ಚಿಪ್ಕೊ ಚಳುವಳಿಯ ನಾಯಕ ಸುಂದರ್ ಲಾಲ್ ಬಹುಗುಣ
ಸುಂದರ್ ಲಾಲ್ ಬಹುಗುಣ ಪರಿಸರವಾದಿ ಮತ್ತು ಚಿಪ್ಕೊ ಚಳುವಳಿಯ ನಾಯಕ. ಹಿಮಾಲಯದಲ್ಲಿ ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಅವರು ಹೋರಾಟ ಮಾಡುತ್ತಿದ್ದಾರೆ. ದಟ್ಟಾರಣ್ಯದ ಹಿಮಾಲಯದ ತಪ್ಪಲಿನ ಉತ್ತರಖಂಡದ ತೇಹ್ರಿ ಸಮಿಪದ ಮರೋಡ ಹಳ್ಳಿಯಲ್ಲಿ 1927 ಜನವರಿ 9ರಂದು ಜನಿಸಿದ ಸುಂದರ್ ಲಾಲ್ ಬಹುಗುಣ ದೇಶದ ಆರಂಭಿಕ ಹಂತದ ಪರಿಸರವಾದಿಗಳಲ್ಲಿ ಒಬ್ಬರು.
13ರ ವಯಸ್ಸಿನಲ್ಲೆ ಶ್ರೀದೇವಿ ಸುಮನ್ ರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಆರಂಭಿಸಿದ ಬಹುಗುಣ ತನ್ನ ಜೀವನದಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಗಾಂಧೀ ಜೀವನದಿಂದ ಪ್ರೇರಿತಗೊಂಡು ಸ್ವಾತಂತ್ರ್ಯ ಪೂರ್ವದಲ್ಲೇ ವಸಾಹತುಶಾಹಿ ಆಡಳಿತದ ವಿರುದ್ಧ ಜನರನ್ನು ಜಾಗೃತಗೊಳಿಸಿದ್ದರು.
# ಏನಿದು ಚಿಪ್ಕೊ ಚಳುವಳಿ..?
ಹಿಮಾಲಯದ ಕಾಡುಗಳಿಗೆ ಹಾನಿ ಸಂಭವಿಸುತ್ತಿದ್ದುದನ್ನು ಗಮನಿಸಿದ ಸುಂದರ್ ಲಾಲ್ ಬಹುಗುಣ ಬೆಟ್ಟಗಳು-ಹಳ್ಳಿಗಳ.ನಡುವೆ ಸುಮಾರು 4,700 ಕಿ.ಮೀಟರ್ ಗಳಷ್ಟು ದೂರ ಪಾದಯಾತ್ರೆ ಮಾಡಿ ಜನರನ್ನು ಎಚ್ಚರಿಸಿ ಹೋರಾಟ ನಡೆಸಿದರು. ಚಿಪ್ಕೋ ಚಳವಳಿಯ ನೇತೃತ್ವ ವಹಿಸಿ ಹೆಚ್ಚು ಜನಪ್ರಿಯರಾದರು.ಅರಣ್ಯಗಳು ಹಿಮಾಲಯದ ತಪ್ಪಲಿನ ಜನ-ಜೀವನದ ಪ್ರಮುಖ ಅಂಗವಾಗಿವೆ. ಚಿಪ್ಕೋ ಚಳವಳಿಗೆ ನಾಂದಿ ಹಾಡಿದ್ದು 1973ರ ಸುಮಾರಿಗೆ ಮಂಡಲ್ ಎಂಬ ಹಳ್ಳಿ. ತಮ್ಮ ಕೃಷಿ ಸಲಕರಣೆಗಳ ತಯಾರಿಗಾಗಿ ಮುರಿದು ಬಿದ್ದ ಮರಗಳನ್ನು ಜನ ಉಪಯೋಗಿಸುವುದಕ್ಕೆ ಸರ್ಕಾರ ನಿರ್ಬಂಧ ಹೇರಿತ್ತು.ಸರ್ಕಾರದ ನಿರ್ಧಾರ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದೇ ಸಂದರ್ಭ ಬಂಡವಾಳಶಾಹಿಗೆ ಮಣಿದ ಸರ್ಕಾರ ಇದೇ ಪ್ರದೇಶದಲ್ಲಿ ಕ್ರೀಡಾ ಉಪಕರಣಗಳನ್ನು ತಯಾರಿಸುವ ಕಂಪನಿಯೊಂದಕ್ಕೆ ಮರಗಳನ್ನು ಕಡಿಯಲು ಅನುಮತಿ ನೀಡಿತು.
ಕಾಡಿನ ನಾಶದ ಮುನ್ಸೂಚನೆ ಅರಿತ ಸ್ಥಳೀಯ ಮಹಿಳೆಯರು ಮರಗಳ ಸುತ್ತ ವೃತ್ತಾಕಾರದಲ್ಲಿ ನಿಂತು ಮರ ಕಡಿಯಲು ತಡೆಯೊಡ್ಡಿದರು.ಹಗಲು-ರಾತ್ರಿಯೆನ್ನದೆ ಮರಗಳನ್ನು ಅಪ್ಪಿಕೊಂಡು ನಿಂತ ಪರಿಣಾಮ ಗುತ್ತಿಗೆದಾರ ಹಿಂತಿರುಗಬೇಕಾಯಿತು. ಸುಂದರ್ ಲಾಲ್ ಬಹುಗುಣ ಚಳವಳಿಯ ನೇತೃತ್ವ ವಹಿಸಿದರು. ಮರ ಕಡಿಯುವುದ ವಿರುದ್ಧ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಲ್ಲಿ ಮನವಿ ಮಾಡಿ ಸರ್ಕಾರದ ಕ್ರಮದ ವಿರುದ್ಧ ಸತತ ಹೋರಾಟ ನಡೆಸಿದರು.
ಚಳವಳಿ ಹೊರ ಪ್ರದೇಶಗಳಿಗೂ ಹರಡಿತು. ಜನ ಜಾಗೃತರಾಗಿ ಹೋರಾಟ ತೀವ್ರ ಗೊಂಡಿತು. ಪರಿಣಾಮ ಆ ಪ್ರದೇಶದಲ್ಲಿ 15 ವರ್ಷಗಳ ಕಾಲ ಯಾವುದೇ ಮರ ಕಡಿಯದಂತೆ 1981ರಲ್ಲಿ ಕಾನೂನು ಹೊರ ಬಂದಿತು. ಸರ್ಕಾರ ಅದೇ ವರ್ಷ ಬಹುಗುಣರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತು. ಆದರೆ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಸರ್ಕಾರದ ಧೋರಣೆಯನ್ನು ಸಹಿಸದ ಬಹುಗುಣ ಪ್ರಶಸ್ತಿ ಯನ್ನು ತಿರಸ್ಕರಿಸಿದರು.
ಚಿಪ್ಕೋ ಚಳವಳಿಯ ನಂತರ ಬಹುಗುಣ ಹಿಮಾಲಯದ ಪ್ರದೇಶಗಳಿಗೆ ಪಾದಯಾತ್ರೆ ಕೈಗೊಂಡು ಜನರಿಗ ಚಳವಳಿಯ ಸಂದೇಶವನ್ನು ತಲುಪಿಸಿದ ಪರಿಣಾಮ ಅವರಿಗೆ ಬೆಂಬಲ ದೊರೆಯಿತು. ಜೊತೆಗೆ ಸ್ಥಳೀಯರಿಗೆ ಕಡಿಮೆ ದರದಲ್ಲಿ ಮೇವನ್ನು ಉತ್ಪಾದಿಸಲು ವ್ಯವಸ್ಥೆ ಮಾಡಿ,ಕಡಿಮೆ ಉತ್ಪಾದನೆ ಕೊಡುವ ಭೂಮಿಯಲ್ಲಿ ಗಿಡ ನೆಡಲು ಸಹಾಯ ಮಾಡಿದರು. ತೇಹ್ರಿ ಅಣೆಕಟ್ಟಿನ ವಿರುದ್ಧ ತೀವ್ರ ಹೋರಾಟ ಮಾಡಿ ಅದನ್ನು ತಡೆಗಟ್ಟಿ ಭಾಗೀರಥಿ ನದಿಯನ್ನು ರಕ್ಷಿಸಿದ ಹಿರಿಮೆ ಅವರದು. ಸಸ್ಯಗಳ ಮಡಿಗಳನ್ನು ಕಾಪಾಡಲು ಮಾಡಿದ “ಬೀಚ್ ಬಚಾವೋ” ಆಂದೋಲನ ಇಂದಿಗೂ ನಡೆಯುತ್ತಿದೆ.
ಚಿಪ್ಕೋ ಚಳವಳಿಯ ಪ್ರಭಾವದಿಂದಾಗಿ ಪಶ್ಚಿಮ ಘಟ್ಟದಲ್ಲಿನ ಅರಣ್ಯ ನಾಶದ ವಿರುದ್ಧದ ಅಪ್ಪಿಕೋ ಚಳವಳಿ ಕೂಡ ಕಾವೇರಿತು. ಸುಂದರ್ ಲಾಲ್ ಬಹುಗುಣ ತಮ್ಮ ಹೋರಾಟದ ಫಲವಾಗಿ ಅಧಿಕಾರಿಶಾಹಿಗಳಿಂದ ತಮ್ಮ ಸಂಪನ್ಮೂಲಗಳನ್ನು ರಕ್ಷಿಸಲು ಹಿಮಾಲಯ ತಪ್ಪಲಿನ ಜನರಿಗೆ ಪರೋಕ್ಷವಾಗಿ ಕಾರಣರಾದರು.
ಪದ್ಮಶ್ರೀ ತಿರಸ್ಕರಿಸಿದ ಬಹುಗುಣರಿಗೆ ಭಾರತ ಸರ್ಕಾರ 2009 ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸುತ್ತದೆ. ಚಿಪ್ಕೋ ಚಳವಳಿಗಾಗಿ “ರೈಟ್ ಲೈವ್ಲಿ ಹುಡ್ ಅವಾರ್ಡ್” ಮತ್ತು ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಲಭಿಸುತ್ತದೆ. IIಖಿ ರೂರ್ಕೆಲಾ ಡಾಕ್ಟರ್ ಆಫ್ ಸೋಶಿಯಲ್ ಸೈನ್ಸಸ್ ಗೌರವ ನೀಡುತ್ತದೆ.
ಕಾಡಿನ ವಿನಾಶದ ಪರಿಣಾಮವನ್ನು ಒಂದಿಡೀ ಸಮುದಾಯಕ್ಕೆ ಅರ್ಥೈಸಿದ ಸುಂದರ್ ಲಾಲ್ ಬಹುಗುಣ ಬಹು ದೊಡ್ಡ ಜನ-ಜಾಗೃತಿಗೆ ಕಾರಣರಾದರು. ಎಚ್ಚತ್ತುಕೊಂಡ ಜನ-ಸಮುದಾಯ ಅನಾಹುತವನ್ನು ಸರಿಸುವಲ್ಲಿ ಯಶಸ್ವಿಯಾಯಿತು. ಚಿಪ್ಕೋ ಚಳವಳಿ ನಡೆದು 4 ದಶಕಗಳೇ ಉರುಳಿದವು. ಪರಿಸರದ ಮೇಲಿನ ಹಾನಿಯನ್ನು ಅಂದಿಗಿಂತಲೂ ಹೆಚ್ಚಾಗಿಯೇ ಇಂದು ಅನುಭವಿಸುತ್ತಿರುವ ಮನುಷ್ಯ ಇನ್ನೂ ಎಚ್ಚತ್ತುಕೊಳ್ಳದಿರುವುದು ದೌರ್ಭಾಗ್ಯ. ತಾನೇ ಸೃಷ್ಟಿ ಸಿಕೊಂಡ ವಿಷ ವರ್ತುಲದೊಳಗೆ ಸಿಲುಕಿ ಕೊಂಡು ಒದ್ದಾಡುತ್ತಿದ್ದರೂ ಇನ್ನೂ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧನಾಗದ ಮಾನವ ತಾನು ಪರಿಸರದ ಮೇಲೆ ಮಾಡಿದ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾನೆ.
ಜಲ-ಅರಣ್ಯ-ಗಾಳಿಗಳೆಲ್ಲ ಮನುಷ್ಯನ ಜೀವ-ನಾಡಿಗಳು. ಮಾನವನ ಕೃತ್ಯಗಳಿಂದ ಇವು ಕಲುಷಿತಗೊಂಡ ಪರಿಣಾಮ ಜನ-ಜೀವನ ವಿನಾಶದಂಚಿನಲ್ಲಿದೆ. ಇರುವುದೊಂದೇ ಭೂಮಿ. ಇದು ಉಳಿದರಷ್ಟೇ ಜೀವನ. ಶೋಕಿಗಾಗಿಯೋ ಅಥವಾ ನೈಜ ಕಳಕಳಿಯಿಂದಲೋ ಆಚರಿಸಲ್ಪಡುವ ಪರಿಸರ ದಿನಾಚರಣೆಗಳು ನಿಜ ಉದ್ದೇಶವನ್ನು ಅರಿತರೆ ಮಾತ್ರ ಭವಿಷ್ಯ ಆಶಾದಾಯಕವಾದೀತು.
# ದೆಹಲಿ ರೈತ ಹೋರಾಟಕ್ಕೆ ಬೆಂಬಲ :
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದೇಶದ ರೈತರು ಕಳೆದ 23 ದಿನಗಳಿಂದ ಸತತವಾಗಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಸರ್ಕಾರ ಮತ್ತು ರೈತ ಮುಖಂಡರ ನಡುವಿನ ಹಲವು ಸುತ್ತಿನ ಮಾತುಕತೆ ವಿಫಲವಾಗಿದೆ. ದೇಶದ ಖ್ಯಾತ ಚಿಪ್ಕೋ ಚಳುವಳಿಯ ನೇತಾರ ಸುಂದರ್ಲಾಲ್ ಬಹುಗುಣ ಸಹ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿರುವುದು ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
# ಸುಂದರ್ ಲಾಲ್ ಬಹುಗುಣ ಅವರಿಗೆ ದಕ್ಕಿದ ಪ್ರಶಸ್ತಿಗಳು :
* 1981ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಆದರೆ ಅದನ್ನು ನಿರಾಕರಿಸಿದರು.
*1987ರಲ್ಲಿ ರೈಟ್ ಲೈವ್ಲಿಹುಡ್ ಅವಾರ್ಡ್ (ಚಿಪ್ಕೊ ಚಳುವಳಿ).
*1986ರಲ್ಲಿ ಜಮ್ನಾಲಾಲ್ ಬಜಾಜ್ ಪ್ರಶಸ್ತಿ.
*1989ರಲ್ಲಿ ಐಐಟಿ ರೂರ್ಕಿ ಅವರು ಡಾಕ್ಟರ್ ಆಫ್ ಸೋಷಿಯಲ್ ಸೈನ್ಸಸ್ ಗೌರವ ಪದವಿ ನೀಡಿದರು.
* 2009ರಲ್ಲಿ ಪರಿಸರ ಸಂರಕ್ಷಣೆಗಾಗಿ ಭಾರತ ಸರ್ಕಾರವು ಪದ್ಮ ವಿಭೂಷಣ ಪ್ರಶಸ್ತಿ ನೀಡಿದೆ
# ಅಪ್ಪಿಕೋ ಚಳವಳಿ :
1983ರ ಸೆಪ್ಟೆಂಬರ್ 8 ರಂದು ಶಿರಸಿ ತಾಲೂಕಿನ ಕಳಾಸೆ ಕುದ್ರಗೋಡ ಅರಣ್ಯ್ಯದಲ್ಲಿ ಚಳುವಳಿ ಪ್ರಾರಂಭವಾದ ಅಪ್ಪಿಕೋ ಚಳವಳಿಯು ಇಡಿ ಕರ್ನಾಟಕದ ಮಲೆನಾಡಿನ ಪ್ರದೇಶದಲ್ಲಿ ವ್ಯಾಪಿಸಿತು. ಅದಕ್ಕೂ ಮುನ್ನ ರಾಷ್ಟ್ರೀಯ ಖ್ಯಾತಿಯ ಪರಿಸರ ಚಳವಳಿಯ ನೇತಾರ ಸುಂದರಲಾಲ್ ಬಹುಗುಣರು ಬಾಳೆಗದ್ದೆಯ ಬಿಳಗಲ್ ಅಡವಿಗೆ ಭೇಟಿಯಿತ್ತು ಹಳ್ಳಿಗರೊಡನೆ ಚರ್ಚೆ ನಡೆಸಿದ್ದು, ಮರ ಉಳಿಸಲು ಅಹಿಂಸಾತ್ಮಕ ಹೋರಾಟದ ಪ್ರತಿಜ್ಞೆ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.