ಪರಿಸರ ಸಂರಕ್ಷಣೆಗಾಗಿ ಇರುವ ಪ್ರಮುಖ ಕಾನೂನುಗಳು
ನಮ್ಮ ಸಂವಿಧಾನದ ಪ್ರಕಾರ ಪರಿಸರ ಸಂರಕ್ಷಣೆ ಸರಕಾರದ ಮತ್ತು ಜನಸಾಮಾನ್ಯರ ಕರ್ತವ್ಯವಾಗಿದೆ. ಸಂವಿದಾನದ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಪ್ರಕಾರ ಸರಕಾರವು ಪರಿಸರದ ಸಂರಕ್ಷಣೆಗೆ ಮತ್ತು ಅಭಿವೃದ್ಧಿಗೆ ಹಾಗೂಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ ಪ್ರಯತ್ನಿಸತಕ್ಕದ್ದು.
ಸಾಂವಿಧಾನಿಕ ಕರ್ತವ್ಯವಾದ ಪರಿಸರ ಮತ್ತು ಜೀವವೈವಿಧ್ಯದ ಸಂರಕ್ಷಣೆಯನ್ನು ಖಾತ್ರಿಗೊಳಿಸಲು ಭಾರತದಲ್ಲಿ ಹಲವಾರು ಕಾನೂನುಗಳನ್ನು ಜಾರಿಗೆಗೊಳಿಲಾಗಿದೆ. ಅವುಗಳಲ್ಲಿ ಪ್ರಮುಖವಾದ ಕೆಲವನ್ನು ಮುಂದೆ ವಿವರಿಸಲಾಗಿದೆ.
1. ಜಲ ( ಮಾಲಿನ್ಯ ತಡೆ ಮತ್ತು ನಿಯಂತ್ರಣ) ಅಧಿನಿಯಮ 1974
ಜಲಮಾಲಿನ್ಯವನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಜೊತೆಗೆ ಜಲಸಂಪನ್ಮೂಲಗಳ ಪರಿಶುದ್ಧತೆಯನ್ನು ಕಾಯ್ದುಕೊಳ್ಳುವುದು ಈ ಅಧಿನಿಯಮದ ಮುಖ್ಯ ಉದ್ದೇಶವಾಗಿದೆ. ಹಾಗೆಯೇ, ಜಲಮಾಲಿನ್ಯದ ತಡೆ ಹಾಗೂ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸ್ಥಾಪನೆಗೆ ಕೂಡಾ ಈ ಅಧಿನಿಯಮ ಅವಕಾಶ ಕಲ್ಪಿಸಿಕೊಟ್ಟಿದೆ.
ನದಿ, ಕೆರೆ, ಬಾವಿಗಳಂತಹ ನೀರಿನ ಮೂಲಗಳಿಗೆ ಯಾವುದೇ ಬಗೆಯ ವಿಷಕಾರಿ ಅಥವಾ ಮಾಲಿನ್ಯಕಾರಿ ವಸ್ತುಗಳನ್ನು ಸೇರಿಸುವುದನ್ನು ಈ ಅಧಿನಿಯಮ ನಿಷೇಧಿಸುತ್ತದೆ. ಯಾವುದೇ ಕಲ್ಮಶ ಅಥವಾ ತ್ಯಾಜ್ಯಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಲು ರಾಜ್ಯಮಂಡಳಿಗಳ ಪೂರ್ವಾನುಮತಿ ಪಡೆದುಕೊಳ್ಳಬೇಕು. ತ್ಯಾಜ್ಯದಲ್ಲಿರುವ ಮಾಲಿನ್ಯಕಾರಕ ಅಂಶಗಳ ಪ್ರಮಾಣದ ಆಧಾರದಲ್ಲಿ ಮಂಡಳಿಯು ಇಂತಹ ಚಟುವಟಿಕೆಗಳಿಗೆ ಅನುಮತಿ ನೀಡಬಹುದು ಅಥವಾ ನಿರಾಕರಿಸಬಹುದು. ತ್ಯಾಜ್ಯಗಳಲ್ಲಿ ಮಾಲಿನ್ಯಕಾರಕ ಅಂಶಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದಲ್ಲಿ ಅದನ್ನು ಸಂಸ್ಕರಿಸಿ ವಿಸರ್ಜಿಸಲು ಸಂಬಂಧಪಟ್ಟ ಕೈಗಾರಿಕೆಗಳಿಗೆ ಮಂಡಳಿಯು ನಿರ್ದೇಶನ ನೀಡಬಹುದು.
2. ವಾಯು( ಮಾಲಿನ್ಯ ತಡೆ ಮತ್ತು ನಿಯಂತ್ರಣ) ಅಧಿನಿಯಮ, 1981
ವಾಯುಮಾಲಿನ್ಯವನ್ನು ತಡೆಯುವುದು, ನಿಯಂತ್ರಿಸುವುದು ಮತ್ತು ಅದರ ಪರಿಣಾಮಗಳನ್ನು ತಗ್ಗಿಸುವುದು ಅಥವಾ ಉಪಶಮನಗೊಳಿಸುವುದು ಈ ಅಧಿನಿಯಮದ ಮುಖ್ಯ ಉದ್ದೇಶಗಳಾಗಿವೆ. ಈ ಉದ್ದೇಶಗಳ ಈಡೇರಿಕೆಗಾಗಿ ಅಗತ್ಯ ಅಧಿಕಾರವಿರುವಂತಹ ಕೇಂದ್ರ ಮತ್ತು ರಾಜ್ಯ ಮಂಡಳಿಗಳ ಸ್ಥಾಪನೆಗೆ ಕೂಡಾ ಇದು ಅವಖಾಶ ಕಲ್ಪಿಸಿಕೊಡುತ್ತದೆ. ವಾಯುಮಾಲಿನ್ಯವನ್ನು ನಿಯಂತ್ರಿಸುವುದೂ ಸೇರಿದಂತೆ ಭೂಮಿಯ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಸಲುವಾಗಿ 1972 ರ ಜೂನ್‍ನಲ್ಲಿ ಸ್ಟಾಕ್‍ಹೋಂ ಎಂಬಲ್ಲಿ ಮಾನವ ಪರಿಸರz ಕುರಿತಾದ ವಿಶ್ವಸಂಸ್ಥೆಯ ಸಮ್ಮೇಳನ ನಡೆಯಿತು. ಭಾರತವೂ ಅದರಲ್ಲಿ ಪಾಳ್ಗೋಂಡ ಪರಿಣಾಮವಾಗಿ ಈ ಅಧಿನಿಯಮ ಜಾರಿಗೊಂಡಿತು.
3. ಅರಣ್ಯ ( ಸಂರಕ್ಷಣಾ) ಅಧಿನಿಯಮ 1980
1980 ಅಕ್ಟೋಬರ್ 25 ರಂದು ಜಾರಿಗೆ ಬಂದ ಈ ಅಧಿನಿಯಮದ ಮುಖ್ಯ ಉದ್ದೇಶ ದೇಶದಲ್ಲಿ ಪರಿಸರ ಅಸಮತೋಲನ ಮತ್ತು ವಾತಾವರಣದ ಶಿಥಿಲೀಕರಣಕ್ಕೆ ಕಾರಣವಾಗುವ ಅರಣ್ಯ ನಾಶವನ್ನು ತಡೆಗಟ್ಟುವುದಾಗಿದೆ.
ಈ ಅಧಿನಿಯಮದ ಪ್ರಕಾರ
• ಯಾವುದೇ ರಾಜ್ಯ ಸರ್ಕಾರಗಳು ಕೇಂದ್ರ ಸರಕಾರದ ಪೂರ್ವಾನುಮತಿಯಿಲ್ಲದೆ ಕಾಯ್ದಿಟ್ಟ ಅರಣ್ಯ ಪ್ರದೇಶಗಳನ್ನು ಕೃಷಿಯಂತಹ ಅರಣ್ಯೇತರ ಉದ್ದೇಶಗಳ ಸಲುವಾಗಿ ಬಳಸಲು ಪರವಾನಗಿ ನೀಡುವಂತಿಲ್ಲ.
• ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಕಾಯ್ದಿಟ್ಟ ಅರಣ್ಯಗಳಲ್ಲಿ ಮರಗಳನ್ನು ಕಡಿಯುವಂತಿಲ್ಲ.
• ಕಾಯ್ದಿಟ್ಟ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆಯಂತಹ ಚಟುವಟಿಕೆಗಳನ್ನು ನಡೆಸುವಂತಿಲ್ಲ.
• ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಲು ಸಲಹಾ ಮಂಡಳಿಯನ್ನು ರಚಿಸಲು ಈ ಅಧಿನಿಯಮದಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
4. ಪರಿಸರ ( ಸಂರಕ್ಷಣಾ) ಅಧಿನಿಯಮ 1986
ಈ ಅಧಿನಿಯಮದ ಮುಖ್ಯ ಉದ್ದೇಶ ಪರಿಸರದ ಸಂರಕ್ಷಣೆ ಮತ್ತು ಸುಧಾರಣೆಗೆ ಕಾನೂನುಬದ್ಧ ಅವಕಾಶ ಕಲ್ಪಿಸಿಕೊಡುವುದಾಗಿದೆ.
ಈ ಅಧಿನಿಯಮದಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಧಾರಣೆಗಾಗಿ ತನಗೆ ಸರಿಕಾಣಿಸುವ ನಿಯಮಗಳನ್ನು ರೂಪಿಸುವ ಮತ್ತು ಅಗತ್ಯ ಕ್ರಮಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಧಿಕಾರಗಳನ್ನು ನೀಡಲಾಗಿದೆ. ಈ ಉದ್ದೇಶಗಳ ಪಾಲನೆಗಾಗಿ ಸೂಕ್ತ ಅಧಿಕಾರಗಳನ್ನು ನೇಮಕ ಮಾಡಬಹುದಾಗಿದೆ. ಪರಿಸರ ಮಾಲಿನ್ಯಗಳ ಕುರಿತು ಸಂಶೋಧನೆ, ವಿಶ್ಲೇಷಣೆಗಳ ಸಲುವಾಗಿ ಪರಿಸರ ಪ್ರಯೋಗಾಲಯಗಳನ್ನು ಸ್ಥಾಪಿಸಬಹುದಾಗಿದೆ.
5. ವನ್ಯಜೀವಿ( ಸಂರಕ್ಷಣಾ) ಅಧಿನಿಯಮ, 1972
ಈ ಅಧಿನಿಯಮದ ಮುಖ್ಯ ಉದ್ದೇಶಗಳೆಂದರೆ,
• ವನ್ಯಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳ ಸಂರಕ್ಷಣೆಗೆ ಅನುವು ಮಾಡಿಕೊಡುವುದು. ಅಪಾಯವನ್ನೆದುರಿಸುತ್ತಿರುವ ಪ್ರಾಣಿ ಮತ್ತು ಸಸ್ಯ ಪ್ರಭೇದಗಳ ಭೇಟೆ, ವಾಣಿಜ್ಯ ವ್ಯವಹಾರ ಇತ್ಯಾದಿಗಳನ್ನು ಇದು ನಿರ್ಬಂಧಿಸುತ್ತದೆ.
• ವನ್ಯಜೀವಿಗಳ ಮತ್ತು ನೈಸರ್ಗಿಕ ಪರಿಸರಗಳ ಸಂರಕ್ಷಣೆ ಸಲುವಾಗಿ ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿಕೊಡುವುದು ಮತ್ತು ಈ ಕುರಿತಾದ ವಿಧಿ- ವಿಧಾನಗಳನ್ನು ಸ್ಫಷ್ಟಪಡಿಸುವುದು.
• ರಾಜ್ಯಗಳು ಅನುಸರಿಸಬೇಕಾದ ವನ್ಯಜೀವಿ ನಿರ್ವಹಣ ವ್ಯವಸ್ಥೆಗಳ ಬಗ್ಗೆ ವಿವರಣೆ ನೀಡುವುದು. ಮತ್ತು ವನ್ಯಜೀವಿ ನಿರ್ವಹಣೆಗೆ ನೇಮಕಮಾಡಬಹುದಾದ ಹುದ್ದೆಗಳ, ಪ್ರಾಧಿಕಾರಗಳ ಮತ್ತು ಮಂಡಳಿಗಳ ರಚನೆ ಮತ್ತು ಕರ್ತವ್ಯಗಳನ್ನು ಸ್ಪಷ್ಟಪಡಿಸುವುದು. ಜೊತೆಗೆ ವನ್ಯಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ನೀತಿಗಳನ್ನು ನಿರ್ಧರಿಸುವ ಸಲುವಾಗಿ ಮತ್ತು ಪಕ್ಷಧಾಮ, ರಾಷ್ಟ್ರೀಯ ಉದ್ಯಾನವನಗಳ ಆಯ್ಕೆ, ಘೋಷಣೆ ಇತ್ಯಾದಿಗಳ ಬಗ್ಗೆ ನಿರ್ಧರಿಸುವ ಸಲುವಾಗಿ ರಾಜ್ಯ ಸರಕಾರಗಳು ವನ್ಯಜೀವಿ ಸಲಹಾ ಮಂಡಳಿಗಳನ್ನು ರಚಿಸಬಹುದು.
• ವನ್ಯಜೀವಿ ಮತ್ತು ಪರಿಸರ ಹಾನಿಯುಂಟು ಮಾಡುವ ಚಟುವಟಿಕೆಗಳನ್ನು ನಿಷೇದಿಸಬಹುದು ಮತ್ತು ಇದನ್ನು ಉಲ್ಲಂಘಿಸುವವರನ್ನು ಶಿಕ್ಷೆಗೆ ಗುರಿಪಡಿಸಬಹುದು.