ಕನ್ನಡ ವ್ಯಾಕರಣ : ಅವ್ಯಯಗಳು
ಲಿಂಗ, ವಚನ, ವಿಭಕ್ತಿಗಳಿಂದ ಯಾವುದೇ ರೂಪ ಭೇದ ಹೊಂದದೆ ಏಕರೂಪವಾಗಿರುವ ಪದಗಳೇ ಅವ್ಯಯಗಳು.
ಉದಾ: ಅವಳು(ನಾಮಪದ) ಚೆನ್ನಾಗಿ(ಅವ್ಯಯ) ಹಾಡಿದಳು.(ಕ್ರಿಯಾಪದ)
ಈ ಮೇಲಿನ ಉದಾಹರಣೆಯಲ್ಲಿ ‘ ಚೆನ್ನಾಗಿ’ ಎಂಬ ಪದವು ಅವ್ಯಯವಾಗಿದೆ. ಲಿಂಗ, ವಚನ, ವಿಭಕ್ತಿಯಿಂದ ಅವ್ಯಯ ಯಾವುದೇ ಬದಲಾವಣೆ ಹೊಂದುವುದಿಲ್ಲ.
# ಅವ್ಯಯದ ವಿಧಗಳು
1. ಸಾಮಾನ್ಯ ಅವ್ಯಯ: ಕ್ರಿಯೆ(ಸ್ಥಳ, ಕಾಲ,ರೀತಿ) ಯಾವ ರೀತಿ ನಡೆಯಿತು ಎಂಬುದನ್ನು ವಿಶೇಷಣಗಳ ಮೂಲಕ ಹೇಳುವುದೇ ಸಾಮಾನ್ಯ ಅವ್ಯಯ.
* ಸ್ಥಳ- ಅಲ್ಲಿ, ಎಲ್ಲಿ, ಮೇಲು, ಕೆಳಗು
* ಕಾಲ – ಆಗ, ಈಗ, ಇಂದು, ಅಂದು ಎಂದು, ಬಳಿಕ, ಕೂಡಲೆ, ತರುವಾಯ ಒಡನೆ
* ರೀತಿ- ಚೆನ್ನಾಗಿ, ನೆಟ್ಟನೆ, ತಟ್ಟನೆ, ಸುಮ್ಮನೆ, ಮೆಲ್ಲನೆ, ಹಾಗೆ
ಉದಾ: ಅವಳು ಸುಮ್ಮನೆ ಕೂತಳು.
ಅವನು ತಟ್ಟನೆ ಉತ್ತರ ಹೇಳಿದ
2. ಅನುಕರಣವ್ಯಯ : ಅರ್ಥವಿಲ್ಲದ ಕೇವಲ ಅನುಭವಿಸಲು ಮಾತ್ರ ಸಾಧ್ಯವಿರುವಂತಹ ಅವ್ಯಯವೇ ಅನುಕರಣವ್ಯಯ.
ಉದಾ: ಪಟ-ಪಟ, ತಟ-ತಟ, ಜುಳ-ಜುಳ
ಅದು ಪಟ-ಪಟ ಹೋಯಿತು.
3. ಭಾವಸೂಚಕ ಅವ್ಯಯ : ಮನಸ್ಸಿನ ಭಾವನೆಗಳನ್ನು ಸೂಚಿಸಲು ಮನಸ್ಸಿನಿಂದ ಉದ್ಭವಿಸುವ ಸಂಕೇತಗಳೇ ಭಾವಸೂಚಕ ಅವ್ಯಯಗಳು ಈ ಪದಗಳಿಗೂ ಅರ್ಥವಿರುವಿದಿಲ್ಲ, ಕೇವಲ ಅನುಭವಿಸಲು ಮಾತ್ರ ಸಾಧ್ಯ.
ಉದಾ: ಅಬ್ಬಾ, ಛೆ, ಥೂ, ಅಯ್ಯೋ, ರಾಮ! ರಾಮ! ಥೂಥ್ ಅಬ್ಬಾ! ಎಷ್ಟು ಸೊಗಸಾಗಿದೆ.
4. ಸಂಬಂಧಾರ್ಥಕಾವ್ಯಯ : ಎರಡು ಅಥವಾ ಅದಕ್ಕಿಂತ ಹೆಚ್ಚು ಪದ ವಾಕ್ಯಗಳನ್ನು ಸೇರಿಸಲು ಬಳಸುವ ಪದಗಳೇ ಸಂಬಂಧಾರ್ಥಕ ಅವ್ಯಯಗಳು.
ಉದಾ: ಊ, ಉಂ ಅಥವಾ, ಆದ್ದರಿಂದ, ಅಲ್ಲದೆ, ನಾನು ಮತ್ತು ಅವನು ಹೊದೆವು.
5. ಅವಧಾರಣಾರ್ಥ ಅವ್ಯಯ : ಹಲವು ವಸ್ತುಗಳ ಒಂದು ವಸ್ತುವನ್ನು ನಿಶ್ಚಿತವಾಗಿ ಗುರುತಿಸುವುದೇ ಅವಧಾರಣಾರ್ಥ ಅವ್ಯಯ.
ಉದಾ: ಅದು ನನ್ನ ಮನೆ, ಅದೇ ನನ್ನ ಜಾಗ
6. ತದ್ದಿತಾಂತ ಅವ್ಯಯ : ನಾಮಪದದ ಮುಂದೆ ಅಂತೆ, ವೋಲ್, ತನಕ, ವರೆಗೆ, ಮಟ್ಟಿಗೆ, ಇಂತ, ಓಸುಗೆ ಇತ್ಯಾದಿ ತದ್ದಿತ ಪ್ರತ್ಯಗಳು ಸೇರಿ ರಚಿತವಾಗುವ ಪದರಚನೆಯೇ ತದ್ದಿತಾಂತವ್ಯಯ. ಇಲ್ಲಿ ನಾಮಪದ ವಿಭಕ್ತಿ ಪ್ರತ್ಯಯಲೋಪವಾಗುವುದಿಲ್ಲ.
ಉದಾ: ರಾಮನ (ನಾಮಪದ), ಅಂತೆ( ತದ್ದಿತ ಪ್ರತ್ಯಯ) = ರಾಮನಂತೆ( ತದ್ದಿತಾಂತಾವ್ಯಯ)
7. ಕೃದಂತ ಅವ್ಯಯ: ಧಾತುಗಳ ಮೇಲೆ ಉತ, ಉತ್ತ,ಅದ, ಆದರೆ, ಅಲು, ಅಲಕ್ಕೆ, ಅ ಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತ ಅವ್ಯಯಗಳೆನಿಸುವವು.
ಉದಾ: ಮಾಡು + ಉತ= ಮಾಡುತ್ತ
ತಿನ್ನು+ ಉತ್ತ= ತಿನ್ನುತ್ತ
ಬರು+ ಅಲು= ಬರಲು
ತಿನ್ನು+ ಅಲಕ್ಕೆ= ತಿನ್ನಲಿಕ್ಕೆ
8. ಸಂಬೋಧಕಾವ್ಯಯ: ಕರೆಯುವಾಗ ಉಪಯೋಗಿಸುವ ಶಬ್ದಗಳು- ಎಲೋ, ಎಲಾ, ಎಲೇ, ಓ ಇತ್ಯಾದಿ
9. ಪ್ರಶ್ನಾರ್ಥಕಾವ್ಯಯ : ಪ್ರಶ್ನೆ ಮಾಡುವಾಗ ಉಪಯೋಗಿಸುವ ಅವ್ಯಯಗಳು – ಎ, ಏ, ಓ, ಏನು, ಅವನು ಬಂದನೇ ಇತ್ಯಾದಿ.
10. ಕ್ರಿಯಾರ್ಥಕಾವ್ಯಯ : ವಾಕ್ಯದಲ್ಲಿಯ ಕ್ರಿಯಾಪದದ ಸ್ಥಾನದಲ್ಲ ಕ್ರಿಯೆಯ ಅರ್ಥವನ್ನು ಹೇಳುವ ಶಬ್ದಗಳು. ಉದಾಹರಣೆಗೆ- ಉಂಟು, ಬೇಕು, ಬೇಡ, ಅಲ್ಲ, ಹೌದು, ಸಾಕು ಇತ್ಯಾದಿ.