Current AffairsSpardha TimesSports

ಕ್ರಿಕೆಟ್‌ಗೆ ವಿದಾಯ ಹೇಳಿದ ಶಿಖರ್ ಧವನ್

Share With Friends

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಶನಿವಾರ (ಆಗಸ್ಟ್ 24) ಅಂತಾರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ತಮ್ಮ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಶಿಖರ್‌ ಧವನ್‌ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. 2010 ರಲ್ಲಿ ವಿಶಾಖಪಟ್ಟಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಧವನ್, ಏಕದಿನ ಕ್ರಿಕೆಟ್​ನಲ್ಲಿ 17 ಶತಕ ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ 7 ಶತಕಗಳನ್ನು ಸಿಡಿಸಿದ್ದಾರೆ. ಧವನ್ 2010 ಮತ್ತು 2022ರ ನಡುವೆ ಭಾರತದ ಪರ 34 ಟೆಸ್ಟ್, 167 ಏಕದಿನ ಮತ್ತು 68 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

1985ರ ಡಿಸೆಂಬರ್‌ 5ರಂದು ದಿಲ್ಲಿಯಲ್ಲಿ ಜನಿಸಿದ ಶಿಖರ್‌ ಧವನ್‌, 2010ರಲ್ಲಿ ಆಸ್ಟ್ರೇಲಿಯಾ ತಂಡದ ಮೂಲಕ ಒನ್‌ಡೇ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರೆ, ತಮ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯವನ್ನೂ ಆಸ್ಟ್ರೇಲಿಯಾ ವಿರುದ್ಧ ಆಡಿದ್ದು ವಿಶೇಷ. 2013ರಲ್ಲಿ ಟೆಸ್ಟ್‌ ಪಂದ್ಯಕ್ಕೆ ಕಾಲಿಟ್ಟಿದ್ದರು. ವೆಸ್ಟ್‌ ಇಂಡೀಸ್‌‍ ತಂಡದ ವಿರುದ್ಧ 2011ರಲ್ಲಿ ಟಿ-20 ಪಂದ್ಯಕ್ಕೆ ಅಡಿ ಇಟ್ಟರು. ಇನ್ನು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌‍, ಡೆಕ್ಕನ್‌ ಚಾರ್ಜರ್ಸ್‌, ಸನ್‌ರೈಸಸ್‌‍, ಹೈದರಾಬಾದ್‌, ಡೆಲ್ಲಿ ಕ್ಯಾಪಿಟಲ್ಸ್‌‍ ಮತ್ತು ಪಂಜಾಬ್‌ ಕಿಂಗ್‌್ಸ ಪರ ಆಡಿದ್ದಾರೆ.

ಹೈಲೈಟ್ಸ್ :
*ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಭಾರತ ತಂಡ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿಯೂ ಶಿಖರ್‌ ಧವನ್‌ ಮಹತ್ತರ ಪಾತ್ರ ವಹಿಸಿದ್ದರು.

*2022ರಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಏಕದಿನ ಸರಣಿಯಲ್ಲಿ ಕೊನೆಯ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಶಿಖರ್ ಧವನ್ ತಮ್ಮ ಕೊನೆಯ ODI ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ 10 ಡಿಸೆಂಬರ್ 2022 ರಂದು ಚಿತ್ತಗಾಂಗ್‌ನಲ್ಲಿ ಆಡಿದರು.

*ಟೀಮ್ ಇಂಡಿಯಾ 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲು ಮತ್ತು 2019ರ ODI ವಿಶ್ವಕಪ್‌ನ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ 2023ರ ವಿಶ್ವಕಪ್‌ಗೆ ಅವರು ಆಯ್ಕೆ ಆಗಲಿಲ್ಲ.

*ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌, ಡೆಕ್ಕನ್‌ ಚಾರ್ಜರ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಮುಂಬೈ ಇಂಡಿಯನ್ಸ್‌, ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಪರವಾಗಿ ಆಡಿದ್ದಾರೆ.

*2012ರಲ್ಲಿ ಆಸ್ಟ್ರೇಲಿಯಾದಲ್ಲಿರುವ ಆಯೇಷಾ ಅವರನ್ನು ಧವನ್‌ ಮದುವೆಯಾಗಿದ್ದರು. ಆಯೇಷಾಗೆ ಎರಡನೇ ಮದುವೆಯಾಗಿತ್ತು. ಪತ್ನಿಯಿಂದ ನಾನು ಮಾನಸಿಕ ಹಿಂಸೆಗೆ ಗುರಿಯಾಗಿದ್ದೇನೆ ಎಂದು ಹೇಳಿ ಶಿಖರ್‌ ಧವನ್‌ ವಿಚ್ಛೇದನ ಪಡೆದಿದ್ದರು.

ಶಿಖರ್‌ ಧವನ್‌ ಸಾಧನೆ:
ಶಿಖರ್‌ ಧವನ್‌ ಅಂಕಿ ಅಂಶಗಳ ಬಗ್ಗೆ ಮಾತನಾಡುವುದಾದರೆ, ಅವರು 34 ಟೆಸ್ಟ್‌, 167 ಏಕದಿನ ಮತ್ತು 20-20 ಪಂದ್ಯಗಳನ್ನು ಒಳಗೊಂಡಂತೆ 269 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಧವನ್‌ ಒಟ್ಟು 10,867 ರನ್‌ ಗಳಿಸಿದ್ದಾರೆ. ಮಾರ್ಚ್‌ 16, 2013 ರಂದು ತಮ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಕೇವಲ 85 ಎಸೆತಗಳಲ್ಲಿ ವೇಗದ ಶತಕವನ್ನು ಗಳಿಸಿ ದಾಖಲೆ ಬರೆದಿದ್ದರು. ಅವರು ತಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 23 ಶತಕಗಳನ್ನು ಗಳಿಸಿದ್ದಾರೆ. ಅದರಲ್ಲಿ 17 ಏಕದಿನ ಪಂದ್ಯಗಳಲ್ಲಿ ಮತ್ತು 6 ಟೆಸ್ಟ್‌ಗಳಲ್ಲಿ. ಅಷ್ಟೇ ಅಲ್ಲ, ಅವರ ಹೆಸರಿನಲ್ಲಿ 44 ಅರ್ಧ ಶತಕಗಳಿವೆ.

ಶಿಖರ್ ಧವನ್‌ರ ಅಂತಾರಾಷ್ಟ್ರೀಯ ಕ್ರಿಕೆಟ್‌ ಅಂಕಿ ಅಂಶಗಳು :
*ಏಕದಿನ: 167 ಪಂದ್ಯ, 6793 ರನ್, 17 ಶತಕ, 39 ಅರ್ಧಶತಕ, 143 ಗರಿಷ್ಠ ಮೊತ್ತ
*ಟೆಸ್ಟ್: 34 ಪಂದ್ಯ, 2315 ರನ್, 7 ಶತಕ, 5 ಅರ್ಧಶತಕ, 190 ರನ್ ಗರಿಷ್ಠ ಮೊತ್ತ
*ಟಿ20: 68 ಪಂದ್ಯ, 1759 ರನ್, 11 ಅರ್ಧಶತಕ, 92 ರನ್ ಗರಿಷ್ಠ ಮೊತ್ತ
*ಐಪಿಎಲ್‌: 222 ಪಂದ್ಯ, 6769 ರನ್‌, 2 ಶತಕ, 51 ಅರ್ಧಶತಕಗಳು, 106* ಗರಿಷ್ಠ ಮೊತ್ತ

142 ಕೋಟಿ ರೂ. ಆಸ್ತಿಗೆ ಒಡೆಯ :
ಶಿಖರ್​ ಧವನ್​ ಅವರು ಕೋಟಿಗಟ್ಟಲೆ ಆಸ್ತಿಗೆ ಒಡೆಯ ಆಗಿದ್ದಾರೆ. ಶ್ರೀಮಂತ ಕ್ರಿಕೆಟಿಗರಲ್ಲಿ ಶಿಖರ್ ಧವನ್ ಹೆಸರು ಸೇರಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಶಿಖರ್ ಧವನ್ ಅವರ ಒಟ್ಟು ಸಂಪತ್ತು ಸುಮಾರು 17 ಮಿಲಿಯನ್ ಡಾಲರ್ (ಸುಮಾರು 142 ಕೋಟಿ ರೂ.) ಆಗಿದೆ.ಶಿಖರ್ ಧವನ್ 2008 ರಿಂದ ಐಪಿಎಲ್‌ನಲ್ಲಿ ಆಡಲು ಪ್ರಾರಂಭಿಸಿದರು. ದೆಹಲಿ ತಂಡ 12 ಲಕ್ಷಕ್ಕೆ ಖರೀದಿಸಿತು. ಶಿಖರ್ ಧವನ್ ಐಪಿಎಲ್ 16 ಸೀಸನ್‌ನಲ್ಲಿ ಒಟ್ಟು 91.8 ಕೋಟಿ ಗಳಿಸಿದ್ದಾರೆ.

Leave a Reply

Your email address will not be published. Required fields are marked *

error: Content Copyright protected !!