ಕಂಪ್ಯೂಟರ್ ಜ್ಞಾನ : http ಎಂದರೇನು..?
ಸಾಮಾನ್ಯವಾಗಿ ನೀವು ಇಂಟರ್ನೆಟ್ ಬಳಸುವಾಗ ಯಾವುದೇ ಬ್ರೌಸರ್ ನಲ್ಲಿ ಯಾವುದ್ದಾದರೊಂದು ವೆಬ್ಸೈಟ್ ಓಪನ್ ಮಾಡಿದಾಗ ಮೇಲಿನ ಲಿಂಕ್ ಬಾರ್ ನಲ್ಲಿ http ಯಿಂದ ಪ್ರಾರಂಭವಾಗುತ್ತೆ. ಹಾಗಾದರೆ ಈ ಎಂದರೇನು ? ಇದು ಹೇಗೆ ಬಳಕೆಯಾಗುತ್ತೆ..? ಎನ್ನುವ ಪ್ರಶ್ನಿಗಳಿಗೆ ಇಲ್ಲಿದೆ ನೋಡಿ ಉತ್ತರ.
http (Hypertext Transfer Protocol) ಎಂದರೆ ಹೈಪರ್ಟೆಕ್ಸ್ಟ್ ಟ್ರಾನ್ಸ್ ಫರ್ ಪ್ರೋಟೋಕಾಲ್; ವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಯ ವಿನಿಮಯ ಮಾಡಿಕೊಳ್ಳುವಾಗ ಪಾಲಿಸಬೇಕಾದ ನಿಯಮಗಳನ್ನು ಸೂಚಿಸುವ ಶಿಷ್ಟಾಚಾರ. ಬಹುತೇಕ ಎಲ್ಲ ಜಾಲತಾಣಗಳ ವಿಳಾಸವೂ ಹೆಚ್ಟಿಟಿಪಿ ಎನ್ನುವ ಅಕ್ಷರಗಳಿಂದ ಪ್ರಾರಂಭವಾಗುತ್ತದಲ್ಲ, ಇಲ್ಲಿ ಹೆಚ್ಟಿಟಿಪಿ ಎನ್ನುವುದು ಹೈಪರ್ಟೆಕ್ಸ್ಟ್ ಟ್ರಾನ್ಸ್ಫರ್ ಪ್ರೋಟೋಕಾಲ್ ಎಂಬಹೆಸರಿನ ಹ್ರಸ್ವರೂಪ.
ಇಂದಿನ ಕಂಪ್ಯೂಟರ್ ಪ್ರಪಂಚದಲ್ಲಿ ಪ್ರತಿ ಕ್ಷಣವೂ ಒಂದಲ್ಲ ಒಂದು ಬಗೆಯ ಸಂವಹನ ನಡೆಯುತ್ತಿರುತ್ತದೆ. ಬಳಕೆದಾರರೊಡನೆ ಕಂಪ್ಯೂಟರಿನ ವಿವಿಧ ಯಂತ್ರಾಂಶಗಳ ನಡುವೆ, ಅಂತರಜಾಲದಲ್ಲಿರುವ ಬೇರೆ ಕಂಪ್ಯೂಟರುಗಳೊಡನೆ ಮಾಹಿತಿಯ ವಿನಿಮಯ ಸಾಗಿರುತ್ತದೆ. ಹೀಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಲ್ಲ, ಅದಕ್ಕೆ ಹಲವು ಶಿಷ್ಟಾಚಾರಗಳನ್ನು(ಪ್ರೋಟೋಕಾಲ್) ರೂಪಿಸಲಾಗಿದೆ. ಹೆಚ್ಟಿಟಿಪಿ ಕೂಡ ಇಂತಹುದೇ ಒಂದು ಶಿಷ್ಟಾಚಾರ.
ವಿಶ್ವವ್ಯಾಪಿ ಜಾಲದ(ವಲ್ರ್ಡ್ ವೈಡ್ ವೆಬ್) ಬಹುತೇಕ ಸಂವಹನವೆಲ್ಲ ಈ ಶಿಷ್ಟಾಚಾರಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ನಾವು ಬ್ರೌಸರಿನಲ್ಲಿ ತಾಣದ ವಿಳಾಸ ಟೈಪ್ ಮಾಡಿ ಎಂಟರ್ ಒತ್ತಿದಾಗ ವೆಬ್ ಪುಟ ತೆರೆದುಕೊಳ್ಳುತ್ತದಲ್ಲ, ಇದರ ಹಿನ್ನೆಲೆಯಲ್ಲಿ ನಮ್ಮ ಕಂಪ್ಯೂಟರಿನಿಂದ ಜಾಲತಾಣದ ಸರ್ವರ್ಗೆ ಹೋದ ಎಚ್ಟಿಟಿಪಿ ಆದೇಶವೊಂದು ಕೆಲಸ ಮಾಡಿರುತ್ತದೆ. ಯಾವ ಸಂದರ್ಭದಲ್ಲಿ ಯಾವ ರೀತಿಯ ಎರರ್ ಸಂದೇಶಗಳನ್ನು ತೋರಿಸಬೇಕು ಎನ್ನುವುದೂ ಹೆಚ್ಟಿಟಿಪಿ ಶಿಷ್ಟಾಚಾರದ್ದೇ ನಿಯಮ.