Current AffairsSpardha Times

2023ರಲ್ಲಿ ಜಗತ್ತಿನಲ್ಲಿ ನಡೆದ ಪ್ರಮುಖ ಘಟನೆಗಳ ಹಿನ್ನೋಟ

Share With Friends

ಪ್ರಸಕ್ತ ವರ್ಷ 2023 ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ವರ್ಷ ಟರ್ಕಿಯ ಭೂಕಂಪದಿಂದ ಪ್ರಾರಂಭವಾಗಿ ಇಸ್ರೇಲ್-ಹಮಾಸ್ ಯುದ್ಧದೊಂದಿಗೆ ಕೊನೆಗೊಳ್ಳುತ್ತಿದೆ. 2023 ರ ಆರಂಭಿಕ ತಿಂಗಳುಗಳಲ್ಲಿ ಫೆಬ್ರವರಿಯಲ್ಲಿ, ಟರ್ಕಿಯು ಬಲವಾದ ಭೂಕಂಪದಿಂದ ನಡುಗಿತು. ಈ ಭೂಕಂಪದ ತೀವ್ರತೆ 7.5 ಆಗಿದ್ದು, ಇಡೀ ವಿಶ್ವವೇ ಆತಂಕಕ್ಕೆ ಒಳಗಾಗಿತ್ತು. ಈ ಅವಧಿಯಲ್ಲಿ, ಸುಮಾರು 55 ಸಾವಿರ ಜನರು ಸಾವನ್ನಪ್ಪಿದರು ಮತ್ತು 1 ಲಕ್ಷಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು.

ರಷ್ಯಾ-ಉಕ್ರೇನ್ ಯುದ್ಧವು ಫೆಬ್ರವರಿ 24, 2022 ರಂದು ಪ್ರಾರಂಭವಾದರೂ, ಯುದ್ಧವು ಎಳೆಯುತ್ತಲೇ ಇತ್ತು. 2023 ರಲ್ಲಿ ಅದು ಒಂದು ವರ್ಷವನ್ನು ಪೂರ್ಣಗೊಳಿಸಿತು. ಈ ಅವಧಿಯಲ್ಲಿ, ರಷ್ಯಾ ಮತ್ತು ಉಕ್ರೇನ್‌ನ ಲಕ್ಷಾಂತರ ಸೈನಿಕರು ಸಾವನ್ನಪ್ಪಿದರು ಮತ್ತು ಅನೇಕ ಜನರು ಗಾಯಗೊಂಡರು. ಸದ್ಯದ ಪರಿಸ್ಥಿತಿ ನೋಡಿದರೆ ರಷ್ಯಾ-ಉಕ್ರೇನ್ ಯುದ್ಧ ಮುಗಿಯುವ ಹಂತದಲ್ಲಿಲ್ಲ ಎಂದು ಅನಿಸುತ್ತಿದೆ.

ವರ್ಷದ ಕೊನೆಯ ಕ್ಷಣದಲ್ಲಿ, ಅಕ್ಟೋಬರ್ 7 ರಂದು, ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿತು. ಇದರ ನಂತರ, ಇಸ್ರೇಲ್ ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ವಿರುದ್ಧ ಯುದ್ಧ ಘೋಷಿಸಿತು. ಈ ಅವಧಿಯಲ್ಲಿ, ಗಾಜಾ ಪಟ್ಟಿಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಆದರೆ ನೂರಾರು ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ವಶಪಡಿಸಿಕೊಂಡಿದೆ.

ಸುಡಾನ್ ಸಶಸ್ತ್ರ ಪಡೆಗಳು (SFA) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವಿನ ಹಿಂಸಾತ್ಮಕ ಸಂಘರ್ಷವು ಏಪ್ರಿಲ್ 15, 2023 ರಂದು ಪ್ರಾರಂಭವಾಯಿತು. ಈ ಅವಧಿಯಲ್ಲಿ, RSF ಸುಡಾನ್‌ನ ಅನೇಕ ಸರ್ಕಾರಿ ಸೈಟ್‌ಗಳ ಮೇಲೆ ದಾಳಿ ಮಾಡಿತು, ಇದು ಖಾರ್ಟೂಮ್ ಮತ್ತು ಡಾರ್ಫರ್‌ನಲ್ಲಿ ತೀವ್ರವಾದ ಹೋರಾಟಕ್ಕೆ ಕಾರಣವಾಯಿತು. 2019 ರಲ್ಲಿ, ಎಸ್‌ಎಫ್‌ಎ ಮತ್ತು ಆರ್‌ಎಸ್‌ಎಫ್ ಒಮರ್ ಅಲ್-ಬಶೀರ್ ಅವರನ್ನು ಅಧಿಕಾರದಿಂದ ಹೊರಹಾಕಲು ಪ್ರತಿಜ್ಞೆ ಮಾಡಿದ್ದವು. ಆದರೆ, ನಂತರ ತಮ್ಮ ತಮ್ಮಲ್ಲೇ ಜಗಳ ಆರಂಭಿಸಿದರು. ಈ ಅವಧಿಯಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಆಪರೇಷನ್ ಕಾವೇರಿಯ ಸಹಾಯದಿಂದ ಭಾರತ ಸರ್ಕಾರವು ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ 3862 ನಾಗರಿಕರನ್ನು ದೇಶದಿಂದ ಸ್ಥಳಾಂತರಿಸಿತು.

ಪ್ರಿನ್ಸ್ ಆಫ್ ವೇಲ್ಸ್ ಚಾರ್ಲ್ಸ್, ಮೇ 6, 2023 ರಂದು ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಯುನೈಟೆಡ್ ಕಿಂಗ್‌ಡಂನ ರಾಜನಾಗಿ ಅಧಿಕಾರ ಸ್ವೀಕರಿಸಿದರು. ಸೆಪ್ಟೆಂಬರ್ 2022 ರಲ್ಲಿ ರಾಣಿ ಎಲಿಜಬೆತ್ II ರ ಮರಣದ ನಂತರ ಪ್ರಿನ್ಸ್ ಆಫ್ ವೇಲ್ಸ್ ಚಾರ್ಲ್ಸ್ ಅಧಿಕಾರ ಸ್ವೀಕರಿಸಿದರು. ಭಾರತದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಿದ್ದರು. ಈ ಪಟ್ಟಾಭಿಷೇಕ ಸಮಾರಂಭಕ್ಕೆ ಪ್ರಪಂಚದಾದ್ಯಂತದ ಜನರನ್ನು ಆಹ್ವಾನಿಸಲಾಯಿತು.

ಓಷಿಯಾಂಗೇಟ್ ಎಕ್ಸ್‌ಪೆಡಿಶನ್ಸ್‌ನಿಂದ ನಿರ್ವಹಿಸಲ್ಪಡುವ ಸಬ್‌ಮರ್ಸಿಬಲ್ ಟೈಟಾನ್, ಜೂನ್ 18, 2023 ರಂದು ಟೈಟಾನಿಕ್ ಅವಶೇಷದಿಂದ ಡೈವ್ ಮಾಡುವಾಗ ಸಂಪರ್ಕವನ್ನು ಕಳೆದುಕೊಂಡಿತು. ನಂತರದ ನಾಲ್ಕು ದಿನಗಳ ಕಾಲ ಇಡೀ ಜಗತ್ತು ಈ ಘಟನೆಯ ಬಗ್ಗೆ ಚಿಂತಿತವಾಗಿತ್ತು. ಆದರೆ, ನಾಲ್ಕು ದಿನಗಳ ನಂತರ ಸಬ್‌ಮರ್ಸಿಬಲ್ ಟೈಟಾನ್‌ನ ಅವಶೇಷಗಳನ್ನು ಕಂಡುಹಿಡಿಯಲಾಯಿತು ಮತ್ತು ಸಬ್‌ಮರ್ಸಿಬಲ್ ಹಡಗಿನಲ್ಲಿದ್ದ ಎಲ್ಲಾ ಐದು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಯಿತು.

2023ರಲ್ಲಿ ಭಾರತದಲ್ಲಿ ನಡೆದ ಟಾಪ್ 10 ರಾಜಕೀಯ ಘಟನೆಗಳು: 2023ರಲ್ಲಿ ಜಗತ್ತಿನಲ್ಲಿ ನಡೆದ ಪ್ರಮುಖ ಘಟನೆಗಳ ಹಿನ್ನೋಟ

ಉತ್ತರ ಕೊರಿಯಾದ ನಾಯಕ ಮತ್ತು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸೆಪ್ಟೆಂಬರ್ 2023 ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಆತಿಥ್ಯ ನೀಡಿದರು. ಇಬ್ಬರೂ ತಮ್ಮ ಸ್ನೇಹವನ್ನು ಜಗತ್ತಿಗೆ ತೋರಿಸಿದರು. ಈ ಸಮಯದಲ್ಲಿ, ಉಕ್ರೇನ್ ಯುದ್ಧಕ್ಕಾಗಿ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದಾಗಿ ಉತ್ತರ ಕೊರಿಯಾ ಭರವಸೆ ನೀಡಿತು, ಇದಕ್ಕೆ ಪ್ರತಿಯಾಗಿ ರಷ್ಯಾ ಬಾಹ್ಯಾಕಾಶ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಭರವಸೆ ನೀಡಿತು.

ವಿಶ್ವ ಮಟ್ಟದಲ್ಲಿ 2023ರಲ್ಲಿ ಸದ್ದು ಮಾಡಿದ ಘಟನೆಗಳು :
​1.ವಿಶ್ವದ ಹಲವು ದೇಶಗಳಲ್ಲಿ ಭಾರತ ವಿರೋಧಿಗಳ ಹತ್ಯೆ
ಭಾರತ ವಿರೋಧಿ ಉಗ್ರರ ಹತ್ಯೆ ವಿಚಾರ 2023ನೇ ವರ್ಷವಿಡೀ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದೆ. ಈವರೆಗೆ 21 ಉಗ್ರರನ್ನು ಹಲವು ದೇಶಗಳಲ್ಲಿ ಹತ್ಯೆ ಮಾಡಲಾಗಿದೆ. ಅದರಲ್ಲು ಪಾಕಿಸ್ತಾನ ದೇಶವೊಂದರಲ್ಲೇ ಹತ್ತಾರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕೆಲವರಿಗೆ ವಿಷ ಪ್ರಾಷನ ಮಾಡಲಾಗಿದ್ದು, ಇನ್ನೂ ಕೆಲವರು ನಿಗೂಢ ರೀತಿಯಲ್ಲಿ ಹತ್ಯೆಗೀಡಾಗಿದ್ದಾರೆ. ಲಷ್ಕರ್ – ಇ – ತೊಯ್ಬಾ, ಜೈಶ್ ಎ ಮೊಹಮ್ಮದ್ ಸೇರಿದಂತೆ ಹಲವು ಉಗ್ರ ಸಂಘಟನೆಗಳ ನಾಯಕರನ್ನೇ ಗುರಿಯಾಗಿಸಿ ‘ಟಾರ್ಗೆಟ್ ಕಿಲ್ಲಿಂಗ್’ ನಡೆದಿದೆ.

ಮುಂಬೈ ದಾಳಿ, ಪಠಾಣ್‌ಕೋಟ್ ದಾಳಿ, ಉರಿ, ಪುಲ್ವಾಮಾ ದಾಳಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ಸೇರಿದಂತೆ ಹಲವು ಉಗ್ರ ಕೃತ್ಯಗಳಿಗೆ ಸಂಚು ರೂಪಿಸಿದ್ದ ಭಯೋತ್ಪಾದಕ ಸಂಘಟನೆಗಳ ನಾಯಕರು ಹತರಾಗಿದ್ದಾರೆ. ಇವರೆಲ್ಲರೂ ಭಾರತಕ್ಕೆ ಬೇಕಿರುವ ಮೋಸ್ಟ್‌ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಇದ್ದರು ಅನ್ನೋದು ಗಮನಾರ್ಹ ವಿಚಾರ. ಇವರಲ್ಲದೆ, ಕೆನಡಾದಲ್ಲೂ ಖಲಿಸ್ತಾನ್ ಭಯೋತ್ಪಾದಕರ ಹತ್ಯೆಯಾಗಿದೆ. ಬ್ರಿಟನ್‌ನಲ್ಲಿ ಓರ್ವ ಉಗ್ರ ಸಂಶಯಾಸ್ಪದ ರೀತಿಯಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಉಗ್ರರನ್ನು ಯಾರು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದ್ದಾರೆ ಅನ್ನೋದು ಈವರೆಗೆ ಗೊತ್ತಾಗಿಲ್ಲ. ಉಗ್ರರು ಜೈಲಿನಲ್ಲಿ ಇದ್ದರೂ ಸೇಫ್ ಆಗಿಲ್ಲ! ಹೀಗಾಗಿ, ಪಾಕಿಸ್ತಾನದಲ್ಲಿ ಉಗ್ರರಿಗೆ ಐಎಸ್‌ಐ ಹಾಗೂ ಪಾಕ್ ಸೇನೆ ಭಾರೀ ರಕ್ಷಣಾ ವ್ಯವಸ್ಥೆ ಕಲ್ಪಿಸಿದೆ.

​2.ಖಲಿಸ್ತಾನ್ ವಿಚಾರವಾಗಿ ಭಾರತದ ಜೊತೆ ಕೆನಡಾ, ಅಮೆರಿಕ ಗುದ್ದಾಟ
ಕೆನಡಾದ ಗುರುದ್ವಾರ ಒಂದರ ಹೊರಗೆ ಖಲಿಸ್ತಾನ್ ಉಗ್ರ ಸಂಘಟನೆ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿತ್ತು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ರೀತಿಯಲ್ಲೇ ಕೆನಡಾದಲ್ಲಿ ಅನಾಮಿಕ ಬಂದೂಕುಧಾರಿಗಳು ಬೈಕ್‌ನಲ್ಲಿ ಬಂದು ನಿಜ್ಜರ್‌ನನ್ನು ಹತ್ಯೆ ಮಾಡಿದ್ದರು. ಈ ವಿಚಾರ ಸಂಬಂಧ ಭಾರತದ ವಿರುದ್ಧ ನೇರ ಆರೋಪ ಮಾಡಿದ್ದ ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಟ್ರೂಡೋ, ಭಾರತದ ವಿರುದ್ಧ ರಾಜತಾಂತ್ರಿಕ ಸಮರಕ್ಕೆ ಕಾರಣರಾಗಿದ್ದರು. ನಿರಾಧಾರವಾಗಿ ಭಾರತದ ವಿರುದ್ಧ ಆರೋಪ ಮಾಡಿದ್ದ ಕೆನಡಾ ವಿರುದ್ಧ ರಾಜತಾಂತ್ರಿಕವಾಗಿ ಹೋರಾಟ ನಡೆಸಿದ್ದ ಭಾರತ, ದಿಲ್ಲಿಯಲ್ಲಿ ಇರುವ ಕೆನಡಾ ದೂತಾವಾಸ ಕಚೇರಿ ಸಿಬ್ಬಂದಿಯನ್ನು ಭಾರತ ಬಿಟ್ಟು ಹೋಗುವಂತೆ ಮಾಡಿತ್ತು. ವೀಸಾ ಕಾರ್ಯಾಚರಣೆ ಕೂಡಾ ಸ್ಥಗಿತಗೊಂಡಿತ್ತು. ಇದೀಗ ನಿಧಾನವಾಗಿ ಪುನಾರಂಭವಾಗುತ್ತಿದೆ.

ಇನ್ನೊಂದೆಡೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಖಲಿಸ್ತಾನ್ ಉಗ್ರ ಸಂಘಟನೆ ನಾಯಕ ಪರಂ ಜಿತ್ ಪನ್ನು ಹತ್ಯೆಗೆ ಯತ್ನ ನಡೆದಿತ್ತು. ಇದಕ್ಕೆ ಭಾರತವೇ ಕಾರಣ ಎಂದು ಅಮೆರಿಕ ನೇರ ಆರೋಪ ಮಾಡಿತ್ತು. ಈ ಆರೋಪ ಸಂಬಂಧ ಭಾರತೀಯ ಮೂಲಕ ನಿಖಿಲ್ ಗುಪ್ತಾ ಎಂಬಾತನನ್ನು ಬಂಧಿಸಿದ್ದ ಅಮೆರಿಕ, ಈತನಿಗೆ ಭಾರತ ಸರ್ಕಾರದ ಅಧಿಕಾರಿಯೇ ಪನ್ನು ಹತ್ಯೆಗೆ ಸೂಚನೆ ನೀಡಿದ್ದ ಎಂದೂ ಆರೋಪಿಸಿದೆ. ಈ ವಿಚಾರ ಇನ್ನೂ ತನಿಖೆ ಹಂತದಲ್ಲಿದೆ. ಆದರೆ, ಭಾರತ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದೆ.

​3.ಇಸ್ರೇಲ್ – ಹಮಾಸ್ ಯುದ್ಧ
ಅಕ್ಟೋಬರ್ 7 ರಂದು ಪ್ಯಾಲಿಸ್ತೀನ್‌ನ ಭಾಗವಾದ ಗಾಜಾ ಪಟ್ಟಿಯಿಂದ ಸಾವಿರಾರು ಸಂಖ್ಯೆಯ ಹಮಾಸ್ ಉಗ್ರ ಸಂಘಟನೆಯ ಭಯೋತ್ಪಾದಕರು ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದರು. ನೆಲ, ಜಲ ಹಾಗೂ ವಾಯು ಮಾರ್ಗವಾಗಿ ಏಕಕಾಲಕ್ಕೆ ದಾಳಿ ನಡೆಸಿದ್ದ ಉಗ್ರರು ಇಸ್ರೇಲ್‌ನಲ್ಲಿ ಸಾವಿರಾರು ಜನರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಗಾಜಾ ಪಟ್ಟಿಯಿಂದ ಕೇವಲ 20 ನಿಮಿಷಗಳ ಅಂತರದಲ್ಲಿ 5 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳ ದಾಳಿ ನಡೆಸಿದ್ದರು. ಹೀಗಾಗಿ, ಇಸ್ರೇಲ್ ಸೇನೆಯ ಪ್ರಖ್ಯಾತ ಕ್ಷಿಪಣಿ ನಿರೋಧಕ ವ್ಯವಸ್ಥೆ ಐರನ್ ಡೋಮ್ ಕೂಡಾ ಸೋತು ಹೋಗಿತ್ತು. ದಾಳಿ ಬಳಿಕ ಹಮಾಸ್ ಉಗ್ರರು ನೂರಾರು ಇಸ್ರೇಲಿಗರು ಹಾಗೂ ವಿದೇಶಿಗರನ್ನು ಗಾಜಾ ಪಟ್ಟಿಗೆ ಕರೆದೊಯ್ದು, ಅಲ್ಲಿನ ಸುರಂಗಗಳಲ್ಲಿ ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದರು.

ಕೂಡಲೇ ಪ್ರತಿ ದಾಳಿ ಆರಂಭಿಸಿದ ಇಸ್ರೇಲ್ ವಾಯು ಪಡೆ, ನಿರಂತರವಾಗಿ ಬಾಂಬ್ ದಾಳಿ ನಡೆಸಿ, ಗಾಜಾ ಪಟ್ಟಿಯನ್ನು ನೆಲ ಸಮ ಮಾಡಿದೆ. ಇಸ್ರೇಲ್ ಭೂ ಸೇನೆ ಟ್ಯಾಂಕರ್‌ಗಳೂ ಕೂಡಾ ಗಾಜಾ ಪಟ್ಟಿಯಲ್ಲಿ ಹಮಾಸ್ ನೆಲೆಗಳನ್ನು ಧ್ವಂಸ ಮಾಡಿವೆ. ಈ ಮಧ್ಯೆ ನಾಲ್ಕೈದು ದಿನಗಳ ಕಾಲ ಕದನ ವಿರಾಮ ಘೋಷಣೆ ಮಾಡಿದ್ದ ಇಸ್ರೇಲ್, ಗಾಜಾ ಪಟ್ಟಿಯ ಜನತೆಗೆ ಪರಿಹಾರ ಸಾಮಗ್ರಿ ವಿತರಿಸಿತ್ತು. ಹಮಾಸ್‌ನ ಕೆಲವು ನಾಯಕರನ್ನೂ ಜೈಲಿನಿಂದ ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಹಮಾಸ್ ಉಗ್ರರ ಒತ್ತೆಯಲ್ಲಿದ್ದ ಇಸ್ರೇಲಿಗರು ಹಾಗೂ ವಿದೇಶೀಯರನ್ನು ಬಿಡುಗಡೆ ಮಾಡಲಾಗಿತ್ತು. ಬಳಿಕ ಯುದ್ಧ ಮತ್ತೆ ಆರಂಭವಾಯ್ತು. ಇದೀಗ ಇಸ್ರೇಲ್ ಸೇನೆ ಹಮಾಸ್‌ ಉಗ್ರ ಸಂಘಟನೆಯನ್ನು ನಿರ್ನಾಮ ಮಾಡುವ ಶಪಥದೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ.

​4.ರಷ್ಯಾ – ಉಕ್ರೇನ್ ಯುದ್ಧ
2022ರ ಫೆಬ್ರವರಿ 24 ರಂದು ಆರಂಭವಾದ ರಷ್ಯಾ – ಉಕ್ರೇನ್ ಸಮರ, 2023ರಲ್ಲೂ ಇಡೀ ವರ್ಷ ಭಾರೀ ಸುದ್ದಿಯಲ್ಲಿತ್ತು. ಆರಂಭದಲ್ಲಿ ರಷ್ಯಾ ಪಡೆಗಳು ಮೇಲುಗೈ ಸಾಧಿಸಿದ್ದವಾದರೂ, ಉಕ್ರೇನ್‌ ಸೇನೆ ನೇಟೋ ರಾಷ್ಟ್ರಗಳ ನೆರವಿನೊಂದಿಗೆ ರಷ್ಯಾಗೆ ಪ್ರತ್ಯುತ್ತರ ನೀಡುವಲ್ಲಿ ಯಶಸ್ವಿಯಾದವು. ರಷ್ಯಾ ಸೇನೆಯ ಸಾವಿರಾರು ಟ್ಯಾಂಕರ್‌ಗಳನ್ನು ಅಮೆರಿಕದ ಕ್ಷಿಪಣಿಗಳ ಮೂಲಕ ಧ್ವಂಸ ಮಾಡಿದ ಉಕ್ರೇನ್ ಸೇನೆ, ರಷ್ಯಾ ನೌಕಾ ಪಡೆಯ ಹಲವು ಯುದ್ಧ ನೌಕೆಗಳು ಹಾಗೂ ರಷ್ಯಾ ವಾಯು ಪಡೆಯ ಸಾಕಷ್ಟು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ ರಷ್ಯಾಗೆ ದೊಡ್ಡ ಸವಾಲನ್ನೇ ಒಡ್ಡಿದೆ.

ರಷ್ಯಾ ಸೇನೆ ವಿರುದ್ದ ಉಕ್ರೇನ್ ಗೆರಿಲ್ಲಾ ಮಾದರಿ ದಾಳಿಗಳನ್ನೂ ನಡೆಸುತ್ತಿದ್ದು, ಲಕ್ಷಾಂತರ ಸೈನಿಕರನ್ನು ರಷ್ಯಾ ಕಳೆದುಕೊಂಡಿದೆ. ಉಕ್ರೇನ್‌ನ ಕೆಲವು ಪ್ರಾಂತ್ಯಗಳನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆಯಾದರೂ, ಸಂಪೂರ್ಣ ಮೇಲುಗೈ ಸಾಧಿಸಲು ಸಾಧ್ಯವಾಗಿಲ್ಲ. ಉಕ್ರೇನ್‌ನ ಹಲವು ವಾಣಿಜ್ಯ ಬಂದರುಗಳೂ ರಷ್ಯಾ ಸೇನೆಯ ವಶವಾಗಿದೆ. ಈ ಮಧ್ಯೆ ಚಳಿಗಾಲದ ಕಾರಣದಿಂದಲೂ ಹಲವು ಬಾರಿ ಯುದ್ಧ ಸ್ಥಗಿತವಾಗಿತ್ತು. ಹಲವು ಪ್ರಾಂತ್ಯಗಳಿಂದ ರಷ್ಯಾ ಸೇನೆಯು ಉಕ್ರೇನ್ ವಿರುದ್ಧ ಸಮರ ನಡೆಸುತ್ತಿದ್ದು, ಸದ್ಯಕ್ಕೆ ಈ ಯುದ್ಧ ನಿಲ್ಲುವ ಸಾಧ್ಯತೆಗಳು ಕಂಡು ಬರ್ತಿಲ್ಲ.

5.ಫ್ರಾನ್ಸ್‌ನಲ್ಲಿ ವಲಸಿಗರ ದಂಗೆ: ಹೊತ್ತಿ ಉರಿದ ಪ್ಯಾರಿಸ್
ಆಂತರಿಕ ಕ್ಷೋಭೆಯಿಂದ ಬಳಲುತ್ತಿರುವ ಆಫ್ರಿಕಾ ಹಾಗೂ ಮಧ್ಯ ಪ್ರಾಚ್ಯದ ಹಲವು ರಾಷ್ಟ್ರಗಳಿಂದ ಫ್ರಾನ್ಸ್‌ಗೆ ವಲಸೆ ಬಂದಿದ್ದ ಮುಸ್ಲಿಂ ಬಾಹುಳ್ಯದ ಸಮುದಾಯ, ಫ್ರಾನ್ಸ್‌ನ ಹಲವು ನಗರಗಳಲ್ಲಿ ದಂಗೆ ಸೃಷ್ಟಿಸಿತ್ತು. 2023ರ ಜೂನ್ 21 ರಂದು ಫ್ರಾನ್ಸ್ ಪೊಲೀಸರ ಜೊತೆಗಿನ ಸಂಘರ್ಷದ ವೇಳೆ 17 ವರ್ಷ ವಯಸ್ಸಿನ ನಹೇಲ್ ಎಂಬ ಬಾಲಕನೊಬ್ಬ ಹತ್ಯೆಗೀಡಾಗಿದ್ದ. ಪೊಲೀಸರ ದೌರ್ಜನ್ಯದಿಂದಲೇ ಈ ಬಾಲಕ ಹತ್ಯೆಗೀಡಾಗಿದ್ದಾನೆ ಎಂದು ಆರೋಪಿಸಿದ ವಲಸಿಗ ಸಮುದಾಯ ಫ್ರಾನ್ಸ್‌ ದೇಶದ ಹಲವು ನಗರಗಳಲ್ಲಿ ಗಲಭೆ ನಡೆಸಿದರು.

ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ಸೇರಿದಂತೆ ಹಲವು ನಗರ ಹಾಗೂ ಪಟ್ಟಣಗಳಿಗೆ ಗಲಭೆ ವ್ಯಾಪಿಸಿತ್ತು. ಸಾವಿರಾರು ಮನೆ, ಕಾರು, ಬೈಕ್‌ಗಳಿಗೆ ದಂಗೆಕೋರರು ಬೆಂಕಿ ಇಟ್ಟರು. ನೂರಾರು ಅಂಗಡಿ – ಮಳಿಗೆಗಳನ್ನು ಲೂಟಿ ಮಾಡಿದರು. ಲೆಕ್ಕವಿಲ್ಲದಷ್ಟು ಬ್ಯಾಂಕ್ ದೋಚಿದರು. ಅತಿ ದೊಡ್ಡ ಗ್ರಂಥಾಲಯವನ್ನೂ ಬಿಡದೆ ಸುಟ್ಟು ಹಾಕಿದರು. ಗಲಭೆಯನ್ನು ಗಂಭೀರವಾಗಿ ಪರಿಗಣಿಸಿದ ಫ್ರಾನ್ಸ್, ದಂಗೆಕೋರರನ್ನು ಹತ್ತಿಕ್ಕಲು ಸೇನೆ ರವಾನಿಸಿತ್ತು. ಸಾವಿರಾರು ಜನರನ್ನು ಬಂಧಿಸಿತು. ಜೊತೆಯಲ್ಲೇ ಸಾರ್ವಜನಿಕವಾಗಿ ಯಾವುದೇ ಧರ್ಮ ಸೂಚಕ ಚಟುವಟಿಕೆ ನಡೆಸದಂತೆ ರೂಪಿಸಿದ್ದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ.

6.ಟರ್ಕಿ, ಸಿರಿಯಾ ಭೂಕಂಪಕ್ಕೆ ಸಾವಿರಾರು ಮಂದಿ ಬಲಿ
2023ರ ಫೆಬ್ರುವರಿಯಲ್ಲಿ ಟರ್ಕಿ ಹಾಗೂ ಸಿರಿಯಾ ದೇಶಗಳಲ್ಲಿ 7.8 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತು. ಆ ನಂತರ ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆಯ ಪಶ್ಚಾತ್ ಕಂಪನಗಳೂ ಆದವು. ಇದರಿಂದಾಗಿ ಎರಡೂ ದೇಶಗಳಲ್ಲಿ ಸುಮಾರು 60 ಸಾವಿರ ಮಂದಿ ಸಾವನ್ನಪ್ಪಿದರು. ಟರ್ಕಿ ದೇಶದಲ್ಲೇ 50 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರೆ, ಸಿರಿಯಾದಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಲಕ್ಷಾಂತರ ಮಂದಿ ಗಾಯಗೊಂಡರು.

ಎರಡೂ ದೇಶಗಳಲ್ಲಿ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ 94 ದೇಶಗಳ ಸ್ವಯಂ ಸೇವಕರು ರಕ್ಷಣಾ ಕಾರ್ಯ ನಡೆಸಿದರು. ಸುಮಾರು ಒಂದೂವರೆ ಲಕ್ಷ ಮಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಭಾರತ ಸೇರಿದಂತೆ ವಿಶ್ವದೆಲ್ಲೆಡೆಯ ಎಲ್ಲಾ ದೇಶಗಳು ಟರ್ಕಿ ಹಾಗೂ ಸಿರಿಯಾಗೆ ಟನ್‌ಗಟ್ಟಲೆ ಮಾನವೀಯ ನೆರವು ಸಾಮಗ್ರಿಗಳನ್ನ ರವಾನೆ ಮಾಡಿದವು.

​7. ಅಫ್ಘಾನಿಸ್ತಾನದಲ್ಲಿ ಭೂಕಂಪದಿಂದ ಮಾರಣಹೋಮ
ಅಫ್ಘಾನಿಸ್ತಾನದಲ್ಲಿ 2023ರಲ್ಲಿ ಎರಡು ಬಾರಿ ಪ್ರಬಲ ಭೂಕಂಪಗಳು ಸಂಭವಿಸಿದವು. ಈ ಪೈಕಿ ಅಕ್ಟೋಬರ್ 7 ರಂದು ಸಂಭವಿಸಿದ ಭೂಕಂಪ ಭಾರೀ ಅನಾಹುತವನ್ನೇ ಸೃಷ್ಟಿಸಿತು. ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆಯ ಈ ಭೂಕಂಪವು ಅಫ್ಘಾನಿಸ್ತಾನದ ಹೆರಾತ್ ನಗರ ಸೇರಿದಂತೆ ಹಲವೆಡೆ ಅಪಾರ ಹಾನಿಗೆ ಕಾರಣವಾಯ್ತು. ಈ ಭೂಕಂಪ ಹಾಗೂ ನಂತರ ಸಂಭವಿಸಿದ ಪಶ್ಚಾತ್ ಕಂಪನಗಳಿಂದಾಗಿ 1,482 ಮಂದಿ ಸಾವನ್ನಪ್ಪಿದರು. 2 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಸುಮಾರು 45 ಸಾವಿರ ಜನರು ಮನೆ ಕಳೆದುಕೊಂಡು ನಿರಾಶ್ರಿತರಾದರು. ಅಕ್ಟೋಬರ್ 7ರ ಬಳಿಕ ಅಕ್ಟೋಬರ್ 11, 15 ಹಾಗೂ 28 ರಂದು ಅಫ್ಘಾನಿಸ್ತಾನದಲ್ಲಿ ಸರಣಿ ಭೂಕಂಪಗಳು ಸಂಭವಿಸಿದವು.

​8.ಲಿಬಿಯಾದಲ್ಲಿ ಮಾರಣ ಹೋಮ ಸೃಷ್ಟಿಸಿದ ಜಲಾಶಯ ಕುಸಿತ
2023ರ ಸೆಪ್ಟೆಂಬರ್ 10 ಹಾಗೂ 11ರ ಮಧ್ಯ ರಾತ್ರಿ ಲಿಬಿಯಾ ದೇಶದ ಡೆರ್ನಾ ನಗರದ ಬಳಿ ಎರಡು ಡ್ಯಾಂಗಳು ಸ್ಫೋಟಗೊಂಡವು. ಭಾರ ಪ್ರಮಾಣದ ನೀರು ಏಕಾಏಕಿ ಜಲಾಶಯಗಳಿಗೆ ಹರಿದು ಬಂದ ಹಿನ್ನೆಲೆಯಲ್ಲಿ ಒತ್ತಡ ತಾಳಲಾಗದೆ ಡ್ಯಾಂಗಳು ಸ್ಫೋಟಗೊಂಡವು. ಹೀಗಾಗಿ, ಜಲಾಶಯದ ಕೆಳಗಿನ ಪ್ರದೇಶಗಳಲ್ಲಿ ಏಕಾ ಏಕಿ ಭಾರೀ ಪ್ರವಾಹ ಪರಿಸ್ಥಿತಿ ಉಂಟಾಯ್ತು. ಸಮುದ್ರ ತೀರದ ಡೆರ್ನಾ ನಗರದಲ್ಲಿ ಭಾರೀ ಪ್ರವಾಹ ಏರ್ಪಟ್ಟಿತ್ತು. ಸಾವಿರಾರು ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದರು.

2023ರ ಸೆಪ್ಟೆಂಬರ್ 18 ರ ಲೆಕ್ಕಾಚಾರದ ಪ್ರಕಾರ, ಈ ಪ್ರವಾಹದಲ್ಲಿ 5,300 ರಿಂದ 20 ಸಾವಿರ ಮಂದಿ ಸಾವನ್ನಪ್ಪಿರಬಹುದು ಎಂದು ಅಂದಾಜು ಮಾಡಲಾಗಿದೆ. ಆದರೆ, ಲಿಬಿಯಾ ಸರ್ಕಾರ ಈ ಕುರಿತಾಗಿ ಯಾವುದೇ ಸ್ಪಷ್ಟ ಅಂಕಿ ಅಂಶ ನೀಡಿಲ್ಲ. 8,500 ಜನ ನಾಪತ್ತೆಯಾಗಿದ್ದಾರೆ ಎಂದೂ ಹೇಳಿದೆ. ಆದರೆ ಈ ಕುರಿತಾಗಿಯೂ ಹೆಚ್ಚಿನ ಮಾಹಿತಿಯನ್ನು ಅಲ್ಲಿನ ಸರ್ಕಾರ ನೀಡಿಲ್ಲ. ವಿಶ್ವ ಸಂಸ್ಥೆ ಪ್ರಕಾರ 11 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿರಬಹುದು ಎಂದು ಹೇಳಲಾಗಿತ್ತು. ನಂತರ ಈ ಅಂಕಿ ಅಂಶವನ್ನು ವಾಪಸ್ ಪಡೆಯಿತು. ಲಿಬಿಯಾ ಸರ್ಕಾರ ಮಾತ್ರ ಡೆರ್ನಾ ನಗರವೊಂದರಲ್ಲೇ 6 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಿತ್ತು.

​9. ಚೀನಾದಲ್ಲಿ ನಿಗೂಢ ವೈರಸ್ ಹಾವಳಿ
ನವೆಂಬರ್ 2023ರಿಂದ ಚೀನಾ ದೇಶದಲ್ಲಿ ನಿಗೂಢವಾದ ನ್ಯುಮೋನಿಯಾ ರೀತಿಯ ಸೋಂಕು ಹಾವಳಿ ಇಡೋಕೆ ಶುರು ಮಾಡಿದೆ. ಚಳಿಗಾಲದ ಹೊತ್ತಲ್ಲೇ ಚೀನಾದಲ್ಲಿ ಶುರುವಾಗಿರುವ ಈ ಹಾವಳಿ 2019ರಲ್ಲಿ ಇದೇ ಸಮಯಕ್ಕೆ ಶುರುವಾದ ಕೋವಿಡ್ ಸಾಂಕ್ರಾಮಿಕವನ್ನು ನೆನಪಿಸುವಂತಿದೆ. ಇದೊಂದು ಸಾಮಾನ್ಯ ವೈರಾಣು ಸೋಂಕು ಎಂದು ಚೀನಾ ಹೇಳುತ್ತಿದೆಯಾದರೂ, ವಿಶ್ವ ಆರೋಗ್ಯ ಸಂಸ್ಥೆ ಕಟ್ಟೆಚ್ಚರ ವಹಿಸಿದೆ.ಪ್ರಮುಖವಾಗಿ ಮಕ್ಕಳು ಹಾಗೂ ವೃದ್ಧರು ಈ ವೈರಸ್‌ನಿಂದ ಬಾಧಿತರಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಉಸಿರಾಟದ ತೊಂದರೆ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ಧಾರೆ. ಚೀನಾದಲ್ಲಿ ವೈರಾಣು ಹಾವಳಿ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

10.ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಕ್ರಾಂತಿ
ಕಂಪ್ಯೂಟರ್ ಕ್ರಾಂತಿಯ ರೀತಿಯಲ್ಲೇ ವಿಶ್ವ ಮಟ್ಟದ ಚಿತ್ರಣವನ್ನೇ ಬದಲಿಸಬಲ್ಲ ಕೃತಕ ಬುದ್ದಿಮತ್ತೆ ತಂತ್ರಜ್ಞಾನ, 2023ರಲ್ಲಿ ಭಾರೀ ಸಂಚಲನ ಮೂಡಿಸಿತು. 2022ರಲ್ಲೇ ಸದ್ದು ಮಾಡಲು ಶುರು ಮಾಡಿದ್ದ ಚಾಟ್‌ ಜಿಪಿಟಿ, 2023ರ ಜನವರಿಯಲ್ಲಿ ತನ್ನ ವಿಶ್ವ ರೂಪ ತೋರಿಸಿತು. 100 ದಶಲಕ್ಷ ಬಳಕೆದಾರರು ಓಪನ್ ಎಐ ಸಂಸ್ಥೆಯ ಚಾಟ್ ಜಿಪಿಟಿ ಬಳಕೆದಾರರಾದರು. ಹೀಗಾಗಿ, ಹಲವು ಸಂಸ್ಥೆಗಳು ಚಾಟ್ ಜಿಪಿಟಿಗೆ ಸವಾಲೊಡ್ಡಲು ತಮ್ಮ ಸಂಸ್ಥೆಗಳ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಸಾಫ್ಟ್‌ ವೇರ್‌ಗಳನ್ನ ಅಭಿವೃದ್ದಿ ಮಾಡಿದರು.ಶಿಕ್ಷಕರು, ಪತ್ರಕರ್ತರು, ಭಾಷಾಂತರಕಾರರು ಸೇರಿದಂತೆ ಹಲವರ ಉದ್ಯೋಗ ಕಸಿಯಬಲ್ಲ ತಂತ್ರಜ್ಞಾನ ಎಂದೇ ಕೃತಕ ಬುದ್ದಿಮತ್ತೆ ಕುಖ್ಯಾತಿಯನ್ನೂ ಗಳಿಸಿತು. ಆದರೆ, ಈ ತಂತ್ರಜ್ಞಾನಕ್ಕೆ ತನ್ನದೇ ಆದ ಇತಿಮಿತಿಗಳೂ ಇವೆ ಅನ್ನೋದು ನಂತರ ದಿನಗಳಲ್ಲಿ ಸಾಬಿತಾಯ್ತು.

2023ರಲ್ಲಿ ಭಾರತದಲ್ಲಿ ನಡೆದ ಟಾಪ್ 10 ರಾಜಕೀಯ ಘಟನೆಗಳು

Leave a Reply

Your email address will not be published. Required fields are marked *

error: Content Copyright protected !!