GKPersons and PersonaltySpardha Times

ದ.ರಾ.ಬೇಂದ್ರೆಯವರ ಸಂಪೂರ್ಣ ಪರಿಚಯ

Share With Friends

– ಬೇಂದ್ರೆ(ಅಂಬಿಕಾತನಯದತ್ತ)

“ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.

ಬೇಂದ್ರೆ 1896ನೆಯ ಇಸವಿ ಜನವರಿ 31 ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು.

1913ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ 1918ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. 1935ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (1944 – 1956) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು 1919ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ”-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.

ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. 1981ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು. ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ “ಧಾರವಾಡ ದ ಅಜ್ಜ” ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.

ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. 1918ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”, “ಕಾಮಕಸ್ತೂರಿ “, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು.

ಇವರ ನಾಕುತಂತಿ ಕೃತಿಗೆ 1974 ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. 1921ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.

ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.

ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು. ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು.

ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.

ಇವರು ಬರೆದ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ” ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ. ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು.

ಇವರನ್ನು ಕನ್ನಡದ “ಕನ್ನಡದ ಠಾಗೋರ್” ಎಂದು ಕರೆಯಲಾಗುತ್ತದೆ. “ನಮನ” ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು.

ಕಾಲ: 1896-1981
ಸ್ಥಳ: ಧಾರವಾಡದ ಸಾಧನಕೇರಿ
ಕವನ ಸಂಕಲನಗಳು: ಕೃಷ್ಣ ಕುಮಾರಿ, ಗರಿ, ಮೂರ್ತಿ, ಕಾಮಕಸ್ತೂರಿ, ಸಖೀಗೀತ, ಉಯ್ಯಾಲೆ, ನಾದಲೀಲೆ, ಮೇಘದೂತ, ಹಾಡು-ಪಾಡು, ಗಂಗಾವತರಣ, ಅರಳು-ಮರಳು, ವಿನಯ, ನಾಕುತಂತಿ, ಹೃದಯ ಸಮುದ್ರ ಮರ್ಯಾದ, ಒಲವೆ ನನ್ನ ಬದುಕು, ಚೈತನ್ಯದ ಪೂಜೆ, ಮುಗಿಲಮಲ್ಲಿಗೆ, ತಾಲೆಕ್ಕಣಿ, ಕೆತುದೌತಿ, ಪ್ರತಿಬಿಂಬಗಳು.
ನಾಟಕ: ತಿರುಕನ ಪಿಡುಗು, ಉದ್ದಾರ, ನಗೆಯ ಹುಗೆ, ಹುಚ್ಚಾಟಗಳು, ಹೊಸ ಸಂಸಾರ ಮತ್ತು ಇತರ ನಾಟಕಗಳು,
ಕಥಾಸಂಕಲನ/ಪ್ರಬಂಧ: ನಿರಾಭರಣ ಸುಂದರಿ, ಮಾತೆಲ್ಲ ಜ್ಯೋತಿ,
ವಿಮರ್ಶಾ/ಕಾವ್ಯಮಿಮಾಂಸೆ: ಸಾಹಿತ್ಯ ಮತ್ತು ವಿಮರ್ಶೆ, ಸಾಹಿತ್ಯ ಸಂಶೋಧನೆ ವಿಚಾರ ಮಂಜರಿ, ಮಹಾರಾಷ್ಟ್ರ ಸಾಹಿತ್ಯ ಕಾಮೋದ್ಯೋಗ, ಸಾಹಿತ್ಯದ ವಿರಾಟ ಸ್ವರೂಪ ನಾಯಕ, ಕನನಡ ಸಾಹಿತ್ಯದ ನಾಲ್ಕು ರತ್ನಗಳು, ಕುಮಾರವ್ಯಾಸ ಮತಧರ್ಮ ಮತ್ತು ಆಧುನಿಕ ಮಾನವ.
ಸಂಪಾದನೆ: ನನ್ನದಉ ಈ ಕನ್ನಡ ಹಾಡು, ಹಕ್ಕಿ ಹಾರುತಿದೆ, ಚಂದ್ರಹಾಶ ಹೊಸಗನ್ನಡ ಕಾವ್ಯಶ್ರೀ ಕನಕದಾಸ ಚತುಶಿತ ಮನೋತ್ಸವ
ಬಿರುದು/ಪ್ರಶಸ್ತಿಗಳು: ನಾಕುತಂತಿ, ಜ್ಞಾನಪೀಠ ಪ್ರಶಸ್ತಿ, ಅರಳು-ಮರಳು-ಕೇಂದ್ರ ಸಾಹಿತ್ಯ ಅಕಾಡೆಮಿ, ವರಕವಿ ಬಿರುದು,
ಅನುವಾದ: ಉಪನಿಷತ್ ರಹಸ್ಯ, ಭಾರತೀಯ ನವಜನ್ಮೆ, ಗುರು ಗೋವಿಂದ ಸಿಂಗ್, ನೂರೊಂದು ಕವವ, ಕಬೀರ ವಚನಾವಳಿ.
ಇತರೆ: ಇಂಗ್ಲೀಷ್ ಭಾಷೆಯಲ್ಲಿ: Theory of immortality spring fire.

ಪ್ರಶಸ್ತಿ, ಪುರಸ್ಕಾರ,: 
1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
1958ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1964ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
1965ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
1968ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
1973ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.

Leave a Reply

Your email address will not be published. Required fields are marked *

error: Content Copyright protected !!