ಸಿಂಥೆಟಿಕ್ ವಸ್ತುಗಳು (ಸಂಶ್ಲೇಷಿತ ವಸ್ತುಗಳು)
ನೈಸರ್ಗಿಕವಾಗಿ ದೊರಕದ ಆದರೆ ನೈಸರ್ಗಿಕ ಕಚ್ಚಾವಸ್ತುಗಳಿಂದ ತಯಾರು ಮಾಡಿದ ವಸ್ತುಗಳಿಗೆ ‘ಸಿಂಥೆಟಿಕ್ ವಸ್ತುಗಳೆಂದು’ ಕರೆಯುವರು. ಇವು ಮಾನವ ನಿರ್ಮಿತ ಕೃತಕ ವಸ್ತುಗಳು.
ಪ್ರಾಚೀನ ದಿನಗಳಲ್ಲಿ ಮಾನವನ ಎಲ್ಲಾ ಅಗತ್ಯತೆಗಳನ್ನು ಸ್ವಾಭಾವಿಕವಾಗಿ ದೊರೆಯುತ್ತಿದ್ದ ವಸ್ತುಗಳಿಂದ ಈಡೇರಿಸಲಾಗುತ್ತಿತ್ತು. ಆದರೆ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ನೈಸರ್ಗಿಕ ವಸ್ತುಗಳ ಲಭ್ಯತೆಯಲ್ಲಿ ಮಿತಿ ಅವುಗಳ ಉತ್ಪಾದನೆಗೆ ಬೇಕಾಗಿರುವ ದೀರ್ಘಾವಧಿಯಿಂದಾಗಿ ಮಾನವನ ಅಗತ್ಯತೆಗಳನ್ನು ಈ ನೈಸರ್ಗಿಕ ವಸ್ತುಗಳು ಈಡೇರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಇವುಗಳ ಸ್ಥಾನದಲ್ಲಿ ಪರ್ಯಾಯವಾಗಿ ಆಕ್ರಮಿಸಿಕೊಂಡ ವಸ್ತುಗಳೇ ಮಾನವ ನಿರ್ಮಿತ ಸಿಂಥೆಟಿಕ್ ವಸ್ತುಗಳು.
> ಸಿಂಥೆಟಿಕ್ ವಸ್ತುಗಳು : ಪಾಲಿಮರ್ಗಳು, ಪ್ಲಾಸ್ಟಿಕ್ಗಳು, ಗಾಜು, ಸಿಮೆಂಟ್, ಪಿಂಗಾಣಿ ವಸ್ತುಗಳು, ಸಾಬೂನುಗಳು, ಮಾರ್ಜಕಗಳು, ಬಣ್ಣಗಳು ಇತ್ಯಾದಿ.
# ಪಾಲಿಮರ್ಗಳು
ಪಾಲಿಮರ್(ಪಾಲಿಮೇರಸ್) ಎಂಬ ಪದವು ಪಾಲಿ ಎಂದರೆ ಹಲವು, ಮೆರೋಸ್ ಎಂದರೆ ಭಾಗಗಳು ಎಂಬ ಪದಗಳಿಂದ ಉಂಟಾಗಿದೆ. ಇವುಗಳನ್ನು ಕೆಲವು ನೈಸರ್ಗಿಕವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ.
ಸರಳ ಸಂಯುಕ್ತದ ಅತಿಹೆಚ್ಚು ಸಂಖ್ಯೆಯ ಅಣುಗಳ ಸಂಯೋಗದಿಂದಾಗಿ ಅಥವಾ ಸರಳ ಸಂಯುಕ್ತಗಳು ಪುನರಾವರ್ತಿತ ರೀತಿಯಲ್ಲಿ ಸೇರಿಕೊಂಡಿರುವ ಸಂಯುಕ್ತಗಳನ್ನು ಪಾಲಿಮರ್ಗಳೆನ್ನುತ್ತೇವೆ.
> ಮಾನೋಮರ್ಗಳು : ಒಂದು ಪಾಲಿಮರ್ ಅನೇಕ ಸರಳ ಅಣುಗಳಿಂದಾಗಿದೆ. ಪಾಲಿಮರ್ ಅಣುಗಳನ್ನುಂಟು ಮಾಡುವ ಸರಳ ಸಂಯುಕ್ತಕ್ಕೆ ‘ಮಾನೋಮರ್’ ಎಂದು ಹೆಸರು.
ಉದಾ: ಪಾಲಿಥಿನ್ ಎನ್ನುವುದು ಒಂದು ಪಾಲಿಮರ್. ಇದು ಈಥೀನ್ ಎ0ಬ ಅನೇಕ ಅಣುಗಳಿಂದ ಉಂಟಾಗಿದೆ. ಪಾಲಿಥೀನ್ ಅನ್ನು ‘ಪಾಲಿಮರ್’ ಎನ್ನುವರು. ಇದನ್ನು ಉಂಟುಮಾಡಿದ ‘ಈಥೀನ್ನ್ನು’ ಮಾನೋಮರ್ಗಳೆನ್ನುವರು.
# ಪಾಲಿಮರ್ಗಳ ವಿಧಗಳು :
1. ನೈಸರ್ಗಿಕ ಪಾಲಿಮರ್ಗಳು : ನಿಸರ್ಗದಲ್ಲಿ ಲಭ್ಯವಿರುವ ಪಾಲಿಮರ್ಗಳನ್ನು ನೈಸರ್ಗಿಕ ಪಾಲಿಮರ್ಗಳೆನ್ನುವರು.
ಉದಾ: ಪ್ರೋಟಿನ್ಗಳು,(ಅಮೈನೋ ಆಮ್ಲಗಳು)
ಕೊಬ್ಬುಗಳು( ಕೊಬ್ಬಿನ ಆಮ್ಲಗಳು)
ಕಾರ್ಬೋಹೈಡ್ರೇಟ್ಗಳು( ಗ್ಲೂಕೋಸ್) ಇತ್ಯಾದಿ.
2. ಸಿಂಥೆಟಿಕ್ ಪಾಲಿಮರ್ಗಳು : ಪ್ರಕೃತಿಯಲ್ಲಿ ದೊರೆಯದ ಮಾನವ ತಯಾರು ಮಾಡಿಕೊಳ್ಳುವ ಪಾಲಿಮರ್ಗಳನ್ನು ಸಿಂಥೆಟಿಕ್ ಪಾಲಿಮರ್ಗಳೆನ್ನುವರು.
ಉದಾ: ನೈಲಾನ್, ಪಾಲಿಥೀನ್, ಟೆರಿಲೀನ್, ರೆಯಾನ್
ಇದರಲ್ಲಿ ವಿಧಗಳು :
1. ಸಂಕಲನ ಪಾಲಿಮರ್ಗಳು :
ಹಲವಾರು ಸರಳ ಅಣುಗಳು ಒಟ್ಟಿಗೆ ಸೇರಿ ಒಂದು ಬೃಹತ್ ಅಣುವಾಗುತ್ತದೆ. ಈ ಪ್ರಕ್ರಿಯೆಯನ್ನು ‘ಸಂಕಲನ ಪಾಲಿಮರೀಕರಣ ಎನ್ನುವರು. ಇವುಗಳನ್ನು ಅಪರ್ಯಾಪ್ತ ಮಾನೋಮರ್ಗಳಿಂದ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅಣುವಿನ ವರ್ಜನೆ ಇಲ್ಲ.
ಉದಾ: ಪಾಲಿಥೀನ್, ಪಾಲಿ ವೀನೈಲ್ ಕ್ಲೋರೈಡ್
2. ಸಾಂದ್ರೀಕರಣ ಪಾಲಿಮರ್ಗಳು
ಅನೇಕ ಮಾನೋಮರ್ಗಳು ಒಗ್ಗೂಡಿ ಬೃಹತ್ ಅಣುಗಳು ರೂಪುಗೊಳ್ಳುವಾಗ ಸಣ್ಣ ಅಣುಗಳು ಪ್ರತ್ಯೇಕಗೊಳ್ಳುವ ಸಾಂದ್ರಿಕರಣ ಕ್ರಿಯೆ ಉಂಟಾದರೆ ಅದನ್ನು ಸಾಂದ್ರೀಕರಣ ಪಾಲಮರೀಕರಣ ಎನ್ನುತ್ತಾರೆ.
ಸಾಂಧ್ರೀಕರಣ ಪಾಲಿಮರೀಕರಣ ಕ್ರಿಯೆಯು ನಡೆದಾಗ ನೀರು, ಮೆಥನಾಲ್ನಂತಹ ಅನುಗಳು ವರ್ಜನೆಯನ್ನು ಒಳಗೊಂಡಿರುತ್ತವೆ.
ಉದಾ: ನೈಲಾನ್, ಟೆರಿಲೀನ್
# ಕೆಲವು ಪಾಲಿಮರ್ಗಳು ಮತ್ತು ಅವುಗಳ ಮಾನೋಮರ್ಗಳು
1. ಪಾಲಿಮರ್ : ಪಾಲಿಥೀನ್
ಮಾನೋಮರ್ : ಈಥೀನ್
2. ಪಾಲಿಮರ್ : ನೈಲಾನ್
ಮಾನೋಮರ್ : ಕಾರ್ಬೋಲ್ಯಾಕ್ಟಮ್
3. ಪಾಲಿಮರ್ : ಪಾಲಿಸ್ಟರ್
ಮಾನೋಮರ್ : ಎಸ್ಟರ್ಸ್
4. ಪಾಲಿಮರ್ : ಪಾಲಿ ವೀನೈಲ್ ಕ್ಲೋರೈಡ್
ಮಾನೋಮರ್ : ವಿನೈಲ್ ಕ್ಲೋರೈಡ್
5. ಪಾಲಿಮರ್ : ನಿಯೋಪ್ರೀನ್
ಮಾನೋಮರ್ : ಕ್ಲೋರೋಫ್ರಿನ್
6. ಪಾಲಿಮರ್ : ಟೆಫ್ಲಾನ್
ಮಾನೋಮರ್ : ಟೆಟ್ರಾ ಫ್ಲೋರೋ ಈಥೀನ್
7. ಪಾಲಿಮರ್ : ಥಿಯೋಕೋಲ್
ಮಾನೋಮರ್ : ಈಥಿಲೀನ್ ಕ್ಲೋರೈಡ್+ ಸೋಡಿಯಂ ಟೆಟ್ರಾಸಲ್ಫೈಡ್
# ಪ್ಲಾಸ್ಟಿಕ್ಗಳು
ಪ್ರಕ್ರಿಯಾ ಹಂತಗಳಲ್ಲಿ ಮೃದುತ್ವವನ್ನು ಹೊಂದುವ ಪಾಲಿಮರ್ಗಳನ್ನು ‘ ಪ್ಲಾಸ್ಟಿಕ್ಗಳು’ ಎನ್ನುವರು. ತಯಾರು ಮಾಡುವಾಗ ಶಾಖ ಕೊಟ್ಟರೆ ಮೆದುವಾಗಿ ನಂತರ ತಂಪುಮಾಡಿದಾಗ ಗಟ್ಟಿಯಾಗಿ ನಿಶ್ಚಿತ ಆಕಾರವನ್ನು ಪಡೆಯುವುದು ಪ್ಲಾಸ್ಟಿಕ್ಗಳ ವಿಶೇಷ ಗುಣ.
> ಪ್ಲಾಸ್ಟಿಕ್ಗಳ ವಿಧಗಳು
1. ಥರ್ಮೋಪ್ಲಾಸ್ಟಿಕ್ಗಳು: ಕೆಲವು ಪ್ಲಾಸ್ಟಿಕ್ಗಳು ಕಾಯಿಸಿದಾಗ ಮೆದುವಾಗುತ್ತದೆ. ನಂತರ ತಂಪು ಮಾಡಿದಾಗ ಗಟ್ಟಿಯಾಗುತ್ತದೆ. ಇವುಗಳನ್ನು ಕಾಯಿಸಿ ಮೆದುಮಾಡಿ ಪುನ: ಎರಕ ಹೊಯ್ಯಬಹುದು. ಇವು ಮರುಬಳಕೆಗೆ ಸೂಕ್ತವಾಗಿದೆ.
ಉದಾ: ಪಿ.ವಿ.ಸಿ, ಪಾಲಿಸ್ಟರೀನ್
2.ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ಗಳು : ಕಾಯಿಸಿದಾಗ ನಿಶ್ಚಿತ ಆಕಾರವನ್ನು ಪಡೆದು, ತಣಿಸಿದಾಗ ಶಾಶ್ವತ ಗಡಸುತನವನ್ನು ಹೊಂದುವ ಪ್ಲಾಸ್ಟಿಕ್ಗಳನ್ನು “ ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ಗಳೆನ್ನುವೆರು. ಇವುಗಳನ್ನು ಪದೇ ಪದೇ ಕಾಯಿಸಿ ಮರುಬಳಕೆ ಮಾಡಲು ಸಾಧ್ಯವಿಲ್ಲ.
ಉದಾ: ಬೇಕ್ಲೈಟ್, ಸಿಲಿಕೋನ್ಗಳು, ಎಪಾಕ್ಸಿ ರಾಳಗಳು
‘ಬೇಕ್ಲೈಟ್’ಗಳು ಇಂದು ಹೆಚ್ಚು ಬಳಕೆಯಾಗುತ್ತಿರುವ ಪ್ಲಾಸ್ಟಿಕ್ಗಲಾಗಿವೆ. ಇವುಗಳನ್ನು ವಿದ್ಯುತ್ತಿನ ಸ್ವಿಚ್ಗಳು, ಡಿ.ಪಿ ಬಾಕ್ಸ್ಗಳು, ಕಂಪ್ಯೂಟರ್ನ ಕೀಬೋರ್ಡ್, ಮಾಣಿಟರ್ನ ಹೊರಗಿನ ಕವಚ, ಬಲ್ಬ್ ಹೋಲ್ಡರ್ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
# ಸಿರಾಮಿಕ್ಸ್ ( ಕುಂಬಾರಿಕೆ ವಸ್ತುಗಳು)
ಸಿರಾಮಿಕ್ಸ್ ಎಂಬ ಪದವು ‘ಸಿರಿಮೋಸ್’ ಎಂಬ ಗ್ರೀಕ್ ಪದದಿಂದ ಬಂದಿದೆ. ಇದರ ಅರ್ಥ ಮಣ್ಣಿನ ಮಡಕೆ. ಚೀನಾ ಪಾತ್ರೆ, ಪಿಂಗಾಣಿ, ಇಟ್ಟಿಗೆಯಂತಹ ಜೇಡಿಮಣ್ಣಿನ ವಸ್ತುಗಳನ್ನು ಒಟ್ಟಾರೆ ‘ಸಿರಾಮಿಕ್ಸ್ಗಳೆಂದು’ ಕರೆಯಲಾಗುತ್ತದೆ.
> ಪಿಂಗಾಣಿ : ಬಿಳಿ ಜೇಡಿಮಣ್ಣು, ಮರಳು, ಫೆಲ್ಡ್ ಸ್ಫಾರ್ ಈ ಕಚ್ಚಾವಸ್ತುಗಳನ್ನು ನಯವಾಗಿ ಪುಡಿ ಮಾಡಿ ನೀರನ್ನು ಸೇರಿಸಿ, ಇದನ್ನು ಸೋಸುವ ಕಾಗದದಿಂದ ಒತ್ತಿ ಹೆಚ್ಚುವರಿ ನೀರನ್ನು ತೆಗೆದ ನಂತರ ಬೇಕಾದ ಆಕಾರವನ್ನು ಕೊಟ್ಟು ಒಣಗಿಸಿ ಕುಲುಮೆಯಲ್ಲಿ 1600 ಡಿಗ್ರಿ ಸೆಲ್ಸಿಯಸ್ಗೆ ಕಾಯಿಸಬೇಕು.
ಪಿಂಗಾಣಿಯು ನೋಡಲು ಆಕರ್ಷಕವಾಗಿರದೆ, ರಂಧ್ರಯುಕ್ತವಾಗಿರುತ್ತದೆ. ಇದನ್ನು ಮುಚ್ಚಲು ಹೊಳಪು ನೀಡಬೇಕು. ಪಿಂಗಾಣಿಗೆ ಹೊಳಪು ನೀಡಲು ಬೋರಾನ್, ಅಲ್ಯೂಮಿನಿ, ಮೃದುವಾದ ಸಿಲಿಕಾ, ಕರಗದ ಸಲ್ಫೇಟ್ಗಳು, ಲೋಹದ ಆಕ್ಸೈಡ್ಗಳನ್ನು ಬಳಸುತ್ತಾರೆ.