ಕನ್ನಡದ ಮೊಟ್ಟ ಮೊದಲ ರಾಜ ವಂಶ – ಕದಂಬರು ( ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)
‘ಕದಂಬ’ ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಕದಂಬರು (ಕ್ರಿ.ಶ.345-525) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ.
ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ ಕರ್ನಾಟಕದ ಅನೇಕ ಭಾಗಗಳನ್ನೊಳಗೊಂಡಿತ್ತು.
ಕದಂಬರ ಪೂರ್ವದ ರಾಜ ವಂಶಗಳಾದ ಮೌರ್ಯರು, ಶಾತವಾಹನರು ಮೂಲತಃ ಕರ್ನಾಟಕದ ಹೊರಗಿನವರಾಗಿದ್ದು, ಅವರ ರಾಜ್ಯದ ಕೇಂದ್ರಬಿಂದು ಕರ್ನಾಟಕದ ಹೊರಗಿತ್ತು. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ಪ್ರದೇಶದ ಬೆಳವಣಿಗೆಯ ಅಧ್ಯಯನದಲ್ಲಿ , ಬಹಳ ಕಾಲ ಬಾಳಿದ ಸ್ಥಳೀಯ ರಾಜಕೀಯ ಶಕ್ತಿಯಾಗಿ ಮತ್ತು ಕನ್ನಡ ಒಂದು ಪ್ರಮುಖ ಪ್ರಾದೇಶಿಕ ಭಾಷೆಯಾಗಿ ಬೆಳೆದ ಈ ಕಾಲಮಾನ, ಕರ್ನಾಟಕದ ಇತಿಹಾಸದಲ್ಲಿ,ಸರಿಸುಮಾರು ಐತಿಹಾಸಿಕ ಪ್ರಾರಂಭ ಕಾಲವಾಗಿದೆ.
ಕ್ರಿ.ಶ. 345ರಲ್ಲಿ ಮಯೂರವರ್ಮನಿಂದ ಸ್ಥಾಪಿಸಲಾದ ಈ ರಾಜ್ಯವು, ಬೃಹತ್ ಸಾಮ್ರಾಜ್ಯವಾಗಿ ಬೆಳೆಯುವ ಲಕ್ಷಣವನ್ನು ಆಗಾಗ ತೋರಿಸುತ್ತಿತ್ತು. ಆಗಿನ ರಾಜರುಗಳ ಬಿರುದು ಬಾವಲಿಗಳೂ ಈ ವಿಷಯಕ್ಕೆ ಪುಷ್ಟಿ ಕೊಡುತ್ತವೆ.ಇದೇ ವಂಶದ ಕಾಕುಸ್ಥವರ್ಮನು ಬಲಾಢ್ಯ ಅರಸನಾಗಿದ್ದು, ಉತ್ತರದ ಗುಪ್ತ ಮಹಾಸಾಮ್ರಾಜ್ಯದ ದೊರೆಗಳು ಇವನೊಂದಿಗೆ ಲಗ್ನ ಸಂಬಂಧ ಇಟ್ಟುಕೊಂಡದ್ದು ಈ ರಾಜ್ಯದ ಘನತೆಯನ್ನು ಸೂಚಿಸುತ್ತದೆ. ಇದೇ ಪೀಳಿಗೆಯ ರಾಜ ಶಿವಕೋಟಿ ಪದೇಪದೇ ನಡೆಯುತ್ತಿದ್ದ ಯುದ್ಧ , ರಕ್ತಪಾತಗಳಿಂದ ಬೇಸತ್ತು ಜೈನ ಧರ್ಮಕ್ಕೆ ಮತಾಂತರಗೊಂಡ.ಕದಂಬರು, ಹಾಗೂ ಅವರ ಸಮಕಾಲೀನರಾಗಿದ್ದ ತಲಕಾಡು ಪಶ್ಚಿಮ ಗಂಗರು ಸಂಪೂರ್ಣ ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದ ಸ್ಥಳೀಯರಲ್ಲಿ ಮೊದಲಿಗರು.
# ಕದಂಬ ಸಾಮ್ರಾಜ್ಯವನ್ನು ಕಂಚಿಯ ಪಲ್ಲವರನ್ನು ಸೋಲಿಸುವುದರೊಂದಿಗೆ ಮಯೂರವರ್ಮನು ಕ್ರಿ.ಶ 345 ಸ್ಥಾಪಿಸಿದನು. ಬನವಾಸಿ ಇವರ ರಾಜಧಾನಿ. ಕಾಕುಸ್ಥವರ್ಮನ ಆಳ್ವಿಕೆಯಲ್ಲಿ ಕದಂಬರ ಕೀರ್ತಿಯು ಉತ್ತುಂಗಕ್ಕೆ ಏರಿತಲ್ಲದೆ ರಾಜನ ಮಿತ್ರತ್ವ ಬಯಸಿ ಉತ್ತರ ಭಾರತದ ಪ್ರಭಲ ದೊರೆಗಳಾದ ಗುಪ್ತರು ಮದುವೆ ಸಂಬಂಧಳನ್ನು ಬೆಳೆಸಿದ್ದರು.
# ಕದಂಬ ಕುಲಭೂಷಣ, ಕದಂಬ ಅನರ್ಘ್ಯರತ್ನ, ಧರ್ಮರಾಜ, ಧರ್ಮಗಜರಾಜ ಬಿರುದುಗಳನ್ನು ಗಳಿಸಿದ್ದನು . ಕದಂಬ ಇತಿಹಾಸವನ್ನು ಸಂಸ್ಕೃತ ಮತ್ತು ಕನ್ನಡ ಕೃತಿಗಳಲ್ಲಿ ಕಾಣಬಹುದು. ತಾಳಗುಂದ, ಗುಂಡನುರ್, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ರಾಜಮನೆತನದ ಬಗ್ಗೆ ಬೆಳಕು ಚೆಲ್ಲುತ್ತವೆ.
# ಕನ್ನಡವನ್ನು ಆಡಳಿತಾತ್ಮಕ ಭಾಷೆಯಾಗಿ ಉಪಯೋಗಿಸಿದ ಮೊದಲ ರಾಜರು ಕದಂಬರೆನ್ನಲು ದೊರಕಿದ ಹಲವಾರು ನಾಣ್ಯಗಳೇ ಸಾಕ್ಷಿ. ಸತಾರ ಜಿಲ್ಲೆಯಲ್ಲಿ ದೊರಕಿದ ನಾಣ್ಯದಲ್ಲಿ ವೀರ ಮತ್ತು ಸ್ಕಂಧ ಲಿಪಿಗಳಿದ್ದು ಭಗೀರತ ರಾಜನ ಬಂಗಾರದ ನಾಣ್ಯದಲ್ಲಿ ಶ್ರೀ ಮತ್ತು ಭಾಗಿ ಲಿಪಿಗಳನ್ನು ಕಾಣಬಹುದಾಗಿದೆ. ಇತ್ತೀಚೆಗೆ ದೊರಕಿದ 5 ನೆ ಶತಮಾನದ ತಾಮ್ರದ ನಾಣ್ಯದಲ್ಲಿ ಕನ್ನಡ ಲಿಪಿಯನ್ನು ನೋಡಬಹುದಾಗಿದೆ. ಕಾಕುತ್ಸವರ್ಮನ ಆಳ್ವಿಕೆಯ ಸಮಯದಲ್ಲಿ ಹಲ್ಮಿಡಿಯಲ್ಲಿ ದೊರೆತ (ಕ್ರಿ.ಶ 450) ಕಲ್ಲಿನ ಬರಹವನ್ನು ಕನ್ನಡದ ಮೊಟ್ಟ ಮೊದಲನೆಯ ಶಾಸನವೆಂದು ಪರಿಗಣಿಸಲಾಗಿದೆ.
# ಕದಂಬ ಶಿಖರ (ಗೋಪುರಾಕೃತಿಯ ಕಟ್ಟಡದಲ್ಲಿ ಮೆಟ್ಟಿಲುಗಳೊಂದಿಗೆ ಏರುತ್ತ ಕಲಶವನ್ನು ಮೇಲೆ ಹೊಂದಿರುತ್ತದೆ) ಇವರ ವಾಸ್ತು ವೈಶಿಷ್ಟ್ಯ. ಇಂತಹ ಶಿಖರಗಳನ್ನು ದೊಡ್ದಗದ್ದವಲ್ಲಿ ಹೊಯ್ಸಳ ಮತ್ತು ಹಂಪಿಯ ಮಹಾಕೂಟ ದೇವಸ್ಥಾನಗಳಲ್ಲಿ ಕಾಣಬಹುದು. ಹತ್ತನೇ ಶತಮಾನದಲ್ಲಿ ಕಟ್ಟಿಸಿದ ಶಿವನ ದೇವಸ್ಥಾನ (ಮಧುಕೇಶ್ವರ) ಬನವಾಸಿಯಲ್ಲಿ ಇಂದಿಗೂ ಇದೆ.
# ಅತ್ಯದ್ಭುತ ಕೆತ್ತನೆಗಳುಳ್ಳ ಕಲ್ಲಿನ ಮಂಚ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಕದಂಬ ಸಾಮ್ರಾಜ್ಯಕ್ಕೆ ಗೌರವವನ್ನು ಸೂಚಿಸುತ್ತ ಕರ್ನಾಟಕ ಸರ್ಕಾರವು ಪ್ರತಿ ವರ್ಷವು ಕದಂಬೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ಕದಂಬ ಸಾಮ್ರಾಜ್ಯದ ನೆನಪಿನ ಪ್ರಯುಕ್ತ ಕಾರವಾರದಲ್ಲಿ ಭಾರತದ ಅತ್ಯಂತ ಮುಂದುವರೆದ ಸೇನಾ ನೌಕ ತುಕಡಿಯನ್ನು INS Kadambaಚಿ ವೆಂದು ಹೆಸರಿಸಿ 31 ನೆ ಮೇ 2005 ರಲ್ಲಿ ಅಂದಿನ ಭಾರತದ ರಕ್ಷಣಾ ಮಂತ್ರಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು.
# ಕದಂಬರ ಉಗಮದ ಬಗೆಗಿನ ಕಥೆಗಳು :
ಕದಂಬ ಮನೆತನದ ಉಗಮವಾದದ್ದು ಹೇಗೆಂಬ ಬಗ್ಗೆ ಅನೇಕ ಐತಿಹ್ಯಗಳಿವೆ. ತ್ರಿಲೋಚನ ಕದಂಬನೆಂಬವನು ಈ ಮನೆತನದ ಮೂಲಪುರುಷನೆಂಬುದು ಒಂದು ಕಥೆ. ಅವನಿಗೆ ನಾಲ್ಕು ಕೈ, ಮೂರು ಕಣ್ಣು. ಶಿವನ ಬೆವರು ಕದಂಬ ವೃಕ್ಷದ ಕೆಳಗೆ ಬಿದ್ದು ಆತ ಹುಟ್ಟಿದ.
ಆದ್ದರಿಂದಲೇ ಅವನ ವಂಶಸ್ಥರಿಗೆ ಕದಂಬರೆಂದು ಹೆಸರಾಯಿತು. ಅವನ ಮಗ ಮಯೂರವರ್ಮ ಕದಂಬ ರಾಜ್ಯಸ್ಥಾಪಕ. ಮಯೂರವರ್ಮನೇ ಕದಂಬ ವೃಕ್ಷದ ಕೆಳಗೆ ಹುಟ್ಟಿದನೆಂದು ಇನ್ನೊಂದು ಐತಿಹ್ಯ ಸಾರುತ್ತದೆ. ಅವನಿಗೂ ಹಣೆಯ ಮೇಲೆ ಕಣ್ಣಿದ್ದುದರಿಂದ ಕಿರೀಟವನ್ನು ಮುಡಿಯ ಮೇಲೆ ಕಟ್ಟಬೇಕಾಯಿತಂತೆ.
ಪರಶುರಾಮಕ್ಷೇತ್ರ ಸೃಷ್ಟಿಯಾದ ಮೇಲೆ ಶಿವಪಾರ್ವತಿಯರು ಸಹ್ಯಾದ್ರಿಯ ಸುಂದರ ಪ್ರದೇಶಕ್ಕೆ ಬಂದಿದ್ದರೆಂದೂ ಅಲ್ಲಿ ಇವರಿಗೆ ಹುಟ್ಟಿದ ಮಗುವೇ ಕದಂಬ ವಂಶದ ಆದ್ಯಪುರುಷನೆಂದೂ ಇನ್ನೊಂದು ಕಥೆಯಿದೆ. ಆದರೆ ಇಂಥ ಕಥೆಗಳೆಲ್ಲ ಕದಂಬರ ಆಡಳಿತ ಆರಂಭವಾದ ಅನೇಕ ವರ್ಷಗಳ ಮೇಲೆ ಹುಟ್ಟಿ ಕೊಂಡವಾದ್ದರಿಂದ ಇವಕ್ಕೆ ಹೆಚ್ಚಿನ ಬೆಲೆ ಕೊಡಬೇಕಾದುದಿಲ್ಲ.
ಕದಂಬ ಪುಷ್ಪ ಪಾರ್ವತಿಗೆ ಪ್ರಿಯವಾದುದರಿಂದ ಶಿವಸಂಬಂಧವಾದ ಇಂಥ ಕಥೆಗಳು ಹುಟ್ಟಿ ಕೊಂಡಿರಬಹುದು ಎಂಬುದು ಇತಿಹಾಸಕಾರರ ಅಭಿಪ್ರಾಯ. ಕಥೆಗಳು ಹೇಗಾದರೂ ಇರಲಿ. ಮಯೂರಶರ್ಮನೇ ಈ ರಾಜವಂಶದ ಸ್ಥಾಪಕನೆಂಬುದು ಕಾಕುತ್ಸವರ್ಮನ ತಾಳಗುಂದದ ಶಾಸನದಿಂದ ಗೊತ್ತಾಗುತ್ತದೆ. ಈತ ಮಾನವ್ಯಗೋತ್ರದ ಹಾರಿತೀವಂಶಸ್ಥ ಬ್ರಾಹ್ಮಣನೆಂದೂ ವೇದ ವಿದ್ಯಾಭ್ಯಾಸಕ್ಕಾಗಿ ಪಲ್ಲವರ ರಾಜಧಾನಿಯಾಗಿದ್ದ ಕಂಚಿಗೆ ಹೋಗಿದ್ದಾಗ ಅಲ್ಲಿಯ ರಾಜಭಟನೊಬ್ಬನಿಂದ ಅವಮಾನಕ್ಕೆ ಗುರಿಯಾದುದರ ಫಲವಾಗಿ ಅಸ್ತ್ರವಿದ್ಯೆ ಕಲಿತು ದಂಡುಕಟ್ಟಿ ದಾಳಿ ಮಾಡಿ ಗಡಿನೆಲವನ್ನಾಕ್ರಮಿಸಿ ಕೊಂಡನೆಂದೂ ಗೊತ್ತಾಗುತ್ತದೆ.
ಮಗ್ಗುಲ ಮುಳ್ಳಾಗಿದ್ದ ಮಯೂರಶರ್ಮನ ವಿರೋಧ ಕಟ್ಟಿಕೊಳ್ಳಬಾರದೆಂಬ ಉದ್ದೇಶದಿಂದ ಪಲ್ಲವರು ಅವನಿಗಷ್ಟು ಪ್ರದೇಶ ಬಿಟ್ಟುಕೊಟ್ಟರು. ಆದರೆ ಸಾಮಂತನಾಗಿರುವುದು ಅವನಿಗೆ ಹಿಡಿಸಲಿಲ್ಲ. ಸ್ವಲ್ಪ ಕಾಲದಲ್ಲೇ ಆತ ಸ್ವಾತಂತ್ರ್ಯ ಘೋಷಿಸಿಕೊಂಡ. ಸು. 4ನೆಯ ಶತಮಾನದ ಚಂದ್ರವಳ್ಳಿಯ ಶಾಸನದ ಪ್ರಕಾರ ಆತತ್ರೈಕೂಟಕ, ಅಭೀರ, ಪಲ್ಲವ, ಪಾರಿಯಾತ್ರಕ, ಶಕಸ್ಥಾನ, ಮೋಕರಿ, ಪುನ್ನಾಟ, ಸಾಯಿಂದಕ (ಸೇಂದ್ರಕ), ಪಾರಿಯಾತ್ರಕ ಮುಂತಾದ ರಾಜ್ಯಗಳನ್ನು ಸೋಲಿಸಿದ.
ಆರಾವಳಿಯಿಂದ ವಿಂಧ್ಯದವರೆಗೆ ಇದ್ದದ್ದು ಸಾಯಿಂದಕರ ರಾಜ್ಯ. ಕಾವೇರಿ-ಕಪಿನಿಗಳ ನಡುವಣ ರಾಜ್ಯ ಪುನ್ನಾಟ. ಮೋಕರಿಗಳು ಆಳುತ್ತಿದ್ದ ಉಜ್ಜಯಿನಿ ಮತ್ತು ರಾಜಸ್ಥಾನಗಳ ವರೆಗೆ ಈತ ತನ್ನ ರಾಜ್ಯ ವಿಸ್ತರಿಸಿದನೇ ಎಂಬುದು ಸಂದೇಹಾಸ್ಪದ. ಅಂತೂ ಈ ನಾನಾ ರಾಜ್ಯಗಳ ಅರಸರೊಂದಿಗೆ ಈತ ಘರ್ಷಣೆ ನಡೆಸಿರಬಹುದೆಂಬುದಾಗಿ ಹೇಳಬಹುದಾಗಿದೆ.