ಇಂದಿನ ಪ್ರಚಲಿತ ವಿದ್ಯಮಾನಗಳ ಹೈಲೈಟ್ಸ್ / 10-06-2021
# ಬಂಗಾಳಿ ಚಿತ್ರನಿರ್ದೇಶಕ, ಕವಿ ಬುದ್ಧದೇಬ್ ದಾಸ್ಗುಪ್ತ ನಿಧನ
ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದ ಹಿರಿಯ ಬಂಗಾಳಿ ಚಿತ್ರನಿರ್ದೇಶಕ ಮತ್ತು ಖ್ಯಾತ ಕವಿ ಬುದ್ಧದೇಬ್ ದಾಸ್ಗುಪ್ತ ನಿಧನರಾಗಿದ್ದಾರೆ.
ದಾಸ್ಗುಪ್ತ ಅವರ ಐದು ಸಿನಿಮಾಗಳಿಗೆ ಅತ್ಯುತ್ತಮ ಚಲನಚಿತ್ರಕ್ಕಾಗಿ ನೀಡುವ ನ್ಯಾಷನಲ್ ಫಿಲಂ ಅವಾರ್ಡ್ಗಳು ಲಭಿಸಿವೆ, ಎರಡು ಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಮೇ 2008 ರಲ್ಲಿ ಮ್ಯಾಡ್ರಿಡ್ನಲ್ಲಿ ನಡೆದ ಸ್ಪೈನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ನಲ್ಲಿ ಅವರಿಗೆ ಲೈಫ್ಟೈಮ್ ಅಚೀವ್ಮೆಂಟ್ ಅವಾರ್ಡ್ ಲಭಿಸಿತ್ತು. ಬಾಗ್ ಬಹದೂರ್, ಲಾಲ್ ದರ್ಜಾ, ಕಾಲ್ಪುರುಷ್ ಮತ್ತು ಮಿಥುನ್ ಚಕ್ರವರ್ತಿ ನಟಿಸಿದ ತಹದೆರ್ ಕಥಾ ಅವರು ನಿರ್ದೇಶಿಸಿದ ಜನಪ್ರಿಯ ಚಿತ್ರಗಳು.
# ಬಾಕ್ಸರ್ ಡಿಂಗ್ಕೊ ಸಿಂಗ್ ನಿಧನ :
ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್, 42 ವರ್ಷ ಪ್ರಾಯದ ಡಿಂಗ್ಕೋ ಸಿಂಗ್ ಅವರು ನಿಧನರಾಗಿದ್ದಾರೆ. ಭಾರತವನ್ನು ಪ್ರತಿನಿಧಿಸಿದ ಅದ್ಭುತ ಬಾಕ್ಸರ್ ಗಳಲ್ಲಿ ಡಿಂಗ್ಕೋ ಸಿಂಗ್ ಕೂಡಾ ಒಬ್ಬರು. 1998ರ ಬ್ಯಾಂಕಾಂಕ್ ಏಶ್ಯನ್ ಗೇಮ್ಸ್ ನಲ್ಲಿ ಜಯಿಸಿದ ಚಿನ್ನದ ಪದಕ ಮುಂದೆ ದೇಶದಲ್ಲಿ ಬಾಕ್ಸಿಂಗ್ ಪರಂಪರೆ ಮುಂದುವರಿಯಲು ದೊಡ್ಡ ಸಾಧನವಾಯಿತು. ಡಿಂಗ್ಕೋ ಸಿಂಗ್ ಅವರಿಗೆ 1998ರಲ್ಲಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತ್ತು. 2013ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ನೌಕಾಪಡೆಯಲ್ಲಿ ಉದ್ಯೋಗದಲ್ಲಿದ್ದ ಡಿಂಗ್ಕೊ ನಿವೃತ್ತಿಯ ನಂತರ ಕೋಚಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು.
# ಟೆಸ್ಟ್ ಆಲ್ರೌಂಡರ್ ರ್ಯಾಂಕಿಂಗ್ ನಲ್ಲಿ ರವೀಂದ್ರ ಜಡೇಜ ನಂ.2
ರವೀಂದ್ರ ಜಡೇಜ ಟೆಸ್ಟ್ ಆಲ್ರೌಂಡರ್ ರ್ಯಾಂಕಿಂಗ್ ಯಾದಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ. ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯಲ್ಲಿ ಜಡೇಜ ಇಂಗ್ಲೆಂಡಿನ ಸವ್ಯಸಾಚಿ ಬೆನ್ ಸ್ಟೋಕ್ಸ್ ಅವರನ್ನು ಮೀರಿ ನಿಂತರು. ರವೀಂದ್ರ ಜಡೇಜ-ಬೆನ್ ಸ್ಟೋಕ್ಸ್ ನಡುವೆ ವ್ಯತ್ಯಾಸವಿರುವುದು ಒಂದು ಅಂಕ ಮಾತ್ರ. ಜಡೇಜ 386 ಮತ್ತು ಸ್ಟೋಕ್ಸ್ 385 ಅಂಕ ಹೊಂದಿದ್ದಾರೆ. ವೆಸ್ಟ್ ಇಂಡೀಸಿನ ಜಾಸನ್ ಹೋಲ್ಡರ್ 423 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್ನ ಟಾಪ್-10 ಯಾದಿಯಲ್ಲಿ ಭಾರತದ ಮೂವರಿದ್ದಾರೆ. ರೋಹಿತ್ ಶರ್ಮ ಏಳಕ್ಕೆ ಏರಿ ಒಂದು ಸ್ಥಾನದ ಪ್ರಗತಿ ಸಾಧಿಸಿದ್ದಾರೆ. ವಿರಾಟ್ ಕೊಹ್ಲಿ 5ನೇ, ರಿಷಭ್ ಪಂತ್ 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕೇನ್ ವಿಲಿಯಮ್ಸನ್ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಬೌಲಿಂಗ್ ಯಾದಿಯ ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಕ್ರಿಕೆಟಿಗನೆಂದರೆ ಆರ್. ಅಶ್ವಿನ್. ಅವರು ದ್ವಿತೀಯ ಸ್ಥಾನಿಯಾಗಿದ್ದಾರೆ. ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
# ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷ ಶಹೀದ್ ಮುಖ್ಯಕಾರ್ಯದರ್ಶಿಯಾಗಿ ನಾಯ್ಡು ನೇಮಕ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚುನಾಯಿತ ಅಧ್ಯಕ್ಷ ಅಬ್ದುಲ್ಲಾ ಶಹೀದ್ ಅವರು, ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯ ಕಾಯಂ ಉಪಪ್ರತಿನಿಧಿಯಾಗಿರುವ ಕೆ.ನಾಗರಾಜ್ ನಾಯ್ಡು ಅವರನ್ನು ತಮ್ಮ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ. ‘ಥಿಲ್ಮೀಜಾ ಹುಸೇನ್ ಅವರನ್ನು ಸಾಮಾನ್ಯಸಭೆ ಅಧ್ಯಕ್ಷರ ವಿಶೇಷ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ’. ಹುಸೇನ್ ಅವರು ವಿಶ್ವಸಂಸ್ಥೆಯಲ್ಲಿ ಮಾಲ್ಡೀವ್ಸ್ನ ಕಾಯಂ ರಾಯಭಾರಿಯಾಗಿದ್ದಾರೆ.
ಶಹೀದ್ ಅವರು ಮಾಲ್ಡೀವ್ಸ್ನ ವಿದೇಶಾಂಗ ಸಚಿವರಾಗಿದ್ದು, ವಿಶ್ವಸಂಸ್ಥೆಯ ಮುಂದಿನ ಸಾಮಾನ್ಯಸಭೆಯ ಅಧ್ಯಕ್ಷ ಸ್ಥಾನಕ್ಕೆ ಜೂನ್ 7ರಂದು ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಸಾಮಾನ್ಯಸಭೆ ಸೆಪ್ಟೆಂಬರ್ನಲ್ಲಿ ನಡೆಯಲಿದೆ.
# ಮೀನುಗಾರಿಕಾ ದೋಣಿಗಳಲ್ಲಿ ಸರಕಾರಿ ಸಿಬ್ಬಂದಿ ನಿಯೋಜಿಸುವ ಆದೇಶ ಹಿಂಪಡೆದ ಲಕ್ಷದ್ವೀಪ ಆಡಳಿತ
ನೌಕರರು ಹಾಗೂ ಸ್ಥಳೀಯರಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗುಪ್ತಚರ ಮಾಹಿತಿ ಸಂಗ್ರಹಕ್ಕಾಗಿ ಸರಕಾರಿ ಅಧಿಕಾರಿಗಳನ್ನು ಮೀನುಗಾರಿಕಾ ದೋಣಿಗಳಲ್ಲಿ ನಿಯೋಜಿಸುವ ಆದೇಶವನ್ನು ಲಕ್ಷದ್ವೀಪ ಆಡಳಿತ ಹಿಂತೆಗೆದುಕೊಂಡಿದೆ. ಹಡಗುಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಆದೇಶವನ್ನು ಕೂಡ ಹಿಂಪಡೆಯಲಾಗಿದೆ.
ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಪ್ರಸ್ತಾವಿಸಿರುವ “ಸುಧಾರಣೆಗಳ” ವಿರುದ್ಧ ದ್ವೀಪವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾಗಲೇ ಲಕ್ಷದ್ವೀಪ ಆಡಳಿತವು ಗುಪ್ತಚರ ಮಾಹಿತಿ ಸಂಗ್ರಹಣೆಗಾಗಿ ಸ್ಥಳೀಯ ಮೀನುಗಾರಿಕಾ ದೋಣಿಗಳಲ್ಲಿ ಸರಕಾರಿ ಅಧಿಕಾರಿಗಳನ್ನು ನಿಯೋಜಿಸುವುದು ಸೇರಿದಂತೆ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿತ್ತು.
ಮೇ 28 ರಂದು, ಆಡಳಿತಾಧಿಕಾರಿಗಳ ಪ್ರಧಾನ ಕಾರ್ಯದರ್ಶಿ ಹಾಗೂ ಸಲಹೆಗಾರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜವಾಬ್ದಾರಿಯುತ ಸರಕಾರಿ ನೌಕರರನ್ನು ಸ್ಥಳೀಯ ಮೀನುಗಾರಿಕಾ ದೋಣಿಗಳಲ್ಲಿ ಗುಪ್ತಚರ ಸಂಗ್ರಹಣೆಗಾಗಿ ನಿಯೋಜಿಸಲು ನಿರ್ಧರಿಸಿತ್ತು.
# ಪ್ರತಿ ಇಬ್ಬರಲ್ಲಿ ಒಬ್ಬ ಭಾರತೀಯ ತಾರತಮ್ಯಕ್ಕೆ ಒಳಗಾಗುತ್ತಿದ್ದಾನೆ : ಸಮೀಕ್ಷೆ
ಅಮೆರಿಕದಲ್ಲಿ ಎರಡನೇ ಅತಿ ದೊಡ್ಡ ವಲಸಿಗ ಗುಂಪಾಗಿರುವ ಭಾರತೀಯ ಅಮೆರಿಕನ್ನರು ನಿಯಮಿತವಾಗಿ ತಾರತಮ್ಯ ಮತ್ತು ಧ್ರುವೀಕರಣವನ್ನು ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಕಾರ್ನೆಜೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಶನಲ್ ಪೀಸ್, ಜಾನ್ಸ್ ಹಾಪ್ಕಿನ್ಸ್-ಎಸ್ಎಐಎಸ್ ಮತ್ತು ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯಗಳು ಜಂಟಿಯಾಗಿ ನಡೆಸಿದ ಇಂಡಿಯನ್-ಅಮೆರಿಕನ್ ಆಯಟಿಟ್ಯೂಡ್ಸ್ ಸರ್ವೆ (ಐಎಎಎಸ್)ಯ ವರದಿಯು ಈ ಅಭಿಪ್ರಾಯಕ್ಕೆ ಬಂದಿದೆ. ಈ ಸಮೀಕ್ಷೆಯ ವೇಳೆ, 1,200 ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ-ಅಮೆರಿಕನ್ನರನ್ನು ಆನ್ಲೈನ್ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮೀಕ್ಷೆಯನ್ನು2020 ಸೆಪ್ಟಂಬರ್ 1ರಿಂದ 20ರವರೆಗೆ ನಡೆಸಲಾಗಿತ್ತು.