Current AffairsSpardha Times

‘ಚಿಪ್ಕೊ ಚಳವಳಿ’ ಪ್ರವರ್ತಕ ಸುಂದರಲಾಲ್‌ ಬಹುಗುಣ ನಿಧನ

Share With Friends

ಖ್ಯಾತ ಪರಿಸರವಾದಿ ಹಾಗೂ ‘ಚಿಪ್ಕೊ ಚಳವಳಿ’ ಪ್ರವರ್ತಕ ಸುಂದರಲಾಲ್‌ ಬಹುಗುಣ ಅವರು ಕೋವಿಡ್‌-19ನಿಂದಾಗಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಬೃಹತ್‌ ಅಣೆಕಟ್ಟು, ಕೈಗಾರಿಕೆ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ಅರಣ್ಯ ನಾಶ ಆಗುತ್ತಿರುವುದನ್ನು ತಡೆಯಲೆಂದು 1973ರಲ್ಲಿ ಚಿಪ್ಕೊ ಚಳವಳಿ ಆರಂಭವಾಗಿತ್ತು. ಉತ್ತರ ಪ್ರದೇಶದಲ್ಲಿ ಈ ಚಳವಳಿಗೆ ಪರಿಸರವಾದಿ ಸುಂದರ್‌ ಲಾಲ್‌ ಬಹುಗುಣ ನಾಂದಿ ಹಾಡಿದ್ದರು.

ಪರಿಸರ ಕಾರ್ಯಕರ್ತರಾಗಿದ್ದ ಸುಂದರ್ ಲಾಲ್ ಬಹುಗುಣ, ಕಾಡುಗಳು ಮತ್ತು ಹಿಮಾಲಯ ಪರ್ವತಗಳ ನಾಶವನ್ನು ತಪ್ಪಿಸಲು ಗ್ರಾಮಸ್ಥರ ಮನವೊಲಿಸಲು ಶಿಕ್ಷಣ ನೀಡುವ ಸಲುವಾಗಿ ತಮ್ಮ ಜೀವನವನ್ನೇ ಕಳೆದರು. ಬಹುಗುಣ ಅವರ ಪ್ರಯತ್ನದಿಂದಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮರಗಳನ್ನು ಕತ್ತರಿಸುವುದಕ್ಕೆ ನಿಷೇಧ ಹೇರಿದರರು. “ಪರಿಸರ ವಿಜ್ಞಾನ ಶಾಶ್ವತ ಆರ್ಥಿಕತೆ” ಎಂಬುದೇ ಬಹುಹುಣ ಅವರ ಘೋಷಣೆಯಾಗಿತ್ತು.

ಸುಂದರ್ ಲಾಲ್ ಬಹುಗುಣರವರು ಉತ್ತರಖಂಡದ ತೆಹ್ರಿ ಬಳಿ ಮರೊಡ ಎಂಬ ಹಳ್ಳಿಯಲ್ಲಿ 9 ಜನವರಿ 1927ರಂದು ಜನಿಸಿದರು. ತನ್ನ ಹದಿಮೂರನೇ ವಯಸ್ಸಿನಲ್ಲಿ ಶ್ರೀ ದೇವ್ ಸುಮನ್ ರವರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಬಹುಗುಣರವರು 1947ರ ಮುಂಚಿತವಾಗಿ ವಸಾಹತು ಆಡಳಿತದ ವಿರುದ್ಧ ಜನರನ್ನು ಸಜ್ಜುಗೊಳಿಸಿದ್ದರು. ಅವರು ತಮ್ಮ ಜೀವನದಲ್ಲಿ ಗಾಂಧಿವಾದಿ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ. ಗಾಂಧಿಯವರ ಪ್ರೇರಣೆಯಿಂದಾಗಿ, ಸುಮಾರು 4700 ಕಿಲೋಮೀಟರ್ ನಷ್ಟು ಹಿಮಾಲಯ ಕಾಡು ಹಾಗೂ ಬೆಟ್ಟಗಳ ನಡುವೆ ಪಾದಯಾತ್ರೆಯನ್ನು ಮಾಡಿ ಮೆಗಾ ಅಭಿವೃದ್ಧಿ ಯೋಜನೆಯಿಂದ ಹಿಮಾಲಯದ ಪರಿಸರಕ್ಕೆ ಆದ ಹಾನಿಯನ್ನು ಗಮನಿಸಿದರು.

# ಚಿಪ್ಕೊ ಚಳುವಳಿ :
ಚಿಪ್ಕೊ ಚಳುವಳಿಯು ಕಾಡು ಪ್ರದೇಶ ಹಾಗೂ ಕಾಡಿನ ಮರಗಳನ್ನು ರಕ್ಷಿಸಲು ಉತ್ತರಪ್ರದೇಶದಲ್ಲಿ 26 ಮಾರ್ಚ್ 1974ರಂದು ಪ್ರಾರಂಭಿಸಿದರು. ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಬೆಳೆಸುವ ಮೂಲಕ ಚಳುವಳಿಗೆ ಬೆಂಬಲವನ್ನು ಪಡೆದರು. ಚಿಪ್ಕೊ ಚಳುವಳಿಯು, ಕರ್ನಾಟಕದಲ್ಲಿ ಅಪ್ಪಿಕೊ ಚಳುವಳಿಗೆ ಸ್ಫೂರ್ತಿಯನ್ನು ನೀಡಿತು. ಬಹುಗುಣರವರು ‘ಪರಿಸರವು ಶಾಶ್ವತ ಆರ್ಥಿಕತೆ’ ಎಂಬ ಚಿಪ್ಕೊ ಘೋಷಣೆಯನ್ನು ರಚಿಸಿದ್ದಾರೆ. ಅವರು ಚಳುವಳಿಯನ್ನು ಇನ್ನಷ್ಟು ಪ್ರಾಮುಖ್ಯಗೊಳಿಸಲು 1981ರಿಂದ 1983ರವರೆಗೆ ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಮಾಡಿ ಚಳುವಳಿಗೆ ಬೆಂಬಲವನ್ನು ಪಡೆದರು.

# ಪ್ರಶಸ್ತಿಗಳು :
1981ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಆದರೆ ಅದನ್ನು ನಿರಾಕರಿಸಿದರು.
1987ರಲ್ಲಿ ರೈಟ್ ಲೈವ್ಲಿಹುಡ್ ಅವಾರ್ಡ್ (ಚಿಪ್ಕೊ ಚಳುವಳಿ).
1986ರಲ್ಲಿ ಜಮ್ನಾಲಾಲ್‌ ಬಜಾಜ್‌ ಪ್ರಶಸ್ತಿ.
1989ರಲ್ಲಿ ಐಐಟಿ ರೂರ್ಕಿ ಅವರು ಡಾಕ್ಟರ್ ಆಫ್ ಸೋಷಿಯಲ್ ಸೈನ್ಸಸ್ ಗೌರವ ಪದವಿ ನೀಡಿದರು.
2009ರಲ್ಲಿ ಪರಿಸರ ಸಂರಕ್ಷಣೆಗಾಗಿ ಭಾರತ ಸರ್ಕಾರವು ಪದ್ಮ ವಿಭೂಷಣ ಪ್ರಶಸ್ತಿ ನೀಡಿದೆ

 

error: Content Copyright protected !!