GKHistorySpardha Times

ಕರ್ನಾಟಕ ಇತಿಹಾಸ ಅಧ್ಯಯನ : ರಾಷ್ಟ್ರಕೂಟರು

Share With Friends

ರಾಷ್ಟ್ರಕೂಟರು ಕ್ರಿ.ಶ. 8 ರಿಂದ 10ನೇ ಶತಮಾನದವರೆಗೆ ಆಳಿದ ರಾಜವಂಶ. ದಂತಿದುರ್ಗನು ಚಾಲುಕ್ಯರ  ಕೀರ್ತಿವರ್ಮನನ್ನು ಸೋಲಿಸಿ ಗುಲ್ಬರ್ಗ ವನ್ನು ಕೇಂದ್ರವಾಗಿಸಿ ಈ ಸಾಮ್ರಾಜ್ಯವನ್ನು ಸ್ಥಾಪಿಸಿದನು. ದಂತಿದುರ್ಗನು ತನ್ನ ಮಾವ, ಪಲ್ಲವ ರಾಜ ನಂದಿವರ್ಮನನಿಗೆ ಕಂಚಿಯನ್ನು ಚಾಲುಕ್ಯರಿಂದ ಪುನಃ ಪಡೆಯಲು ಸಹಾಯ ಮಾಡುತ್ತಾ, ಗುರ್ಜರ, ಕಳಿಂಗ,ಕೋಸಲ ಮತ್ತು ಶ್ರೀ ಶೈಲ ರಾಜರುಗಳನ್ನು ಸೊಲಿಸಿದನು.

ಧ್ರುವನ  ಮೂರನೇ ಮಗನಾದ ಗೋವಿಂದ -3 ನ ಸಿಂಹಾಸನಾರೋಹಣ ದೊಂದಿಗೆ ಯಶಸ್ಸಿನ ಒಂದು ಯುಗವೇ ಶುರುವಾಯಿತು. ಆತನ ರಣರಂಗದ ಸಾಧನೆಗಳನ್ನು ಮಹಾಭಾರತದ ಅರ್ಜುನ ಮತ್ತು ಅಲೆಕ್ಸಂಡೆರ್ ಗೆ ಹೊಲಿಸಲಾಗಿದೆ. ಈತನ ಉತ್ತರಾಧಿಕಾರಿಯಾದ ಅಮೋಘ ವರ್ಷ ನೃಪತುಂಗ ಮಾನ್ಯಖೇಟ ಅಥವಾ ಮಳಖೇಡ ವನ್ನು ರಾಜಧಾನಿಯಾಗಿಸಿ ಕನ್ನಡಿಗರ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಆಳ್ವಿಕೆ ಮಾಡಿದ ರಾಜನೆಂದು ಹೇಳಬಹುದು.

ಅವರ ಆಳ್ವಿಕೆಯಲ್ಲಿ  ಕಲೆ, ಸಾಹಿತ್ಯ ಮತ್ತು ಧರ್ಮಗಳನ್ನು ಸಮೃದ್ಧಗೊಳಿಸಿದ ಕಾಲವೆಂದು ಪರಿಗಣಿಸಲಾಗಿದೆ. ರಾಷ್ಟ್ರಕೂಟರಲ್ಲೆ ಪ್ರಸಿದ್ಧನೆನಿಸಿದ ಅಮೋಘ ವರ್ಷ ನೃಪತುಂಗ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ವತಃ ನಿಪುಣ ವಿದ್ವಾಂಸನಾಗಿದ್ದನು. ಅವರು ಬರೆದ ಕನ್ನಡದ ಕವಿರಾಜಮಾರ್ಗ ಮತ್ತು ಸಂಸ್ಕೃತದ ಪ್ರಶ್ನೋತ್ತರ ಶತಮಾಲಿಕೆ ಒಂದು ಮೈಲುಗಲ್ಲಾಗಿದ್ದು ಇದನ್ನು ಟಿಬೆಟಿಯನ್ ಭಾಷೆಗೂ ಭಾಷಾಂತರಿಸಲಾಗಿದೆ. ಇವರ ಧರ್ಮ ಸಹಿಷ್ಣುಸತೆ, ಕಲೆ ಮತ್ತು ಸಾಹಿತ್ಯದಲ್ಲಿನ ಒಲವು, ಶಾಂತಿ ಪ್ರಿಯ ಪ್ರವೃತ್ತಿಯನ್ನು ಕಂಡು ಇವರನ್ನು ದಕ್ಷಿಣದ ಅಶೋಕ (ಅಶೋಕ ಚಕ್ರವರ್ತಿ) ಎಂದೂ ಕರೆಯುತ್ತಾರೆ.

ರಾಷ್ಟ್ರಕೂಟರ ಪ್ರಭಾವ ಸಂಪೂರ್ಣ  ಭಾರತದ ಮೇಲಾಗಿತ್ತು. ಸುಲೈಮಾನ್, ಅಲ್ ಮಸೂದಿ  ಮುಂತಾದವರು ಸಮಕಾಲೀನ ಭಾರತದ ಅತಿ ದೊಡ್ಡ ಸಾಮ್ರಾಜ್ಯವೆಂದು ಹೇಳಿದರಲ್ಲದೆ ಸುಲೈಮಾನ್ ಇವರನ್ನು ವಿಶ್ವದ 4 ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದು ಎಂದು ಹೇಳಿದ್ದಾರೆ. ಇತಿಹಾಸ ತಜ್ಞ್ಯರು ಈ ಕಾಲವನ್ನು “ಕನ್ನೌಜ್ ಚಕ್ರಾಧಿಪತ್ಯದ ಸಮಯ” ವೆಂದು ಕರೆಯುತ್ತಾರೆ. ಮತ್ತು ರಾಷ್ಟ್ರಕೂಟರು ಉತ್ತರ ಭಾರತವನ್ನು ವಶಪಡಿಸಿಕೊಂಡು ತಮ್ಮನ್ನು ದೊರೆಗಳೆಂದು ರುಜುವಾತುಪಡಿಸಿದ್ದರಿಂದ ಇದನ್ನು “ಕರ್ನಾಟಕ ಚಕ್ರಾಧಿಪತ್ಯದ ಸಮಯ” ವೆಂದೂ ಕರೆಯುತ್ತಾರೆ.

ಸಾಮ್ರಾಜ್ಯವನ್ನು ಮಂಡಳ ಮತ್ತು ರಾಷ್ಟ್ರಗಳಾಗಿ ವಿಂಗಡಿಸಲಾಗಿದ್ದು , ರಾಷ್ಟ್ರವನ್ನು ಆಳುವವನನ್ನು ರಾಷ್ಟ್ರಪತಿ (ಚಕ್ರವರ್ತಿ) ಎಂದು ಕರೆಯಲಾಗುತ್ತಿತ್ತು. ಅಮೊಘವರ್ಶನ ಸಾಮ್ರಾಜ್ಯದಲ್ಲಿ 16 ರಾಷ್ಟ್ರಗಳಿದ್ದವು. ರಾಷ್ಟ್ರವು ವಿಷಯಗಳಾಗಿ (ವಿಷಯಪತಿ) ಮತ್ತು ವಿಷಯವು ನಾಡು (ನಾಡುಗೌಡ) ಗಳಾಗಿ ವಿಂಗಡಿಸಲಾಗಿತ್ತು. ವಿಂಗಡನೆಯಲ್ಲಿ ಕೊನೆಯ ಹಂತ ಗ್ರಾಮ (ಗ್ರಾಮಪತಿ) ಆಗಿತ್ತು.

ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಕನ್ನಡವು ಸಾಹಿತ್ಯಕ ಭಾಷೆಯಾಗಿ ಪ್ರಾಮುಖ್ಯತೆ ಪಡೆಯಿತು. ಕವಿರಾಜಮಾರ್ಗ ಇತರ ಕವಿಗಳಿಗೆ ಮಾರ್ಗದರ್ಶಿ ಆಯಿತು. ದೊರೆ ಅಮೋಘವರ್ಷ ನೃಪತುಂಗನ ಕಾಲದ ಕವಿರಾಜಮಾರ್ಗ ಗ್ರಂಥದಲ್ಲಿ ” ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮಲೆಗಳ್ ” ಅರ್ಥಾತ್  ಕುಳಿತು ಅಭ್ಯಾಸ ಮಾಡದ ಜನತೆಯೂ ಕಾವ್ಯ ಪ್ರಯೋಗಗಳಲ್ಲಿ ಪರಿಣತೆಯನ್ನು ಹೊಂದಿದ್ದರು ಎಂದು ಕನ್ನಡಿಗರ ಸಾಹಿತ್ಯಾಸಕ್ತಿಯ ಬಗ್ಗೆ  ವರ್ಣಿಸಿದ್ದಾನೆ. ಆದಿ ಕವಿ ಪಂಪ, ಕನ್ನಡದ ಪ್ರಖ್ಯಾತ ಕವಿ ಎಂದು ಪರಿಗಣಿಸಲಾಗಿದ್ದು, ಚಂಪು ಶೈಲಿಯಲ್ಲಿ ಬರೆದ ಆದಿ ಪುರಾಣ (ಜೈನ ತೀರ್ಥಂಕರ ಋಷಭದೇವನ ಚರಿತ್ರೆ) ದಿಂದ ಪ್ರಖ್ಯಾತಿಯನ್ನು ಪಡೆಡಿದೆ.

ಉಭಯ ಚಕ್ರವರ್ತಿ (ಎರಡು ಭಾಷೆಗಳಲ್ಲಿ ಸರ್ವೋಚ್ಚ ಕವಿ) ಎಂದು ಹೆಸರು ಪಡೆದ ಶ್ರೀ ಪೊನ್ನ, ರಾಜ  ಕೃಷ್ಣ -3 ನ ಆಶ್ರಯದಲ್ಲಿದ್ದಾಗ ಶಾಂತಿಪುರಾಣ ಬರೆದು ಪ್ರಖ್ಯಾತನಾದನು. ಕಲೆ ಮತ್ತು ವಾಸ್ತುಶಿಲ್ಪದಲ್ಲಿ ರಾಷ್ಟ್ರಕೂಟರ ಕೊಡುಗೆಯನ್ನು ಎಲ್ಲೋರ ಮತ್ತು ಎಲಿಫೆಂಟಾ ಬಂಡೆಗಲ್ಲಿನ ಗುಹಾ ದೇವಾಲಯಗಳಲ್ಲಿ ಕಾಣಬಹುದು (ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿ ಇದೆ) . ಅತ್ಯಂತ ಪ್ರಖ್ಯಾತಿಯನ್ನು ಪಡೆದ ಏಕಶಿಲೆಯ ಕೈಲಾಸನಾಥ ದೇವಾಲಯ (ಎಲ್ಲೋರಾ) ರಾಷ್ಟ್ರಕೂಟರ ಕೊಡುಗೆ. ದೇವಾಲಯದ ಗೋಡೆಗಳಲ್ಲಿ  ಅದ್ಭುತವಾದ ಶಿಲ್ಪಕಲೆಗಳಿದ್ದು (ಶಿವ, ಪಾರ್ವತಿ, ರಾವಣ) ಛಾವಣಿಗಳು ವರ್ಣಚಿತ್ರಗಳು ಹೊಂದಿರುತ್ತವೆ.  ಇತಿಹಾಸ ತಜ್ಞ  ವಿನ್ಸೆಂಟ್ ಸ್ಮಿತ್ ಪ್ರಕಾರ ಏಕಶಿಲೆಯ ಕೈಲಾಸನಾಥ ದೇವಾಲಯ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲು  ಅರ್ಹವಾಗಿದೆ.

# ನೆನಲಿನಲ್ಲಿಡಬೇಕಾದ ಅಂಶಗಳು :
➤ ರಾಷ್ಟ್ರಕೂಟರು ಕ್ರಿ.ಶ. 757 ರಲ್ಲಿ ಬಾದಾಮಿ ಚಾಲುಕ್ಯರನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
➤ ರಾಷ್ಟ್ರಕೂಟ ಎಂಬ ಪದದ ಅರ್ಥ – ಪ್ರಾದೇಶಿಕ ವಿಭಜನೆಗಳಾದ ರಾಷ್ಟ್ರದ ಮುಖ್ಯಸ್ಥ ರು ಅಥವಾ ರಾಷ್ಟ್ರ ಎಂದರೆ ಪ್ರಾಂತ್ಯ ಹಾಗೂ ಕೂಟ ಎಂದರೆ – ನಾಯಕ ಎಂದರ್ಥ
➤ ರಾಷ್ಟ್ರಕೂಟ ಮನೆತನ ಸ್ಥಾಪಕ – ದಂತಿದುರ್ಗ, ಇವರ ರಾಜಧಾನಿ – ಮಾನ್ಯಖೇಟ, ಮಾನ್ಯಖೇಟ ಪ್ರಸ್ತುತ – ಗುಲ್ಬರ್ಗ ಜಿಲ್ಲೆಯಲ್ಲಿದೆ, ಇವರ ರಾಜ್ಯ ಲಾಂಛನ – ಗರುಡ
➤ ಇವರು ರಾಜ್ಯಬಾರ ಮಾಡಿದ್ದು – 8 ನೇ ಶತಮಾನದಿಂದ 10 ನೇ ಶತಮಾನದವರೆಗೆ

# ರಾಷ್ಟ್ರಕೂಟರ ಮೂಲಗಳು :
➤ ರಟ್ಟ ರಾಷ್ಟ್ರಕೂಟರ ರಾಥೋಡ್ ಮೊದಲಾದವರ ಪದಗಳಲ್ಲಿ ಕಂಡು ಬರುವ ಸಾಮ್ಯದ ಆಧಾರದ ಮೇಲೆ ರಾಷ್ಟ್ರ ಕೂಟರು ರಜಪೂತರ ಮೂಲದವರೆಂದು ಡಾ//.Pleet ರವರ ಆಭಿಪ್ರಾಯ. ಉತ್ತರಾರ್ಧದ ಕೆಲವು ಶಾಸನಗಳ ಪ್ರಕಾರ ರಾಷ್ಟ್ರಕೂಟರು ಯಮವಂಶದವರು, ಖೇಡ ಮತ್ತು ಮುಲ್ತಾನ್ ತಾಮ್ರ ಶಾಸನದ ಪ್ರಕಾರ ಇವರ ಮೂಲ ನೆಲೆ ಬಿರಾರ್ ನ ಎಲಚಿಪುರ

➤ ಬರ್ನೆಲ್ ಮತ್ತು H .Krishna Shastri ರವರ ಪ್ರಕಾರ ಇವರು ಆಂದ್ರ ರೆಡ್ಡಿ ಜನಾಂಗದವರು, S.D.C.V ವೈದ್ಯರ ಪ್ರಕಾರ – ಇವರು ಮಹಾರಾಷ್ಟ್ರದವರು,  ಡಾ//.G.R.Bhoodarkar ರಪ್ರಕಾರ ತುಂಗ ವಂಶದವರು ಹಾಗೂ ತುಂಗ ಮತ್ತ ರಟ್ಟ ಈ ವಂಶದ ಮೂಲ ಪುರುಷರೆಂದು ಕೆಲವು ಶಾಸನ ತಿಳಿಸಿದ . ಅಲ್ತೇಕರ್ ರ ಪ್ರಕಾರ – ರಾಷ್ಟ್ರ ಕೂಟರು ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದು ಇಂದಿನ ಗುಲ್ಬರ್ಗ ಜಿಲ್ಲೆಯ ಮಾನ್ಯಖೇಟ ಎಂಬಲ್ಲಿ ಒಂದು ಚಿಕ್ಕ ಸಂಸ್ಥಾನವನ್ನು ಆಳುತ್ತಿದ್ದರು

# ರಾಜಕೀಯ ಇತಿಹಾಸ :
ಕ್ರಿ.ಶ.757 ರಲ್ಲಿ ಬಾದಾಮಿ ಚಾಲುಕ್ಯರ ಕೊನೆಯ ಅರಸ 2 ನೇ ಕೀರ್ತಿವರ್ಮನನ್ನು ಸೋಲಿಸಿ ದಂತಿದುರ್ಗ ಈ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ, ದಂತಿದುರ್ಗ – ಈ ಸಾಮ್ರಾಜ್ಯದ ಮೂಲ ಪುರುಷ, ದಂತಿದುರ್ಗನ ರಾದಧಾನಿ – ಎಲ್ಲೋರಾ, ಈತನ ನಂತರ ಈತನ ಚಿಕ್ಕಪ್ಪ – ಒಂದನೇ ಕೃಷ್ಣ ಅಧಿಕಾರಕ್ಕೆ ಬಂದನು, 1 ನೇ ಕೃಷ್ಣ – ಶಿವನ ಆರಾಧಕನಾಗಿದ್ದ . ಇತಿಹಾಸಕ್ಕೆ 1 ನೇ ಕೃಷ್ಣ ಕೊಡುಗೆ – ಎಲ್ಲೋರದ ಕೈಲೈಸನಾಥ ದೇವಾಲಯ, ಎಲ್ಲೋರದ ಕೈಲೈಸನಾಥ ದೇವಾಲಯಕ್ಕೆ – ಕನ್ನಕೇಶ್ವರ ಎಂಬ ಹೆಸರಿತ್ತು, 1ನೇ ಕೃಷ್ಣ ನಂತರ – ಇಮ್ಮಡಿ ಗೋವಿಂದ ಪಟ್ಟಕ್ಕೆ ಬಂದ,  ಇಮ್ಮಡಿ ಗೋವಿಂದನ ನಂತರ – ಧೃವನು ಪಟ್ಟಕ್ಕೆ ಬಂದನು

# ರಾಷ್ಟ್ರಕೂಟರ ಸಾಹಿತ್ಯ, ಧರ್ಮ :
ರಾಷ್ಟ್ರಕೂಟರ ವೈಭವಪೂರ್ಣ ಆಳ್ವಿಕೆಯಲ್ಲಿ ಶಿಕ್ಷಣ, ಸಾಹಿತ್ಯ, ವಾಸ್ತುಶಿಲ್ಪ ಮುಂತಾಗಿ ಎಲ್ಲವೂ ರಾಜಾಶ್ರಯದಲ್ಲಿ ವಿಪುಲವಾಗಿ ಬೆಳೆಸಿದರು. ನಾಲ್ಕನೆಯ ಗೋವಿಂದ ಚಕ್ರವರ್ತಿ ಅಲ್ಪಕಾಲ ಆಳಿದರೂ ಒಬ್ಬನೇ 400 ಅಗ್ರಹಾರಗಳನ್ನು ಸೃಷ್ಟಿಸಿದನೆಂದರೆ ಮಿಕ್ಕವರ ಕಾಲದ ಬೆಳವಣಿಗೆಯನ್ನು ಊಹಿಸಬಹುದು. ಕನ್ನಡ, ಸಂಸ್ಕೃತ ಹಾಗೂ ಪ್ರಾಕೃತ ಮೂರು ಭಾಷೆಗಳಲ್ಲಿ ಅನೇಕ ಕೃತಿಗಳು ರಚನೆಗೊಂಡು ಸಿದ್ಧಾಂತ ಚಕ್ರವರ್ತಿಗಳೂ ಕವಿಚಕ್ರವರ್ತಿಗಳೂ ಈ ಕಾಲದಲ್ಲಿ ರಾಜರ ಆಸ್ಥಾನವನ್ನು ಅಲಂಕರಿಸಿದರು.

ವ್ಯಾಕರಣ, ಕಾವ್ಯ, ನಾಟಕ, ಲೋಕಕಲಾ, ಸಮಯ ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ವಿದ್ವಾಂಸರು ಈ ರಾಜರ ಆಶ್ರಯದಲ್ಲಿ ಬಾಳಿ ಬದುಕಿದರು. ಸಾಲೊಟಗಿ (ಶಾಲಾಪಾವಿಟ್ಟಿಗೆ) ಎಂಬ ಸ್ಥಳದಲ್ಲಿ ಉನ್ನತ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳ ವಸತಿಗೆಂದು 27 ನಿವೇಶನಗಳಿದ್ದವು. ಇಂಥ ಅನೇಕ ವಿದ್ಯಾಕೇಂದ್ರಗಳು ರಾಜ್ಯದ ಅನೇಕ ಭಾಗಗಳಲ್ಲಿದ್ದವು. ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದಂತೆ ದೊರೆಕಿದ ಅನೇಕ ಶಾಸನಗಳು (ಅದರ ಕವಿಗಳು) ಸಂಬಂಧ ಹಾಗೂ ಬಾಣಭಟ್ಟರ ಶೂಲಿಗಳನ್ನು ಅನುಸರಿಸಿರುವುದು ಅವರ ಪಾಂಡಿತ್ಯಕ್ಕೆ ಕನ್ನಡಿ ಹಿಡಿದಂತಿದೆ.

ಕುಮಾರಿಲ, ವಾಚಸ್ಪತಿ, ಲಲ್ಲ, ಕಾತ್ಯಾಯನ, ಆಂಗಿರಸ, ಯಮ, ರಾಜಶೇಖರ, ತ್ರಿವಿಕ್ರಮ, ಹಲಾಯುಧ ಮುಂತಾದ ವೈದಿಕಪಂಥದ ಲೇಖಕರು ಆ ಕಾಲದಲ್ಲಿದ್ದರು. ರಾಜಶೇಖರ ಮೂಲತಃ ಅಂದಿನ ಮಹಾರಾಷ್ಟ್ರವೆನಿಸಿದ ಕರ್ನಾಟಕದವ. ಕರ್ನಾಟಕದಲ್ಲಿ ಪ್ರಾಯಃ ಸ್ಥಾನಗೌರವ ಸಿಕ್ಕಿದ ಆತ ಕನೋಜಕ್ಕೆ ಹೋಗಿ ಪ್ರತಿಭೆಯನ್ನು ಮೆರೆದ. ತ್ರಿವಿಕ್ರಮನ ನಳಚಂಪು ಸಂಸ್ಕೃತದ ಉಪಲಬ್ಧ ಮೊದಲ ಚಂಪೂಕೃತಿ. ಈತ ಎರಡನೆಯ ಇಂದ್ರನ ಬಾಗುಮ್ರಾ ತಾಮ್ರ ಶಾಸನವನ್ನೂ ಬರೆದಿದ್ದಾನೆ. ಹಲಾಯುಧ ಕವಿರಹಸ್ಯ ಎಂಬ ವ್ಯಾಕರಣವನ್ನೂ ಪಿಂಗಳನ ಛಂದಶಾಸ್ತ್ರಕ್ಕೆ ಟೀಕೆಯನ್ನೂ ಬರೆದಿದ್ದಾನೆ. ಇವನೂ ಗೋದಾವರಿ ತೀರದವನೆ.

ಈ ಕಾಲದಲ್ಲಿ ಜೈನಧರ್ಮ ಹಾಗೂ ಸಾಹಿತ್ಯ ಎರಡೂ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದವು. ಅಕಲಂಕ, ವಿದ್ಯಾನಂದ ಇವರು ಸ್ವಾಮಿ ಸಮಂತಭದ್ರರ ಆಪ್ತಮೀಮಾಂಸೆ ಎಂಬ ಕೃತಿಗೆ ಅಷ್ಟಶತಿ ಹಾಗೂ ಅಷ್ಟಸಹಸ್ರೀ ಎಂಬ ವ್ಯಾಖ್ಯಾನಗಳನ್ನು ಬರೆದರು. ಮಾಣಿಕ್ಯ ನಂದಿಯ ಪರೀಕ್ಷಾ ಮುಖಶಾಸ್ತ್ರ, ಪ್ರಭಾಚಂದ್ರನ ನ್ಯಾಯಕುಮುದಚಂದ್ರೋದಯ – ಇವು ಜೈನ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದರೆ, ಮಲ್ಲವಾದಿನ್ ಪಂಡಿತನ ಕೃತಿ ನ್ಯಾಯಬಿಂದುಟೀಕಾ ಬೌದ್ಧ ನ್ಯಾಯಕೃತಿಯೊಂದಕ್ಕೆ ಸಂಬಂಧಿಸಿತ್ತು.

ಸಿದ್ಧಸೇನ, ಎರಡನೆಯ ಜಿನಸೇನ, ಶಾಕಟಾಯನ, ವೀರಾಚಾರ್ಯ ಗುಣಭದ್ರ ಮುಂತಾದವರನ್ನು ಇಲ್ಲಿ ಸ್ಮರಿಸಬಹುದು. ಹರವಂಶ ಪುರಾಣವನ್ನು ರಚಿಸಿದ ಒಂದನೆಯ ಜಿನಸೇನ ಸಹ ಈ ಕಾಲದಲ್ಲಿದ್ದ (783). ಆತನ ಹರಿವಂಶ ಪುರಾಣ ವರ್ಧಮಾನಪುರದ ನನ್ನರಾಜ ಬಸದಿಯೆಂದು ಪ್ರಸಿದ್ಧವಾದ ಪಾಶ್ರ್ವ ಜಿನಾಲಯದಲ್ಲಿ ಪೂರ್ಣಗೊಂಡಿತು.   ರಾಹುಲ ಸಾಂಕೃತ್ಯಾಯನರು ಇವನನ್ನು ಪ್ರಾಕೃತದ ಮಹಾಕವಿಗಳಲ್ಲಿ ಒಬ್ಬನೆಂದು ಗುರುತಿಸಿದ್ದಾರೆ. ಈತ ಪಉಮಚರಿಉ ಗ್ರಂಥವನ್ನು ಪೂರ್ಣಗೊಳಿಸದೇ ತೀರಿಕೊಂಡ. ಅದನ್ನು ಆತನ ಪುತ್ರ ತ್ರಿಭುವನ ಸ್ವಯಂಭೂ ಸಂಪೂರ್ಣಗೊಳಿಸಿದ. ವೀರಸೇನ ಹಾಗೂ ಜಿನಸೇನರು ಇದೇ ಕಾಲದಲ್ಲಿ ಧವಲಾ, ಜಯಧವಲಾ ಗ್ರಂಥಗಳನ್ನು ರಚಿಸಿದರು.

ಈ ಜಿನಸೇನರು ಪಾಶ್ರ್ಚಾಭ್ಯುದಯ ಎಂಬ ಕಾವ್ಯವನ್ನು ಕಾಳಿದಾಸನ ಮೇಘದೂತದ ಪಂಕ್ತಿಗಳನ್ನು ಪ್ರತಿಯೊಂದು ಪದ್ಯದಲ್ಲೂ ಬಳಸಿಕೊಂಡು ಬರೆದಿದ್ದಾರೆ. ಅನಂತರ ಮಹಾಪುರಾಣ ಕಾವ್ಯವನ್ನು ಬರೆದರು. ಇದರಲ್ಲಿ ಪೂರ್ವಭಾಗ ಮಾತ್ರ (ಆದಿಪುರಾಣ) ಸಂಪೂರ್ಣವಾಯಿತು. ಅಂತಿಮ ಭಾಗವನ್ನು ಉತ್ತರಪುರಾಣ ಎಂದು ಕರೆಯಲಾಗದೆ. ಈ ಭಾಗ ಗುಣಭದ್ರ ಹಾಗೂ ಲೋಕ ಸೇನರಿಂದ ಸಂಪೂರ್ಣವಾಯಿತು. ಈ ಜಿನಸೇನರು ನೃಪತುಂಗನಿಂದ ಮಾನಿತರಾಗಿದ್ದರು. ಅವನಿಗೆ ಗುರುಸ್ಥಾನದಲ್ಲಿದ್ದರು.

ಪಶ್ಯಧರ್ಮತರೋರರ್ಥಃ ಫಲಂ ಕಾಮಸ್ತು ತದ್ರಸಃ 1 ಸತ್ತ್ರಿವರ್ಗ ತ್ರಯಸ್ಯಾಸ್ಯ ಮೂಲಂ ಪುಣ್ಯಕಥಾಶ್ರುತೀ 11 (11.31) ಧರ್ಮತರುವಿಗೆ ಅರ್ಥವೇ ಫಲವಾದರೆ, ಕಾಮವೇ ಫಲದ ರಸವೆಂದು, ಅದುವೇ ಪುಣ್ಯಕಥೆಗೆ ಮೂಲವೆಂದು ತಿಳಿಸಿದ್ದಾರೆ. ಇದನ್ನೇ ಪಂಪ, ಚಾಮುಂಡರಾಯ ಮೊದಲಾದವರು ತಮ್ಮ ಕೃತಿಗಳಿಗೆ ಆಕರವಾಗಿ ಬಳಸಿಕೊಂಡಿದ್ದಾರೆ. ಶಾಕಟಾಯನನ (ಪಾಲ್ಯಕರ್ತಿ) `ಅಮೋಘವೃತ್ತಿ ಎಂಬುದು ವ್ಯಾಕರಣ ಗ್ರಂಥವಾಗಿದೆ. ವೀರಾಚಾರಿಯ ಗಣಿತ ಸಾರಸಂಗ್ರಹ ಕೃತಿ ಗಣಿತಕ್ಕೆ ಸಂಬಂಧಿಸಿದೆ.

ಪುಷ್ಪದಂತನು `ಮಹಾಪುರಾಣ’ ಸಣಾಯಕುಮಾರಚರಿತ, ಯಶೋಧರ ಚರಿತ ಎಂಬ ಕೃತಿಗಳನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ದೇವನಿಂದ ಪೋಷಿಸಲ್ಪಟ್ಟ. ಕನ್ನಡ ಸಾಹಿತ್ಯಕ್ಕಂತೂ ಇದು ಸುಮರ್ಣಯುಗ. ರಾಷ್ಟ್ರಕೂಟರು ಅವರ ಮಾಂಡಲಿಕರೂ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡರೆ ರತ್ನತ್ರಯರಾದ ಪಂಪ, ಪೊನ್ನ ಹಾಗೂ ರನ್ನ ಸುಮಾರು ಈ ಕಾಲಖಂಡದಲ್ಲೇ ಇದ್ದರು.

ರಾಷ್ಟ್ರಕೂಟರ ಮನೆತನವೊಂದನ್ನೇ ಎತ್ತಿಕೊಂಡರೆ ರುದ್ರಟ (ರುದ್ರ ಭಟ್ಟ) ವತ್ಸರಾಜ, ನಾಕಿಗ, ಕವಿರಾಜರಾಜ, ಸಾಮಿಯಣ್ಣ, ದಾನವುಲಪಾಡ ಶಾಸನವನ್ನು ಬರೆದ ಶ್ರೀವಿಜಯ ನಾರಾಯಣ, ಗಜಾಂಕುಶ, ಪೊನ್ನ ಇವರು ಸುಪ್ರಸಿದ್ಧರು. ಶ್ರೀವಿಜಯನ ಕವಿರಾಜಮಾರ್ಗ, ಪೊನ್ನನ ಕೃತಿಗಳಲ್ಲಿ ಉಪಲಬ್ಧವಾದ ಶಾಂತಿಪುರಾಣ ಇವು ಉದೃತ್‍ಕೃತಿಗಳು. ಪೊನ್ನ ಭುವನೈಕ ರಾಮಾಭ್ಯುದಯ ಎಂಬ ಕಾವ್ಯವನ್ನೂ ಬರೆದ ಹಾಗೆ ಹೇಳಿದ್ದಾನೆ. ಅವನಿಗೆ ಮುಮ್ಮಡಿ ಕೃಷ್ಣ ಕವಿಚಕ್ರವರ್ತಿ ಎಂಬ ಬಿರುದು ನೀಡಿ ಸನ್ಮಾನಿಸಿದ.

# ರಾಷ್ಟ್ರಕೂಟ ಅರಸರು :
ರಾಷ್ಟ್ರಕೂಟ ಅರಸರು (753-982)
ದಂತಿದುರ್ಗ (735 – 756)
ಮೊದಲನೇ ಕೃಷ್ಣ (756 – 774)
ಇಮ್ಮಡಿ ಗೋವಿಂದ (774 – 780)
ಧ್ರುವ ಧಾರಾವರ್ಷ (780 – 793)
ಮುಮ್ಮಡಿ ಗೋವಿಂದ (793 – 814)
ಮೊದಲನೇ ಅಮೋಘವರ್ಷ (814 – 878)
ಇಮ್ಮಡಿ ಕೃಷ್ಣ (878 – 914)
ಮುಮ್ಮಡಿ ಇಂದ್ರ (914 -929)
ಇಮ್ಮಡಿ ಅಮೋಘವರ್ಷ (929 – 930)
ನಾಲ್ವಡಿ ಗೋವಿಂದ (930 – 936)
ಮುಮ್ಮಡಿ ಅಮೋಘವರ್ಷ (936 – 939)
ಮುಮ್ಮಡಿ ಕೃಷ್ಣ (939 – 967)
ಕೊಟ್ಟಿಗ ಅಮೋಘವರ್ಷ (967 – 972)
ಇಮ್ಮಡಿ ಕರ್ಕ (972 – 973)
ನಾಲ್ವಡಿ ಇಂದ್ರ (973 – 982)
ಇಮ್ಮಡಿ ತೈಲಪ (ಪಶ್ಚಿಮ ಚಾಲುಕ್ಯರು) (973-997)

# ಅಮೋಘವರ್ಷ ನೃಪತುಂಗ :
ಈತ ರಾಷ್ಟ್ರಕೂಟರ ಅತ್ಯಂತ ಪ್ರಸಿದ್ದ ದೊರೆ, ಮೊದಲನೆಯ ಅಮೋಘವರ್ಷ ಅಥವಾ ಅಮೋಘವರ್ಷ ನೃಪತುಂಗನು ಕ್ರಿ.ಶ. 814ರಲ್ಲಿ ಮುಮ್ಮಡಿ ಗೋವಿಂದನ ನಂತರ ರಾಷ್ಟ್ರಕೂಟರ ರಾಜನಾಗಿ ಸಿಂಹಾಸನವೇರಿದನು. ಇವನು “ನೃಪತುಂಗ” ಎಂಬ ಹೆಸರಿನಿಂದ ಹೆಚ್ಚು ಪ್ರಖ್ಯಾತನಾಗಿದ್ದಾನೆ. ರಾಜನಾದಾಗ ಇವನಿಗೆ ಕೇವಲ 14 ವರ್ಷ. ಸ್ವಭಾವತಃ ಶಾಂತಿಪ್ರಿಯನಾಗಿದ್ದರೂ, ಹಲವು ದೀರ್ಘಕಾಲದ ಯುದ್ಧಗಳಲ್ಲಿ ತೊಡಗಿಕೊಳ್ಳಬೇಕಾಯಿತು.

ಉತ್ತರಭಾರತದ ದಿಗ್ವಿಜಯ ಮಾಡಿ ಬಂದ 3ನೆಯ ಗೋವಿಂದನ ಮಗ. ಗೋವಿಂದ ವಿಂಧ್ಯಪರ್ವತದ ತಪ್ಪಲಲ್ಲಿದ್ದ ಶ್ರೀಭವನದಲ್ಲಿ ಬೀಡುಬಿಟ್ಟಿದ್ದಾಗ ಶರ್ವ-ಅಮೋಘವರ್ಷ ಹುಟ್ಟಿದನೆಂದು ಸಂಜಾನ ಶಾಸನದಲ್ಲಿ ಹೇಳಿದೆ. 803ರ ಮಣ್ಣೆಯ ಶಾಸನದಲ್ಲಿ ಗೋವಿಂದ ಶ್ರೀಭವನದಲ್ಲಿದ್ದ ಸಂಗತಿ ಉಕ್ತವಾಗಿದೆಯಾದ ಕಾರಣ ಅಮೋಘವರ್ಷ ಸು. 800ರಲ್ಲಿ ಜನ್ಮವೆತ್ತಿರಬಹುದು.

ಗೋವಿಂದ 814ರಲ್ಲಿ ತೀರಿಕೊಂಡಿದ್ದರಿಂದ ಅಮೋಘವರ್ಷ ಪಟ್ಟಕ್ಕೆ ಬಂದಾಗ 14 ಮರ್ಷದ ಚಿಕ್ಕಬಾಲಕನಾಗಿದ್ದ. ಈ ಸಂಧಿಯನ್ನು ಸಾಧಿಸಿ ಕೆಲವು ಶುಲ್ಕಕರೂ (ಚಾಲುಕ್ಯರೂ) ರಾಷ್ಟ್ರಕೂಟರೂ ಬಂಡು ಹೂಡಿ ಅಮೋಘವರ್ಷನನ್ನು ಪಟ್ಟದಿಂದ ತಳ್ಳಿ ರಾಷ್ಟ್ರಕೂಟ ರಾಜ್ಯವನ್ನು ಆಕ್ರಮಿಸಬೇಕೆಂದು ಹೊಂಚು ಹಾಕಿದರು. ಆದರೆ ಬಡೋದಾ ತಾಮ್ರಶಾಸನದಲ್ಲಿ (835) ಹೇಳಿದಂತೆ ಗುಜರಾತಿನ ರಾಜ ಬಂಡುಗಾರರನ್ನು ಗೆದ್ದು ಅಮೋಘವರ್ಷನನ್ನು ಸಿಂಹಾಸನದ ಮೇಲೆ ಸ್ಥಿರಪಡಿಸಿದ. ಸಂಜಾನ ತಾಮ್ರಶಾಸನದಲ್ಲಿ ಪಾತಾಲಮಲ್ಲನೆಂಬ ವೀರಭಟ ಶತೃಗಳನ್ನು ನಿಗ್ರಹಿಸಿ ರಾಜ್ಯದಲ್ಲಿ ಶಾಂತತೆಯನ್ನು ನೆಲೆಗೊಳಿಸಿ ಅಮೋಘವರ್ಷನನ್ನು ತನ್ನ ವಂಶಾನುಗತ ಸಿಂಹಾಸನದ ಮೇಲೆ ಸ್ಥಿರವಾಗಿ ಕೂಡಿಸಿದನೆಂದು ಬರೆದಿದೆ.

2ನೆಯ ಕೃಷ್ಣರಾಜನ ತಾಮ್ರಶಾಸನಗಳಲ್ಲಿ ಅಮೋಘವರ್ಷ ಶತೃಗಳನ್ನು ತಾನೇ ನಿರ್ಮೂಲನ ಮಾಡಿ ರಾಜ್ಯವನ್ನು ಸ್ಥಿರಪಡಿಸಿಕೊಂಡನೆಂದು ಹೇಳಿದೆ.ಅಮೋಘವರ್ಷ ಮಹಾಪ್ರತಾಪಶಾಲಿ. ತನ್ನ ತಂದೆ ವಿಸ್ತರಿಸಿದ್ದ ರಾಜ್ಯವನ್ನು ಅತಿ ಸಾಹಸದಿಂದ ಕಾಪಾಡಿಕೊಂಡು ಬಂದ. ಪೂರ್ವದ ಚಾಲುಕ್ಯ ಮತ್ತು ತಲಕಾಡಿನ ಗಂಗರೊಂದಿಗೆ ಹೋರಾಡಿ ಅವರ ರಾಜ್ಯದ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡ. ವಿಸ್ತಾರವಾದ ರಾಜ್ಯವನ್ನು ಬಂಕೇಶ ಮೊದಲಾದ ಅನೇಕ ಮಾಂಡಲಿಕರ ಸಹಾಯದಿಂದ ಆಳುತ್ತ ದೇಶದಲ್ಲಿ ಶಾಂತತೆಯನ್ನು ನೆಲೆಗೊಳಿಸಿದ. ಲೋಕೋಪದ್ರವ ಶಾಂತಿಗೆಂದು ತನ್ನ ಎಡಗೈ ಬೆರಳನ್ನು ಮಹಾಲಕ್ಷ್ಮಿಗಾಗಿ ಬಲಿಯಾಗಿ ಕೊಟ್ಟನೆಂದು ಅವನ ಸಂಜಾನ ತಾಮ್ರಶಾಸನದಲ್ಲಿ ಬರೆದಿದೆ.

ಸ್ವತಃ ಕವಿಯೂ ಆಗಿದ್ದ ನೃಪತುಂಗನು ವಿವಿಧ ಮತಗಳ ಕವಿಗಳು, ಪಂಡಿತರಿಗೆ ಆಶ್ರಯದಾತನೂ ಆಗಿದ್ದನು. ಇವನ ಆಶ್ರಯದಲ್ಲಿ ಕನ್ನಡ ಹಾಗೂ ಸಂಸ್ಕೃತ ಸಾಹಿತ್ಯಗಳು ಪ್ರವರ್ಧಮಾನವಾದವು. ಕನ್ನಡದಲ್ಲಿ ಲಭ್ಯವಿರುವ ಪ್ರಾಚೀನ ಗ್ರಂಥ ಕವಿರಾಜಮಾರ್ಗದ ಕರ್ತೃ ನೃಪತುಂಗ ಅಥವಾಾ ಅವನ ಆಸ್ಥಾನದ ಕವಿಯಾಗಿದ್ದ ಶ್ರೀವಿಜಯ.

ಅಮೋಘವರ್ಷದ ಕಾಲದಲ್ಲಿ ಕೆಲವು ಯುದ್ಧಗಳು ಜರುಗಿದರೂ ಅವನ ಸುಮಾರು 62 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ಲಲಿತಕಲೆಗಳ ಅಭಿವೃದ್ಧಿಗೆ ಅನುಕೂಲವಾದ ಶಾಂತಿ ಅವನ ರಾಜ್ಯದಲ್ಲಿ ನೆಲೆಸಿತ್ತು. ಈತ ಕನ್ನಡ ಸಾಹಿತ್ಯದಲ್ಲಿ ಉಪಲಬ್ಧಗ್ರಂಥಗಳಲ್ಲಿ ಅತಿ ಪ್ರಾಚೀನ ಗ್ರಂಥವೆನಿಸಿದ ಕವಿರಾಜಮಾರ್ಗವನ್ನೂ ಪ್ರಶ್ನೋತ್ತರ ಮಾಲಿಕಾ ಎಂಬ ಸಂಸ್ಕೃತಗ್ರಂಥವನ್ನೂ ರಚಿಸಿದನೆಂದು ಒಂದು ವಾದವಿದೆ.

ಕವಿರಾಜಮಾರ್ಗ ಭಾಮಹ ದಂಡಿಯರ ಅಲಂಕಾರ ಗ್ರಂಥಗಳನ್ನು ಬಹಳಮಟ್ಟಿಗೆ ಅನುಸರಿಸಿದೆ. ಕನ್ನಡ ಅಲಂಕಾರ ಗ್ರಂಥಗಳಲ್ಲಿ ಇದು ಪ್ರಮಾಣಭೂತವಾದುದು. ಅಮೋಘವರ್ಷ ಶ್ರೀವಿಜಯ ಮೊದಲಾದ ವಿದ್ವಾಂಸರಿಗೆ ತನ್ನ ಆಸ್ಥಾನದಲ್ಲಿ ಆಶ್ರಯವಿತ್ತಿದ್ದ. ಪಾಶ್ರ್ವಾಭ್ಯುದಯ, ಪೂರ್ವಪುರಾಣಗಳನ್ನು ಬರೆದ ಜಿನಸೇನಾಚಾರ್ಯರು ಈತನ ಗುರು. ಶಾಕಟಾಯಕನೆಂಬ ಜೈನ ವೈಯಾಕರಣ ಶಬ್ದಾನುಶಾಸನವನ್ನೂ ಅದಕ್ಕೆ ಟೀಕಾರೂಪವಾದ ಅಮೋಘವೃತ್ತಿಯನ್ನೂ ಆಗಲೇ ರಚಿಸಿದ.

ಯುವರಾಜ ಕೃಷ್ಣರಾಜನಿಗೆ ಗುರುವಾಗಿದ್ದ ಗುಣಭದ್ರಾಚಾರ್ಯನು ಅಮೋಘವರ್ಷನ ಭಕ್ತಿಗೌರವಗಳಿಗೆ ಪಾತ್ರನಾಗಿದ್ದು ಉತ್ತರಪುರಾಣವನ್ನು ರಚಿಸಿದ. ಗಣಿತಸಾರಸಂಗ್ರಹದ ಕರ್ತನಾದ ವೀರಾಚಾರ್ಯ ತನ್ನ ಗ್ರಂಥ ರಚನೆಯ ಕಾಲದಲ್ಲಿ ಅಮೋಘವರ್ಷ ಸಾರ್ವಭೌಮನಾಗಿದ್ದನೆಂದು ಹೇಳಿದ್ದಾನೆ.ನೃಪತುಂಗನ ರಚನೆಯು ಶಾಸ್ತ್ರಗ್ರಂಥವಾಗಿರುವದು. ಕಾವ್ಯದೋಷಗಳು, ಅಲಂಕಾರಗಳು ಈ ಗ್ರಂಥದಲ್ಲಿ ವರ್ಣಿತವಾಗಿವೆ. ಕನ್ನಡನಾಡಿನ ಜನರು ‘’ಓದದೆಯೇ ಕಾವ್ಯ ಪ್ರಯೋಗದಲ್ಲಿ ನಿಪುಣರು’’ ಎಂದು ನೃಪತುಂಗನು ಹೊಗಳಿದ್ದಾನೆ.

ಮಾನ್ಯಖೇತ (ಇಂದಿನ ಮಳಖೇಡ) ಪಟ್ಟಣವನ್ನು ಕಟ್ಟಿ, ಅದನ್ನು ರಾಷ್ಟ್ರಕೂಟರ ಪ್ರಮುಖ ಪಟ್ಟಣವಾಗುವಂತೆ ಮಾಡಿದನು. ಅರಬ್ ಗ್ರಂಥಕರ್ತೃ ಸುಲೇಮಾನ್ ಅಮೋಘವರ್ಷನನ್ನು ಚೀನಾ, ಬಾಗ್ದಾದ್, ಕಾನ್‌ಸ್ಟಾಂಟಿನೋಪಲ್‌ ರಾ‍ಜರುಗಳಿಗೆ ಹೋಲಿಸಿ ಬರೆದಿದ್ದಾನೆ. ಇವನು ಹಿಂದು ಮತ್ತು ಜೈನ ಧರ್ಮಗಳೆರಡನ್ನೂ ಸಮಾನವಾಗಿ ಪುರಸ್ಕರಿಸಿದನು.

ಅಮೋಘವರ್ಷನಿಗೆ ಶರ್ವ, ನೃಪತುಂಗ ಎಂಬ ಹೆಸರುಗಳಲ್ಲಿದೆ ಅತಿಶಯಧವಳ, ವೀರನಾರಾಯಣ, ಲಕ್ಷ್ಮೀವಲ್ಲಭೇಂದ್ರ, ಶ್ರೀವಲ್ಲಭ ಮತ್ತು ಮಾರ್ತಾಂಡ ಮುಂತಾದ ಬಿರುದುಗಳಿದ್ದುವು. ಇವನಿಗೆ ಶಂಖಾದೇವಿ, ಚಂದ್ರೊಬ್ಬಲಬ್ಬೆ ಎಂಬ ಇಬ್ಬರು ಹೆಣ್ಣುಮಕ್ಕಳೂ ಕೃಷ್ಣರಾಜನೆಂಬ ಮಗನೂ ಇದ್ದರು. ಈತ ಶಾಂತಿಪ್ರಿಯನಾದುದರಿಂದ ಶತ್ರುಗಳಾದ ಗಂಗ ಮತ್ತು ಪಲ್ಲವರನ್ನು ಸೋಲಿಸಿ ಅವರೊಡನೆ ಬಾಂಧವ್ಯವನ್ನು ಬೆಳೆಸಿದ. ರಾಷ್ಟ್ರಕೂಟವಂಶದಲ್ಲಿ 3ನೆಯ ಗೋವಿಂದ ದಿಗ್ವಿಜಯಗಳಿಂದ ಪ್ರಸಿದ್ಧನಾಗಿದ್ದರೆ ಅವನ ಮಗನಾದ ಅಮೋಘವರ್ಷ ತನ್ನ ರಾಜ್ಯದಲ್ಲಿ ಶಾಂತಿಯನ್ನು ನೆಲೆಗೊಳಿಸಿ ಲಲಿತಕಲೆಗಳಿಗೆ ಪ್ರೋತ್ಸಾಹವನ್ನು ಕೊಟ್ಟು ಕರ್ನಾಟಕದ ಕೀರ್ತಿಯನ್ನು ಬೆಳೆಗಿಸಿದ.

# ನೆನಪಿನಲ್ಲಿಡಬೇಕಾದ ಅಂಶಗಳು :
➤ ಅಮೋಘವರ್ಷನ ಆಸ್ಥಾನಕ್ಕೆ ಭೇಟಿನೀಡಿದ ಅರಬ್ ಯಾತ್ರಿಕ – ಸುಲೇಮಾನ್
➤ ಅಮೋಘವರ್ಷನ ಅದಿಕಾರವಧಿಯಲ್ಲಿ ಬರಗಾಲ ಬಂದಿದದ್ದರಿಂದ – ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ( ಸಂಜಾನ್ ದತ್ತಿ ಶಾಸನ )
➤ ಅಮೋಘವರ್ಷ ನೃಪತುಂಗನನ್ನ ಕರ್ನಾಟಕದ ಅಶೋಕ ಎನ್ನಲಾಗುತ್ತೆ.
➤ ನೃಪತುಂಗನ ಕನ್ನಡ ಕೃತಿ – ಕವಿರಾಜಮಾರ್ಗ
➤ ಅಮೋಘವರ್ಷನೃಪತುಂಗನ ಸಂಸ್ಕೃತ ಕೃತಿ – ಪ್ರಶ್ನೋತ್ತರ ಮಾಲಿಕ
➤ ಅಮೋಗವರ್ಷನ ಗುರುಗಳು – ಜಿನಸೇನಾಚಾರ್ಯ
➤ ಜಿನಸೇನಾಚಾರ್ಯನ ಕೃತಿಗಳು – ಆದಿಪುರಣ , ಪಾಶ್ಟಾಭ್ಯುದಯ , ಜಯದಳ
➤ ಬಂಕಾಪುರ ನಗರದ ನಿರ್ಮಾತೃ – ಅಮೋಘವರ್ಷನೃಪತುಂಗ ( ತನ್ನ ದಂಡನಾಯಕ ಬಂಕೇಶನ ಜ್ಞಾಪಕಾರ್ಥವಾಗಿ ಕಟ್ಟಿಸಿದ )
ನೃಪತುಂಗ – ಕ್ರಿ.ಶ.878 ರಲ್ಲಿ ಮರಣ ಹೊಂದಿದ
➤ ಅಮೋಘವರ್ಷನ ನಂತರ ಈತನ ಮಗ – ಎರಡನೇ ಕೃಷ್ಣ ಅಧಿಕಾರಕ್ಕೆ ಬಂದನು
➤ ರಾಷ್ಟ್ರಕೂಟರ ಕೊನೆಯ ಅರಸ – ಎರಡನೇ ಕರ್ಕ

# ರಾಷ್ಟ್ರಕೂಟರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು : 
➤ತ್ರಿವಿಕ್ರಮ – ನಳಚಂಪು
➤ಹಲಾಯುಧ – ಕವಿರಹಸ್ಯ
➤ಅಕಲಂಕ – ಅಷ್ಟಸಹಸ್ರಿ
➤ಅಮೋಘವರ್ಷ – ಪ್ರಶ್ನೋತ್ತರ ಮಾಲಿಕೆ ( ಸಂಸ್ಕೃತ ) ಹಾಗೂ ಕವಿರಾಜಮಾರ್ಗ
➤ಜಿನಸೇನ – ಆದಿಪುರಾಣ , ಪಾರ್ಶ್ವಭುದಯ ಹಾಗೂ ಜಯದವಳ
➤ಮಹಾವೀರಾಚಾರ್ಯ – ಗಣಿತ ಸಾರ ಸಂಗ್ರಹ ( ಗಮಿತ ಗ್ರಂಥ )
➤ಕನ್ನಡದ ಮೊಟ್ಟ ಮೊದಲ ಉಪಲಬ್ದ ಗ್ರಂಥ – ಕವಿರಾಜಮಾರ್ಗ
➤ಕನ್ನಡದ ಆದಿಕವಿ – ಪಂಪ (ಪಂಪ ಅರಿಕೇಸರಿಯ ಆಸ್ಥಾನ ಕವಿ)
➤ ಪಂಪನ ಕೃತಿಗಳು – ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
➤ ಪೊನ್ನ – ಮೂರನೇ ಕೃಷ್ಣನ ಆಸ್ಥಾನದ ಕವಿ (ಕವಿಚಕ್ರವರ್ತಿ – ಪೊನ್ನನ ಬಿರುದು)
➤ಪೊನ್ನನ ಕೃತಿಗಳು – ಶಾಂತಿಪುರಾಣ , ಭುವನೈಕ್ಯ ರಾಮಭ್ಯುದಯ ಮತ್ತು ಜಿನಾಕ್ಷರ ಮಾಲೆ ( ಎಲ್ಲವೂ ಕನ್ನಡ ಕೃತಿಗಳು ). ಮೂರನೇ ಕೃಷ್ಣ ಪೊನ್ನನಿಗೆ ನೀಡಿದ ಬಿರುದು – ಉಭಯಕವಿ

# ನೆನಪಿನಲ್ಲಿಡಬೇಕಾದ ಅಂಶಗಳು :
➤ ರಾಷ್ಟ್ರಕೂಟರ ರಾಜ್ಯ ಲಾಂಛನ – ಗರುಡ
➤ ದಂತಿದುರ್ಗನ ತಂದೆಯ ಹೆಸರು – ಇಂದ್ರ
➤ ದಂತಿದುರ್ಗನ ಬಿರುದುಗಳು – ಮಹಾರಾಜಾಧಿ ಪರಮೇಶ್ವರ , ಪೃಥ್ವಿವಲ್ಲಭ
➤ ಒಂದನೇ ಕೃಷ್ಣನ ಬಿರುದುಗಳು – ಶುಭತುಂಗ , ಅಕಾಲವರ್ಷ
ಎರಡನೇ ಗೋವಿಂದನ ಬಿರುದುಗಳು – ಜಗತ್ತುಂಗ , ಪ್ರಭೂತವರ್ಷ ಹಾಗೂ ಪ್ರತಾಪವ ಲೋಕ
➤ ಧೃವನ ಬಿರಿದುಗಳು – ಧಾರವರ್ಷ , ಕಲಿವಲ್ಲಭ ಹಾಗೂ ಶ್ರೀವಲ್ಲಭ
ಮೂರನೇ ಗೋವಿಂದನ ಬಿರುದುಗಳು – ನರೇಂದ್ರ , ಜಗತ್ತುಂಗ , ಪ್ರಭೂತವರ್ಷ ಹಾಗೂ ಜನವಲ್ಲಭ
➤ ರಾಷ್ಟ್ರಕೂಟರ ಶಾಂತಿಪ್ರೀಯ ಅರಸ – ಅಮೋಘವರ್ಷನೃಪತುಂಗ
➤ “ಶಬ್ದಾನು ಶಾಸನ ” ಎಂಬ ಸಂಸ್ಕೃತ ವ್ಯಾಕರಣ ಗ್ರಂಥದ ಕರ್ತೃ – ಶಾಕ್ತಾಯನ
➤ ನೃಪತುಂಗನ ಆಸ್ಥಾನ ಕವಿ – ಶ್ರೀವಿಜಯ
➤ ಮಾನ್ಯಖೇಟ ಎಂಬ ಹೊಸ ರಾಜಧಾನಿಯ ನಿರ್ಮಾತೃ – ಅಮೋಘವರ್ಷ ನೃಪತುಂಗ
➤ ಕಂಚಿಕೊಂಡ ಎಂಬ ಬಿರುದು ಧರಿಸಿದ್ದ ರಾಜ – 3 ನೇ ಕೃಷ್ಣ
➤ ಕನ್ನಡದ ಮೊದಲ ಗಧ್ಯ ಕೃತಿ – ವಡ್ಡರಾಧನೆ (ವಡ್ಡರಾಧನೆಯ ಕರ್ತೃ – ಶಿವಕೋಟಾಚಾರ್ಯ)
➤ ಪ್ರಾಚೀನ ಕರ್ನಾಟಕದ ಎಲ್ಲೆಯನ್ನು ತಿಳಿಸುವ ಕನ್ನಡ ಕೃತಿ – ಕವಿರಾಜಮಾರ್ಗ (ಕನ್ನಡದ ಅತೀ ಪ್ರಾಚೀನ ಗ್ರಂಥ – ಕವಿರಾಜಮಾರ್ಗ)
➤ ಒಂದನೇ ಕೃಷ್ಣನ ಮತ್ತೊಂದು ಹೆಸರು – ಕನ್ನರಸ ಬಿಲ್ಲಹ
➤ ಉಭಯ ಕವಿ ಚಕ್ರವರ್ತಿ ಬಿರುದುಳ್ಳ ಕವಿ – ಪೊನ್ನ
➤ ರಾಷ್ಟ್ರಕೂಟರ ಕೊನೆಯ ಅರಸ – 2ನೇ ಕರ್ಕ
➤ ಗಣಿತ ಸಾರಸಂಗ್ರಹದ ಕರ್ತೃ – ಮಹಾವೀರಾಚಾರ್ಯರು
➤ ಕನ್ನಡದ ಮೊದಲ ಉಪಲಬ್ಧ ಕೃತಿ – ಕವಿರಾಜಮಾರ್ಗ
➤ ಚಾಲುಕ್ಯರ ನಂತರ ಅಧಿಕಾರಕ್ಕೆ ಬಂದವರು – ರಾಷ್ಠ್ರಕೂಟರು

# ಆಧಾರಗಳು :
➤ದಂತಿದುರ್ಗನ – ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
➤ಒಂದನೇ ಕೃಷ್ಣನ – ಭಾಂಡ್ಕ ಮತ್ತು ತಾಳೇಗಾಂ ಶಾಸನ
➤ಧೃವನ – ಜೆಟ್ಟಾಯಿ ಶಾಸನ
➤ಅಮೋಘವರ್ಷನ – ಸಂಜಾನ್ ತಾಮ್ರ ಶಾಸನ ಹಾಗೂ ಕವಿ ರಾಜ ಮಾರ್ಗ
➤ಪೊನ್ನನ – ಶಾಂತಿ ಪುರಾಣ
➤ದಂತಿದುರ್ಗನ – ಪಂಚತಂತ್ರ
➤ತ್ರಿವಿಕ್ರಮನ – ನಳಚಂಪು
➤ಪಂಪನ – ವಿಕ್ರಾಮಾರ್ಜುನ ವಿಜಯಂ
➤ಬಿಲ್ಹಣನ – ವಿಕ್ರಮಾಂಕ ದೇವಚರಿತ
➤ಸುಲೇಮಾನ್ ನ – ಬರವಣಿಗೆಗಳು ಹಾಗೂ ಅಲ್ ಮಸೂದಿ
➤ಇಬಾನ್ ಹಾನಲ್ ಮತ್ತು ಇಸ್ತಾಬ್ರಿಯವರ ಬರವಣಿಗೆಗಳು

 

Leave a Reply

Your email address will not be published. Required fields are marked *

error: Content Copyright protected !!