ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಕುರಿತ ಒಂದಿಷ್ಟು ಮಾಹಿತಿ
ಇಂದಿರಾ ಗಾಂಧಿ ಭಾರತದ ಏಕೈಕ ಮಹಿಳಾ ಪ್ರಧಾನಿಯಾಗಿ ಜಗದ್ವಿಖ್ಯಾತಿ ಪಡೆದವರು. ಕೆಲವು ವಿವಾದಾತ್ಮಕ ನಿರ್ಧಾರ ಗಳಿಂದ ಟೀಕೆಗೆ ಗುರಿಯಾಗಿದ್ದರೂ ಅತ್ಯಂತ ಜನಪ್ರಿಯ ಪ್ರಧಾನಿಯಾಗಿದ್ದರು. ಇಂದಿರಾ ಪ್ರಿಯದರ್ಶಿನಿ ಗಾಂಧಿ ಭಾರತದ 3ನೆ ಪ್ರಧಾನಮಂತ್ರಿ ಹಾಗೂ ದೇಶದ ಏಕೈಕ ಮಹಿಳಾ ಪ್ರಧಾನಿ.
ನವೆಂಬರ್ 19, 1917ರಲ್ಲಿ ಅಲಹಾಬಾದ್ನಲ್ಲಿ ಜನಿಸಿದರು. ಇವರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ಲಾಲ್ ಅವರ ಏಕಮಾತ್ರ ಪುತ್ರಿ. ತಂದೆಯವರ ಒಡನಾಟದೊಂದಿಗೆ ಬಾಲ್ಯದಿಂದಲೂ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಇಂದಿರಾ 1966 ರಿಂದ 1977ರ ವರೆಗೆ ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಮತ್ತೆ 1980ರಲ್ಲಿ ಪ್ರಧಾನಿಯಾದರು.
1984ರಲ್ಲಿ ಹತ್ಯೆಯಾಗುವ ತನಕ ದೇಶದ ಅತ್ಯುನ್ನತ ಹುದೆಯಲ್ಲಿದ್ದ ಇಂದಿರಾಗಾಂಧಿಯವರು, ತಮ್ಮ ತಂದೆಯ ನಂತರ ದೀರ್ಘ ಕಾಲ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಪಡೆದಿದ್ದಾರೆ. ನೆಹರು ಅವರು 1947 ಮತ್ತು 1964ರ ನಡುವೆ ಪ್ರಧಾನಮಂತ್ರಿಯಾಗಿದ್ದಾಗ ಇಂದಿರಾಗಾಂಧಿ, ನೆಹರು ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
959ರಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕಗೊಂಡರು. 1964ರಲ್ಲಿ ನೆಹರು ನಿಧನರಾದ ನಂತರ ಕಾಂಗ್ರೆಸ್ ಪಕ್ಷದ ನಾಯಕತ್ವ ಸ್ಥಾನ ನಿರಾಕರಿಸಿದರು. ಬದಲಿಗೆ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೇತೃತ್ವದ ಸರ್ಕಾರದಲ್ಲಿ ಸಂಪುಟ ಸಚಿವ ರಾಗಿ ಸೇರ್ಪಡೆಯಾಗಲು ಬಯಸಿದರು. ವಾರ್ತಾ ಸಚಿವರಾಗಿ ಹಾಗೂ ಭಾರತದ ಪ್ರಥಮ ಮಹಿಳಾ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 1966ರಲ್ಲಿ ಶಾಸ್ತ್ರಿಯವರು ನಿಧನರಾದ ನಂತರ ಸಂಸದೀಯ ನಾಯಕತ್ವಕ್ಕಾಗಿ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಮೊರಾರ್ಜಿ ದೇಸಾಯಿ ಅವರನ್ನು ಪರಾಭವಗೊಳಿಸಿ ನಾಯಕರಾಗಿ ಹೊರಹೊಮ್ಮಿ ಭಾರತದ ಪ್ರಧಾನಮಂತ್ರಿಯಾದರು.
# ಅಧಿಕಾರ ಕೇಂದ್ರೀಕರಣ :
ತಮ್ಮ ರಾಜಕೀಯ ಜೀವನದಲ್ಲಿ ಅತ್ಯಂತ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ ಇಂದಿರಾಗಾಂಧಿ ಅಧಿಕಾರವನ್ನು ತಮ್ಮ ಕೇಂದ್ರೀಕರಣ ಮಾಡಿಕೊಂಡ ಆರೋಪಕ್ಕೆ ಗುರಿಯಾಗಿದ್ದರು. ಇವರ ಆಡಳಿತದಲ್ಲಿ ಇಂಡೋ-ಪಾಕ್ ಸಮರ ನಡೆಯಿತು. ಭಾರತ ಗೆಲುವು ಸಾಧಿಸಿತು. ಇದೇ ವೇಳೆ ಪ್ರತ್ಯೇಕ ಬಾಂಗ್ಲಾದೇಶ ಸೃಷ್ಟಿಯಾಯಿತು. ಇವರ ಆಳ್ವಿಕೆಯಲ್ಲಿ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಭಾರತವು ಪ್ರಬಲ ದೇಶವಾಗಿ ಹೊರಹೊಮ್ಮಿತು.
# ಅಂಗ ರಕ್ಷಕರ ಗುಂಡಿಗೆ ಬಲಿ :
1975 ರಿಂದ 1977ರ ವರೆಗೆ ದೇಶದಲ್ಲಿ ವಿವಾದಾತ್ಮಕ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಇಂದಿರಾಗಾಂಧಿಯವರು ದೊಡ್ಡ ವಿವಾದಕ್ಕೆ ಒಳಗಾದರು. ಉಗ್ರಗಾಮಿಗಳ ವಿರುದ್ಧ ಪಂಜಾಬ್ನ ಅಮೃತಸರದ ಸ್ವರ್ಣಮಂದಿರ ಮೇಲೆ ಸೈನಿಕರಿಂದ ಬ್ಲೂಸ್ಟಾರ್ ಕಾರ್ಯಾಚರಣೆ ನಡೆಸಿದರು. ಇದು ಸಿಖ್ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. 31ನೆ ಅಕ್ಟೋಬರ್ 1984ರಲ್ಲಿ ಇಂದಿರಾ ಅವರ ಪಾಲಿಗೆ ಅತ್ಯಂತ ದುರಂತದ ದಿನವಾಗಿತ್ತು. ಅವರ ಸಿಖ್ ಅಂಗರಕ್ಷಕರೇ ಇಂದಿರಾ ಅವರನ್ನು ಗುಂಡಿಕ್ಕಿ ಕೊಂದರು.
# ಇಂದಿರಾ ಮತ್ತು ಮಹತ್ವದ ಸಂಗತಿ
ಶಾಸ್ತ್ರಿಯವರ ಹಠಾತ್ ಮರಣಾನಂತರ ಇಂದಿರಾಗಾಂಧಿ ಪ್ರಧಾನ ಮಂತ್ರಿಯಾದರು. ಇವರನ್ನು ಪ್ರಧಾನಿ ಗದ್ದುಗೆಗೇರಿಸುವಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಕಾಮರಾಜ್ ಅವರದ್ದು ಪ್ರಮುಖ ಪಾತ್ರ.
* ಇಂದಿರಾ ಅವರಿಂದ ಜನಾನುರಾಗಿ ರಾಜಕೀಯ ಸಿದ್ಧಾಂತ ಸ್ಥಾಪನೆ.
* ಚತುರ ಎದುರಾಳಿಗಳ ವಿರುದ್ಧ ಚುನಾವಣೆ ಗೆಲ್ಲುವಲ್ಲಿ ತನ್ನ ಸಾಮಥ್ರ್ಯದ ಪ್ರದರ್ಶನ.
* ಹೆಚ್ಚು ಎಡ ಪಕ್ಷೀಯ ಆರ್ಥಿಕ ನೀತಿಗಳ ಅನುಷ್ಠಾನ ಮತ್ತು ಕೃಷಿ ಉತ್ಪಾದಕತೆಗೆ ಬೆನ್ನು ತಟ್ಟಿ ಪ್ರೊತ್ಸಾಹ.
* 1971ರಲ್ಲಿ ಪಾಕಿಸ್ಥಾನದೊಂದಿಗೆ ನಡೆದ ಕದನದಲ್ಲಿ ಭಾರತದ್ದು ನಿರ್ಣಾಯಕ ಗೆಲುವು.
* 1975 ಅವರ ಪಾಲಿಗೆ ಒಂದು ಅಭದ್ರತೆಯ ಅವಧಿ. ಇದರಿಂದಾಗಿ ಆಗ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆ, ದೀರ್ಘಕಾಲೀನ ನಿರಂಕುಶ ಪ್ರಭುತ್ವ, ಪರಿಣಾಮವಾಗಿ, ಸೋಲರಿಯದ ಕಾಂಗ್ರೆಸ್ ಪಕ್ಷಕ್ಕೆ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವ.
* 1980ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ್ತೆ ಜಯ.
* ಪ್ರಧಾನ ಮಂತ್ರಿ ಅಧಿಕಾರ ಮತ್ತೆ ಇಂದಿರಾ ಗಾಂಧಿ ಕೈಗೆ.
# ಪರಮಾಣು ಮಹತ್ವದ ಒಪ್ಪಂದ :
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಚೀನಾ ಗಣತಂತ್ರ) ಒಡ್ಡಿದ ಪರಮಾಣು ಬೆದರಿಕೆಗೆ ಉತ್ತರವಾಗಿ ಮತ್ತು ಪರಮಾಣು ಬಲಿಷ್ಠ ರಾಷ್ಟ್ರಗಳು ಸ್ವತಂತ್ರವಾಗಿರುವಂತೆ ಭಾರತವೂ ತನ್ನ ಸ್ಥಿರತೆ ಮತ್ತು ಭದ್ರತಾ ಹಿತ ರಕ್ಷಣೆ ಕಾಪಾಡಿಕೊಳ್ಳುವ ದೃಷ್ಟಿಯಿಂದ 1967ರಲ್ಲಿ ರಾಷ್ಟ್ರೀಯ ಪರಮಾಣು ಯೋಜನೆ ಪ್ರಾರಂಭಿಸಿದರು. 1974ರಲ್ಲಿ ಭಾರತವು ರಾಜಸ್ಥಾನದ ಪೋಖ್ರಾನ್ನ ಬಂಜರು ಹಳ್ಳಿಯಲ್ಲಿ ಸ್ಮೆ ೈಲಿಂಗ್ ಬುದ್ಧ (ಹಸನ್ಮುಖಿ ಬುದ್ಧ) ಎಂಬ ಅನಧಿಕೃತ ಕೋಡ್ ಹೆಸರು ಹೊಂದಿದ್ದ ರಹಸ್ಯ ಪರಮಾಣು ಪರೀಕ್ಷೆಯನ್ನು ಭೂಗರ್ಭದೊಳಗೆ ಯಶಸ್ವಿಯಾಗಿ ಮಾಡಿತು. ನಡೆಸಲಾದ ಪರೀಕ್ಷೆಯು ಶಾಂತಿಯ ಉದ್ದೇಶಕ್ಕಾಗಿ ಎಂದು ವಿವರಿಸುತ್ತಾ, ಭಾರತವು ಪ್ರಪಂಚದ ಅತಿಕಿರಿಯ ಪರಮಾಣು ಶಕ್ತಿಯಾಗಿ ಹೊರಹೊಮ್ಮಿತು.
# ಇಂದಿರಾಜೀ ಸಾಧನೆಗಳು :
* ದೇಶದಲ್ಲಿ ಹಸಿರು ಕ್ರಾಂತಿಯ ಆದ್ಯ ಪ್ರವರ್ತಕಿ.
* ನವಭಾರತದ ಆಧುನಿಕ ಶಿಲ್ಪಿ.
* ಗರೀಬಿ ಹಠಾವೋ ಯೋಜನೆಯ ರೂವಾರಿ.
* 20 ಅಂಶಗಳ ಕಾರ್ಯಕ್ರಮದ ಜನನಾಯಕಿ.
* ದೇಶದ ಆರ್ಥಿಕ ಪ್ರಗತಿಗೆ ಮುನ್ನುಡಿಯಾದ ಧುರೀಣೆ.
* ಪಾಕಿಸ್ತಾನಕ್ಕೆ ಸಿಂಹಸ್ವಪ್ನವಾದ ಲೇಡಿ ಲಯನ್.
ಇಂದಿರಾಗಾಂಧಿ ಅವರ ಜನ್ಮದಿನ ಇಂದು. ದೇಶದ ವಿವಿಧೆಡೆ ಇಂದು ಅವರ 101ನೆ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಇಂದಿರಾಗಾಂಧಿ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಪುಷ್ಪ ನಮನ ಸಲ್ಲಿಸಿ ಮಾಜಿ ಪ್ರಧಾನಿಯ ಗುಣಗಾನ ಮಾಡಿದ್ದಾರೆ. ದೇಶದ ಎಲ್ಲ ರಾಜ್ಯಗಳ ಕಾಂಗ್ರೆಸ್ ಕಚೇರಿಗಳಲ್ಲಿ ಕಾರ್ಯಕರ್ತರು ವಿಶೇಷ ಕಾರ್ಯಕ್ರಮಗಳ ಮೂಲಕ ಇಂದಿರಾ ಅವರ ಜನ್ಮ ದಿನಾಚರಣೆ ಆಚರಿಸಿದರು.