ಡಿ.4 ರಂದೇ ‘ನೌಕಾಪಡೆ ದಿನ’ ಆಚರಿಸೋದೇಕೆ ಗೊತ್ತೇ..?
ಪ್ರತಿ ವರ್ಷ ಡಿ. 4 ನನ್ನ ‘ನೌಕಾಪಡೆ ದಿನ’ ವಾಗಿ ಆಚರಿಸಲಾಗುತ್ತೆ, ಇದೆ ದಿನ ‘ನೌಕಾಪಡೆ ದಿನ’ ಆಚರಿಸುವ ಹಿಂದೂ ಒಂದು ಕಥೆಯಿದೆ. ಭಾರತ-ಪಾಕಿಸ್ತಾನ ನಡುವಿನ 1971ರ ಯುದ್ಧದ ಸಂದರ್ಭದಲ್ಲಿ ಡಿಸೆಂಬರ್ 4ರಂದು ಭಾರತದ ನೌಕಾಪಡೆ ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ದಿಟ್ಟತನದ ದಾಳಿ ನಡೆಸಿತು.
ಈ ಕಾರ್ಯಾಚರಣೆ ಸ್ಮರಿಸುವುದಕ್ಕಾಗಿ ಅಲ್ಲಿಂದೀಚೆಗೆ ಪ್ರತಿವರ್ಷ ಡಿ.4ರಂದು ಭಾರತೀಯ ನೌಕಾಪಡೆ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟ್ರಪತಿಗಳು ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದು, ಅವರೇ ನೌಕಾಪಡೆಗೆ ಕಮಾಂಡರ್-ಇನ್-ಚೀಫ್ (ಪ್ರಧಾನ ದಂಡನಾಯಕರು) ಕೂಡ. ನೌಕಾಪಡೆಯ ಕೆಲಸ ನಮ್ಮ ದೇಶದ ಹಿತ ಕಾಪಾಡುವುದಕ್ಕಷ್ಟೇ ಸೀಮಿತವಾಗಿಲ್ಲ; ಜಗತ್ತಿನ ವಿವಿಧೆಡೆ ಶಾಂತಿಪಾಲನೆ ಕೆಲಸಕ್ಕೂ ವಿಶ್ವಸಂಸ್ಥೆ ಪರವಾಗಿ ಭಾರತೀಯ ನೌಕಾಪಡೆ ಕೆಲಸ ಮಾಡಿದ್ದಿದೆ.
# ನೌಕಾಪಡೆಯ ಪಿತಾಮಹ ಶಿವಾಜಿ :
ಭರತಖಂಡದಲ್ಲಿ 1674ರಲ್ಲಿ ಮರಾಠಾ ಸಾಮ್ರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜ ಮೊದಲ ಬಾರಿಗೆ ನೌಕಾಪಡೆಯನ್ನು ಸ್ಥಾಪಿಸಿದ್ದ. ಫಿರಂಗಿಗಳನ್ನು ಅಳವಡಿಸಿದ ನೌಕೆಗಳೊಂದಿಗೆ ಬ್ರಿಟಿಷರು ಹಾಗೂ ಪೋರ್ಚುಗೀಸರಿಗೆ ಭಾರಿ ಸವಾಲೊಡ್ಡಿದ್ದ. ಹೀಗಾಗಿ ಶಿವಾಜಿಯನ್ನು ‘ಭಾರತೀಯ ನೌಕಾಪಡೆಯ ಪಿತಾಮಹ’ ಎಂದು ಪರಿಗಣಿಸಲಾಗುತ್ತದೆ