‘ವಿಶ್ವ ಸುನಾಮಿ ಜಾಗೃತಿ ದಿನ’
ವಿಶ್ವಸಂಸ್ಥೆಯ ವಿಶ್ವ ಸುನಾಮಿ ಜಾಗೃತಿ ದಿನವನ್ನು ವಾರ್ಷಿಕವಾಗಿ ನವೆಂಬರ್ 5 ರಂದು ಆಚರಿಸಲಾಗುತ್ತದೆ ಮತ್ತು ಸುನಾಮಿಯ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ಸುನಾಮಿಯ ಅಪಾಯವನ್ನು ಕಡಿಮೆ ಮಾಡಲು ಜಗತ್ತಿನಾದ್ಯಂತ ನವೀನ ವಿಧಾನಗಳನ್ನು ಹಂಚಿಕೊಳ್ಳುತ್ತದೆ. ಮೊದಲ ವಿಶ್ವ ಸುನಾಮಿ ಜಾಗೃತಿ ದಿನವನ್ನು 5 ನವೆಂಬರ್ 2016 ರಂದು ಆಚರಿಸಲಾಯಿತು.
ವಿಶ್ವಸಂಸ್ಥೆಯ ವ್ಯವಸ್ಥೆಯ ಸಹಯೋಗದೊಂದಿಗೆ ಯುಎನ್ ಆಫೀಸ್ ಫಾರ್ ವಿಪತ್ತು ಅಪಾಯ ಕಡಿತ (ಯುಎನ್‌ಡಿಆರ್ಆರ್) ವಿಶ್ವ ಸುನಾಮಿ ಜಾಗೃತಿ ದಿನವನ್ನು ಆಚರಿಸಲು ಅನುಕೂಲವಾಗಿದೆ. 2020 ರ ವಿಶ್ವ ಸುನಾಮಿ ಜಾಗೃತಿ ದಿನದ ವಿಷಯವೆಂದರೆ “ವಿಪತ್ತು ಅಪಾಯದ ಆಡಳಿತವನ್ನು ಬಲಪಡಿಸುವುದು”(Strengthening disaster risk governance) ಆಗಿದೆ.
# ಸುನಾಮಿ ಜಾಗೃತಿ ದಿನಾಚರಣೆಯ ಮಹತ್ವ :
ಸುನಾಮಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಸಂಸ್ಥೆಯು “ಸುನಾಮಿ ಜಾಗೃತಿ ದಿನ’ವನ್ನು ಪ್ರತೀವರ್ಷ ನವೆಂಬರ್ 5ರಂದು ಆಚರಿಸುತ್ತದೆ. ವಿಶ್ವಾದ್ಯಂತ 700 ದಶಲಕ್ಷಕ್ಕೂ ಹೆಚ್ಚು ಜನರು ಸಮುದ್ರ ತೀರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಸುನಾಮಿ ಮತ್ತು ಅದರಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಅವರ ಜೀವನಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ದಿನಾಚರಣೆ ಮಹತ್ವ ಹೊಂದಿದೆ.
# ಏನಿದು ಸುನಾಮಿ?
ಸಾಗರ, ಸಮುದ್ರದಲ್ಲಿ ಅಥವಾ ಸಮುದ್ರದ ಹತ್ತಿರದ ಪ್ರದೇಶದಲ್ಲಿ ಭೂಕಂಪನದ ಪರಿಣಾಮವಾಗಿ ಸುನಾಮಿ ಸೃಷ್ಟಿಯಾಗುತ್ತದೆ. ಕೆರೆಗೆ ಕಲ್ಲು ಎಸೆದಾಗ ಅದು ಬಿದ್ದ ಸ್ಥಳದಿಂದ ಸುತ್ತಲೂ ವೃತ್ತಾಕಾರವಾದ ಅಲೆಗಳು ಏಳುತ್ತವೆಯೋ ಹಾಗೆಯೇ ಭೂಕಂಪನದ ಕೇಂದ್ರ ಬಿಂದುವಿನಿಂದ ಸುನಾಮಿಯ ಬೃಹದ್ಗಾತ್ರದ ಅಲೆಗಳು ಉಂಟಾಗುತ್ತವೆ. ಸಾಗರದೊಳಗೆ ಉಂಟಾಗುವ ಭೂಕುಸಿತ, ಭೂಕಂಪನದಿಂದ ಸೃಷ್ಟಿಯಾಗುವ ಅಗಾಧ ಗಾತ್ರದ ದೈತ್ಯ ಅಲೆಗಳ ಸಮೂಹವನ್ನು ಸುನಾಮಿ ಎಂದು ಕರೆಯುತ್ತಾರೆ. ಸಮುದ್ರದೊಳಗೆ ಜ್ವಾಲಾಮುಖೀ ಸ್ಫೋಟ, ಶಿಲಾಪದರಗಳ ಕುಸಿತ ಮೊದಲಾದವುಗಳು ಸುನಾಮಿಯನ್ನು ಉಂಟು ಮಾಡುತ್ತವೆ. ಸಮುದ್ರದ ತೀರದಲ್ಲಿ ಹಲವು ಕಿ.ಮೀ.ಗಳಷ್ಟು ದೂರಕ್ಕೆ ಭೂಪ್ರದೇಶವನ್ನು ಸಂಪೂರ್ಣವಾಗಿ ನಾಶ ಮಾಡುವಷ್ಟು ಶಕ್ತಿಯನ್ನು ಸುನಾಮಿ ಹೊಂದಿರುತ್ತದೆ.
# ಮಿತಿಮೀರಿದ ಹಸ್ತಕ್ಷೇಪ :
ಪ್ರಕೃತಿ ಮುನಿಸಿಕೊಂಡಾಗ ಪ್ರಾಕೃತಿಕ ವಿಕೋಪಗಳು ಉಂಟಾಗುತ್ತವೆ ಎಂಬ ಮಾತಿದೆ. ಆದರೆ ಪ್ರಾಕೃತಿಕ ವಿಕೋಪಗಳಿಗೆ ಮೂಲಕಾರಣ ನಮ್ಮ ಮಿತಿಮೀರಿದ ಹಸ್ತಕ್ಷೇಪ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸುನಾಮಿಯಿಂದ ಹಾನಿಗೀಡಾದ ಪ್ರದೇಶಗಳನ್ನು ಮತ್ತೆ ಪೂರ್ವಸ್ಥಿತಿಗೆ ತರಲು ಹಲವಾರು ವರ್ಷಗಳೇ ಬೇಕಾಗುತ್ತವೆ. ಅದಕ್ಕಿಂತ ಹೆಚ್ಚಾಗಿ ಬಲಿಯಾದವರ ಪ್ರಾಣವನ್ನು ಹಿಂದೆ ತರಲಾಗದು. ಪ್ರಕೃತಿ ಮುನಿಯುವುದಕ್ಕಿಂತ ಮೊದಲು ಎಚ್ಚೆತ್ತುಕೊಳ್ಳೋಣ.
# ವಿಶ್ವದ ಅತ್ಯಂತ ಭಯಾನಕ ಸುನಾಮಿಗಳು :
1. ಬಾಕ್ಸಿಂಗ್ ಡೇ ಸುನಾಮಿ (ಇಂಡೊನೇಷ್ಯಾ-2004ರ ಡಿ. 26): ಇದು ನಮ್ಮ ಜೀವಿತ ಕಾಲದಲ್ಲಿ ಉಂಟಾದ ಅತಿದೊಡ್ಡ ಸುನಾಮಿ. ಹಿಂದೂ ಮಹಾಸಾಗರದಲ್ಲಿ ಇಂಡೊನೇಶ್ಯಾ ದ್ವೀಪಸಮೂಹದ ಸುಮಾತ್ರಾ ಬಳಿ ಉಂಟಾದ ಭೂಕಂಪದಿಂದ ಉಂಟಾಗಿತ್ತು. ರಿಕ್ಟರ್ ಮಾಪಕದಲ್ಲಿ 9.1 ತೀವ್ರತೆ ಹೊಂದಿದ್ದ ಭೂಕಂಪ 30 ಅಡಿಗಳಷ್ಟು ಎತ್ತರದ ಅಲೆಗಳನ್ನು ಸೃಷ್ಟಿಸಿತ್ತು. ಭಾರತವೂ ಸೇರಿದಂತೆ ಒಟ್ಟು 15 ದೇಶಗಳ 2,30,000 ಜನರನ್ನು ಆಹುತಿ ತೆಗೆದುಕೊಂಡಿತ್ತು. ದೂರದ ಆಫ್ರಿಕಾ ಖಂಡದ ತೀರಕ್ಕೂ ಈ ಸುನಾಮಿ ಅಲೆಗಳು ಮುಟ್ಟಿದ್ದವು. ಇದರಿಂದ 10 ಬಿಲಿಯನ್ ಡಾಲರ್ ನಷ್ಟವನ್ನು ಅಂದಾಜಿಸಲಾಗಿದೆ.
2. ನಾರ್ತ್ ಪೆಸಿಫಿಕ್ ಸಾಗರ ತೀರ, (ಜಪಾನ್- 2011ರ ಮಾ. 11): ಜಪಾನ್‌ನ ಪೂರ್ವ ಕರಾವಳಿಯಲ್ಲಿ 24.4 ಕಿ.ಮೀ. ಆಳದಲ್ಲಿ ಉಂಟಾದ, 9ರಷ್ಟು ತೀವ್ರತೆಯ ಭೂಕಂಪದಿಂದ ಸೃಷ್ಟಿಯಾಗಿತ್ತು. ಗಂಟೆಗೆ 800 ಕಿ.ಮೀ. ವೇಗದ ಸುನಾಮಿ ಅಲೆಗಳು 18,000 ಜನರನ್ನು ಬಲಿತೆಗೆದುಕೊಂಡಿದ್ದವು. ಇದರಿಂದ 235 ಬಿಲಿಯನ್ ಡಾಲರ್‌ನಷ್ಟು ಅಂದಾಜು ಮಾಡಲಾಗಿದೆ.
3. ಲಿಸ್ನ್ (ಪೊರ್ಚುಗಲ್- 1755ರ ನ.1) ಪೋರ್ಚುಗಲ್‌ನ ಪೂರ್ವ ಕರಾವಳಿಯಲ್ಲಿ 8.5 ತೀವ್ರತೆಯ ಭೂಕಂಪದಿಂದ ಇದು ಸಂಭವಿಸಿತ್ತು. ಅಲೆಗಳು 30 ಮೀ. ಎತ್ತರವನ್ನು ಹೊಂದಿದ್ದವು. ಸ್ಪೇಯ್ನ, ಪೋರ್ಚುಗಲ್ ಮತ್ತು ಮೊರಕ್ಕೊ ದೇಶಗಳ 60 ಸಾವಿರ ಜನರನ್ನು ಇದು ಬಲಿ ತೆಗೆದುಕೊಂಡಿತು.
4. ಕ್ರಾಕಟುವಾ (ಇಂಡೊನೇಷ್ಯಾ- 1883ರ ಅ.27) 37 ಮೀ. ಎತ್ತರಕ್ಕೆ ಅಪ್ಪಳಿಸಿದ ಈ ಸುನಾಮಿ ಅಲೆಗಳು ಭಾರತ ಸಹಿತ ವಿವಿಧ ದೇಶಗಳ ಒಟ್ಟು 40,000 ಜನರನ್ನು ಬಲಿತೆಗೆದುಕೊಂಡಿತ್ತು.
5, ಸನ್ರಿಕು (ಜಪಾನ್, 1896ರ ಜೂ. 15) 7.6 ತೀವ್ರತೆಯ ಭೂಕಂಪನದಿಂದ ಉಂಟಾದ ಈ ಸುನಾಮಿ ಅಲೆಗಳು 38.2 ಮೀ. ಎತ್ತರದಲ್ಲಿದ್ದವು. ಇದರಿಂದ 11,000 ಮನೆಗಳು ನಾಶವಾಗಿ 22,000 ಸಾವಿರ ಜನರು ಮೃತಪಟ್ಟರು. ಚೀನದ ಪೂರ್ವ ಕರಾವಳಿಗೂ ನುಗ್ಗಿ 4,000 ಜನರನ್ನು ಬಲಿ ತೆಗೆದುಕೊಂಡಿತ್ತು.