ಅಂತರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಏನು..?
1910ರ ಆಗಸ್ಟ್ನಲ್ಲಿ ಡೆನ್ಮಾರ್ಕ್ನ ಕೋಪೆನ್ಹೇಗನ್ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು.
ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್ಕಿನ್ ಅಧ್ಯಕ್ಷೆಯಾಗಿದ್ದರು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. ಕ್ಲಾರಾ ಜೆಟ್ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು 1911ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು.
ಈ ಸಮ್ಮೇಳನದಲ್ಲಿ ಫಿನ್ಲೆಂಡ್ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್ಕಿನ್ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.
1911ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು.
1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು.
ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು.
ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು “ವಿಶ್ವ ಮಹಿಳಾ ದಿನ” ಎಂದು ಘೋಷಿಸಿತು. ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ “ಮಹಿಳಾ ದಿನ” ಆಚರಿಸಲಾಗುತ್ತದೆ. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ.
1975ರ “ಅಂತರಾಷ್ಟ್ರೀಯ ಮಹಿಳೆಯರ ದಿನ”ದ ಸಮಯದಲ್ಲಿ, ಮಾರ್ಚ್ 8 ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು. ಎರಡು ವರ್ಷದ ನಂತರ,1977 ರಲ್ಲಿ, “ದಿ ಜನರಲ್ ಅಸ್ಸೆಂಬ್ಲಿ” ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನ ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆ ನೀಡುವಾಗ ಮಹಿಳೆಯ ಪಾತ್ರ ಹಾಗು ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನ ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು.