Saturday, December 14, 2024
Latest:
GKPersons and PersonaltySpardha Times

ವ್ಯಕ್ತಿ ಪರಿಚಯ : ಪಿ. ಲಂಕೇಶ್

Share With Friends

ನವ್ಯ ಸಾಹಿತ್ಯದ ಪ್ರಮುಖ ಕವಿ, ಕಥೆಗಾರ, ಕಾದಂಬರಿಕಾರ ವಿಮರ್ಶಕ ಹಾಗೂ ಪತ್ರಿಕೋದ್ಯಮಿಯಾಗಿ ಪ್ರಸಿದ್ಧಿ ಪಡೆದಿರುವ ಪಿ. ಲಂಕೇಶರು 1935ರಲ್ಲಿ ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿಯಲ್ಲಿ ಜನಿಸಿದರು. ಇವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕಾವ್ಯ ಸಂಕಲನಗಳು: ತಲೆಮಾರು, ಬಿಚ್ಚು. ಕಾದಂಬರಿಗಳು: ಮುಸ್ಸಂಜೆಯ ಕಥಾ ಪ್ರಸಂಗ, ಬಿರುಕು, ಅಕ್ಕ. ಕಥಾಸಂಕಲನಗಳು: ನಾನಲ್ಲ, ಕೆರೆಯ ನೀರು ಕೆರೆಗೆ ಚೆಲ್ಲಿ, ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ, ಕಲ್ಲು ಕರ್ಗುವ ಸಮಯ ಮತ್ತು ಇತರ ಕಥೆಗಳು.

ಚಲನಚಿತ್ರ ನಿರ್ದೇಶನ: ಪಲ್ಲವಿ, ಅನುರೂಪ, ಮುಂತಾದವು. ನಟರಾಗಿ, ಪ್ರಕಾಶಕರಾಗಿ, ಮುದ್ರಕರಾಗಿ, ಸಾಹಿತ್ಯದ ಎಲ್ಲಾ ರಂಗದಲ್ಲಿ ಆಳವಾಗಿ ಇಳಿದ ಒಂದು ಕಾಲಮಾನದ ಮಹತ್ವದ ಲೇಖಕರ ಸಾಲಿನಲ್ಲಿ ನಿಲ್ಲುವ ಬಹುಮುಖಿ ವ್ಯಕ್ತಿತ್ವ ಲಂಕೇಶ್ 2000ರಲ್ಲಿ ಇಹಲೋಕ ತ್ಯಜಿಸಿದರು. ಎರಡು ದಶಕಗಳ ಕಾಲ ಕನ್ನಡ ನಾಡಿನ ಮನಃಸ್ಥಿತಿಯನ್ನು ಜಾಗೃತವಾಗಿಡುವಷ್ಟು ಚೈತನ್ಯವನ್ನು ಅಂತರ್ಗತಗೊಳಿಸಿಕೊಂಡ ಹೆಸರು.

ತನ್ನ ಹೆಸರಿನ ಪತ್ರಿಕೆಯೊಂದು ತನ್ನ ನಂತರವೂ ಇಷ್ಟು ಗಾಢವಾದ ಅನೂಹ್ಯವಾದ ಪ್ರಭಾವವನ್ನು ಹೋಮ್ದಿರಬಲ್ಲದು ಎನ್ನುವುದು ಲಂಕೇಶ ಅರಿತಿದ್ದರೋ ಇಲ್ಲವೋ ತಿಳಿಯದು. ಬದುಕನ್ನು ತನ್ನಿಷ್ಟದಂತೆಯೇ ಬದುಕಿದ ಅಪರೂಪದ ವ್ಯಕ್ತಿ. ಹಾಗಿರದಿದ್ದರೆ ‘ಹುಳಿ ಮಾವಿನ ಮರ’ ದಂತಹ ಅಪರೂಪದ ಆತ್ಮಕತೆಯೊಂದು ಹೊರಬರುತ್ತಿರಲಿಲ್ಲ.

ಎಂದೂ ತಾನೊಂದು ಪತ್ರಿಕೆಯ ಸಂಪಾದಕ ಎಂದು ರಿಯಾಯಿತಿ ಪಡೇದವರಲ್ಲ. ಅತ್ಯಂತ ತತ್ವನಿಷ್ಟೆಯ ಮೂಲಕ ಎರಡು ದಶಕಗಳಷ್ಟು ಕಾಲ ಯಾವುದೇ ಜಾಹೀರಾತುಗಳಿಲ್ಲದೆಯೂ ಅವರು ಪತ್ರಿಕೆಯನ್ನು ನಡೆಸಿದ್ದರು. ಅದು ಕೇವಲ ಪತ್ರಿಕೆಯಾಗಿರದೆ, ನಾಡಿನ ಪ್ರಜ್ಞಾವಂತ ಮನಸ್ಸುಗಳ ಮೂರ್ತ ರೂಪವಾಗಿತ್ತು. ತೀರಾ ಸಾಮಾನ್ಯ ಬರವಣಿಗೆ ಎನ್ನುವುದು ಕೂಡ ಲಂಕೆಷ ಪತ್ರಿಕೆಯ ಸಹವಾಸಕ್ಕೆ ಬಂದದ್ದೇ ಅಗಾಧವಾದ ಪ್ರಚುರತೆಯನ್ನು ಪಡೆಯುತ್ತಿತ್ತು.

ಲಂಕೇಶ್ ಮೂಲತಃ ಅಧ್ಯಾಪಕರು. ಅಪಾರವಾದ ಓದು, ವ್ಯಾಪಕವಾದ ಬರವಣಿಗೆಯ ಮೂಲಕ ಅವರು ಗುರುತಿಸಿಕೊಂಡಿದ್ದರೂ ಉತ್ತಮ ಬೋಧಕರಾಗಿ ಲಂಕೇಶ ವಿದ್ಯಾರ್ಥಿಗಳ ವಲಯದಲ್ಲಿ ಗಮನ ಸೆಳೆಯಲಿಲ್ಲ. ಲಂಕೇಶರಂತಹ ಗದ್ಯ ಬರಹಗಾರರು ಕನ್ನಡ ನಾಡಿನ ಬಹುದೊಡ್ಡ ಆಸ್ತಿ. ಯಾವುದನ್ನೆ ಬರೆಯಲಿ ಅದರ ಪ್ರಕಾರದ ತಾತ್ವಿಕ ಚೌಕಟ್ಟಿಗೆ ತಕ್ಕ ಹಾಗೆಯೇ ಬರೆಯುವ ಲಂಕೇಶ ಎಲ್ಲೂ ವಿಮರ್ಶೆಯನ್ನು ತುತ್ತೂರಿ ಮಾಡಿ ಊದಿದವರಲ್ಲ.

ಬೋದಿಲೇರನಂಥ ಫ್ರೆಂಚ್ ಕವಿಯನ್ನು ಕನ್ನಡದ ಜನರಿಗೆ ಪರಿಚಯಿಸಿದ ರೀತಿಯೇ ಅನನ್ಯ. ಒಂದು ವಾರಪತ್ರಿಕೆಯನ್ನು ಪ್ರತಿ ಬುಧವಾರ ಸಂಜೆ ಬಸ್ ನಿಲ್ದಾಣದ ಬುಕ್ ಸ್ಟಾಲಗಳಲ್ಲಿ ಕಾದು ನಿಂತು, ಖರೀದಿಸಿ ಓದುವ ಆರೋಗ್ಯಕರ ಪರಂಪರೆಯನ್ನು ಲಂಕೇಶ ಪತ್ರಿಕೆಯ ಹಾಗೆ ಮತ್ತಾವುದೂ ಬೆಳೆಸಲಿಲ್ಲ.

ಪತ್ರಿಕೆಯನ್ನು ಬೆಳೆಸುವ ಜೊತೆಗೆ ಅನೇಕ ಹೊಸ ಲೇಖಕರನ್ನೂ ಬೆಳಸಿದರು. ಮಾನವ ಸಹದ ದೌರ್ಬಲ್ಯಗಳು ಅವರಲ್ಲಿದ್ದವು. ಆದರೆ ಆ ದೌರ್ಬಲ್ಯಗಳನ್ನು ಬಳಸಿ ಅವರು ಬೇರೆಯವರನ್ನು ಶೋಷಣೆ ಮಾಡಲಿಲ್ಲ. ಆ ದೌರ್ಬಲ್ಯಗಳಿಗೆ ತಮ್ಮನ್ನೇ ತಾವು ಒಗ್ಗಿಸಿಕೊಂಡರು. ಸತತ ಅಧ್ಯಯನ ಮತ್ತು ಬರವಣಿಗೆಯ ಮೂಲಕ ಕ್ರಿಯಾಶೀಲರಾಗಿರುತ್ತಿದ್ದರು.

# ಜನನ, ವಿದ್ಯಾಭ್ಯಾಸ : 
ಇವರು ಮಾರ್ಚ್ 8, 1935 ರಂದು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. ಶಿವಮೊಗ್ಗೆಯಲ್ಲಿ ಪ್ರೌಢಶಾಲೆ ಹಾಗೂ ಇಂಟರ್ ಮೀಡಿಯೇಟ್ (ಸಹ್ಯಾದ್ರಿ ಕಾಲೇಜ್) ಓದಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ( ಆನರ್ಸ್ ) ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿಯನ್ನು ಪಡೆದರು.

# ವೃತ್ತಿ ಜೀವನ :
ಸಹ್ಯಾದ್ರಿ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ 1959ರಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. 1962ರ ವರೆಗೆ ಅಲ್ಲಿಯೇ ಮುಂದುವರೆಸಿರಿದರು. 1962 ರಿಂದ 1965ರವರೆಗೆ ಬೆಂಗಳೂರು ಸೆಂಟ್ರೆಲ್ ಕಾಲೇಜ್ ಮತ್ತು ಸರ್ಕಾರಿ ಕಾಲೇಜಿನಲ್ಲಿ, 1966ರಿಂದ 1978ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. 1979ರ ಸುಮಾರಿಗೆ ಲಂಕೇಶರು ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ತಮ್ಮದೆ ಆದ ಲಂಕೇಶ್ ಪತ್ರಿಕೆ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.

ಇಂದು ಪತ್ರಿಕೋದ್ಯೋಗಿಯಾಗಿ ಹೆಸರು ಮಾಡಿರುವ ಲಂಕೇಶರು ಪ್ರಸಿದ್ದಿ ಪಡೆದದ್ದು ನಾಟಕಕಾರರಾಗಿ. ನಾಟಕ ಕ್ಷೇತ್ರಕ್ಕೆ ಅವರು ಕೊಟ್ಟಿರುವ ನಾಟಕಗಳು ಅನೇಕ. ಗ್ರೀಕ್ ರಂಗಭೂಮಿಯ ರುದ್ರನಾಟಕ ‘’ಈಡಿಪಸ್’’ ಕಲಾಕ್ಷೇತ್ರದ ಬಯಲು ರಂಗಭೂಮಿಯಲ್ಲಿ ಅತ್ಯಂತ ಯಶಸ್ವಿಯಾಗಿದ್ದಕ್ಕೆ ಅವರ ಸಮರ್ಥ ಭಾಷಾಂತರವೂ ಒಂದು ಕಾರಣ. ಅಲ್ಲದೆ,ಅವರದೇ ಸ್ವಂತ ನಾಟಕಗಳಾದ ‘’ತೆರೆಗಳು’’, ’’ಸಂಕ್ರಾಂತಿ’’,ಇವು ನಾಟಕ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು.ಶ್ರೀಯುತರ ಪ್ರತಿಭೆ ಕೇವಲ ನಾಟಕ ಕ್ಷೇತ್ರಕ್ಕೆ ಮೀಸಲಾದದ್ದಲ್ಲ.

‘ಮುಸ್ಸಂಜೆಯ ಕಥಾ ಪ್ರಸಂಗ’ ಹಾಗೂ ‘ಬಿರಿಕು’ ಅವರ ಕಾದಂಬರಿಗಳು. ‘’ಬಿರುಕು’’ ನಾಟಕವೂ ಆಯಿತು.’’ಅಕ್ಷರ ಹೊಸ ಕಾವ್ಯ’’ ಅವರು ಸಂಪಾದಿಸಿದ ಅಧುನಿಕ ಕಾವ್ಯಗಳ ಸಂಕಲನ. ‘ಪಲ್ಲವಿ’,’ಅನುರೂಪ’,’ಎಲ್ಲಿಂದಲೋ ಬಂದವರು’ ಇವು ಅವರು ನಿರ್ದೇಶಿಸಿದ ಚಿತ್ರಗಳು.ಯಶಸ್ವಿ ಸಣ್ಣ ಕಥೆಗಳನ್ನು,ಬಿಚ್ಚುಮನಸಿನ ಹಾಗೂ ಮೊನಚಿನ ವಿಮರ್ಶಾ ಲೇಖನಗಳನ್ನು ಲಂಕೇಶರು ಬರೆದಿದ್ದಾರೆ. ”ಪಲ್ಲವಿ” ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. ”ಅನುರೂಪ”ಕ್ಕೆಪ್ರಾಂತೀಯ ಪ್ರಶಸ್ತಿ ಲಭಿಸಿದೆ. ಇವರು ಉತ್ತಮ ಬರಹಗಾರರು ಮತ್ತು ನಾಟಕ ಕಾರರು .

# ಲಂಕೇಶ್ ಪತ್ರಿಕೆ :
ರಾಜಕೀಯ ಸುದ್ದಿಗಳು, ವಿಮರ್ಶೆಗಳು, ಅಂಕಣಗಳು ಮುಂತಾದ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ಟ್ಯಾಬ್ಲಾಯ್ಡ್ ವಾರಪತ್ರಿಕೆ ಜನಪ್ರಿಯವಾಯಿತು. ಹೊಸ ಸಾಹಿತಿಗಳ ಸೃಷ್ಟಿಗೆ ಲಂಕೇಶ್ ಪತ್ರಿಕೆ ಕೊಡುಗೆ ನೀಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಸಿ ಎಸ್ ದ್ವಾರಕಾನಾಥ್, ರವೀಂದ್ರ ರೇಷ್ಮೆ, ಸಿರೂರು ರೆಡ್ಡಿ, ಪ್ರೊ. ಬಿ ವಿ ವೀರಭದ್ರಪ್ಪ, ಬಿ. ಕೃಷ್ಣಪ್ಪ, ಪುಂಡಲೀಕ ಶೇಠ್, ಕೋಟಗಾನಹಳ್ಳಿ ರಾಮಯ್ಯ, ಅಬ್ದುಲ್ ರಶೀದ್, ನಟರಾಜ್ ಹುಳಿಯಾರ್,, ಹೆಚ್.ಎಲ್. ಕೇಶವಮೂರ್ತಿ, ಬಿ.ಚಂದ್ರೇಗೌಡ, ಬಾನು ಮುಸ್ತಾಕ್, ವೈದೇಹಿ, ಸಾರಾ ಅಬೂಬುಕರ್, ಇನ್ನೂ ಅನೇಕರು ಲಂಕೇಶ್ ಪತ್ರಿಕೆಯ ಕೊಡುಗೆ.

# ನಾಟಕಗಳು :
ಬಿರುಕು (1973)
ಈಡಿಪಸ್ ಮತ್ತು ಅಂತಿಗೊನೆ (1971)
ಗುಣಮುಖ (1993)
ನನ್ನ ತಂಗಿಗೊಂದು ಗಂಡು ಕೊಡಿ (1963)
ತೆರೆಗಳು (1964)
ಟಿ. ಪ್ರಸನ್ನನ ಗೃಹಸ್ಥಾಶ್ರಮ (1964)
ಕ್ರಾಂತಿ ಬಂತು ಕ್ರಾಂತಿ (1965)
ಸಂಕ್ರಾಂತಿ (1971)

# ಕಥಾ ಸಂಗ್ರಹ :
ಕೆರೆಯ ನೀರನು ಕೆರೆಗೆ ಚೆಲ್ಲಿ 1963
ನಾನಲ್ಲ 1970
ಉಮಾಪತಿ ಯ ಸ್ಕಾಲರ್ ಶಿಪ್ ಯಾತ್ರೆ 1973
ಕಲ್ಲು ಕರಗುವ ಸಮಯ 1990
ಉಲ್ಲಂಘನೆ 1996
ಮಂಜು ಕವಿದ ಸಂಜೆ 2001
ಸಮಗ್ರ ಕಥೆಗಳು (ಸಮಗ್ರ ಸಂಕಲನ)

# ಕಾದಂಬರಿಗಳು :
ಬಿರುಕು (1967)
ಮುಸ್ಸಂಜೆಯ ಕಥಾಪ್ರಸಂಗ (1978)
ಅಕ್ಕ (1991)

# ಅಂಕಣ ಬರಹಗಳ ಸಂಗ್ರಹ :
ಪ್ರಸ್ತುತ (1970)
ಕಂಡದ್ದು ಕಂಡಹಾಗೆ (1975)
ಟೀಕೆ ಟಿಪ್ಪಣಿ – 1 (1997)
ಟೀಕೆ ಟಿಪ್ಪಣಿ – 2 (1997)
ಟೀಕೆ ಟಿಪ್ಪಣಿ – 3 (2008)
ರೂಪಕ ಲೇಖಕರು (2008)
ಸಾಹಿತಿ ಸಾಹಿತ್ಯ ವಿಮರ್ಶೆ (2008)
ಮರೆಯುವ ಮುನ್ನ – ಸಂಗ್ರಹ 1 (2009)
ಈ ನರಕ ಈ ಪುಲಕ (2009)
ಮರೆಯುವ ಮುನ್ನ – ಸಂಗ್ರಹ 2 (2010)
ಮರೆಯುವ ಮುನ್ನ – ಸಂಗ್ರಹ 3
ಮನಕೆ ಕಾರಂಜಿಯ ಸ್ಪರ್ಶ (2010)
ಆಟ-ಜೂಜು-ಮೋಜು!
ಪಾಂಚಾಲಿ

# ಕವನ ಸಂಗ್ರಹಗಳು :
ಬಿಚ್ಚು
ನೀಲು ಕಾವ್ಯ – ಸಂಗ್ರಹ 1
ನೀಲು ಕಾವ್ಯ – ಸಂಗ್ರಹ 2
ನೀಲು ಕಾವ್ಯ – ಸಂಗ್ರಹ 3
ಚಿತ್ರ ಸಮೂಹ (ಸಮಗ್ರ ಸಂಕಲನ)
ಅಕ್ಷರ ಹೊಸ ಕಾವ್ಯ
ಪಾಪದ ಹೂಗಳು
ತಲೆಮಾರು
ಆತ್ಮಕಥೆ
ಹುಳಿ ಮಾವಿನಮರ (ಇದರಲ್ಲಿ ಮಾವಿನ ಮರದ ಜೀವನ ಘಟ್ಟಗಳಂತೆ ತಮ್ಮ ಜೀವನ ಕಥನವನ್ನು ನಿರೂಪಿಸಿದ್ದಾರೆ)

# ಚಲನಚಿತ್ರ ರಂಗ :
ನಿರ್ದೇಶಕನಾಗಿ : ಪಲ್ಲವಿ, ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ ‘ಅತ್ಯುತ್ತಮ ನಿರ್ದೇಶಕ’ ಎಂದು ಪ್ರಶಸ್ತಿ ಲಭಿಸಿದೆ. ಅನುರೂಪ, ಖಂಡವಿದೆ ಕೊ ಮಾಂಸವಿದೆ ಕೊ, ಎಲ್ಲಿಂದಲೊ ಬಂದವರು, ಮುಸ್ಸಂಜೆಯ ಕಥಾ ಪ್ರಸಂಗ.

ನಟನಾಗಿ :   ಲಂಕೇಶ್ ಅವರು ಸಂಸ್ಕಾರ ಚಲನಚಿತ್ರದಲ್ಲಿ ನಾರಣಪ್ಪನ ಪಾತ್ರವನ್ನು ಅಭಿನಯಿಸಿದ್ದಾರೆ. ಜೊತೆಗೆ ‘ಎಲ್ಲಿಂದಲೋ ಬಂದರು’ ಚಲನಚಿತ್ರದಲ್ಲೂ ನಟಿಸಿದ್ದಾರೆ.

# ಪ್ರಶಸ್ತಿ/ಪುರಸ್ಕಾರ :
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1993 -‘ಕಲ್ಲು ಕರಗುವ ಸಮಯ’ – ಸಣ್ಣ ಕತೆಗಳ ಸಂಗ್ರಹ
ಪಲ್ಲವಿ- ಕನ್ನಡ ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ ‘ಅತ್ಯುತ್ತಮ ನಿರ್ದೇಶಕ’ ಎಂದು ರಾಷ್ಟ್ರಪ್ರಶಸ್ತಿ ಲಭಿಸಿದೆ (1977).
ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ 1986
ಬಿ.ಎಚ್. ಶ್ರೀಧರ ಪ್ರಶಸ್ತಿ
ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ
ಆರ್ಯಭಟ ಸಾಹಿತ್ಯ ಪ್ರಶಸ್ತಿ

Leave a Reply

Your email address will not be published. Required fields are marked *

error: Content Copyright protected !!