ಆಹಾರ ಸರಪಳಿ
ಪರಿಸರ ವ್ಯವಸ್ಥೆಯಲ್ಲಿ ಒಂದು ಜೀವಿಯು ಮತ್ತೊಂದು ಜೀವಿಯನ್ನು ತಿನ್ನುವುದರ ಮೂಲಕ ತನ್ನ ಆಹಾರವನ್ನು ಗಳಿಸಿಕೊಳ್ಳುತ್ತದೆ. ಪ್ರಾಥಮಿಕ ಭಕ್ಷಕರನ್ನು ತಿನ್ನುವ ಮೂಲಕ ದ್ವಿತೀಯಕ ಭಕ್ಷಕರು ತಮ್ಮ ಆಹಾರವನ್ನು ಗಳಿಸಿಕೊಳ್ಳುತ್ತವೆ. ದ್ವಿತೀಯಕ ಭಕ್ಷಕರನ್ನು ತಿನ್ನುವ ಮೂಲಕ ತೃತೀಯಕ ಭಕ್ಷಕರು ತಮ್ಮ ಆಹಾರವನ್ನು ಗಳಿಸಿಕೊಳ್ಳುತ್ತವೆ. ಇದು ಹೀಗೆಯೇ ಮುಂದುವರಿಯುತ್ತದೆ. ಹೀಗೆ ಆಹಾರ ಶಕ್ತಿಯು ಒಂದು ಪೋಷಣಾಸ್ತರದಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತದೆ. ಈ ಕಾರಣಕ್ಕಾಗಿ ಈ ರೀತಿಯ ಸಂಬಂಧಗಳನ್ನು “ ಆಹಾರ ಸರಪಳಿ” ಎಂದು ಕರೆಯಲಾಗಿದೆ.
ಉದಾ : 1. ರಾಗಿ—>ಕೋಳಿ—> ಮನುಷ್ಯ
2. ಹಸಿರು ಸಸ್ಯಗಳು—.>ಮಿಡತೆ—-> ಕಪ್ಪೆ—-> ಹಾವು —->ಗಿಡುಗು
* ಪ್ರತಿಶತ ಹತ್ತರ ನಿಯಮ
ಈ ನಿಯಮವನ್ನು ಪ್ರತಿಪಾದಿಸಿದವರು ‘ ಕಿಂಡರ್‍ಮನ್’ 1942 ರಲ್ಲಿ . ಇದು ಒಂದು ಪೋಷಣಾ ಸ್ತರದಿಂದ ಮತ್ತೊಂದು ಪೋಷಣಾಸ್ತರಕ್ಕೆ ಸಂಚಾರವಾಗುವ ಶಕ್ತಿಯ ಬಗ್ಗೆ ವಿವರಿಸುತ್ತದೆ. ಇದರ ಪ್ರಕಾರ ಒಂದು ಪೋಷಣಾ ಸ್ತರದಿಂದ ಮತ್ತೊಂದು ಪೋಷಣಾ ಸ್ತರಕ್ಕೆ ಶಕ್ತಿಯು ಸಂಚಾರವಾದಾಗ ಕೇವಲ 10% ರಷ್ಟು ಶಕ್ತಿ ಮಾತ್ರ ಮುಂದಿನ ಹಂತಕ್ಕೆ ಲಭ್ಯವಾಘುತ್ತದೆ. ಉಳಿದ 90 % ರಷ್ಟು ಶಕ್ತಿಯು ಶಾಖದ ರೂಪದಲ್ಲಿ ನಷ್ಟವಾಗುತ್ತದೆ.
* ಪೋಷಣಾ ಸ್ತರಗಳು
ಉತ್ಪಾದಕ(ಪೋಷಣಾಸ್ತರ 1 )—->ಪ್ರಾಥಮಿಕ(ಪೋಷಣಾಸ್ತರ 2)——> ದ್ವಿತೀಯಕ(ಪೋಷಣಾಸ್ತರ 3)—–>ತೃತೀಯಕ(ಪೋಷಣಾಸ್ತರ 4)
* ಆಹಾರ ಸರಪಳಿಗಳ ವಿಧಗಳು
1. ಸಸ್ಯಹಾರಿ ಆಹಾರ ಸರಪಳಿ
ಈ ರೀತಿಯ ಆಹಾರ ಸರಪಳಿಗಳಲ್ಲಿ ಹಸಿರು ಸಸ್ಯಗಳಿಂದ ಪ್ರಾರಂಭವಾಗುವ ಶಕ್ತಿಯ ವರ್ಗಾವಣೆ ಸಸ್ಯಹಾರಿಗಳು ಮೂಲಕ ಇತರ ಭಕ್ಷಕ ಪ್ರಾಣಿಗಳನ್ನು ತಲುಪುತ್ತವೆ. ಈ ರೀತಿಯ ಆಹಾರ ಸರಪಳಿಗಳಲ್ಲಿ ಸಸ್ಯಹಾರಿ ಪ್ರಾಣಿಯು ಪ್ರಾಥಮಿಕ ಭಕ್ಷಕ ಪೋಷಣಾಸ್ತರವನ್ನು ಪ್ರತಿನಿಧಿಸುತ್ತದೆ.
ಉದಾ : 1. ಹುಲ್ಲು—–> ಮೊಲ—–> ತೋಳ—-> ಹುಲಿ
2. ಹುಲ್ಲು—->ಕೀಟ—-> ಕೋಳಿ—-> ಮನುಷ್ಯ
2. ಪರಾವಲಂಬಿ ಆಹಾರ ಸರಪಳಿ
ಆಹಾರ ಸರಪಳಿಯೊಂದರಲ್ಲಿ ಪ್ರಾಥಮಿಕ ಮತ್ತು ಇತರ ಹಂತದ ಭಕ್ಷಕ ಪ್ರಾಣಿಗಳು ಪರಾವಲಂಬಿಗಲಾಗಿದ್ದಲ್ಲಿ, ಅದನ್ನು ‘ ಪರಾವಲಂಬಿಗಳ ಆಹಾರ ಸರಪಳಿ’ ಎನ್ನುವರು.
ಉದಾ: ಮರ —-> ಹಕ್ಕಿಗಳು—-> ಹಕ್ಕಿ ಹೇನುಗಳು—-> ಪ್ರೋಟೋಸೋವಾಗಳು
3. ಕೊಳತಿನಿ ಆಹಾರ ಸರಪಳಿ
ಸತ್ತ ಜೀವಿಗಳ ದೇಹದಲ್ಲಿರುವ ಕಾರ್ಬನಿಕ ವಸ್ತುಗಳನ್ನು ಆಹಾರವಾಗಿ ಸೇವಿಸುವ ಪ್ರಾಣಿಗಳು ಪ್ರಾಥಮಿಕ ಭಕ್ಷಕ ಸ್ತರದಲ್ಲಿದ್ದರೆ, ಅಂಥ ಆಹಾರ ಸರಪಳಿಗಳಿಗೆ ‘ಕೊಳೆತಿನಿ ಆಹಾರ ಸರಪಳಿ’ ಎಂದು ಹೆಸರು.
ಉದಾ: ಒಣಗಿದ ಉದುರೆಲೆ—–> ಎರೆಹುಳು—–> ಹಕ್ಕಿಗಳು