ಒಂದು ಪ್ರಮುಖ ಅಲೋಹವಾದ ‘ಇಂಗಾಲ’ದ ಬಹುರೂಪತೆಗಳ ಪಟ್ಟಿ
ಧಾತುಗಳಲ್ಲಿ ಇಂಗಾಲ ( ಕಾರ್ಬನ್) ವಿಶಿಷ್ಟವಾಗಿದ್ದು, ಪ್ರಕೃತಿಯಲ್ಲಿ ಹೇರಳವಾಗಿ ದೊರಕುತ್ತವೆ.
ಒಂದೇ ರಾಸಾಯನಿಕ ಲಕ್ಷಣವುಳ್ಳ ಆದರೆ ವಿಭಿನ್ನ ಭೌತ ಲಕ್ಷಣಗಳುಳ್ಳ ರೂಪಗಳನ್ನು ಧಾತು ಪ್ರದರ್ಶಿಸಿದರೆ ಅದನ್ನು ಬಹುರೂಪತೆ ಎನ್ನುತ್ತೇವೆ.
✦ ಇಂಗಾಲದ ಬಹುರೂಪತೆ
ಇಂಗಾಲದ ಸ್ಫಟಿಕ ರೂಪಗಳು
1.ವಜ್ರ
ಭೂತೊಗಟೆಯಲ್ಲಿರುವ ಕಬ್ಬಿಣದ ಕೆಲವು ಅದುರುಗಳಲ್ಲಿ ವಿಲೀನವಾಗಿರುವ ಕಾರ್ಬನ್ ಘನೀಭವೀಸುವುದರಿಂದ ವಜ್ರವು ಉತ್ಪತ್ತಿಯಾಗುತ್ತವೆ.
ವಜ್ರವು ಪ್ರಕೃತಿಯಲ್ಲಿ ದೊರೆಯುವ ಅತ್ಯಂತ ಕಠಿಣ ವಸ್ತು. ಶುದ್ದ ವಜ್ರಕ್ಕೆ ಬಣ್ಣವಿಲ್ಲ.ಆದರೂ ಅನೇಕ ವಿಧಧ ಬಣ್ಣದ ವಜ್ರಗಳು ಪ್ರಕೃತಿಯಲ್ಲಿ ದೊರೆಯುತ್ತವೆ. ವಜ್ರದ ಬಣ್ಣವು ಅದರಲ್ಲಿರುವ ಲೋಹೀಯ ಬೆರೆಕೆಯಿಂದ ಉಂಟಾಗುತ್ತದೆ. ಇದು ಹೊಳೆಯುವ ಘನವಸ್ತು . ಇದರಲ್ಲಿನ ಪರಮಾಣುಗಳು ಒತ್ತೊತ್ತಾಗಿ ಜಾಲರೂಪದಲ್ಲಿ ಜೋಡಣೆಯಾಗಿದ್ದು, ಚತುರ್ಮುಜ ಜೋಡಣೆ ಪಡೆದಿದೆ. ವಜ್ರದ ಕಠಿಣತೆಗೆ ಈ ಜೋಡಣೆಯೇ ಕಾರಣ. ಇದನ್ನು ಬಂಡೆಗಳನ್ನು ಕೊರೆಯಲು, ಗಾಜನ್ನು ಕತ್ತರಿಸಲು, ಆಭರಣ ತಯಾರಿಕೆಯಲ್ಲಿ ಬಳಸುತ್ತಾರೆ.
ಭಾರತದ ಆಂಧ್ರ ಪ್ರದೇಶದಲಿರುವ ‘ಗೊಲ್ಕೋಂಡಾ’ ವಜ್ರದ ಅತ್ಯಂತ ದೊಡ್ಡ ವಜ್ರದ ಗಣಿಗಳಲ್ಲಿ ಒಂದಾಗಿತ್ತು.
2.ಗ್ರಾಫೈಟ್
ಗ್ರಾಫೈಟ್ ವಜ್ರದಂತೆಯೇ ಸ್ಫಟಿಕರೂಪದಲ್ಲಿರುವ ಕಾರ್ಬನ್ನ ಮತ್ತೊಂದು ಬಹುರೂಪ. ಹೊಳೆಯುವ , ಮೃದುವಾದ ವಸ್ತು ಇದರಲ್ಲಿ ಕಾರ್ಬನ್ನ ಪರಮಾಣುಗಳು ಪದರಗಳಾಗಿ ಜೋಡಿಸಲ್ಪಟ್ಟಿದ್ದು. ಸುಲಭವಾಗಿ ಜಾರಿ ಬೇರ್ಪಡಬಲ್ಲವು.
ಪರಮಾಣುಗಳು ನಿಯತ ಷಡ್ಬುಜಾಕೃತಿಯಲ್ಲಿರುವುದು. ಇದು ಉತ್ತಮ ಉಷ್ಣ ಮತ್ತು ವಿದ್ಯುತ್ ವಾಹಕವಾಗಿದೆ.
3.ಪುಲರೀನ್
ಇದನ್ನು ಇತ್ತೀಚಿನ ವರ್ಷಗಳಲ್ಲಿ ಕಂಡುಹಿಡಿಯಲಾಯಿತು. ಇದು ಅತಿ ವಾಹಕವಾಗಿದೆ. ಹೀಲಿಯಂ ಅಥವಾ ಆರ್ಗಾನಿನ ಜಡ ವಾತಾವರಣದಲ್ಲಿ ಗ್ರಾಫೈಟ್ನ್ನು ವಿದ್ಯುತ್ ಚಾಪದಲ್ಲಿ ಕಾಯಿಸಿದಾಗ ದೊರೆತ ಆವಿಯನ್ನು ತಣಿಸಿದಾಗ ಪುಲ್ಲರೀನ್ ರೂಪಗೊಳ್ಳುವುದು. ಇದನ್ನು ನ್ಯಾನೋ ತಂತ್ರಜ್ಞಾನದಲ್ಲಿ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.
✦ ಇಂಗಾಲದ ಅಸ್ಪಟಿಕ ರೂಪಗಳು
1.ಇದ್ದಿಲು
ಒಣ ಮರದ ತುಂಡುಗಳನ್ನು ಶುಷ್ಕ ‘ಆಸವನ ಕ್ರಿಯೆ’ ಒಳಪಡಿಸಿ ಇದ್ದಿಲನ್ನು ತಯಾರಿಸುತ್ತಾರೆ. ಇದ್ದಿಲನ್ನು ತಯಾರಿಸಲು ಬಳಸಿದ ಕಚ್ಚಾವಸ್ತುಗಳಿಗೆ ಅನುಗುಣವಾಗಿ ಅವುಗಳನ್ನು ಬೇರೆ ಬೇರೆ ವಿಧಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ ಸಸ್ಯ ಇದ್ದಿಲು, ಮೂಳೆ ಇದ್ದಿಲು, ಮತ್ತು ಸಕ್ಕರೆ ಇದ್ದಿಲು.
ಇದು ರಂಧ್ರಗಳಿಂದ ಕೂಡಿದ ಮೃದುವಾದ ಕಪ್ಪು ಬಣ್ಣದ ಘನವಸ್ತು. ಇದ್ದಿಲಿನಲ್ಲಿ ರಂಧ್ರಗಳಿರುವದರಿಂದ ಇದರ ತೋರಿಕೆ ಸಾಂದ್ರತೆ ಕಡಿಮೆಯಾಗಿರುತ್ತವೆ. ಇದರಿಂದ ಇದು ನೀರಿನಲ್ಲಿ ತೇಲುತ್ತವೆ. ಇದನ್ನು ಇಂಧನವಾಗಿ , ಅಪಕರ್ಷಕವಾಗಿ, ಮೂಳೆ ಇದ್ದಿಲನ್ನು ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆಯ ಬಣ್ಣವನ್ನು ತೆಗೆಯಲು, ನೀರಿನ ಕೆಟ್ಟ ವಾಸನೆಗಳನ್ನು ಹೋಗಲಾಡಿಸಲು, ಅನಿಲ ಮುಖವಾಡಗಳಲ್ಲಿ ಬಳಸುತ್ತಾರೆ.
2.ದೀಪದ ಮಸಿ( ಕಾಡಿಗೆ)
ಉರಿಯುತ್ತಿರುವ ಎಣ್ಣೆದೀಪ ಅಥವಾ ಮೇಣದ ಬತ್ತಿಯ ಮೇಲೆ ಒಂದು ಬಟ್ಟಲನ್ನು ಹಿಡಿದರೆ ಅದರ ತಳ ಭಾಗದ ಮೇಲೆ ಶೇಝರಣೆಯಾಗುವ ಕಪ್ಪು ಬಣ್ಣದ ವಸ್ತುವನ್ನು ಕಾಡಿಗೆ ಅಥವಾ ದೀಪದ ಮಸಿ ಎನ್ನುತ್ತೇವೆ. ಇದು ಉಷ್ಣ ಮತ್ತು ವಿದ್ಯುತ್ ವಾಹಕ.
ಇದನ್ನು ರಬ್ಬರ್ನ ವಲ್ಕನೈಸಢಷನ್ನಲ್ಲಿ, ಇಂಡಿಯನ್ ಇಂಕ್, ಪ್ರೀಟಿಂಗ್ ಇಂಕ್ಗಳ ತಯಾರಿಕೆಯಲ್ಲಿ , ಬೂಟ್ ಪಾಲಿಶ್, ಕಪ್ಪು ಪೇಯಿಂಟ್ಗಳ ಉತ್ಪಾದನೆಯಲ್ಲಿ ಉಪಯೋಗಿಸುವರು.
3.ಕಲ್ಲಿದ್ದಲು
ಇದು ಕಾರ್ಬನ್ ಅಶುದ್ಧ ರೂಪವಾಗಿದೆ. ಗಣಿಗಳಲ್ಲಿ ದೊರಕುವುದು. ಭೂಮಿಯ ಒಳಗೆ ಸಾವಿರಾರು ವರ್ಷಗಲ ಹಿಂದೆ ಹೂತುಹೋಗಿದ್ದ ಸಸ್ಯಜನ್ಯ ಜೈವಿಕ ರಾಶಿಯು ಒತ್ತಡಕ್ಕೆ ಸಿಲುಕಿ ನಿಧಾನವಾಗಿ ಕಲ್ಲಿದ್ದಲು ಉಂಟಾಯಿತು.
ಕಲ್ಲಿದ್ದಲಿನ ನಾಲ್ಕು ವಿಧಗಳಿವೆ. ಇವುಗಳಲ್ಲಿರುವ ಶೇಕಡಾ ಕಾರ್ಬನ್ ಪರಮಾಣುಗಳ ಆಧಾರದ ಮೇಲೆ ಇದನ್ನು 4 ವಿಧಗಳಾಗಿ ವಿಂಗಡಿಸಲಾಗಿದೆ.
1.ಪೀಟ್
2.ಲಿಗ್ನೈಟ್
3.ಬಿಟುಮಿನಸ್
4.ಆಂಥ್ರಸೈಟ್
ಆಂಥ್ರಸೈಟ್ ಕಲ್ಲಿದ್ದಲಿನ ಅತ್ಯುತ್ತಮ ರೂಪ.
ಬಿಟುಮಿನಸ್ ಕಲ್ಲಿದ್ದಲನ್ನು ಕೋಲ್ಟಾರ್ ತಯಾರಿಸಲು, ಆಂಥ್ರಸೈಟ್ ಕಲ್ಲಿದ್ದಲನ್ನು ಉಗಿ ಇಂಜಿನ್ನುಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ, ಸಂಶ್ಲೇಷಿತ ಪೆಟ್ರೋಲ್ ಉತ್ಪಾದನೆಯಲ್ಲಿ, ಇಂಧನ ಅನಿಲಗಳಾದ ವಾಟರ್ಗ್ಯಾಸ್, ಕೋಲ್ಗ್ಯಾಸ್ ಹಾಗೂ ಪ್ರೋಡ್ಯೂಸರ್ ಗ್ಯಾಸ್ಗಳ ಉತ್ಪಾದನೆಯಲ್ಲಿ ಬಳಸುವರು.
4.ಕೋಕ್
ಕೋಕ್ ಕಪ್ಪು ಬಣ್ಣದ , ರಂದ್ರಗಳನ್ನುಳ್ಳ ವಸ್ತು. ಬಿಟುಮಿನಸ್ ಕಲ್ಲಿದ್ದಲನ್ನು ಗಾಳಿಯ ಸಂಪರ್ಕವಿಲ್ಲದೆ ಸುಮಾರು1573 ಕೆ ತಾಪದಲ್ಲಿ ಕಾಯಿಸಿದಾಗ ಉತ್ಪತ್ತಿಯಾಗುತ್ತದೆ. ಇದು ಹೊಗೆರಹಿತ ಉರುವಲಾಗಿದೆ.ಇದು ಒಂದು ಉತ್ತಮ ವಿದ್ಯುತ್ವಾಹಕವಾಗಿದೆ.
ಇದನ್ನು ಉರುವಲನ್ನಾಗಿ, ವಾಟರ್ಗ್ಯಾಸ್, ಪ್ರೋಡ್ಯೂಸರ್ ಗ್ಯಾಸ್ಗಳ ಉತ್ಪಾದನೆಯಲ್ಲಿ, ಲೋಹಗಳ ಲೋಹೋದ್ದರಣದಲ್ಲಿ ಅಪಕರ್ಷಣಕಾರಿಯಾಗಿ ಬಳಸುವರು.
5.ಗ್ಯಾಸ್ ಕಾರ್ಬನ್
ಕಲ್ಲಿದ್ದಲನ್ನು ಶುಷ್ಕ ಆಸವನ ಕ್ರಿಯೆಗೆ ( ಭಟ್ಟಿ ಇಳಿಸುವ ಕ್ರಿಯೆ) ಒಳಪಡಿಸಿದಾಗ ಉತ್ಪಾದನೆಯಾಗುವ ರಿಟಾರ್ಟ್ ಉಪಕರಣದಲ್ಲಿ ಅಂಟಿಕೊಂಡಿರುವ ವಸ್ತುವೇ ಗ್ಯಾಸ್ ಕಾರ್ಬನ್ . ಇದು ಕಾರ್ಬನ್ನ ಶುದ್ಧ ರೂಪ ಹಾಗೂ ಗಟ್ಟಿಯಾದ ವಸ್ತು. ಇದು ಒಂದು ಉತ್ತಮ ವಿದ್ಯುತ್ ವಾಹಕವಾಗಿರುವುದರಿಂದ ಇದನ್ನು ವಿದ್ಯುದಾಗ್ರಗಳ ತಯಾರಿಕೆಯಲ್ಲಿ ಬಳಸುತ್ತಾರೆ.
✦ ಇಂಗಾಲದ ಸಂಯುಕ್ತಗಳು
1.ಕ್ಯಾಲ್ಸಿಯಂ ಕಾರ್ಬೈಡ್
✦ಇದು ಕಾರ್ಬನ್ ಮತ್ತು ಕ್ಯಾಲ್ಸಿಯಂಗಳಿಂದ ಉಂಟಾದ ಸಂಯುಕ್ತ.
✦ಕ್ಯಾಲ್ಸಿಯಂ ಆಕ್ಸೈಡ್ ಮತ್ತು ಕೋಕ್ಗಳನ್ನು ಕಾಯಿಸಿದಾಗ ಕ್ಯಾಲ್ಸಿಯಂ ಕಾರ್ಬೈಡ್ ಉತ್ಪತ್ತಿಯಾಗುವುದು.
✦ಇದು ಸ್ಪಟಿಕ ರೂಪದ ಘನವಸ್ತು. ಇದಕ್ಕೆ ತೇವಾಂಶ ಹೀರುವ ಸಾಮಥ್ರ್ಯವಿದೆ.
✦ಶೀಘ್ರವಾಗಿ ನೀರಿನೊಡನೆ ವರ್ತಿಸಿ ‘ಅಸಿಟಲಿನ್’ ಅನಿಲವನ್ನು ಉತ್ಪಾದಿಸುವುದು.
✦ಬೆಟ್ಟಗುಡ್ಡಗಳಿಗೆ, ಗಿರಿಧಾಮಗಳಿಗೆ ಪ್ರವಾಸ ಹೋಗುವವರು ಕ್ಯಾಲ್ಸಿಯಂ ಕಾರ್ಬೈಡನ್ನು ಅಸಿಟಲಿನ್ ಆಕರವಾಗಿ ಉಪಯೋಗಿಸುವರು.
2.ಸಿಲಿಕಾನ್ ಕಾರ್ಬೈಡ್
✦ಸಿಲಿಕಾನ್ ಕಾರ್ಬೈಡ್ನ್ನು ವ್ಯವಹಾರಿಕವಾಗಿ ‘ಕಾರ್ಬೋರೇಂಡಮ್’ ಎನ್ನುವರು.
✦ಸಿಲಿಕಾನ್ ಕಾರ್ಬೈಡ್ ಸಿಲಿಕಾನ್ ಮತ್ತು ಕಾರ್ಬನ್ ಇವೆರಡರ ಸಂಯುಕ್ತ.
✦ಇದು ಕಠಿಣ ವಸ್ತು. ನೀರಿನಲ್ಲಿ ಕರಗುವುದಿಲ್ಲ.
✦ಇದರ ದ್ರವನ ಬಿಂದು ಅಧಿಕ.
✦ಇದನ್ನು ಘರ್ಷಕ ವಸ್ತುವಾಗಿ ಮರಳು ಕಾಗದದ ತಯಾರಿಕೆಯಲ್ಲಿ ಹಾಗೂ ಹತಾರಗಳನ್ನು ಹರಿತಗೊಳಿಸುವ ಉಪಕರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.
3.ಸೋಡಿಯಂ ಕಾರ್ಬೋನೇಟ್
✦ಸೋಡಿಯಂ ಕಾರ್ಬೋನೇಟ್ನ್ನು ವಾಷಿಂಗ್ ಸೋಡ (ಚೌಳುಪ್ಪು) ಎನ್ನುತ್ತಾರೆ.
✦ಕಾರ್ಬಾನಿಕ್ ಆಮ್ಲವು ಸೋಡಿಯಂ ಹೈಡ್ರಾಕ್ಸೈಡ್ನೊಂದಿಗೆ ವರ್ತಿಸಿದಾಗ ಸೋಡಿಯಮ್ ಕಾರ್ಬೋನೇಟ್ ದೊರೆಯುತ್ತದೆ.
✦ಇದನ್ನು ಸಿಮೆಂಟ್, ಗಾಜಿನ ತಯಾರಿಕೆಗೆ ಉಪಯೋಗಿಸುತ್ತಾರೆ. ಗಡಸು ನೀರನ್ನು ಮೆದುಮಾಡಲು, ಪಾತ್ರೆ, ಬಟ್ಟೆಗಳನ್ನು ತೊಳೆಯಲು ಬಳಸುತ್ತಾರೆ.
4.ಸೋಡಿಯಂ ಬೈ ಕಾರ್ಬೋನೇಟ್
✦ಇದನ್ನು ಸಾಮಾನ್ಯವಾಗಿ ಅಡುಗೆ ಸೋಡಾ ಎಂದು ಕರೆಯುತ್ತಾರೆ.
✦ಕಾರ್ಬಾನಿಕ್ ಆಮ್ಲ ಮತ್ತು ಸೋಡಿಯಂ ಹೈಡ್ರಾಕ್ಸೈಡ್ ಸಂಯೋಜನೆ ಹೊಂದಿ ಸೋಡಿಯಂ ಬೈ ಕಾರ್ಬೋನೇಟ್ ಉತ್ಪತ್ತಿಯಾಗುವುದು.
✦ಇದನ್ನು ಬೇಕಿಂಗ್ ಪುಡಿ ತಯಾರಿಕೆಯಲ್ಲಿ,ಸೋಡಿಯಂ ಕಾರ್ಬೋನೇಟ್ಗಳ ತಯಾರಿಕೆಯಲ್ಲಿ, ಆಂಟಿ ಆಸಿಡ್ಗಳ ತಯಾರಿಕೆಯಲ್ಲಿ , ಆಮ್ಲ ನಿರೋಧಕವಾಗಿ, ಕೆಲವು ಆಃಆರ ಪದಾರ್ಥಗಳಲ್ಲಿ ಬಳಸುತ್ತಾರೆ.