ಮಹಾಭಾರತ ಮಹಾಕಾವ್ಯದ ಹಿನ್ನೆಲೆ ಗೊತ್ತೇ..?
ಮಹಾಭಾರತ ಮಹಾಕಾವ್ಯದಲ್ಲಿ ಭಗವದ್ಗೀತೆಯ ಬೋಧನೆಯ ಸನ್ನಿವೇಶವು ಬಹಳ ವಿಚಿತ್ರವಾಗಿದೆ. ಒಂದು ಕಡೆ ಪಾಂಡವರ ಏಳು ಅಕ್ಷೋಹಿಣಿ ಸೇನೆ; ಎದುರಿಗೆ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ. ಇವೆರಡರ ಮದ್ಯೆ ಅರ್ಜುನನ ರಥ; ಶ್ರೀಕೃಷ್ಣ ಸಾರಥಿ. ಈ ಘಟ್ಟದಲ್ಲಿ ಅರ್ಜುನನಿಗೆ ಬಂಧುಗಳನ್ನು ಕೊಲ್ಲಬೇಕಾದ ದುಗುಡ. ಈ ಬಂಧು ಬಾಂಧವರನ್ನು ಕೊಂದು ಪಡೆವ ರಾಜ್ಯವೇ ಬೇಡ; ಭಿಕ್ಷ ಬೇಡಿ ಜೀವಿಸುವುದೇ ಲೇಸು ಎಂಬ ಭಾವನೆ. ಸಂದಿಗ್ಧ ಸ್ಥಿತಿಯಲ್ಲಿದ್ದ ಅರ್ಜನ ಶ್ರೀಕೃಷ್ಣನನ್ನು ಕುರಿತು, ನಾನು ನಿನ್ನ ಶಿಷ್ಯ, ಯುದ್ಧ ಮಾಡುವುದೋ ಬಿಡುವುದೋ, ಧರ್ಮಸಂಕಟದಲ್ಲಿದ್ದೇನೆ, ಯಾವುದು ಶ್ರೇಯಸ್ಸು? ನಿಶ್ಚಿತವಾಗಿ ಹೇಳು ಎಂದು ಶ್ರೀ ಕೃಷ್ಣನನ್ನು ಬೇಡಿಕೊಂಡನು. ಈ ಗೀತೋಪದೇಶದ ಸಂದರ್ಭದಲ್ಲಿ ಮಾತ್ರ ಭಗವಂತನು ಹೇಳಿದನು ಎಂದಿದೆ. ಆದ್ದರಿಂದಲೇ ಶ್ರೀ ಕೃಷ್ಣನು ಅರ್ಜುನನಿಗೆ ಸಂಭಾಷಣೆಗಳ ಮೂಲಕ ಉಪದೇಶ ಮಾಡಿದ, ಗೀತಾ ರೂಪದಲ್ಲಿರುವ ಈ ತತ್ವಬೋಧೆ ಭಗವದ್ಗೀತೆ ಎಂದು ಹೆಸರಾಗಿದೆ.
ಮಹಾಭಾರತದ ಈಗಿನ ಕಾವ್ಯವು ಸುಮಾರು ಕ್ರಿಪೂ 400 ವರ್ಷಗಳ ಹಿಂದೆ ಬರಹರೂಪಕ್ಕೆ ಬಂದಿರಬೇಕೆಂದು ಇತಿಹಾಸಕಾರರು ತೀರ್ಮಾನಿಸಿದ್ದಾರೆ. ಮೂಲ ಮಹಾಭಾರತ ಪಾಠವು ಸುಮಾರು ಕ್ರಿ ಪೂ. 8 /9 ನೇ ಶತಮಾನದಲ್ಲಿ ರಚನೆಯಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ಕ್ರಿಶ. 300/400 ರ ಗುಪ್ತರ ಕಾಲದಲ್ಲಿ ಈಗಿನ ತಿದ್ದಿದ ಗ್ರಂಥ ರಚನೆ ಯಾಗಿರಬಹುದೆಂಬುದು ಭಾಷಾತಜ್ಞರ ಅಭಿಪ್ರಾಯ.
ಜಯ ವೆಂಬ ಹೆಸರಿನ, ಮಹಾಭಾರತದ ಮೂಲ ಪಾಠದ 8800 ಶ್ಲೋಕ ಗಳನ್ನು ಮೊದಲು ವೇದವ್ಯಾಸರು ರಚಿಸಿದರೆಂದೂ, ಅದನ್ನು 24000 ಶ್ಲೋಕಗಳಲ್ಲಿ ವೈಶಂಪಾಯನ ಮುನಿಗಳು ಜನಮೇಜಯನಿಗೆ ಹೇಳಿದರೆಂದೂ, ಅದಾದ ಅನೇಕ ವರ್ಷಗಳ ನಂತರ ಅದನ್ನು ಉಗ್ರಶ್ರವ ಸೂತ (ಸೌತಿ) ಪುರಾಣಿಕರು ನೈಮಿಷಾರಣ್ಯ ದಲ್ಲಿರುವ ವಿದ್ಯಾಲಯ ಕುಲಪತಿಗಳಾದ ಶೌನಕಮುನಿಗಳು ಮತ್ತು ಅವರ ಶಿಷ್ಯರಿಗೆ 1,00,000 ಶ್ಲೋಕಗಳಲ್ಲಿ ಹೇಳಿದರೆಂದು ಕೆಲವು ಪಂಡಿತರು ಅಭಿಪ್ರಾಯ ಪಡುತ್ತಾರೆ. ಈ ಭಗವದ್ಗೀತೆಯು ಮೊದಲಿನ ಜಯ ಪಾಠದಿಂದಲೂ ಇತ್ತೇ ಅಥವಾ ನಂತರ ಸೇರ್ಪಡೆಯಾಗಿದೆಯೇ ಎಂದು ಕೆಲವು ವಿದ್ವಾಂಸರು ಸಂಶಯ ಪಡುತ್ತಾರೆ. ಆದರೆ ಈಗಿರುವ ಮಹಾಭಾರತದ ಆದಿಪರ್ವ ಪೀಠಿಕೆಯಲ್ಲಿ ಈ ಒಂದು ಲಕ್ಷ ಶ್ಲೋಕದ ಜಯ ಅಥವಾ ಮಹಾಭಾರತ ಇತಿಹಾಸವನ್ನು (ಕಾವ್ಯ) ವೇದವ್ಯಾಸರು ಮೂರುವರ್ಷಗಳಲ್ಲಿ ರಚಿಸಿದರೆಂದು ಹೇಳಲಾಗಿದೆ.
ಖಗೋಲ ವಿಜ್ಞಾನಿ ಆರ್ಯಭಟ್ಟರು (ಕ್ರಿ ಶ.6 ನೇ ಶತಮಾನ) ಕಲಿಯುಗಾದಿಯನ್ನು ಕ್ರಿ.ಪೂ. 3102 ಫೆಬ್ರವರಿ 18 ಎಂದು ನಿರ್ಧರಿಸಿದ್ದಾರೆ ಮಹಾಭಾರತ ಯುದ್ಧವು ಅದಕ್ಕಿಂತ 50/60ವರ್ಷಹಿಂದೆ ಆಗಿರಬೇಕು. 2ನೇ ಪುಲಕೇಶಿಯ ಕಾಲದ ಐಹೊಳೆ ಶಾಸನದಲ್ಲಿ ಶಕ 556= ಕಿಪೂ.634 ಎಂದರೆ ಭಾರತ (ಕುರುಕ್ಷೇತ್ರ ಯುದ್ಧವು) ನಡೆದು 3735 ವರ್ಷಗಳಾದವೆಂದು ಹೇಳಿದೆ. ಖಗೋಲ ಶಾಸ್ರಜ್ಞರಾದ ವೃದ್ಧಗರ್ಗ, ವರಾಹಮಿಹಿರರು ಮತ್ತು ಹಿಂದಿನ ಇತಿಹಾಸಕಾರ ಕಲ್ಹಣರು ಆ ಯುದ್ಧವು ಕ್ರಿ ಪೂ 2449 ವರ್ಷದಲ್ಲಿ (2449+2012 = 4461 ವರ್ಷದ ಹಿಂದೆ) ಆಯಿತೆಂದು ಹೇಳುತ್ತಾರೆ. ಆದರೆ ಈಗಿನ ಇತಿಹಾಸಕಾರರು ಮಹಾಭಾರತ ಯುದ್ಧವು ಕ್ರಿ ಪೂ.12 ನೇ ಶತಮಾನದಿಂದ ಕ್ರಿ ಪೂ. 8 ನೇ ಶತಮಾನದ ನಡುವೆ ಕಬ್ಬಿಣ ಯುಗದ ಆರಂಭದಲ್ಲಿ ನಡೆದಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ([4]) ಹಿಂದೂ ಪಂಚಾಂಗಗಳ ಪ್ರಕಾರ ಕಲಿಯುಗ ಆರಂಭವಾಗಿ 5100 ವರ್ಷವಾಗಿದೆ; ಕುರುಕ್ಷೇತ್ರ ಯುದ್ಧವು ಅದಕ್ಕೂ 60ವರ್ಷಗಳ ಹಿಂದೆ ನಡೆದಿರಬೇಕು.
# ಮಹಾಭಾರತದಲ್ಲೇನಿದೆ..?
ಹಸ್ತಿನಾವತಿ ರಾಜಧಾನಿಯಾಗಿರುವ ಕುರುಜಾಂಗಲವನ್ನು ಶಂತನು ಚಕ್ರವರ್ತಿ ಆಳುತ್ತಿದ್ದನು. ಆವನ ಮಗ ವಿಚಿತ್ರವೀರ್ಯ. ಅವನ ಒಂದನೇ ಪತ್ನಿ ಅಂಬಿಕೆಗೆ ವ್ಯಾಸ ಮಹರ್ಷಿಯ ನಿಯೋಗದಿಂದ ಧೃತರಾಷ್ಟ್ರನೂ, ಎರಡನೇ ಪತ್ನಿ ಅಂಬಾಲಿಕೆಗೆ ಪಾಂಡುವೂ ಮಕ್ಕಳು. ಧೃತರಾಷ್ಟ್ರನಿಗೆ, ಕೌರವರು ಎಂದು ಹೆಚ್ಚಾಗಿ ಕರೆಯಲ್ಪಡುವ ದುರ್ಯೋಧನ ಮತ್ತು 99ಜನ ತಮ್ಮಂದಿರು ಮಕ್ಕಳು. ಪಾಂಡುವಿಗೆ ಯುಧಿಷ್ಠಿರ (ಧರ್ಮರಾಯ), ಭೀಮ, ಅರ್ಜುನ, ನಕುಲ, ಸಹದೇವ, ಈ ಐವರು ಪಾಂಡವರು ಎಂದು ಕರೆಯಲ್ಪಡುವ ಮಕ್ಕಳು. ರಾಜ್ಯದ ಉತ್ತರಾಧಿಕಾರ ವಿಷಯದಲ್ಲಿ ಎರಡು ಕುಟಂಬದಲ್ಲಿ ವಿವಾದ ಉಂಟಾಯಿತು.ಇಬ್ಬರೂ ಕುರು ವಂಶದವರೇ.
ದುರ್ಯೋಧನನು ಪಾಂಡವರನ್ನು ಪಗಡೆಯ ಜೂಜಿಗೆ ಕರೆದನು. ಅದರಲ್ಲಿ ಸೋತವರು 12ವರ್ಷ ವನವಾಸ ಮತ್ತು ಒಂದುವರ್ಷ ಅಜ್ಞಾತವಾಸ ಮಾಡಬೇಕೆಂದು ಪಣವಿಟ್ಟು ಆಡಿದರು. ಪಾಂಡವರು ಸೋತು ಕಾಡಿಗೆ ಹೋದರು. ಹದಿಮೂರು ವರ್ಷಗಳ ನಂತರ ಪಾಂಡವರು ಅವಧಿ ಮುಗಿಸಿ ಬಂದು ತಮ್ಮ ಭಾಗದ ರಾಜ್ಯವನ್ನು ಕೇಳಿದಾಗ, ದುರ್ಯೋಧನನು ಅದನ್ನು ಕೊಡಲು ನಿರಾಕರಿಸಿದನು. ಎಲ್ಲಾ ಸಂಧಾನ ಪ್ರಯತ್ನಗಳೂ ವಿಫಲವಾಗಿ ಯುದ್ಧ ಅನಿವಾರ್ಯವಾಯಿತು.
ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ ಮತ್ತು ಪಾಂಡವರ ಏಳು ಅಕ್ಷೋಹಿಣಿ ಸೇನೆ ಕುರುಕ್ಷೇತ್ರದಲ್ಲಿ ಯುದ್ಧಕ್ಕೆ ಸಿದ್ಧವಾಗಿ ನಿಂತವು. ಆಗ ಅರ್ಜುನನು ಕುರುಸೇನೆಯನ್ನು ನೋಡಿ ಅದರಲ್ಲಿ ತನ್ನ ಬಂಧು ಬಾಂಧವರನ್ನೂ ಗುರು ಹಿರಿಯರನ್ನೂ ನೋಡಿ, ಧೃತಿಗೆಟ್ಟು, ಅತೀವ ಚಿಂತಿತನಾಗಿ, ಯುದ್ಧಮಾಡಲು ಹಿಂಜರಿದು, ಅವನ ಸಾರಥಿಯಾಗಿದ್ದ ಶ್ರೀಕೃಷ್ಣನ ಸಲಹೆ ಕೇಳಿದನು ಆಗ ಅವರಿಬ್ಬರ ನಡುವೆ ನಡೆದ ಸಂಭಾಷಣೆ ಮತ್ತು ಭಗವಂತನಾದ ಶ್ರೀಕೃಷ್ಣ ಹೇಳಿದ ಉಪದೇಶವು ಭಗವದ್ಗೀತೆಯಾಗಿದೆ. ಇದನ್ನು ಸಂಜಯನು, ವ್ಯಾಸ ಮಹರ್ಷಿಗಳ ಅನುಗ್ರಹದಿಂದ ತಿಳಿದು, ಧೃತರಾಷ್ಟ್ರನಿಗೆ ಹೇಳಿದನು.
# ಗೀತಾ ಜಯಂತಿ :
ಮಹಾತ್ಮರು ಹುಟ್ಟಿದ ದಿನವನ್ನು ಜಯಂತಿ ಎಂದು ಆಚರಿಸುವಂತೆ ಭಗವದ್ಗೀತೆಯು ಹುಟ್ಟಿದ ದಿನವನ್ನು, ಮಾರ್ಗಶಿರ ಮಾಸದ ಏಕಾದಶಿ ದಿನ (ಡಿಸೆಂಬರ್‌ನಲ್ಲಿ) ಗೀತಾ ಜಯಂತಿಯು ಆಚರಿಲ್ಪಡುವುದು. ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಆ ದಿನ ಬೋಧಿಸಿದನೆಂಬುದು ನಂಬುಗೆ. ಅಂದು, ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಆರಂಭದ ದಿನ. ಮಹಾಭಾರತದಲ್ಲಿ, ಮಾರ್ಗಶಿರ ತ್ರಯೋದಶಿ ಮತ್ತು ಚತುರ್ದಶಿ ಸೇರಿದ ದಿನದಂದು ಯುದ್ಧವು ಆರಂಭವಾಯಿತೆಂದು ಹೇಳಿದೆ.
ಹದಿನೆಂಟು ದಿನ ಯುದ್ಧ ನಡೆದು ಅದೇ ಮಾರ್ಗಶಿರ ಅಮಾವಾಸ್ಯೆಯಂದು ದುರ್ಯೋಧನನ ವಧೆಯಾಗುವುದು. ಜಯದ್ರಥನ ವಧೆ ಹದಿನಾಲ್ಕನೆಯ ದಿನ ಆಯಿತು. ಅಂದು ಕೃಷ್ಣನ ಮಾಯೆಯಿಂದ ಸೂರ್ಯನು ಸ್ವಲ್ಪ ಹೊತ್ತು ಮರೆಯಾಗಿ ಕತ್ತಲಾವರಿಸಿ, ನಂತರ ಪನಃ ಸಂಜೆ ಸೂರ್ಯನು ಪುನಃ ಕಾಣಿಸಿಕೊಂಡಾಗ, ಅರ್ಜುನನು ಜಯದ್ರಥನನ್ನು ಕೊಂದನೆಂದು ಹೇಳಿದೆ. ಕೆಲವರು ಅಂದು ಖಾಗ್ರಾಸ ಸೂರ್ಯ ಗ್ರಹಣವಾಗಿರಬಹುದೆಂದು ಊಹಿಸುತ್ತಾರೆ. ಹಾಗಿದ್ದರೆ ಅಂದು ಅಮಾವಾಸ್ಯೆಯಾಗಿರಬೇಕು; ಹಾಗಿದ್ದರೆ ಕುರುಕ್ಷೇತ್ರ ಯುದ್ಧವು ಮಾರ್ಗಶಿರ ಬಹುಳ ಬಿದಿಗೆಯಂದು ಆರಂಭವಾಗಿ ಅಂದೇ ಗೀತೋಪದೇಶವಾಗಿರಬೇಕು. ಆದರೆ ಮಾರ್ಗಶಿರ ಶುದ್ಧ ದಶಮಿ/ಏಕಾದಶಿಯಂದು ಗೀತಾಜಯಂತಿಯನ್ನು ಆಚರಿಸುವ ಪದ್ದತಿ ಹೇಗೆ ಬಂದಿತೆಂಬುದು ಸಂಶೋಧಕರಿಗೆ ಬಿಟ್ಟ ವಿಷಯ.
# ಭಗವದ್ಗೀತೆ :
ಭಗವದ್ಗೀತೆಯು ಹದಿನೆಂಟು ಅಧ್ಯಾಯಗಳಿಂದ ಕೂಡಿದ್ದರೂ, ಶ್ರೀಕೃಷ್ಣನ ಉಪದೇಶ, ಎರಡನೆಯ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಆರಂಭವಾಗಿದೆ. ಮುಂದೆ ಅದೇ ಅಧ್ಯಾಯದ ಐವತ್ಮೂರನೇ ಶ್ಲೋಕದವರೆಗೆ, ಎಂದರೆ ನಲವತ್ಮೂರು ಶ್ಲೋಕಗಳಲ್ಲಿ ಅರ್ಜುನನಿಗೆ ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಆದರೆ ಸಂದೇಹ ನಿವಾರಣೆಗಾಗಿ, ಅವನ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಉಳಿದ ಆರುನೂರು ಶ್ಲೋಕಗಳು ಬಂದಿವೆ. ಅರ್ಜುನನ ವಿಷಾದದ ಸಂದರ್ಭದ ಶ್ಲೋಕಗಳೂ ಸೇರಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು ಏಳು ನೂರು ಶ್ಲೋಕಗಳಾಗತ್ತವೆ.
ಯುದ್ಧಾರಂಭ ಸಮಯದಲ್ಲಿ ಏಳು ನೂರು ಶ್ಲೋಕಗಳನ್ನು ಹೇಳಿದ್ದುಂಟೇ? ಎಂಬ ಸಂಶಯ ಮೊದಲಿನಿಂದಲೂ ಇದೆ. ಸ್ವಾಮಿ ಆದಿದೇವಾನಂದರು, ತಮ್ಮ ಗೀತಾ ಪೀಠಿಕೆಯಲ್ಲಿ ಶ್ರೀ ಕೃಷ್ಣನು ಸಂಕ್ಷೇಪಿಸಿ ಹೇಳಿದುದನ್ನು ವ್ಯಾಸರು ವಿವರವಾಗಿ ಬರೆದಿರಬಹುದೆಂದು ಹೇಳುತ್ತಾರೆ. ಪ್ರಾಚೀನ ಪ್ರಸಿದ್ಧ ಟೀಕಾಕಾರರಾದ ಶ್ರೀಧರ ಸ್ವಾಮಿಯವರೂ ಇದೇ ಅಭಿಪ್ರಾಯ ಪಡುತ್ತಾರೆಂದು ಹೇಳಿದ್ದಾರೆ. ಭಗವಂತನ ಸ್ವರೂಪರಾದ ವ್ಯಾಸರು ಮಹಾಭಾರತದ ಸಾರವನ್ನು ಗೀತೆಯಲ್ಲಿ ತುಂಬಿರುವರೆಂದು ವಿನೋಬಾರ ಅಭಿಪ್ರಾಯ. ಶಂಕರಾಚಾರ್ಯರು ಶ್ರೀಮನ್ನಾರಾಯಣನೇ ಶ್ರೀ ಕೃಷ್ಣನಾಗಿ ಅವತರಿಸಿ, ಜಗತ್ತಿನಲ್ಲಿ ಬ್ರಹ್ಮಜ್ಞಾನ ಪ್ರಚಾರ ಮಾಡಲು ಮತ್ತು ಅರ್ಜುನನ ಮೋಹವನ್ನು ಕಳೆಯಲು ಮಾಡಿದ ಉಪದೇಶವನ್ನು, ಸರ್ವಜ್ಞರಾದ ವೇದವ್ಯಾಸರು ಭಗವಂತನು ಹೇಳಿದಂತೆಯೇ ಏಳುನೂರು ಶ್ಲೋಕಗಳಲ್ಲಿ ಗೀತೆಯನ್ನು ರಚಿಸಿದರೆನ್ನುತ್ತಾರೆ.
ಗೀತೆ ಚಿಕ್ಕದಾದರೂ ಹಿಂದೂ ಧರ್ಮದ ಮಹಾ ಗ್ರಂಥವೆಂದು ಹೆಸರು ಪಡೆದಿದೆ. ಅದನ್ನು ಉಪನಿಷತ್ತುಗಳ ಸಾರವೆಂದು (ಈಶಾವಾಸ್ಯೋಪನಿಷತ್) ಹೇಳುತ್ತಾರೆ. ಅದರಲ್ಲಿ ಅನೇಕ ಬಗೆಯ ಯೋಗಗಳನ್ನು ಹೇಳಿದ್ದರೂ, ಅದರಲ್ಲಿ ಹೇಳಿದ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗಗಳೇ ಬಹಳ ಪ್ರಸಿದ್ಧವಾಗಿವೆ.
ಅದನ್ನು ಅರ್ಥ ಮಾಡಿಕೊಳ್ಳುವುದು ಸಮುದ್ರದಿಂದ ಬೊಗಸೆ ನೀರನ್ನು ತಂದಂತೆ. ಆದನ್ನು ಓದಿದವರು, ಅನುಷ್ಠಾನ ಮಾಡುವವರು ಗೀತೆಯನ್ನು ಪೂರ್ಣ ಅರಿತಿದ್ದೇವೆಂದು ಹೇಳುವಂತಿಲ್ಲ. ಇದನ್ನು ಕೇಳಿದ ಮಾತ್ರದಿಂದ ಅರಿಯಲಾರರು, ಎಂಬುದು ಅದರಲ್ಲಿರುವ ಎಚ್ಚರಿಕೆ. ಅದರಲ್ಲಿರುವ ಎಲ್ಲಾ ಉಪದೇಶಗಳೂ ಎಲ್ಲರಿಗೂ ಅನ್ವಯಿಸಲಾಗದು. ಅವರವರ ಗುಣ ಸ್ವಭಾವ, ನಂಬುಗೆಗಳಿಗೆ ತಕ್ಕಂತೆ ಬೇಕಾದ ಯೋಗವನ್ನು ಆರಿಸಿಕೊಳ್ಳಬಹುದು.