ವರ್ಣತಂತು (ಕ್ರೋಮೋಸೋಮ್)
• ವರ್ಣತಂತುಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಆ ಜೀವಿಯ ಗುಣಲಕ್ಷಣಗಳನ್ನು ಸಾಗಿಸುವ ಮಾಧ್ಯಮಗಳಾಗಿವೆ. ಇವುಗಳ ಸಂಖ್ಯೆ ಪ್ರತಿಯೊಂದು ಪ್ರಭೇದಕ್ಕೂ ನಿರ್ದಿಷ್ಟವಾಗಿರುತ್ತದೆ.
ಉದಾ: ಮಾನವನ ದೇಹದ ಎಲ್ಲಾ ಜೀವಕೋಶಗಳಲ್ಲಿ 46 ವರ್ಣತಂತುಗಳಿವೆ.
• ವರ್ಣತಂತುವಿನ ರಚನೆ :
ಪ್ರತಿ ವರ್ಣತಂತುವು ಎರಡು ಸಮಾನಾಂತರ ಎಳೆಗಳಿಂದ ಕೂಡಿರುತ್ತದೆ. ಈ ಎಳೆಗಳಿಗೆ ‘ ಕ್ರೋಮಾಟಿಟ್’ ಗಳೆಂದು ಎಂದು ಹೆಸರು. ಈ ಎರಡು ಕ್ರೋಮಾಟಿಡ್ಗಳು ‘ಸೆಂಟ್ರೋಮಿಯರ್’ ಎಂಬ ಒಂದು ಬಿಂದುವಿನಿಂದ ಬಂಧಿಸಲಾಗಿರುತ್ತದೆ. ಪ್ರತಿಯೊಂದು ವರ್ಣತಂತುವು ‘ಡಿಎನ್ಎ’ ಎಂಬ ರಾಸಾಯನಿಕ ಅಣುವಿನಿಂದಾಗಿರುತ್ತದೆ. ಪ್ರತಿ ಡಿಎನ್ಎ ಅಣುವಿನಲ್ಲಿ ‘ ಜೀನ್’ ಗಳೆಂಬ ಅನುವಂಶೀಯ ಘಟಕಗಳಿವೆ.
ಒಂದು ವರ್ಣತಂತುವಿನಲ್ಲಿ ಲಕ್ಷೋಪಲಕ್ಷ ಜೀನ್ಗಳಿರುತ್ತವೆ. ಇವು ಜೀವಿಯ ಪ್ರತಿಯೊಂದು ಗುಣಲಕ್ಷಣವನ್ನು ನಿಯಂತ್ರಿಸುತ್ತವೆ. ಅಮೀಬದಿಂದ ಮಾನವನವರೆಗೂ ಎಲ್ಲ ಜೀವಿಗಳ ರಚನೆ ಹಾಗೂ ಜೈವಿಕ ಕಾರ್ಯಗಳನ್ನು ಜೀನ್ಗಳು ನಿಯಂತ್ರಿಸುತ್ತವೆ.ಉದಾ : ಮಾನವನ ಎತ್ತರ, ಕಣ್ಣುಗಳ ಬಣ್ಣ, ಚರ್ಮದ ಬಣ್ಣ, ಮೂಗಿನ ಆಕಾರ, ತುಟಿಯ ಆಕಾರ ಹೀಗೆ ದೇಹದ ಎಲ್ಲಾ ಲಕ್ಷಣಗಳು ಒಂದು ಪೀಲಿಗೆಯಿಂದ ಪೀಳಿಗೆಗೆ ಹರಿದು ಬರುವುದು ಈ ಜೀನ್ಗಳ ಮೂಲಕ.
• ಡಿಎನ್ಎ ( ಡಿ ಆಕ್ಸಿರೈಬೋ ನ್ಯೂಕ್ಲಿಕ್ ಆಮ್ಲ)
ಡಿಎನ್ಎ ಅಣುವಿನ ರಚನೆಯನ್ನು 1953ರಲ್ಲಿ ಅಮೇರಿಕದ ವಿಜ್ಞಾನಿ ಜೇಮ್ಸ್ ವಾಟ್ಸನ್ ಮತ್ತು ಇಂಗ್ಲೀಷ್ ವಿಜ್ಞಾನಿ ಫ್ರಾನ್ಸಿಸ್ ಕ್ರಿಕ್ ಕಂಡುಹಿಡಿದರು. ಅವರ ಈ ಸಂಶೋಧನೆಗೆ 1962 ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತು. ಡಿಎನ್ಎ ಅಣುವಿನ ರಚನೆಯನ್ನು ವಾಟ್ಸನ್ -ಕ್ರಿಕ್ ಮಾದರಿ ಅಥವಾ ‘ದ್ವಿಸುರುಳಿ ಮಾದರಿ’ ಎಂದು ಕರೆಯಲಾಗಿದೆ.
ಡಿಎನ್ಎ ಅಣುವಿನ ರಚನೆ ಒಂದು ಸುರುಳಿ ಸುತ್ತಿಕೊಂಡಿರುವ ಏಣಿಯಂತಿರುತ್ತದೆ. ಈ ಏಣಿಯಂಥ ರಚನೆಗೆ ‘ ಡಬ್ಬಲ್ ಹೆಲಿಕ್ಸ್’ ಅಥವಾ ‘ ದ್ವಿಸುರುಳಿ’ ಎಂದು ಹೆಸರು. ಈ ಏಣಿಯ ಎರಡು ಕಂಬಗಳು ನ್ಯೂಕ್ಲಿಯೋಟೈಡ್ಗಳು ಎಂಬ ಸಣ್ಣ ಘಟಕಗಳಿಂದ ಮಾಡಲ್ಪಟ್ಟಿವೆ.
• ಡಿಎನ್ಎ ಸ್ವಪ್ರತೀಕರಣ (ರೆಪ್ಲಿಕೇಷನ್)
ಕೋಶ ವಿಭಜನೆಯ ಸಮಯದಲ್ಲಿ ‘ಡಿಎನ್ಎ’ ತನ್ನನ್ನು ತಾನೇ ನಕಲುಗೊಳಿಸಿಕೊಂಡು ಎರಡು ಪ್ರತಿರೂಪಗಳಾಗುವುದು. ಇದಕ್ಕೆ ಡಿಎನ್ಎ ಸ್ವಪ್ರತೀಕರಣ ಅಥವಾ ರೆಪ್ಲಿಕೇಷನ್ ಎಂದು ಹೆಸರು.
ಡಿಎನ್ಎ ಅಣುವಿನ ಈ ವೈಶಿಷ್ಟದಿಂದ ಒಂದು ಕೋಶ ವಿಭಜನೆಗೊಂಡಾಗ ಎರಡು ಮರಿ ಕೋಶಗಳಿಗೆ ತನ್ನಲ್ಲಿರುವಷ್ಟೇ ಸಂಖ್ಯೆಯ ವರ್ಣತಂತುಗಳನ್ನು ಪ್ರತಿಯೊಂದು ಮರಿಕೋಶಕ್ಕೂ ಹಂಚಲು ಸಾಧ್ಯವಾಘುತ್ತದೆ.
ಹೀಗಾಗಿ ಇದು ಅನುವಂಶೀಯತೆ ಮತ್ತು ವಿಭಿನ್ನತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಜೀವಿಗಳು ವಿಕಾಸ ಹೊಂದುವುದಕ್ಕೆ ಡಿಎನ್ಎ ಅಣುವಿನಲ್ಲಾಗುವ ಬದಲಾವಣೆಗಳೇ ಕಾರಣ. ಡಿಎನ್ಎ ಅಣುವಿನಲ್ಲಿ ಜೀವಕೋಶ ಬೆಳವಣಿಗೆ, ರಿಪೇರಿ, ಮತ್ತು ಪ್ರಜನನ ಕ್ರಿಯೆಗೆ ಬೇಕಾದ ಸಂದೇಶವು ಅಡಕವಾಗಿರುತ್ತದೆ. ಇದನ್ನು ಜೀವಿಗಳ ಕಾರ್ಯ ಸ್ವರೂಪದ ಒಂದು ನೀಲಿ ನಕಾಶೆ ಎನ್ನಬಹುದು.