Current AffairsSpardha Times

ಇಂದಿನ ಪ್ರಚಲಿತ ವಿದ್ಯಮಾನಗಳು ( 04-11-2020 )

Share With Friends

# ಅಮೆರಿಕ ಚುನಾವಣೆಯಲ್ಲಿ ಗೆದ್ದ ನಾಲ್ವರು ಭಾರತೀಯರು : 
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಮುಖಂಡರ ಪ್ರಾಬಲ್ಯವೂ ಮುಂದುವರೆದಿದೆ. ಭಾರತೀಯ ಮೂಲದ ಡೆಮಾಕ್ರಾಟಿಕ್ ಕಾಂಗ್ರೆಸ್ ನಾಯಕ ರಾಜಾ ಕೃಷ್ಣಮೂರ್ತಿ ಸತತ 3 ನೇ ಬಾರಿಗೆ ಅಮೆರಿಕದ ಪ್ರತಿನಿಧಿನಗಳ ಸದನಕ್ಕೆ (ಸಂಸತ್) ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ಜನಿಸಿದ ರಾಜಾ ಅವರು ಈ ಮೂಲಕ ಅಮೆರಿಕದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ರಾಜಾ ಕೃಷ್ಣಮೂರ್ತಿ(47) ಅವರು ಇಲಿನಾಯ್ಸ್ ರಾಜ್ಯದಲ್ಲಿ ಲಿಬರಲ್ ಪಕ್ಷದ ಅಭ್ಯರ್ಥಿ ಪ್ರೆಸ್‍ಟನ್ ನೆಲ್ಸನ್ ಅವರನ್ನು ಸುಲಭವಾಗಿ ಮಣಿಸಿ ಯುಎಸ್ ಹೌಸ್ ಆಫ್ ರೆಪ್ರಸೆಂಟಿಟಿವ್‍ಗೆ ಮರು ಆಯ್ಕೆಯಾದ್ದಾರೆ. 2016ರಿಂದಲೂ ಅಮೆರಿಕ ಸಂಸತ್ತಿಗೆ ಸತತವಾಗಿ ಆಯ್ಕೆಯಾಗುತ್ತಿರುವ ರಾಜಾ ಕೃಷ್ಣಮೂರ್ತಿ ಅವರ ‍ಪಾಲಕರು ತಮಿಳುನಾಡಿನವರು.

ಭಾರತೀಯ ಮೂಲದವರೇ ಆದ ಕಾಂಗ್ರೆಸ್ಸಿಗ ಅಮಿ ಬೇರಾ ಅವರು ಕ್ಯಾಲಿಫೋರ್ನಿಯಾದಿಂದ 5ನೇ ಬಾರಿ ಗೆಲುವು ಸಾಧಿಸಿದ್ದಾರೆ. 1957-1963ರವರೆಗೆ ದಿಲೀಪ್‌ ಸಿಂಗ್‌ ಸೌದ್‌ ಎಂಬವರು ಸತತ ಮೂರು ಬಾರಿ ಅಮೆರಿಕ ಸಂಸತ್ತಿಗೆ ಆಯ್ಕೆಯಾಗಿದ್ದ ಭಾರತೀಯರಾಗಿದ್ದರು. ಈಗ ಅಮಿ ಬೆರಾ ಅವರೂ ಅದೇ ದಾಖಲೆ ಮಾಡಿದ್ದಾರೆ. ವಾಷಿಂಗ್ಟನ್‌ ಸ್ಟೇಟ್‌ನಿಂದ ಪ್ರಮೀಳಾ ಜಯಪಾಲ್‌, ಕ್ಯಾಲಿಫೊರ್ನಿಯಾದಿಂದ ರೊ ಖನ್ನಾ ಹೌಸ್‌ ಆಫ್‌ ರೆಪ್ರಸೆಂಟೇಟಿವ್‌ಗೆ ಆಯ್ಕೆಯಾಗಿದ್ದಾರೆ. ರೋ ಖನ್ನಾ ಅವರು ಸತತ ಮೂರನೆ ಬಾರಿ ಪ್ರತಿನಿಧಿಗಳ ಸದನದಲ್ಲಿ ಸ್ಥಾನ ಪಡೆಯಲು ಉತ್ಸುಕರಾಗಿದ್ದಾರೆ.

# ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ :
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಿಪಬ್ಲಿಕ್ ಟವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‍ಪಿ) ಹಗರಣದಲ್ಲಿ ಈಗಾಗಲೇ ರಿಪಬ್ಲಿಕ್ ಟಿವಿ ಭಾರೀ ವಿವಾದಕ್ಕೆ ಸಿಲುಕಿರುವಾಗಲೇ ಅದರ ಮುಖ್ಯಸ್ಥ ಗೋಸ್ವಾಮಿಯವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ವಾಸ್ತು ಶಿಲ್ಪಿ ಅನ್ವಯ್ ನಾಯಕ್ (53) ಮತ್ತು ಅವರ ತಾಯಿ ಆತ್ಮಹತ್ಯೆಗೆ ಶರಣಾಗಿದ್ದರು. ಅರ್ನಬ್ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್ ಟಿವಿ ಅನ್ವಯ್ ನಾಯಕ್ ಅವರಿಗೆ ಬಾಕಿ ಹಣ ನೀಡಬೇಕಿತ್ತು. ಈ ಸಂಬಂದ ವಾದ-ವಿವಾದ ಉಂಟಾದ ನಂತರ ವಾಸ್ತುಶಿಲ್ಪಿ ಮತ್ತು ಅವರ ತಾಯಿ 2018ರ ಮೇ ತಿಂಗಳಿನಲ್ಲಿ ಸಾವಿಗೆ ಶರಣಾಗಿದ್ದರು. ಈ ಪ್ರಕರಣದ ಸಂಬಂದ ಅಲಿಭಾಗ್ ಠಾಣೆ ಪೊಲೀಸರು ಅರ್ನಬ್ ಗೋಸ್ವಾಮಿ ಅವರನ್ನು ವಶಕ್ಕೆ ತೆಗೆದುಕೊಂಡರು.

# ಬಾಲಿವುಡ್ ಹಿರಿಯ ನಟ ಫರಾಜ್ ಖಾನ್ ನಿಧನ :
ಬಾಲಿವುಡ್ ಚಿತ್ರರಂಗದ ಹಿರಿಯ ನಟ, ಮೆಹೆಂದಿ, ಫರೀಬ್ , ದುಲ್ಹನ್ ಬನು ಮೈ ತೇರಿ ಚಿತ್ರದಲ್ಲಿ ನಟಿಸಿದ ಫರಾಜ್ ಖಾನ್ (50) ಅವರು ಅನಾರೋಗ್ಯದಿಂದ ನಿಧನ ಹೊಂದಿದರು. ಅನಾರೋಗ್ಯದಿಂದ ಖಾನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನಹೊಂದಿದರು. ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದ ಖಾನ್ ಚಿಕಿತ್ಸೆಗಾಗಿ ಸಲ್ಮಾನ್ ಖಾನ್, ಪೂಜಾ ಭಟ್ ಸಹಾಯ ಮಾಡಿದ್ದರು.

# ವಿಚ್ಛೇದನ ನಂತರವೂ ಪತ್ನಿ, ಮಕ್ಕಳಿಗೆ ಪತಿ ಜೀವನಾಂಶ ಕೊಡಬೇಕು  : 
ವಿವಾಹ ವಿಚ್ಛೇದನ ಪಡೆದ ನಂತರವೂ ಕೂಡಾ ಪತ್ನಿ ಮತ್ತು ಮಕ್ಕಳ ಜೀವನ ನಿರ್ವಹಣೆಗೆ ಪತಿ ಜೀವನಾಂಶ ಕೊಡಬೇಕು ಎಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಅಲಹಾಬಾದ್ ಹೈಕೋರ್ಟ್ (ನವೆಂಬರ್ 4, 2020) ಆದೇಶ ನೀಡಿದೆ. ಇಡೀ ಕುಟುಂಬವನ್ನು ಕಾಪಾಡುವುದು ಕಾನೂನಾತ್ಮಕ, ನೈತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆ ಮತ್ತು ಬದ್ಧತೆಯಾಗಿದೆ ಎಂದು ಹೈಕೋರ್ಟ್ ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ವರದಿ ತಿಳಿಸಿದೆ. ಪೋಷಕರ ಜತೆ ವಾಸವಾಗಿರುವ ಪತ್ನಿಗೆ ಜೀವನಾಂಶ ನೀಡಲು ನಿರಾಕರಿಸಿರುವ ಪತಿಯ ವಿರುದ್ಧ ಜಾನ್ಸಿ ಕೌಟುಂಬಿಕ ನ್ಯಾಯಾಲಯ ಹೈಕೋರ್ಟ್ ಗೆ ಸಲ್ಲಿಸಿರುವ ದೂರಿನ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ಆದೇಶವನ್ನು ಹೊರಡಿಸಿರುವುದಾಗಿ ವರದಿ ವಿವರಿಸಿದೆ.

ಮದುವೆ ಮಾಡಿಕೊಟ್ಟ ಮೇಲೆ ಮಗಳಿಗೆ ಕಿರುಕುಳ, ಚಿತ್ರಹಿಂಸೆ ಕೊಟ್ಟರೆ, ಅವರ ಪೋಷಕರ ಕನಸು ಭಗ್ನಗೊಂಡಂತೆ, ಅಷ್ಟೇ ಅಲ್ಲ ಅವರಿಗೆ ಆಘಾತವನ್ನು ತಂದೊಡ್ಡಲಿದೆ ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ. ಒಂದು ಬಾರಿ ಹೆಣ್ಣು ತನ್ನ ಮನೆ ಬಿಟ್ಟು ಮಾವನ ಮನೆ ಸೇರಿದ ಮೇಲೆ ಆಕೆಯನ್ನು ನೈತಿಕವಾಗಿ ಮತ್ತು ಕಾನೂನುಬದ್ಧವಾಗಿ ಚೆನ್ನಾಗಿ ನೋಡಿಕೊಳ್ಳುವ ಹೊಣೆಗಾರಿಕೆ ಪತಿಯದ್ದಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

# ಅಮೆರಿಕದಲ್ಲಿ  ಮೊದಲ ಬಾರಿಗೆ ತೃತೀಯ ಲಿಂಗಿಗಳು ಸೆನೆಟರ್ ಗಳಾಗಿ ಆಯ್ಕೆ : 
ಅಮೆರಿಕದ ಡೆಲವರೆ ಮತ್ತು ವರ್ಮೊಂಟ್ ಕ್ಷೇತ್ರಗಳಲ್ಲಿ ಡೆಮಾಕ್ರಟಿಕ್ ಪಕ್ಷದ ತೃತೀಯ ಲಿಂಗ ಅಭ್ಯರ್ಥಿಗಳು ಸೆನೆಟರ್ ಗಳಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಡೆಲವರೆ ರಾಜ್ಯದ ಮೊದಲ ತೃತೀಯ ಲಿಂಗಿ ಸೆನೆಟರ್ ಆಗಿ 30 ವರ್ಷದ ಸರಹ್ ಮೆಕ್ ಬ್ರೈಡ್ ಆಯ್ಕೆಯಾದರೆ ಉತ್ತರ ವರ್ಮೊಂಟ್ ನಲ್ಲಿ 26 ವರ್ಷದ ಟೈಲರ್ ಸ್ಮಾಲ್ ಮೊದಲ ತೃತೀಯ ಲಿಂಗಿ ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೇಶದ 5 ನೇ ತೃತೀಯ ಲಿಂಗಿ ಸೆನೆಟರ್ ಆಗಿದ್ದಾರೆ.

2017ರಲ್ಲಿ ಅಮೆರಿಕಾದ ವರ್ಜೀನಿಯಾ ರಾಜ್ಯದಲ್ಲಿ ಡೆಮಾಕ್ರಟಿಕ್ ಪಕ್ಷದ ಡನಿಕಾ ರೊಯೆಮ್ ಅವರು ಮೊದಲ ಬಹಿರಂಗವಾಗಿ ಘೋಷಿಸಿಲ್ಪಟ್ಟ ತೃತೀಯಲಿಂಗಿ ಸೆನೆಟರ್ ಆಗಿದ್ದರು. ನಂತರ 2018ರಲ್ಲಿ ವರ್ಮೊಂಟ್ ಡೆಮಾಕ್ರಟ್ ಕ್ರಿಸ್ಟಿನ್ ಹಲ್ಲ್ ಕ್ವಿಸ್ಟ್ ಗವರ್ನರ್ ಆಗಿ ನಾಮಾಂಕಿತಗೊಂಡ ಮೊದಲ ತೃತೀಯಲಿಂಗಿ ಆಗಿದ್ದಾರೆ. ವಿಕ್ಟರಿ ಫಂಡ್ ಪ್ರಕಾರ, ಸರ್ಕಾರದಲ್ಲಿ ಪ್ರಸ್ತುತ ನಾಲ್ವರು ಬಹಿರಂಗವಾಗಿ ಘೋಷಿಸಿಕೊಂಡ ತೃತೀಯ ಲಿಂಗಿ ಆಡಳಿತಗಾರರು ಇದ್ದಾರೆ.

# ಮಲಬಾರ್‌ ಸಮರಾಭ್ಯಾಸ ಆರಂಭ :
ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡ ಕ್ವಾಡ್‌ ದೇಶಗಳು ಬಂಗಾಳ ಕೊಲ್ಲಿಯಲ್ಲಿ ಮಲಬಾರ್‌ ಸಮರಾಭ್ಯಾಸ ಆರಂಭಿಸಿವೆ. 24ನೇ ಮಲಬಾರ್‌ ಸಮ ರಾಭ್ಯಾಸದಲ್ಲಿ ಭಾರತೀಯ ನೌಕಾಪಡೆ, ಅಮೆರಿಕದ ನೌಕಾ ಪಡೆ, ಜಪಾನ್‌ನ ಮೆರಿ ಟೈಮ್‌ ಸೆಲ್ಫ್ ಡಿಫೆನ್ಸ್‌ ಫೋರ್ಸ್‌ ಮತ್ತು ರಾಯಲ್‌ ಆಸ್ಟ್ರೇಲಿಯನ್‌ ನೌಕಾಪಡೆ ಭಾಗಿಯಾಗಿವೆ. ವಿಶಾಖಪಟ್ಟಣಂ ಬಳಿಯಲ್ಲಿ ಈ ಕವಾಯತು ಶುರು ವಾಗಿದೆ.

# ಮಹಿಳಾ ಟಿ20 ಚಾಲೆಂಜ್ ಟೂರ್ನಿ ಆರಂಭ :
ಮಹಿಳೆಯರ ಮಿನಿ ಐಪಿಎಲ್ ಎಂದೇ ಹೆಸರಾಗಿರುವ ಮಹಿಳಾ ಟಿ20 ಚಾಲೆಂಜ್ ಟೂರ್ನಿಗೆ ಚಾಲನೆ ಸಿಕ್ಕಿದೆ. ಸ್ಟಾರ್ ಆಟಗಾರ್ತಿ ಹರ್ವನ್ ಪ್ರೀತ್ ಕೌರ್ ನಾಯಕತ್ವದ ಹಾಲಿ ಚಾಂಪಿಯನ್ ಸೂಪರ್​ನೋವಾಸ್ ಹಾಗೂ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಸಾರಥ್ಯದ ಹಾಲಿ ರನ್ನರ್​ಅಪ್ ವೆಲಾಸಿಟಿ ತಂಡಗಳು ಮೊದಲ ಪಂದ್ಯದಲ್ಲಿ ಎದುರಾಗಲಿವೆ.
ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಬಳಿಕ ನಡೆಯುತ್ತಿರುವ ಮೊದಲ ಪ್ರಮುಖ ಮಹಿಳಾ ಟೂರ್ನಿ ಇದಾಗಿದೆ.

# ನಟಿ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ : 
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ತನ್ನ ವಿರುದ್ದ ಹುರುಳಿಲ್ಲದ ಆರೋಪಗಳನ್ನು ಮಾಡಿ, ಘನತೆಗೆ ಧಕ್ಕೆ ತಂದಿರುವ ನಟಿ ಕಂಗನಾ ರಾಣಾವತ್ ವಿರುದ್ಧ ಕವಿ ಹಾಗೂ ಸಾಹಿತಿ ಜಾವೇದ್ ಅಖ್ತರ್ ಮಾನನಷ್ಟ ಮೊಕದ್ದಮೆಯನ್ನು ಮುಂಬೈ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ.

# ಬಾಲಿವುಡ್ ನಟನ ಬಂಧನ : 
ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಾಲಿವುಡ್ ನಟ ವಿಜಯ ರಾಜ್ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಸಿನೆಮಾ ಚಿತ್ರೀಕರಣದ ವೇಳೆ ವಿಜಯ್ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪ ಹೊರಿಸಲಾಗಿತ್ತು. ವಿಜಯ್ ವಿರುದ್ಧ ಮಹಿಳೆಯೊಬ್ಬರು ಗೊಂಡಿಯಾದ ರಾಮನಗರ ಪೊಲೀಸ್ ಠಾಣೆಯಲ್ಲಿ ನ.2 ರಂದು ರಾತ್ರಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ನಟನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಮನಗರ ಪೊಲೀಸರು ವಿಜಯ್ ಅವರನ್ನು ಮಂಗಳವಾರ ಗೊಂಡಿಯಾ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಲಯ ಜಾಮೀನು ನೀಡಿದೆ.

# ಚೀನಾದ ಕೊರೊನಾ ಲಸಿಕೆ ಪಡೆದ ಯುಎಇ ಪ್ರಧಾನಿ
ಯುಎಇ ಪ್ರಧಾನಿ ಶೇಖ್ ಮೊಹಮ್ಮದ್ ಅವರು ಚೀನಾದ ಕೊರೊನಾ ಲಸಿಕೆಯ ಮೊದಲ ಡೋಸ್‌ ಅನ್ನು ಪಡೆದಿದ್ದಾರೆ. ಚೀನಾದ ಲಸಿಕೆಯನ್ನು ಸಿನೋಫಾರ್ಮ್ ಅಭಿವೃದ್ಧಿಪಡಿಸಿದೆ. ಕಳೆದ ತಿಂಗಳು ತುರ್ತು ಪರಿಸ್ಥಿತಿಯಲ್ಲಿ ಸಿನೋಫಾರ್ಮ್ ನ ಈ ಲಸಿಕೆಯನ್ನು ಬಳಕೆ ಮಾಡಬಹುದು ಎಂದು ತಿಳಿಸಿತ್ತು. ಬಹ್ರೇನ್ ಚೀನಾದ ಲಸಿಕೆಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಲು ಒಪ್ಪಿಗೆ ಸೂಚಿಸಿದೆ.

#  ವಾಯುಪಡೆಗೆ ಮೂರು ರಫೇಲ್ ವಿಮಾನಗಳು ಸೇರ್ಪಡೆ : 
ವಾಯುಸೇನೆಗೆ ಮತ್ತೆ ಮೂರು ರಫೇಲ್ ವಿಮಾನ ಸೇರ್ಪಡೆಯಾಗಲಿವೆ. ಐದು ರಫೇಲ್ ವಿಮಾನಗಳು ಜುಲೈ 28 ರಂದು ಭಾರತಕ್ಕೆ ಬಂದಿದ್ದವು. ಈಗ ಈ 3 ವಿಮಾನಗಳ ಸೇರ್ಪಡೆಯೊಂದಿಗೆ ಭಾರತೀಯ ವಾಯುಪಡೆಗೆ 8 ಯುದ್ಧ ವಿಮಾನಗಳು ಸೇರಿದಂತಾಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.

 

Leave a Reply

Your email address will not be published. Required fields are marked *

error: Content Copyright protected !!