ಪ್ರಚಲಿತ ಘಟನೆಗಳು : 05-10-2020
# ಅಫ್ಗಾನಿಸ್ತಾನದ ಬ್ಯಾಟ್ಸ್‌ಮನ್ ಅಪಘಾತದಲ್ಲಿ ಸಾವು
ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ನಜೀಬ್ ತಾರಕೈ (29) ಮೃತಪಟ್ಟಿರುವುದಾಗಿ ಕ್ರಿಕೆಟ್ ಮಂಡಳಿ (ಎಸಿಬಿ) ಮಂಗಳವಾರ ತಿಳಿಸಿದೆ. ನಜೀಬ್ ತಾರಕೈ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ಟಿ20 ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ನಜೀಬ್ ಅವರು 2014 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟಿ 20 ವಿಶ್ವಕಪ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು.
ಮಾರ್ಚ್ 2017 ರಲ್ಲಿ ನಡೆದ ಟಿ 20 ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಸಿಡಿಸಿದ್ದ 90ರನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಗರಿಷ್ಠ ಸ್ಕೋರ್ ಆಗಿತ್ತು. ಸೆಪ್ಟೆಂಬರ್ 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ್ದ ಏಕದಿನ ಪಂದ್ಯವೇ ಅವರ ಕೊನೇ ಪಂದ್ಯವೂ ಆಗಿದೆ.
# ಕಲ್ಲಿದ್ದಲು ಹಗರಣದಲ್ಲಿ ಮಾಜಿ ಸಚಿವ ದಿಲೀಪ್ ರೇ ದೋಷಿ
1999 ರಲ್ಲಿ ಜಾರ್ಖಂಡ್ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಅವರನ್ನು ಮಂಗಳವಾರ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದೆ. ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಈ ತೀರ್ಪು ನೀಡಿದ್ದಾರೆ. ರೇ ಅವರು ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರದಲ್ಲಿ ರೇ ರಾಜ್ಯ ಸಚಿವ (ಕಲ್ಲಿದ್ದಲು) ಆಗಿ ಸೇವೆ ಸಲ್ಲಿದ್ದರು.
ಹಗರಣ ಸಂಬಂಧ ತೀರ್ಪು ಪ್ರಕಟಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭಾರತ್ ಪರಾಶರ್, ದಿಲೀಪ್ ರಾಯ್ ಜೊತೆ ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ್ ಗೌತಮ್, ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ (ಸಿಟಿಎಲ್)ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಾಲ್ರನ್ನು ದೋಷಿಗಳೆಂದು ಹೇಳಿದ್ದಾರೆ. ಅಕ್ಟೋಬರ್ 14 ರಂದು ನ್ಯಾಯಾಲಯವು ಶಿಕ್ಷೆಯ ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣ ಘೋಷಿಸಲಿದೆ.
# ನಿರ್ದೇಶಕ ನಾಗೇಶ್ ಬಾಬು ನಿಧನ
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗೇಶ್ ಬಾಬ ಅನಾರೋಗ್ಯದಿಂದ ನಿಧನರಾಗಿದ್ದಾರೆ. ನಾಗೇಶ್ ಬಾಬ ಅವರಿಗೆ 82 ವರ್ಷ ವಯಸ್ಸಾಗಿತ್ತು. 1957ರಲ್ಲಿ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಾಗೇಶ್ ಬಾಬ 1970ರಲ್ಲಿ ‘ಅನಿರೀಕ್ಷಿತ’ ಎಂಬ ಚಿತ್ರದ ಮೂಲಕ ಪೂರ್ಣಪ್ರಮಾಣದಲ್ಲಿ ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಪ್ರೇಮದ ಪುತ್ರಿ, ಪ್ರತಿಮಾ, ಬೆಟ್ಟದ ಕಳ್ಳ, ತೂಗುದೀಪ ಮೊದಲಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ಸಂಭಾಷಣಾಕಾರರಾಗಿ ಕೆಲಸ ಮಾಡಿದ್ದರು ನಾಗೇಶ್. ಸ್ಥಿರಚಿತ್ರ ಛಾಯಾಗ್ರಹಣ ವಿಭಾಗದಲ್ಲಿ ಕನ್ನಡ ಚಿತ್ರರಂಗಕ್ಕೆ ನಾಗೇಶ್ ಬಾಬು ಕೊಡುಗೆ ಅಪಾರ.
ಬೆಂಗಳೂರಿನ ಗಾಂಧಿನಗರದಲ್ಲಿ 1972ರಲ್ಲಿ ಅವರು ಆರಂಭಿಸಿದ್ದ ಪ್ರಗತಿ ಸ್ಟುಡಿಯೋ ಕನ್ನಡ ಚಿತ್ರರಂಗದ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಹಣ ಮಾಡಿದೆ. 2009ರಲ್ಲಿ ನಾಗೇಶ್ ಬಾಬು ತಯಾರಿಸಿದ ತತ್ವಮಸಿ ಯು ಆರ್ ದಟ್ ಎಂಬ ಇಂಗ್ಲೀಷ್ ಸಾಕ್ಷ್ಯ ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿತ್ತು. ಹಲವು ವರ್ಷಗಳ ಕಾಲ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ಕಾರ್ಯನಿರ್ವಹಿಸಿದ್ದರು.
# ಕೇಂದ್ರದ ಮಾಜಿ ಸಚಿವ ರಶೀದ್ ಮಸೂದ್ ನಿಧನ
ಕೇಂದ್ರದ ಮಾಜಿ ಸಚಿವ ರಶೀದ್ ಮಸೂದ್ (73) ಅವರು ನಿಧನರಾಗಿದ್ದಾರೆ. ಉತ್ತರ ಪ್ರದೇಶದ ಸಹಾರನಪುರ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ರಶೀದ್, ರಾಜ್ಯಸಭೆಯ ಸದಸ್ಯರಾಗಿಯೂ ಕೆಲ ಅವಧಿಗೆ ಕಾರ್ಯನಿರ್ವಹಿಸಿದ್ದರು. ಜನತಾದಳ ಅಭ್ಯರ್ಥಿಯಾಗಿ 1989ರ ಲೋಕಸಭೆ ಚುನಾವಣೆ ಗೆದ್ದಿದ್ದ ಅವರು, ಅಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.