HistorySpardha Times

ಕನ್ನಡ ಇತಿಹಾಸದ ಮೇಲೆ ಬೆಳಕು ಚೆಲ್ಲುವ ತಾಳಗುಂದ ಉತ್ಖನನ

Share With Friends

ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹತ್ವದ ಉತ್ಖನನ ಮತ್ತು ಸಂಶೋಧನೆ ಶಿವಮೊಗ್ಗ ಜಿಲ್ಲೆಯ ತಾಳಗುಂದದಲ್ಲಿ ಆರಂಭವಾಗಲಿದೆ. ಭಾರತ ಪುರಾತತ್ವ ಸರ್ವೆ(ಆರ್ಕಾಲಾಜಿಕಲ್ ಸರ್ವೆ ಆಫ್ ಇಂಡಿಯಾ-ಎಎಸ್‍ಐ) ಇಲಾಖೆ ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಪ್ರದೇಶದಲ್ಲಿ ಉತ್ಖನನ ಪ್ರಾರಂಭಿಸಲಿದೆ.

ಕರ್ನಾಟಕ ಚರಿತ್ರೆಯ ಹೆಮ್ಮೆಯ ರಾಜವಂಶಸ್ಥರಾದ ಕದಂಬರ ಕಾಲದಲ್ಲಿ ಕನ್ನಡದ ಬಳಕೆ ಮತ್ತು ಈ ಭಾಷೆಯ ಅಸ್ತಿತ್ವದ ಮಹತ್ವದ ಮೇಲೆ ಈ ಸಂಶೋಧನೆ ಬೆಳಕು ಚೆಲ್ಲಲಿದ್ದು , ಏಳು ದಶಕಗಳ ಹಿಂದಿನ ಸಂಗತಿಗಳ ಬಗ್ಗೆ ತಿಳಿದುಬರಲಿದೆ. ಕೆಲವು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ತಾಮ್ರ ಪತ್ರ ಶಾಸನ ಪತ್ತೆಯಾಗಿತ್ತು.

ತಾಳಗುಂದದ ಪ್ರಸಿದ್ಧ ಪ್ರಾಣೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಸಂದರ್ಭದಲ್ಲಿ ಕಂಡುಬಂದ ಹಲ್ಮಿಡಿ ರೂಪದ ಈ ಶಾಸನ ಕದಂಬ ದೊರೆಗಳು ಮತ್ತು ಅವರ ಆಳ್ವಿಕೆ ಕಾಲದ ಕನ್ನಡ ಭಾಷೆ ಬಗ್ಗೆ ಕೆಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಿತು. ತಾಳಗುಂದ ಕದಂಬರ ವೀರಾಗ್ರಹಿಣಿ ರಾಜ ಮಯೂರ ವರ್ಮನ ಜನ್ಮಸ್ಥಳ. ಅಲ್ಲದೆ ಇದೇ ಪ್ರದೇಶದಲ್ಲಿ ಶಾಸನ ಪತ್ತೆಯಾದ ಹಿನ್ನೆಲೆಯಲ್ಲಿ ಈಗ ಆರಂಭವಾಗಲಿರುವ ಉತ್ಖನನವು ಕನ್ನಡ ಭಾಷೆ ಇತಿಹಾಸದ ಮೇಲೆ ಮತ್ತಷ್ಟು ಬೆಳಕು ಚೆಲ್ಲಲಿದೆ.

ತಾಳಗುಂದ ಶಾಸನ ಇತಿಹಾಸ :
ತಾಳಗುಂದ ಶಾಸನಗಳು ಕನ್ನಡದ ಹಳೆಯ ಕಲ್ಲಿನ ಶಾಸನಗಳು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದಲ್ಲಿವೆ. ಇಲ್ಲಿನ ಒಂದು ಶಾಸನವು ಈವರೆಗೆ ಸಿಕ್ಕಿರುವ ಕನ್ನಡದ ಅತಿಹಳೆಯ ಶಾಸನವೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.ಅದುವರೆಗೂ ಹಲ್ಮಿಡಿ ಶಾಸನವು ಕನ್ನಡದ ಅತಿಹಳೆಯ ಶಾಸನವೆಂದು ಪರಿಗಣಿತವಾಗಿತ್ತು. ಆದರೆ ಅದಕ್ಕಿಂತಲೂ ಇದು ಹಳೆಯದೆಂದು ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಮೂಲಕ ಕನ್ನಡ ಬರವಣಿಗೆಯ ಇತಿಹಾಸವು ಸುಮಾರು ಒಂದು ನೂರು ವರ್ಷಗಳಷ್ಟು ಹಿಂದೆ ಹೋದಂತಾಗಿದೆ.

ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆಯಿಂದ 2013-14ರಲ್ಲಿ ನಡೆಸಿದ ಉತ್ಖನನದ ವೇಳೆ ಈ ಶಾಸನ ಪತ್ತೆಯಾಗಿತ್ತು. ಇದರ ಅಧ್ಯಯನಕ್ಕೆ ಸಾಕಷ್ಟು ಸಮಯ ತೆಗೆದುಕೊಂಡ ಪುರಾತತ್ವ ಇಲಾಖೆ ಇದರ ಪ್ರಾಚೀನತೆಯ ಅಂಶಗಳನ್ನು ಬಹಿರಂಗಪಡಿಸಿತು. ಇದರಂತೆ, ಈ ಶಾಸನವೇ ಕನ್ನಡದ ಮೊದಲ ಶಾಸನವೆಂದು ಪರಿಗಣಿಸಲ್ಪಟ್ಟಿದೆ.

ದಯಾಮರಣ ಎಂದರೇನು.? ಇತಿಹಾಸವೇನು.? ಎಷ್ಟು ವಿಧ..?

ಈ ಶಾಸನ ರಚನೆಯಾದ ಅವಧಿ ಕ್ರಿ.ಶ. 370-450 ಇರಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಶಾಸನ ಕದಂಬ ದೊರೆ ಶಾಂತಿವರ್ಮನ ಕಾಲಕ್ಕಿಂತಲೂ ಹಳೆಯದೆಂಬ ಅಂಶ ಬೆಳಕಿಗೆ ಬಂದಿದೆ. ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆಯು ಭೂಮಿಯನ್ನು ಇನಾಮು ನೀಡಿದ್ದ ಅಂಶವನ್ನು ಈ ಶಾಸನ ವಿವರಿಸುತ್ತದೆ.

ಪ್ರಣವಲಿಂಗೇಶ್ವರ ದೇವಾಲಯದ ಉತ್ತರ ಭಾಗದಲ್ಲಿ ಇದು ಪತ್ತೆಯಾಗಿತ್ತು. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಿರುವುದರಿಂದ ಶಾಸನ ಶಾಸ್ತ್ರದ ಪ್ರಕಾರ ಇದನ್ನು ಕನ್ನಡ ಶಾಸನ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಪುರಾತತ್ವ ಇಲಾಖೆ ದೃಢಪಡಿಸಿದೆ.

ಕ್ರಿ.ಶ. 345ರಲ್ಲಿ ಮಯೂರವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಬನವಾಸಿ ಕದಂಬರ ರಾಜಧಾನಿಯಾಗಿತ್ತು. ಮಯೂರವರ್ಮ 365ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ ಮುಂತಾದವರು ಕ್ರಿ.ಶ. 365-425ರವರೆಗೂ ಆಳ್ವಿಕೆ ನಡೆಸಿದ್ದರು. ಇದೇ ಅವಧಿಯಲ್ಲಿ ಶಾಸನ ಕೆತ್ತಿಸಲಾಗಿತ್ತು ಎಂಬುದು ಶಾಸನ ಶಾಸ್ತ್ರ ತಜ್ಞರ ಅನಿಸಿಕೆ.

Leave a Reply

Your email address will not be published. Required fields are marked *

error: Content Copyright protected !!