GKSpardha Times

ಹಿಂಡಲಗಾ ಕೇಂದ್ರ ಕಾರಾಗೃಹದ ಇತಿಹಾಸ ಗೊತ್ತೇ..?

Share With Friends

ಕರ್ನಾಟಕದ ಜೈಲುಗಳು ಅಂದರೆ ನೆನಪಾಗೋದೇ ಬೆಂಗಳೂರಿನ ಬಳಿ ಇರುವ ಪರಪ್ಪನ ಅಗ್ರಹಾರ ಮತ್ತು ಬೆಳಗಾವಿಯ ಹಿಂಡಲಗಾ ಜೈಲು ಅಥವಾ ಹಿಂಡಲಗಾ ಕೇಂದ್ರ ಕಾರಾಗೃಹ. ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಲು 1923 ರಲ್ಲಿ ಬ್ರಿಟಿಷರು ನಿರ್ಮಿಸಿದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹವು ದೇಶದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿದೆ. 100 ವರ್ಷಗಳ ಹಳೆಯದಾದ ಈ ಜೈಲು ನಮ್ಮ ರಾಷ್ಟ್ರದ ಇತಿಹಾಸದ ಭಾಗವಾಗಿದೆ.

ಹೈಲೈಟ್ಸ್ :
*ಸ್ವಾತಂತ್ರ್ಯ ಹೋರಾಟಗಾರರನ್ನು ಇರಿಸಲು 1923 ರಲ್ಲಿ ಬ್ರಿಟಿಷರು ನಿರ್ಮಿಸಿದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹವು ದೇಶದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿದೆ.

*ರಾಜ್ಯದಲ್ಲಿ ಗಲ್ಲಿಗೇರಿಸುವ ಏಕೈಕ ಜೈಲು ಎಂದರೆ ಬೆಳಗಾವಿ ಹಿಂಡಲಗಾ ಜೈಲು. ನಟೋರಿಯಸ್ ಕೈದಿಗಳನ್ನು ಇಡಲು 36 ಕತ್ತಲು ಕೋಣೆಯ ವ್ಯವಸ್ಥೆ ಬೆಳಗಾವಿ ಜೈಲಿನಲ್ಲಿದೆ.

*100 ವರ್ಷಗಳ ಹಳೆಯದಾದ ಈ ಜೈಲು ನಮ್ಮ ರಾಷ್ಟ್ರದ ಇತಿಹಾಸದ ಭಾಗವಾಗಿದೆ. ಬೆಳಗಾವಿಯಿಂದ 6 ಕಿಮೀ ದೂರದಲ್ಲಿ. ಹಿಂಡಲಗಾ ಜೈಲನ್ನು ಸುಮಾರು 99 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ.

*99 ಎಕರೆಯಲ್ಲಿ 30 ಎಕರೆಯಷ್ಟು ಭೂಮಿಯನ್ನು ಕೃಷಿ ಮತ್ತು ಜಾನುವಾರುಗಳಿಗೆ ಮೇಯಿಸಲು ಮೀಸಲಿಡಲಾಗಿದೆ. ಇದು ಹಸಿರು ಸೆರೆಮನೆಯಾಗಿದ್ದು, ವಿಭಾಗಗಳ ನಡುವಿನ ತೆರೆದ ಸ್ಥಳಗಳಲ್ಲಿ ಹೇರಳವಾದ ಮರಗಳು ಮತ್ತು ಸಸ್ಯವರ್ಗವನ್ನು ಹೊಂದಿದೆ.

*ಇನ್ನು ಈ ಜೈಲಿನಲ್ಲಿ ಸ್ವಾತಂತ್ರ್ಯ ವೀರ್​ ವಿನಾಯಕ ದಾಮೋದರ್ ಸಾವರ್ಕರ್​ನನ್ನು ಸಹ ಏಪ್ರಿಲ್ 4, 1950 ರಿಂದ ಜುಲೈ 13, 1950 ರವರೆಗೆ ಒಟ್ಟು 100 ದಿನಗಳ ಕಾಲ ಇರಿಸಲಾಗಿತ್ತು. ಹೀಗಾಗಿ ಅನೇಕ ಸ್ಥಳೀಯರು ಜೈಲಿನ ಮುಂದೆ ಸಾವರ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಒತ್ತಾಯಿಸುತ್ತಿದ್ದಾರೆ.

*ಜೈಲಿನ ಮೂರು ಸ್ಥಳಗಳಲ್ಲಿ ಗಲ್ಲುಶಿಕ್ಷೆ ವಿಧಿಸಬಹುದಾಗಿದೆ. ಜೈಲಿನಲ್ಲಿ ಗಲ್ಲಿಗೇರಿದ ಕೊನೆಯ ವ್ಯಕ್ತಿ ಗೋಕಾಕ್‌ನ ಹನುಮಪ್ಪ ಮರಿಯಾಲ್ – ನವೆಂಬರ್ 9, 1983. ಅದಕ್ಕೂ ಮೊದಲು, ಆರು ಜನರನ್ನು 1976 ರಲ್ಲಿ ಮತ್ತು ಐವರನ್ನು 1978 ರಲ್ಲಿ ಗಲ್ಲಿಗೇರಿಸಲಾಯಿತು

*ಹಿಂಡಲಗಾ ಜೈಲಿನಲ್ಲಿ ನಾಲ್ವರು ವೀರಪ್ಪನ್ ಗ್ಯಾಂಗ್ ಸದಸ್ಯರು ಸೇರಿದಂತೆ ಮರಣದಂಡನೆ ಶಿಕ್ಷೆಗೆ ಒಳಗಾದ ಹಲವಾರು ಅಪರಾಧಿಗಳು ಇದ್ದಾರೆ. ಸರಣಿ ಅತ್ಯಾಚಾರಿ ಮತ್ತು ಹಂತಕ ಉಮೇಶ್ ರೆಡ್ಡಿ ಸೇರಿದಂತೆ ಕುಖ್ಯಾತ ರೌಡಿಗಳು ಮತ್ತು ಶಂಕಿತ ಸಿಮಿ ಕಾರ್ಯಕರ್ತರು ಸಹ ಇದೇ ಜೈಲಿನಲ್ಲಿದ್ದಾರೆ.

*ಜೈಲು ಎರಡು ದೊಡ್ಡ ಸಂಕೀರ್ಣಗಳನ್ನು ಒಳಗೊಂಡಿದೆ. ಒಂದು ಸಂಕೀರ್ಣವು ಪುರುಷ ಅಪರಾಧಿಗಳಿಗೆ ಬ್ಯಾರಕ್‌ಗಳನ್ನು ಹೊಂದಿದೆ. ಇನ್ನೊಂದು ವಿಚಾರಣಾಧೀನ ಕೈದಿಗಳಿಗೆ. ಅಪರಾಧಿಗಳ ಕೆಲಸಕ್ಕೆ ನೇಕಾರಿಕೆ, ಮತ್ತು ಟೈಲರಿಂಗ್ ಸೌಲಭ್ಯವಿದೆ.

*ಅಂಡರ್ ಟ್ರಯಲ್ ವಿಭಾಗದಲ್ಲಿ ಸೆಲ್‌ಗಳು ಮತ್ತು ಬ್ಯಾರಕ್‌ಗಳಿವೆ. ಇಲ್ಲಿ ಗ್ರಂಥಾಲಯ, ಮರಗೆಲಸ ವಿಭಾಗ, ಟೈಲರಿಂಗ್ ಇದೆ. ಹೆಚ್ಚಿನ ಭದ್ರತೆಯ ಕೈದಿಗಳಿಗಾಗಿ ಕೆಲವು ವಿಶೇಷ ಕೋಣೆಗಳು ಸಹ ಇವೆ.

*ಒಟ್ಟು ಈ ಜೈಲಿನಲ್ಲಿ ಸುಮಾರು 1,200 ಕೈದಿಗಳನ್ನು ಇರಿಸಬಹುದಾಗಿದೆ. ಇದಲ್ಲದೆ, ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಕರ್ನಾಟಕದ ಏಕೈಕ ಜೈಲು ಇದಾಗಿದೆ. ಆದರೆ, ಕಳೆದ ನಾಲ್ಕು ದಶಕಗಳಲ್ಲಿ ಈ ಜೈಲಿನಲ್ಲಿ ಯಾರಿಗೂ ಸಹ ಮರಣದಂಡನೆ ವಿಧಿಸಿಲ್ಲ.

*ಜೈಲಿನಲ್ಲಿದ್ದವರ ಪೈಕಿ ಒಟ್ಟು 27 ಕೈದಿಗಳು ಮರಣದಂಡನೆಗೆ ಗುರಿಯಾಗಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ಇವರ ಕ್ಷಮಾಪಣಾ ಅರ್ಜಿಗಳು ಇನ್ನೂ ನ್ಯಾಯಾಲಯದ ಮುಂದೆ ಮತ್ತು ಕೆಲವು ರಾಷ್ಟ್ರಪತಿಗಳ ಮುಂದೆ ಇವೆ.

*ಕನ್ನಡ ಚಲನಚಿತ್ರ ‘ಮಿಂಚಿನ ಓಟ’ ಮತ್ತು ಹಿಂದಿ ಚಲನಚಿತ್ರ ‘ಮೊಹ್ರಾ’ ಸೇರಿದಂತೆ ಹಲವಾರು ಚಲನಚಿತ್ರಗಳನ್ನು ಹಿಂಡಲಗಾ ಜೈಲಿನಲ್ಲಿ ಚಿತ್ರೀಕರಿಸಲಾಗಿದೆ.

*ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ ಹಿಂಡಲಗಾ ಜೈಲಿನಲ್ಲಿದ್ದ. ಆತ ಜನವರಿ 14 ಮತ್ತು ಮಾರ್ಚ್ 21 ರಂದು ಹಿಂಡಲಗಾ ಜೈಲಿನಿಂದ ಸೆಲ್ ಫೋನ್ ಬಳಸಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದ. 10 ಕೋಟಿ ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ.

Leave a Reply

Your email address will not be published. Required fields are marked *

error: Content Copyright protected !!