GKScienceSpardha Times

ಜ್ಞಾನೇಂದ್ರಿಯಗಳು ಅಧ್ಯಯನ

Share With Friends

ಜ್ಞಾನೇಂದ್ರಿಯಗಳು ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ.

➤ ಕಣ್ಣುಗಳು : 
ಇವು ದೃಷ್ಟಿಯ ಅಂಗಗಳು. ಬೆಳಕಿನಿಂದ ಪ್ರಚೋದನೆ ಹೊಂದುತ್ತವೆ. ನಮಗೆ ವಸ್ತುಗಳ ಬಣ್ಣ, ಆಕಾರ ಮತ್ತು ದೂರದ ಅರಿವು ಕಣ್ಣುಗಳಿಂದುಂಟಾಗುತ್ತದೆ.
* ಕಣ್ಣಿನ ರೆಪ್ಪೆಗಳು- ಇವು ಕಣ್ಣುಗುಡ್ಡೆಗಳನ್ನು ಮುಚ್ಚುತ್ತವೆ. ಅಂಚಿನಲ್ಲಿ ಕೂದಲುಗಳಿಂದ ಕೂಡಿದ ಈ ರೆಪ್ಪೆಗಳು ಕಣ್ಣಿನೊಳಕ್ಕೆ ಧೂಳಿನ ಕಣಗಳು ಪ್ರವೇಶಿದಂತೆ ತಡೆಯುತ್ತದೆ.
* ಕಣ್ಣಿನ ಹುಬ್ಬುಗಳು – ಕಣ್ಣಿನ ಮೇಲ್ಭಾಗದಿಂದ ಬೀಳುವ ಸನ್ಣ ಕಣಗಳನ್ನು ಹುಬ್ಬುಗಳು ತಡೆಯುತ್ತವೆ. ಹುಬ್ಬಿನ ಕೂದಲುಗಳು ತೀವ್ರವಾದ ಬೆಳಕಿನ ಪ್ರಕಾಶದಿಂದ ತೊಂದರೆಯಾಗದಂತೆ ನೆರಳು ರಚಿಸುತ್ತವೆ.
*  ಕಣ್ಣೀರು – ಇದು “ಅಶ್ರು” ಗ್ರಂಥಿಗಳಿಂದ ಉತ್ಪತ್ತಿಯಾಗುತ್ತದೆ. ಅಶ್ರು ಗ್ರಂಥಿಗಳು ಮೇಲಿನ ರೆಪ್ಪೆಗಳ ಒಳ ಮೂಲೆಯ ಬಳಿಯಿದೆ. ಕಣ್ಣೀರು ಕಣ್ಣನ್ನು ತೇವವಾಗಿಡಲು ಮತ್ತು ಧೂಳು ಮುಂತಾದ ಹೊರ ವಸ್ತುಗಳನ್ನು ತೊಳೆದು ಹೊರಹಾಕಲು ಸಹಾಯಕವಾಗಿದೆ.
* ಕಣ್ಣುಗುಡ್ಡೆ – ಕಣ್ಣುಗುಡ್ಡೆಯು “ಸೀಲಿಯರಿ ಸ್ನಾಯುಗಳ” ರಚನೆಗಳಿಂದ ಆಧರಿಸಲ್ಪಟ್ಟಿದೆ.
ಕಣ್ಣುಗುಡ್ಡೆಯ ಭಾಗಗಳು ಮತ್ತು ಅವುಗಳ ಕಾರ್ಯಗಳು
1. ಸ್ಕೀರಾಟಿಕ್ (ಸ್ಕ್ಲೀರಾ) – ಇದು ಕಣ್ಣಿನ ಹೊರಪದರ. ಹಾಗೂ ಕಣ್ಣಿಗೆ ರಕ್ಷಣೆಯನ್ನು ನೀಡುತ್ತದೆ.
2. ಕೊರಾಯಿಡ್ – ಇದು ಮಧ್ಯದ ಪದರ ಹಾಗೂ ಕಣ್ಣನ್ನು ಪೋಷಿಸಲು ಸಹಾಯವಾಗಿದೆ.
3. ರೆಟಿನಾ – ಇದು ಒಳಗಿನ ಪೊರೆ ಹಾಗೂ ವಸ್ತುವಿನ ಪ್ರತಿಬಿಂಬ ಬೀಳುವ ಪದರವಾಗಿದೆ.
4. ಕಾರ್ನಿಯಾ – ಕಣ್ಣಿನ ಉಬ್ಬಿರುವ ಮುಂಭಾಗ ಹಾಗೂ ಬೆಳಕು ಸರಿಯಾಗಿ ವಕ್ರೀಭವನ ಆಗುವಂತೆ ಮಾಡುತ್ತದೆ.
5. ಕಂಜಿಕ್ಟಿವ – ಕಾರ್ನಿಯಾದ ಮೇಲಿರುವ ಪೊರೆ ಹಾಗೂ ಕಾರ್ನಿಯಾಗೆ ರಕ್ಷಣೆ ನೀಡುತ್ತದೆ.
6. ಪಾಪೆ – ಮುಂಭಾಗದ ರಂಧ್ರ ಹಾಗೂ ಬೆಳಕು ಇದರ ಮೂಲಕ ಹಾದುಹೋಗುತ್ತದೆ.
7. ಐರಿಸ್( ವರ್ಣಪಟಲ) -ಪಾಪೆಯ ಮೇಲೆ ಕೆಳಗೆ ಇರುವ ರಚನೆ ಹಾಗೂ ಕಣ್ಣಿಗೆ ಬಣ್ಣ ಕೊಡುತ್ತದೆ.
8. ಪೀನಮಸೂರ – ವರ್ಣಪಟಲದ ಹಿಂಭಾಗದಲ್ಲಿದೆ.
9. ಜಲರಸದಾತು -ಕಾನಿಯಾ ಮತ್ತು ಮಸೂರಗಳ ನಡುವೆ ಇರುವ ತಿಳಿಯಾದ ದ್ರವ. ಇದು ಕಣ್ಣಿನ ಪದರಗಳು ಕುಸಿಯದಂತೆ ಒತ್ತಡ ಏರ್ಪಡಿಸುತ್ತದೆ.
10. ಕಾಚಕರಸದಾತು- ಮಸೂರದ ಹಿಂದೆ ಇರುವ ದ್ರವ. ಇದು ಬೆಳಕಿನ ಕಿರಣಗಳ ವಕ್ರೀಭವನಕ್ಕೆ ಸಹಾಯವಾಗಿದೆ.
11. ಕೋನ್‍ಗಳು (ಶಂಕುಕೋಶಗಳು) – ರೆಟಿನಾ ಭಾಗದಲ್ಲಿ ಕಂಡು ಬರುವ ಶಂಕುವಿನಾಕಾರದ ಬೆಳಕಿನ ಗ್ರಾಹಕ ಕೋಶಗಳು. ಇದು ಪ್ರಕಾಶಮಾನವಾದ ಬೆಳಕನ್ನು ಗ್ರಹಿಸಬಲ್ಲವು.
12. ಹಳದಿ ಪ್ರದೇಶ -ಪಾಪೆಗೆ ಎದುರಾಗಿರುವ ಕಣ್ಣಿನ ಹಿಂಭಾಗದ ಬಳಿ ಕೋನ್‍ಗಳು ಹೆಚ್ಚಾಗಿರುವ ಪ್ರದೇಶ . ಇದರಲ್ಲಿ ದೃಷ್ಟಿಯು ಅತ್ಯಂತ ಹರಿತವಾಗಿ ಸ್ಪಷ್ಟವಾಗಿರುತ್ತದೆ.
13. ಅಂಧಪ್ರದೇಶ – ಇದು ಪ್ರತಿಬಿಂಬದ ಅರಿವು ಉಂಟಾಗದ ಪ್ರದೇಶ.
14. ಚಾಕ್ಷುಷನರ – ಕಣ್ಣಿನಿಂದ ಹೊರಡುವ ನರ. ಇದು ದೃಶ್ಯ ಸಂದೇಶಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಮಾರ್ಪಡಿಸಿ ಮಹಾಮಸ್ತಿಷ್ಕದ ದೃಷ್ಟಿ ಕೇಂದ್ರಕ್ಕೆ ಕೊಂಡೊಯ್ಯುತ್ತದೆ.

➤ ಕಿವಿ : 
ಕಿವಿಯ ಭಾಗಗಳು
1. ಹೊರಕಿವಿ:
* ಹೊರಕಿವಿಯ ಭಾಗಗಳು
ಎ. ಹೊರಕಿವಿಯ ಹಾಲೆ( ಆಲಿಕೆ)- ಶಬ್ದ ತರಂಗಗಳನ್ನು ಸಂಗ್ರಹಿಸಿ ಕರ್ಣನಾಳದೊಳಕ್ಕೆ ನಿರ್ದೇಶಿಸುತ್ತದೆ.
ಬಿ. ಕರ್ಣನಾಳ – ಧೂಳು, ಹೊರ ವಸ್ತುಗಳು ಕಿವಿ ಪ್ರವೇಶಿಸುವುದನ್ನು ತಡೆಯುತ್ತದೆ.
ಸಿ. ತಮಟೆ – ಹೊರಕಿವಿಯನ್ನು ಮಧ್ಯಕಿವಿಯಿಂದ ಪ್ರತ್ಯೇಕಿಸಿದೆ.ಹಾಗೂ ಶಬ್ದ ತರಂಗಗಳಿಗನುಸಾರವಾಗಿ ಕಂಪಿಸುತ್ತದೆ.
2. ಮಧ್ಯಕಿವಿ
ಮಧ್ಯಕಿವಿಯ ಭಾಗಗಳು
ಎ. 3 ಚಿಕ್ಕ ಮೂಳೆಗಳು-
* ಮ್ಯಾಲಿಯಸ್(ಸುತ್ತಿಗೆ),
* ಇಂಕಸ್( ಅಡಿಗಲ್ಲು),
* ಸ್ವೇಪಿಸ್(ರಿಕಾಪು)
ಇವು ನಮ್ಮ ದೇಹದ ಅತ್ಯಂತ ಚಿಕ್ಕ ಮೂಳೆಗಳು. ಈ ಮೂಳೆಗಳ ಮೂಲಕ ಕಿವಿಯ ತಮಟೆಯ ಕಂಪನಗಳು ಒಳಕಿವಿಗೆ ವರ್ಗಾಯಿಸಲ್ಪಡುತ್ತವೆ.
ಬಿ. ಮಧ್ಯ ಕರ್ಣಾಂತರನಾಳ- ಇದು ಮಧ್ಯಕಿವಿಯಿಂದ ಗಂಟಲಿಗೆ ಸಂಪರ್ಕ ಹೊಂದಿದೆ. ಹೊರಕಿವಿಯ ನಾಳದಲ್ಲಿರುವ ವಾಯುವಿನ ಒತ್ತಡಕ್ಕೆ ಸಮನಾಗಿ ಮಧ್ಯಕಿವಿಯಲ್ಲಿ ವಾಯುವಿನ ಒತ್ತಡವಿರುತ್ತದೆ.
3. ಒಳಕಿವಿ
ಒಳಕಿವಿಯಲ್ಲಿರುವ ಭಾಗಗಳು
ಎ.ಯುಟ್ರಿಕ್ಯುಲಸ್ – ಒಳಕಿವಿಯ ಮೇಲಿನ ಭಾಗವಾಗಿದೆ. ಇದು ಶ್ರವಣ ಸಂದೇಶವು ಹಾದುಹೋಗುವ ಮಾರ್ಗ ಹಾಗು ದೇಹದ ಸಮತೋಲನವನ್ನು ಕಾಪಾಡುತ್ತದೆ.
ಬಿ. ಸ್ಯಾಕ್ಯುಲಸ್ – ಒಳಕಿವಿಯ ಕೆಳಗಿನ ಭಾಗವಾಗಿದೆ. ಇದರಲ್ಲಿ ‘ಕಾಕ್ಲಿಯಾ’ ಎಂಬ ಅಂಗವಿದೆ. ‘ಕಾಕ್ಲಿಯಾ’ ಅತ್ಯಂತ ಸೂಕ್ಷ್ಮ ಸಂವೇದನೆಯ ಭಾಗವಾಗಿದೆ. ‘ಸ್ಯಾಕ್ಯುಲಸ್’ ಭಾಗವು ಶಬ್ದ ತರಂಗಗಳು ಶ್ರವಣ ಸಂಕೇತಗಳನ್ನಾಗಿ ಮಾರ್ಪಡಿಸುತ್ತದೆ.
*‘ಎಂಡೋಲಿಂಫ್’(ಒಳಕಿವಿಯ ಒಳದ್ರವ) ಮತ್ತು ‘ಪೆರಿಲಿಂಫ್’
( ಒಳದ್ರವ ಹೊರದ್ರವ) ಇದು ಒಳಕಿವಿಯಲ್ಲಿರುವ ದ್ರವವಾಗಿದೆ.

➤  ಮೂಗು : 
ಮೂಗು ವಾಸನೆಯನ್ನು ಗ್ರಹಿಸಲು ಮತ್ತು ಉಸಿರಾಡಲು ಅನುಕೂಲವಾಗುವಂತೆ ರಚಿತವಾಗಿದೆ. ಮೂಗಿನ ಒಳಗೋಡೆಯಲ್ಲಿ ರೋಮಗಳ ಪದರ ಮತ್ತು ಶ್ಲೇಷ್ಮ ಗ್ರಂಥಿಗಳಿವೆ. ರೋಮಗಳ ಪದರವು ಗಾಳಿಯನ್ನು ಶೋಧಿಸಿ ಶುದ್ಧಗಾಲಿಯನ್ನು ಮಾತ್ರ ಶ್ವಾಸಕಾಂಗವ್ಯೂಹದ ಒಳಗಡೆ ಕಳಿಸುತ್ತದೆ. ನಾಸಿಕ ಕುಹರದ ಒಳಗೋಡೆಯಲ್ಲಿರುವ ಶ್ಲೇಷ್ಮ ಗ್ರಂಥಿಗಳು, ಶ್ಲೇಷ್ಮವನ್ನು ಸ್ರವಿಸುತ್ತವೆ. ಇದು ಬಿಸಿಗಾಳಿಯನ್ನು ತಂಪುಮಾಡುತ್ತದೆ. ಮತ್ತು ಗಾಳಿಯಲ್ಲಿರುವ ಧೂಳಿನ ಕಣಗಳು, ಸೂಕ್ಷ್ಮವಾದ ಕೀಟಗಳು ಅಂಟಿಕೊಳ್ಳಲು ಸಹಾಯಮಾಡುತ್ತದೆ.

ಮೂಗು ಉಸಿರಾಟಕ್ಕೆ ಸಹಾಯಮಾಡುವುದಲ್ಲದೆ, ವಾಸನೆಯನ್ನು ಕಂಡುಹಿಡಿಯುವ ಅಂಗವಾಗಿದೆ. ವಾಸನೆಯ ಗ್ರಾಹಕಗಳು ನಾಸಿಕ ಕುಹರದ ಮೇಲ್ಭಾಗದ ಗೋಡೆಯಲ್ಲಿದೆ. ವಾಯುವಿನಲ್ಲಿ ವಾಸನೆಯ ಕಣಗಳು ಸೇರಿರುತ್ತವೆ. ಈ ವಾಯುವಿನಲ್ಲಿರುವ ವಾಸನೆಯ ಕಣಗಳು ಆಘ್ರಾಣ ಗೋಡೆಯನ್ನು ತಲುಪಿ ಅದರ ಮೇಲೆ ಹರಡಿರುವ ಲೋಳೆಯಲ್ಲಿ ಕರಗಿ ಗ್ರಾಹಕ ಜೀವಕೋಶಗಳನ್ನು ರಾಸಾಯನಿಕವಾಗಿ ಪ್ರಚೋದಿಸುವುದು. ಈ ಪ್ರಚೋದನೆಗಳು ಘ್ರಾಣ ನರದ ಮೂಲಕ ಮೆದುಳನ್ನು ಮುಟ್ಟಿದಾಗ ನಮಗೆ ವಾಸನೆಯ ಅರಿವಾಗುವುದು.

➤  ನಾಲಿಗೆ : 
ನಾಲಿಗೆಯು ಆಹಾರದ ರುಚಿಯನ್ನು ತಿಳಿಯಲು ಸಹಾಯಕವಾದ ಅಂಗ. ಇದು ಲೋಳೆಯನ್ನು ಉತ್ಪತ್ತಿ ಮಾಡುವ ಪೊರೆಯಿಂದ ಆವೃತ್ತವಾಗಿದೆ. ಈ ಪೊರೆಯಲ್ಲಿ ‘ರಸಾಂಕುರಗಳು’ ಎಂಬ ಗ್ರಾಹಕಗಳು ಸೇರಿಕೊಂಡಿವೆ. ಪ್ರತಿ ರಸಾಂಕುರವು ರುಚಿಯನ್ನು ಗ್ರಹಿಸುವ ಸೂಕ್ಷ್ಮ ಕೋಶಗಳು ಮತ್ತು ಅದಕ್ಕೆ ಆಧಾರ ನೀಡುವ ಕೋಶಗಳಿಂದ ಕುಡಿದೆ. ಆಧಾರ ಕೋಶಗಳು , ಗ್ರಾಹಕ ಕೋಶಗಳ ಸಂಪರ್ಕ ಹೊಂದಿವೆ.

ಲೋಳೆಯಲ್ಲಿ ಕರಗಿದ ಆಹಾರ ಕಣಗಳು ರಸಾಂಕುರದಲ್ಲಿರುವ ಗ್ರಾಹಕ ಕೋಶಗಳನ್ನು ಪ್ರಚೋದಿಸುತ್ತವೆ. ಈ ಜೀವಕೋಶಗಳು ರಾಸಾಯನಿಕ ಪ್ರಚೋದನೆಯನ್ನು ವಿದ್ಯುತ್ ಸಂದೇಶಗಳಾಗಿ ಪರಿವರ್ತಿಸುತ್ತದೆ. ಈ ಸಂದೇಶಗಳು ಜ್ಞಾನವಾಹಿ ನರಗಳ ಮೂಲಕ ಮಿದುಳನ್ನು ತಲುಪಿದಾಗ ನಮಗೆ ರುಚಿಯ ಅರಿವು ಉಂಟಾಗುತ್ತದೆ.
*  ನಾಲಿಗೆ ಗ್ರಹಿಸುವ ರುಚಿಗಳು
ರುಚಿ – ರಸಾಂಕುರಗಳ ಸ್ಥಾನ
• ಸಿಹಿ  –   ನಾಲಿಗೆಯ ಮುಂಭಾಗ
• ಕಹಿ   -ನಾಲಿಗೆಯ ಹಿಂಭಾಗ
• ಹುಳಿ -ನಾಲಿಗೆಯ ಪಾಶ್ರ್ವಭಾಗ
• ಉಪ್ಪು-ನಾಲಿಗೆಯ ಮುಂಭಾಗದ ಅಂಚು

➤ ಚರ್ಮ : 
ಒಂದು ಮುಖ್ಯ ಜ್ಞಾನೇಂದ್ರಿಯವಾದ ಚರ್ಮವು ಸ್ಪರ್ಶ, ಒತ್ತಡ, ನೋವು, ಬಿಸಿ , ತಂಪು ಮುಂತಾದ ಜ್ಞಾನಗಳನ್ನು ತಿಳಿಯಲು ಸಹಾಯಕವಾದ ಅಂಗ. ಚರ್ಮದಲ್ಲಿ ಸ್ಪರ್ಶ, ಒತ್ತಡ, ಬಿಸಿ, ತಂಪು ಇವುಗಳಿಗೆ ಸಂಬಂಧಪಟ್ಟ ಗ್ರಾಹಕಗಳಿವೆ. ಇವುಗಳು ಪ್ರಚೋದನೆಗೊಳಗಾದಾಗ ಸಂದೇಶಗಳು ನರಗಳ ಮೂಲಕ ಮೆದುಳನ್ನು ತಲುಪಿ ನಮಗೆ ಸರಿಯಾದ ಮಾಹಿತಿ ದೊರೆಯುತ್ತದೆ.
• ಚರ್ಮದಲ್ಲಿ ವಿವಿಧ ಗ್ರಾಹಕ ಕೋಶಗಳ ಸ್ಥಾನ
ಗ್ರಾಹಕ ಕೋಶಗಳು       –               ಸ್ಥಾನ
*ಸ್ಪರ್ಶ ಗ್ರಾಹಕಗಳು                ಚರ್ಮದ ಮೇಲ್ಮೈ
*ಒತ್ತಡ ಗ್ರಾಹಕಗಳು                ಚರ್ಮದ ಆಳದಲ್ಲಿ
* ನೋವಿನ ಗ್ರಾಹಕಗಳು         ದೇಹದ ಮೇಲೆಲ್ಲಾ
• ದೇಹವನ್ನು ಸಂಪೂರ್ಣವಾಗಿ ಆವರಿಸಿರುವ ಚರ್ಮವು, ಮಾನವ ದೇಹದ ಅತ್ಯಂತ ದೊಡ್ಡ ಅಂಗವಾಗಿದೆ.

• ಮಾನವ ಚರ್ಮದ ಕಾರ್ಯಗಳು :
1. ಶರೀರ್ ಒಳಭಾಗದಲ್ಲಿರುವ ಅಂಗಾಂಶಗಳನ್ನು ಯಾಂತ್ರಿಕ ಆಘಾತಗಳಿಂದ , ಸೂರ್ಯನ ನೆರಳಾತೀತ ಕಿರಣಗಳಿಂದ ಮತ್ತು ಸೂಕ್ಷ್ಮಾಣು ಜೀವಿಗಳ ಸೋಂಕಿನಿಂದ ರಕ್ಷಿಸುತ್ತದೆ.
2. ಶಾಖ, ಸ್ಪರ್ಶ, ನೋವು ಮುಂತಾದ ಪ್ರಚೋದನೆಗಳನ್ನು ಗ್ರಹಿಸುತ್ತವೆ.
3. ಬೆವರು ಗ್ರಂಥಿಗಳ ಸಹಾಯದಿಂದ ಹೆಚ್ಚಾದ ನೀರು, ಯೂರಿಯಾ ಮತ್ತು ಲವಣಗಳನ್ನು ಬೆವರಿನ ರೂಪದಲ್ಲಿ ವಿಸರ್ಜಿಸಿ ವಿಸರ್ಜನಾಂಗವಾಗಿ ಕಾರ್ಯನಿರ್ವಹಿಸುತ್ತದೆ.
4. ಬೆವರನ್ನು ಹೊರಹಾಕುವ ಮೂಲಕ ದೇಹದ ಉಷ್ಣಾಂಶವನ್ನು ಒಂದೇ ಸಮನಾಗಿರುವಂತೆ ರಕ್ಷಿಸುತ್ತದೆ.

• ಚರ್ಮದ ರಚನೆ
1. ಹೊರಚರ್ಮ : ಈ ಭಾಗದ ಅತ್ಯಮತ ಹೊರಪದರಗಳು ನಿರ್ಜೀವ ಕೋಶಗಳಿಂದ ಆಗಿದೆ. ಕೆಳಗಿನ ಭಾಗ ಸಜೀವ ಕೋಶಗಳಿಂದ ಆಗಿದ್ದು ಕಾಲಕ್ರಮೇಣ ಮೇಲಕ್ಕೆ ಸರಿದು ನಿರ್ಜೀವ ಕೋಶಗಳಾಗುತ್ತವೆ. ಹೊರಚರ್ಮದ ಅತ್ಯಂತ ಒಲಪದರನ್ನು ಬೆಳೆಯುವ ಪದರ ಎನ್ನುತ್ತಾರೆ. ಇದು ಹೊಸ ಕೋಶಗಳನ್ನು ಉತ್ಪತ್ತಿ ಮಾಡಿ ಸವೆದು ಹೋದ ಭಾಗಗಳನ್ನು ಸರಿಪಡಿಸುತ್ತದೆ.
2. ಮೆಲನಿಸ್ : ಇದು ಚರ್ಮಕ್ಕೆ ಬಣ್ಣ ಕೊಡುವ ವಸ್ತು. ಅಲ್ಲದೆ ಸೂಯ್ನ ನೇರಳಾತೀv ಕಿರಣಗಳಿಂದ ಒಳಗಿನ ಅಂಗಾಂಶಗಳು ನಾಶವಾಗದಂತೆ ರಕ್ಷಿಸುತ್ತದೆ.

3. ರಕ್ತನಾಳಗಳು : ಇವು ಚರ್ಮಕ್ಕೆ ಅವಶ್ಯಕವಾಗಿ ಬೆಕಾದ ಆಹಾರ, ಆಕ್ಸಿಜನ್‍ನನ್ನು ಒದಗಿಸುತ್ತದೆ. ವಾತಾವರಣದ ಉಷ್ಣಾಂಶ ಅಥವಾ ದೇಹದ ಉಷ್ಣಾಂಶ ಹೆಚ್ಚಾದಾಗ ಮೆದುಳಿನ ಹೈಪೋಥಲಾಮಸ್ ಚರ್ಮದ ರಕ್ತನಾಳಗಳು ಹಿಗ್ಗುವಂತೆ ಮಾಡಿ ಹೆಚ್ಚು ರಕ್ತ ಹರಿಯುವಂತೆ ಮಾಡುತ್ತದೆ. ಇದರಿಂದ ಬೆವರಿನ ಉತ್ಪಾದನೆ ಹೆಚ್ಚಾಗಿ ಸ್ವೇದರಂಧ್ರದ ಮೂಲಕ ಹೊರಬಂದು ಚರ್ಮದ ಮೇಲ್ಭಾಗದಲ್ಲಿ ಗಾಳಿ ಸೋಕಿ ಆವಿಯಾಗುತ್ತದೆ. ಬೆವರು ಆವಿಯಾಗುವಾಗ ದೇಹದ ಉಷ್ಣಾಂಶವನ್ನು ಬಳಸಿಕೊಳ್ಳುವುದರಿಂದ ದೇಹ ತಂಪಾಗುತ್ತದೆ.

4. ಸ್ವೇದ ಗ್ರಂಥಿಗಳು : ಇದು ನುಲುಚಿಕೊಂಡಿರುವ ನಾಳವಾಗಿದೆ. ಇದು ಸ್ವೇದನಾಳದ ಮೂಲಕ ದೇಹದ ಹೊರಭಾಗಕ್ಕೆ ಸ್ವೇದ ರಂಧ್ರದ ಮೂಲಕ ತೆರೆಯುತ್ತದೆ. ಈ ನಾಳದಲ್ಲಿ ಸ್ರಾವಕ ಕೋಶಗಳಿದ್ದು ಸುತ್ತಲೂ ಇರುವ ಕೋಶಗಳಿಂದ ಮತ್ತು ರಕ್ತನಾಳಗಳಿಂದ ಸೋಡಿಯಂ ಕ್ಲೋರೈಡ್‍ನಂತಹ ಲವಣಗಳು, ಯೂರಿಯಾ ಮತ್ತು ಯೂರಿಕ್ ಆಮ್ಲ ಕರಗಿರುವ ದ್ರವವನ್ನು ಹೀರಿಕೊಂಡು ಬೆವರನ್ನಾಗಿ ಪರಿವರ್ತಿಸಿ ಸ್ವೇದನಾಳದ ಮೂಲಕ ಚರ್ಮದ ಹೊರ ಭಾಗಕ್ಕೆ ಸಾಗಿಸುತ್ತದೆ.

5. ರೋಮಕೂಪ : ಇದು ಹೊರಚರ್ಮದ ಬೆಳೆಯುವ ಪದರದ ಕುಣಿಯಲ್ಲಿ ಇರುತ್ತದೆ. ಈ ಪದರದ ಕೋಶಗಳ ವಿಭಜನೆ ಹೊಂದಿ ರೋಮವನ್ನು ಉತ್ಪತ್ತಿ ಮಾಡುತ್ತದೆ. ಇದು “ಕೆರಾಟಿನ್” ಎಂಬ ಗಡುಸಾದ ಪ್ರೋಟಿನ್‍ನೊಂದಿಗೆ ಸೇರಿ ನಿರ್ಜೀವವಾಗಿ ರೋಮವಾಗುತ್ತದೆ. ರೋಮಗಳು ದೇಹದ ಉಷ್ಣಾಂಶ ಕಳೆದುಹೋಗದಂತೆ ರಕ್ಷಸುತ್ತದೆ.
6. ತೈಲಗ್ರಂಥಿಗಳು : ತೈಲಗ್ರಂಥಿಗಳು ರೋಮಕೂಪಕ್ಕೆ ತೆರೆಯುತ್ತವೆ. ಇವು ಸ್ರವಿಸುವ ತೈಲವು ರೋಮಗಳನ್ನು, ಚರ್ಮವನ್ನು ಮೃದುವಾಗಿಸುತ್ತದೆ. ಅಲ್ಲದೆ ಕೆಲವು ಬ್ಯಾಕ್ಟೀರಿಯಾಗಳ ವಿರುದ್ದ ಕ್ರಿಮಿನಾಶಕವಾಗಿ ಕಾರ್ಯನಿರ್ವಹಿಸುತ್ತದೆ.

 

 

 

Leave a Reply

Your email address will not be published. Required fields are marked *

error: Content Copyright protected !!