ ಹೆಸರು ಇಡಲಾಗಿದೆ.
*1956ರಲ್ಲಿ 51ನೇ ವಯಸ್ಸಿನಲ್ಲಿ ಮೇಜರ್ ಪದವಿಯೊಂದಿಗೆ ಸೇನೆಯಿಂದ ನಿವೃತ್ತರಾದ ಧ್ಯಾನ್‌ಚಂದ್‌ಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು.

Leave a Reply

Your email address will not be published. Required fields are marked *

error: Content Copyright protected !!