ಭಾರತದ ವ್ಯವಸಾಯ ಪದ್ಧತಿಗಳು
ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ವ್ಯವಸಾಯವು ಪ್ರಮುಖ ಪಾತ್ರ ವಹಿಸಿದೆ. ಮಾನವನ ಪುರಾತನ ವೃತ್ತಿಗಳಲ್ಲೊಂದಾಗಿದೆ. ವ್ಯವಸಾಯವು ಆಹಾರ ಧಾನ್ಯಗಳನ್ನು ಬೆಳೆಯುವುದು, ಪಶುಪಾಲನೆ, ಕೋಳಿಸಾಕಾಣಿಕೆ, ರೇಷ್ಮೇಕೃಷಿ, ಮತ್ತು ಜೇನುಸಾಕಾಣೆಗಳನ್ನು ಒಳಗೊಂಡಿರುವುದು.
➤ ವ್ಯವಸಾಯದ ವಿಧಗಳು :
ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಬೇಸಾಯ ಪದ್ಧತಿಗಳು ರೂಡಿಯಲ್ಲಿವೆ. ವ್ಯವಸಾಯದ ಮುಖ್ಯ ಲಕ್ಷಣಗಳಾದ ಭೂಬಳಕೆ, ಬೆಳೆಸುವ ಬೆಳೆಗಳು, ತಳಿ, ಬಳಸುವ ಕೃಷಿ ಉಪಕರಣಗಳು ಮತ್ತು ಗೊಬ್ಬರಗಳ ಬಳಕೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತವೆ. ಇದಕ್ಕೆ ಕಾರಣ ಭೂಸ್ವರೂಪ, ವಾಯುಗುಣ, ಮಳೆಯ ಹಂಚಿಕೆ, ಮಣ್ಣಿನ ವಿಧಗಳು, ಮಾರುಕಟ್ಟೆ ತಾಂತ್ರಿಕತೆ, ಬಂಡವಾಳ ಹೂಡಿಕೆ, ಕಾರ್ಮಿಕರ ಲಭ್ಯತೆ ಮುಂತಾದವು.
# ಪ್ರಮುಖ ವ್ಯವಸಾಯ ವಿಧಾನಗಳೆಂದರೆ :
1. ಜೀವನಾಧಾರ ಬೇಸಾಯ
ತಮ್ಮ ಗೃಹ ಬಳಕೆಗೆ ಮಾತ್ರ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಇದರಲ್ಲಿ ಎರಡು ರೀತಿಯ ಬೇಸಾಯಗಳಿವೆ
* ವರ್ಗಾವಣೆ ಬೇಸಾಯ- ಅರಣ್ಯದ ಕೆಲವು ಭಾಗಗಳಲ್ಲಿನ ಮರಗಳನ್ನು ಕಡಿದು ಮತ್ತು ಸುಟ್ಟು ಅಲ್ಲಿ ಬೇಸಾಯವನ್ನು ಮಾಡುವುದು. ಕೆಲವು ವರ್ಷಗಳ ನಿರಂತರ ಬೇಸಾಯದ ನಂತರ ಬೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವುದರಿಂದ ಬೇಸಾಯಗಾರರು ಇತರ ಪ್ರದೇಶಗಳಿಗೆ ವಲಸೆ ಹೋಗುವರು. ಈ ಬೇಸಾಯದಿಂದ ಮಣ್ನಿನ ಸವೆತ ಉಂಟಾಗಿ ಕಡಿಮೆ ಇಳುವರಿ ಬರುತ್ತದೆ. ಈ ಬಗೆಯ ಬೇಸಾಯವನ್ನು ಕರ್ನಾಟಕದಲ್ಲಿ “ಕುಮರಿ”, ಅಸ್ಸಾಂನಲ್ಲಿ “ಜೂಮಿಂಗ್”, ಕೇರಳದಲ್ಲಿ” ಪೊನಮ್” ಆಧ್ರಪ್ರದೇಶದಲ್ಲಿ “ಪೋಡು” ಎಂದು ಕರೆಯುತ್ತಾರೆ.
* ಸ್ಥಿರ ಬೇಸಾಯ – ಈ ಪದ್ಧತಿಯಲ್ಲಿ ಜನರು ತಮಗೆ ಅನುಕೂಲಕರವಾಗಿರುವ ಪ್ರದೇಶಗಳಲ್ಲಿ ಸ್ಥಿರವಾಗಿ ನೆಲಸಿ ವ್ಯವಸಾಯವನ್ನು ಮಾಡುತ್ತಾರೆ. ಆದರೆ ವ್ಯವಸಾಯದ ವಿಧಾನ, ಬಳಸುವ ಬೀಜ ಇವು ಸಾಂಪ್ರದಾಯಕವಾಗಿರುತ್ತವೆ. ಕೃಷಿ ಉತ್ಪಾದನೆಯನ್ನು ರೈತರು ತಮ್ಮ ಮನೆಯ ಉಪಯೋಗಕ್ಕಾಗಿ ಬಳಸಿಕೊಂಡು ಉಳಿದ ಹೆಚ್ಚಿನ ಉತ್ಪಾದನೆಯನ್ನು ತಮಗೆ ಬೇಕಾದ ಇತರ ವಸ್ತುಗಳೊಂದಿಗೆ ವಿನಿಮಿಯ ಮಾಡಿಕೊಳ್ಳುತ್ತಿದ್ದರು. ಈಗ ಮಾರಾಟ ಮಾಡುತ್ತಾರೆ.
2. ವಾಣಿಜ್ಯ ಬೇಸಾಯ
ವ್ಯಾಪಾರದ ಉದ್ದೇಶದಿಂದ ಬೆಳೆಗಳ ಉತ್ಪಾದನೆ ಹಾಗೂ ಪ್ರಾಣಿಗಳ ಸಾಕಾಣಿಕೆಯನ್ನು “ವಾಣಿಜ್ಯ ಬೇಸಾಯ” ಎಂದು ಕರೆಯುವರು. ಈ ಬೆಳೆಯ ಉತ್ಪಾದನೆಗೆ ಭಸ್ವರೂಪ, ಮಣ್ಣು, ನೀರು, ವಾಯುಗುಣಗಳು ಹೆಚ್ಚು ಸೂಕ್ತವಾಗಿರಬೇಕು. ಯಂತ್ರೋಪಕರಣ, ರಸಗೊಬ್ಬರ, ಸುಧಾರಿತ ಬೀಜ, ಕೀಟ ನಾಶಕಗಳನ್ನು ಯಥೇಚ್ಛವಾಗಿ ಬಳಸುವರು. ಹತ್ತಿ, ಎಣ್ಣೆ ಕಾಳುಗಳು, ತಂಬಾಕು, ಮೆಣಸಿನಕಾಯಿ, ಕಬ್ಬು, ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ.
3. ಮಿಶ್ರ ಬೇಸಾಯ
ಕೃಷಿ ಬೆಳಗಳ ಬೇಸಾಯದ ಜೊತೆಗೆ ಪಶುಪಾಲನೆ, ಹೈನುಗಾರಿಕೆ, ಕೋಳಿಸಾಕಾಣೆ, ಜೇನುಸಾಕಣೆ, ರೇಷ್ಮೇ ಕೃಷಿ ಮುಂತಾದವು ಮಿಶ್ರ ಬೇಸಾಯ ಪದ್ಧತಿಯಾಗಿದೆ. ಈ ಪದ್ಧತಿಯಲ್ಲಿ ವೈಜ್ಞಾನಿಕ ಕೃಷಿ ವಿಧಾನಗಳನ್ನು ಅನುಸರಿಸಲಾಗುವುದು. ಇದಕ್ಕೆ ಸಾಕಷ್ಟು ಬಂಡವಾಳ ಅಗತ್ಯ.
4. ತೋಟಗಾರಿಕಾ ಬೇಸಾಯ ಅಥವಾ ನೆಡುತೋಪು ಬೇಸಾಯ
ಕಾಫಿ, ಚಹಾ, ರಬ್ಬರ್, ಸಾಂಬಾರ ಪದಾರ್ಥಗಳು, ತೆಂಗು, ಅಡಿಕೆ, ವೀಳ್ಯದೆಲೆ ಮುಂತಾದವು ತೋಟಗಾರಿಕಾ ಬೆಳೆಗಳು. ಈ ಪದ್ಧತಿಯಲ್ಲಿ ವಿದೇಶಿ ವಿನಿಮಯದ ಗಳಿಕೆಯೂ ಆಗುತ್ತದೆ. ಇದಲ್ಲದೆ ತರಕಾರಿ, ಹಣ್ಣು -ಹಂಪಲೂ ಹಾಗೂ ಹೂಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ.
➤ ವ್ಯವಸಾಯದ ಕಾಲಗಳು (ಋತುಗಳು) :
# ಭಾರತದಲ್ಲಿ ಮುಖ್ಯವಾಗಿ “ಖಾರಿಫ್”(ಮುಂಗಾರು) ಮತ್ತು “ರಾಬಿ”(ಹಿಂಗಾರು) ಎ0ಬ ಬೆಳೆಗಳ ಋತುಗಳಿವೆ.
# ಮುಂಗಾರು ಮಳೆಯ ಆರಂಭದೊಡನೆ ಖಾರೀಫ್ ಬೇಸಾಯವು ಪ್ರಾರಂಭವಾಗುತ್ತದೆ. ಈ ಋತುವಿನ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ, ರಾಗಿ, ಮೆಕ್ಕೆಜೋಳ, ಎಣ್ಣೆಕಾಳು, ಸೆಣಬು ಮುಂತಾದವು.
# ನಿರ್ಗಮನ ಮಾನ್ಸೂನ್ ಮಳೆಗಾಲದೊಡನೆ “ರಾಬಿ” ಬೇಸಾಯವು ಪ್ರಾರಂಭವಾಗುತ್ತದೆ. ಈ ಬೆಳೆಗಳಿಗೆ ಮಣ್ಣಿನ ತೇವಾಂಶ ಹಾಗೂ ನೀರಾವರಿಯು ಅವಶ್ಯಕವಾಗಿದೆ. ಈ ಕಾಲದ ಮುಖ್ಯ ಬೆಳೆಗಳೆಂದರೆ- ದ್ವಿದಳ ಧಾನ್ಯಗಳು, ಗೋಧಿ,ಬಾರ್ಲಿ,ಎಣ್ಣೆಕಾಳುಗಳು, ಮುಂತಾದವು.