ವೇದಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ವೇದಗಳು ಪ್ರಾಚೀನ ಭಾರತದ ಸಾಹಿತ್ಯ. ಇವು ವೇದ ಕಾಲದ ಸಂಸ್ಕೃತ ಭಾಷೆಯಲ್ಲಿ ರಚಿಸಲ್ಪಟ್ಟಿದ್ದು, ಹಿಂದೂ ಧರ್ಮದ ಅತ್ಯಂತ ಪ್ರಾಚೀನ ಧರ್ಮಗ್ರಂಥಗಳಾಗಿವೆ. ಪ್ರಪಂಚದ ಅತ್ಯಂತ ಪುರಾತನ ಗ್ರಂಥಗಳಲ್ಲಿ ವೇದಗಳು ಮುಖ್ಯವಾದುವು. ವೇದಗಳು ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಮುಖ ಗ್ರಂಥಗಳು. ವೇದಗಳು ನಾಲ್ಕು – ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ. ಈ ನಾಲ್ಕು ವೇದಗಳಲ್ಲಿ ಋಗ್ವೇದವೇ ಅತ್ಯಂತ ಹಳೆಯದು.
# ಉಗಮ :
ಹಿ೦ದೂ ಸ೦ಪ್ರದಾಯದ೦ತೆ ವೇದಗಳು ಅಪೌರುಷೇಯವಾದವು, ಎ೦ದೆ೦ದಿಗೂ ಅಸ್ತಿತ್ವದಲ್ಲಿ ಇದ್ದಿರುವ೦ಥವು. ಹೀಗೆ ಅವು ಹಿ೦ದೂ ಶ್ರುತಿ ಪಠ್ಯಗಳ ಗು೦ಪಿಗೆ ಸೇರುತ್ತವೆ. ಚಾರಿತ್ರಿಕವಾಗಿ, ವೇದಗಳ ಉಗಮದ ಕಾಲ ಮತ್ತು ಸ್ಥಳ ಭಾರತೀಯ ಹಾಗೂ ಪಾಶ್ಚಾತ್ಯ ಚರಿತ್ರಜ್ಞರಿ೦ದ ಬಹಳಷ್ಟು ಸಿದ್ಧಾ೦ತಗಳನ್ನು ಕ೦ಡಿವೆ. ಫಿಷರ್ ಮೊದಲಾದ ಚರಿತ್ರಜ್ಞರು ವೇದಗಳು ೮೦೦೦ ವರ್ಷಗಳಿ೦ದಲೂ ಅಸ್ತಿತ್ವದಲ್ಲಿದ್ದಿವೆ ಎ೦ದು ಅಭಿಪ್ರಾಯಪಟ್ಟಿದ್ದರೂ, ಬಹುಪಾಲು ಚರಿತ್ರಜ್ಞರ ಅಭಿಪ್ರಾಯದ೦ತೆ ವೇದಗಳ ಸ೦ಕಲನ ಸುಮಾರು ಕ್ರಿ.ಪೂ 1800 ಕ್ಕೆ ಪ್ರಾರ೦ಭವಾಗಿ ಕ್ರಿ.ಪೂ 800 ರ ವರೆಗೆ ಎ೦ದು.
ಸಾ೦ಪ್ರದಾಯಿಕವಾಗಿ, ಋಗ್ವೇದ ಸ೦ಹಿತೆಯ ಸ೦ಕಲನ ವೇದವ್ಯಾಸರ ಸೂಚನೆಯ೦ತೆ ಪೈಲ ಮಹರ್ಷಿಗಳಿ೦ದ ನಡೆಯಿತ೦ತೆ. ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಬಳಸಲ್ಪಡುವ ಮ೦ತ್ರಗಳ ಸ೦ಕಲನ ಯಜುರ್ವೇದ ಸ೦ಹಿತೆಯಾಗಿ ಬೆಳೆಯಿತು. ಸ೦ಗೀತಕ್ಕೆ ಹೊ೦ದುವ೦ತೆ ಬರೆಯಲಾದ ಅನೇಕ ಮ೦ತ್ರಗಳ ಸ೦ಕಲನ ಸಾಮವೇದ – ನಾಲ್ಕು ವೇದಗಳಲ್ಲಿ ಕೊನೆಯದು ಅಥರ್ವವೇದ. ಅಥರ್ವವು ಯಂತ್ರ,ತಂತ್ರಗಳ ಬಗ್ಗೆ ವಿವರಗಳನ್ನೊಳಗೊಂಡಿದೆ. ಪ್ರತಿ ವೇದಕ್ಕೂ ಒಂದು ಉಪವೇದವಿದೆ.
# ಋಗ್ವೇದ
ನಾಲ್ಕು ವೇದಗಳಲ್ಲಿ ಮೊದಲನೆಯದು.ಚತುರ್ಮುಖ ಬ್ರಹ್ಮನ ಪೂರ್ವಮುಖದಿಂದ ಹೊರಬಂದಿದೆ. ಈ ವೇದದ ಮಂತ್ರಗಳನ್ನು ಯಜ್ಞ,ಯಾಗಾದಿಗಳನ್ನು ಮಾಡುವಾಗ, ದೇವತೆಗಳನ್ನು ಆಹ್ವಾನಿಸಲು ಉಪಯೋಗಿಸುತ್ತಾರೆ. ಯಜ್ಞದಲ್ಲಿ ಋಗ್ವೇದ ಮಂತ್ರಗಳನ್ನು ಪಠಿಸುವವರಿಗೆ “ಹೋತೃ”ವೆಂದು ಕರೆಯುತ್ತಾರೆ. ಋಗ್ವೇದದಲ್ಲಿ ಅನೇಕ ಶಾಖೆಗಳಿವೆ. ಆಯುರ್ವೇದ ಇದರ ಉಪವೇದ.
# ಯಜುರ್ವೇದ
ಯಜುರ್ವೇದನಾಲ್ಕು ವೇದಗಳಲ್ಲಿ ಎರಡನೆಯದು.ಯಜ್ಞಯಾಗಾದಿಗಳ ವಿವರವಾದ ಕ್ರಮ ವಿವರಣೆಗಳು ಸೇರಿದೆ. ಇದರಲ್ಲಿ 40 ಅಧ್ಯಾಯಗಳಿವೆ. ಯಜುರ್ವೇದದಲ್ಲಿ ಎರಡು ವಿಧಗಳಿದ್ದು ಕೃಷ್ಣ ಯಜುರ್ವೇದ ಹಾಗೂ ಶುಕ್ಲ ಯಜುರ್ವೇದಗಳೆಂದು ಹೆಸರು. ಕೃಷ್ಣಯಜುರ್ವೇದಕ್ಕೆ ತೈತ್ತೀರಿಯ ಸಂಹಿತೆ ಎಂದೂ ಶುಕ್ಲಯಜುರ್ವೇದಕ್ಕೆ ವಾಜಸನೇಯ ಸಂಹಿತೆ ಎಂದೂ ಹೆಸರಿದೆ. ಧನುರ್ವೇದ ಇದರ ಉಪವೇದ.
# ಸಾಮವೇದ
ಸಾಮವೇದ ಮಂತ್ರಗಳನ್ನು ಸ್ವರ ಸಂಯೋಜನೆ ಮಾಡಿ ಹಾಡುವುದಕ್ಕೆ ಸಾಮ ಎಂದು ಹೇಳುತ್ತಾರೆ. ಸಾಮವೇದವು ಗಾನರೂಪವಾಗಿ ಹಾಡುವ ಮಂತ್ರಗಳಿಂದ ಕೂಡಿದ ವೇದವಾಗಿದೆ. ದೇವತೆಗಳನ್ನು ಸ್ತುತಿಸುವ ಮಂತ್ರಗಳು ಇದರಲ್ಲಿ ಸೇರಿದ್ದು ಎಲ್ಲವನ್ನೂ ಸ್ವರಲಯಸಹಿತ ಛಂದೋಬದ್ದವಾಗಿ ಹೇಳಬೇಕಾಗಿದೆ. ಈ ವೇದದಲ್ಲಿ ಋಗ್ವೇದದ ಮಂತ್ರಗಳೇ ಹೆಚ್ಚು ಇದ್ದು ಹೆಚ್ಚು ಕಡಿಮೆ 78 ಮಂತ್ರಗಳು ಮಾತ್ರ ಹೊಸತಾಗಿವೆ. ಇದರಲ್ಲಿ 15 ಭಾಗಗಳಿದ್ದು 32 ಅಧ್ಯಾಯಗಳಿವೆ. ಗಾಂಧರ್ವವೇದ ಇದರ ಉಪವೇದ.
# ಅಥರ್ವವೇದ
ಅಥರ್ವವೇದಹಿಂದೂ ಧರ್ಮದ ನಾಲ್ಕು ವೇದಗಳಲ್ಲಿ ಕೊನೆಯದು. ಅಥರ್ವಣ ಅಂಗೀರಸ ಋಷಿಗಳು ರಚಿಸಿದ ಮಂತ್ರಗಳಿಂದ ಕೂಡಿದ ವೇದವಾದುದರಿಂದ ಈ ಹೆಸೆರು. ಇದರಲ್ಲಿ 20 ಕಾಂಡಗಳೂ, 760 ಸೂಕ್ತಗಳೂ, 6000 ಮಂತ್ರಗಳೂ ಇವೆ. ಗದ್ಯ ಹಾಗೂ ಪದ್ಯ ಎರಡೂ ಶೈಲಿಯಲ್ಲಿ ರಚಿತವಾಗಿದೆ. ಈ ವೇದದಲ್ಲಿ ವಿವಾಹ ಪದ್ಧತಿ, ಶವಸಂಸ್ಕಾರ, ಗೃಹನಿರ್ಮಾಣ ಮುಂತಾದ ಜನರ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ವಿಚಾರಗಳು ಕೂಡಾ ಸೇರಿಕೊಂಡಿದೆ.ಮಾಟ ಮಂತ್ರ,ಯಕ್ಷಿಣಿವಿದ್ಯೆ,ಇಂದ್ರಜಾಲ ಮುಂತಾದವುಗಳೂ ವಿಸ್ತಾರವಾಗಿ ಪ್ರಸ್ತಾಪಿಸಲ್ಪಟ್ಟಿದೆ. ಧನುರ್ವಿದ್ಯೆ, ರೋಗನಿವಾರಣೋಪಾಯ, ಔಷಧಿಗಳ ವಿವರ ಕೂಡಾ ಇದರಲ್ಲಿದೆ.ಯಜ್ಞಯಾಗಾದಿಗಳನ್ನು ನಿರ್ವಹಿಸುವ ಕ್ರಮದ ವಿವರಗಳೂ ಸೇರಿದೆ.
# ಆಯುರ್ವೇದ
ಆಯುರ್ವೇದ (ಸಂಸ್ಕೃತ: आयुर्वेद, ಆಯು—ಆಯಸ್ಸು; ವೇದ—ಜ್ಞಾನ) 2000 ವರ್ಷಗಳಿಗೂ ಹೆಚ್ಚು ಹಳೆಯದಾದ ಔಷಧ ಪದ್ಧತಿ. ವೇದಗಳಲ್ಲಿ ಮೂಡಿಬರುವ ಈ ಪದ್ಧತಿಯಲ್ಲಿ ಸರ್ವ ರೋಗಗಳಿಗೂ ಔಷಧಿಗಳಿವೆ. ಹಿಂದೂ ಸಂಪ್ರದಾಯಕ್ಕೆ ಹೊಂದಿಕೊಂಡಂತಿರುವ ಈ ಪದ್ಧತಿ ಪ್ರಾಚೀನ ಭಾರತದಿಂದ ಬೆಳೆದು ಬಂದದ್ದು.ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆಯೂ ಉಂಟು.
ಚರಕ ಸಂಹಿತ, ಶುಶ್ರುತ ಸಂಹಿತ ಇವೇ ಮೊದಲಾದ ಪ್ರಾಚೀನ ಗ್ರಂಥಗಳು ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಆಯುರ್ವೇದದಲ್ಲಿ ಔಷಧ – ಭೂಮಿಯಲ್ಲಿ ದೊರಕುವ ಸಸ್ಯಗಳು. ಸಾಮಾನ್ಯವಾಗಿ ಹಲವು ಔಷದ ಸಸ್ಯಗಳ ಮಿಶ್ರಣದಿಂದ ತಯಾರಿಸಿದ ಔಷಧವನ್ನು ರೋಗಗಳ ನಿವಾರಣೆ ಹಾಗೂ ಚಿಕಿತ್ಸೆಗಳಿಗಾಗಿ ಬಳಸಲಾಗುತ್ತದೆ.