ರಂಜಕದ ಬಹುರೂಪಗಳು ಮತ್ತು ಉಪಯೋಗಗಳು
ರಂಜಕ (Phosphorus) ಒಂದು ಅಲೋಹ ಮೂಲವಸ್ತು. ಇದನ್ನು ಜರ್ಮನಿಯ ಹೆನ್ನಿಗ್ ಬ್ರಾಂಡ್ ಎಂಬವರು ೧೬೬೯ರಲ್ಲಿ ಕಂಡು ಹಿಡಿದರು. ಇದು ಎಲ್ಲಾ ಜೀವಕೋಶಗಳಲ್ಲಿಯೂ ಇರುತ್ತದೆ .ಮನುಷ್ಯರ ಹಲ್ಲು ಹಾಗೂ ಎಲುಬುಗಳ ರಚನೆ ಹಾಗೂ ಬೆಳವಣಿಗೆಗೆ ಇದು ಅತ್ಯವಶ್ಯಕ ಮೂಲಧಾತುವಾಗಿದೆ. ರಂಜಕದ ಬಣ್ಣ ಮೂಲತಃ ಬಿಳಿಯಾದರೂ ಕೆಂಪು ಹಾಗೂ ಕಪ್ಪು ಬಣ್ಣದಲ್ಲಿಯೂ ಲಭ್ಯವಿದೆ. ಔಷಧ, ಕೀಟನಾಶಕ, ಮಾರ್ಜಕ, ಪ್ಲಾಸ್ಟಿಕ್ ಮುಂತಾದವುಗಳ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಕೆಯಲ್ಲಿದೆ. ಕೆಂಪು ರಂಜಕ ಬೆಂಕಿಕಡ್ಡಿ ತಯಾರಿಕೆಯ ಮುಖ್ಯ ಕಛ್ಛಾವಸ್ತು.
* ಇದು ಕ್ರಿಯಾಶೀಲ ಧಾತುವಾಗಿದ್ದು, ಪ್ರಕೃತಿಯಲ್ಲಿ ಮೂಲರೂಪದಲ್ಲಿ ದೊರೆಯುವುದಿಲ್ಲ. ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ‘ಫಾಸ್ಫೇಟ್’ ಶಿಲೆಗಳ ರೂಪದಲ್ಲಿ ದೊರೆಯುತ್ತದೆ.
* ರಂಜಕ ಶಬ್ದದ ಮೂಲ ಗ್ರೀಕ್ ಭಾಷೆಯ ‘ಪಾಸ್ಪೊ’ ಎಂಬುದಾಗಿದೆ.
* ಜೀವಿಗಳ ದೇಹ ರಚನೆಗೆ ರಂಜಕ ಅಗತ್ಯವಾದ ಪೋಷಕಾಂಶವಾಗಿದೆ. ಪ್ರಾಣಿಗಳ ಮೂಳೆ ಮತ್ತು ಹಲ್ಲುಗಳಲ್ಲಿ ರಂಜಕದ ಸಂಯುಕ್ತವಿದೆ.
*ಜೀವಿಗಳ ಮೂಳೆಗಳಲ್ಲಿ ರಂಜಕವು “ಕ್ಯಾಲ್ಸಿಯಂ ಪಾಸ್ಪೇಟ್” ರೂಪದಲ್ಲಿವೆ. ಮಾನವನ ದೇಹದ ಅಸ್ಥಿಪಂಜರದಲ್ಲಿರುವ ರಂಜಕದ ಪ್ರಮಾಣ 1.4 ಕೆ.ಜಿ.
* ಫಾಸ್ಪೇಟ್ ಶಿಲೆ ಅಥವಾ ಮೂಳೆಬೂದಿಯನ್ನು ಕಾಯಿಸಿ ರಂಜಕವನ್ನು ಪಡೆಯಬಹುದು. ಫಾಸ್ಪೆಟು ಶಿಲೆ, ಮರಳು, ಮತ್ತು ಕೋಕ್‍ಗಳ ಮಿಶ್ರಣವನ್ನು ಚೆನ್ನಾಗಿ ಪುಡಿಮಾಡಿ ವಿದ್ಯುತ್ ಕುಲುಮೆಗೆ ಹಾಕುತ್ತಾರೆ. ವಿದ್ಯುದಗ್ರಗಳ ನಡುವೆ ಏರ್ಪಡುವ ವಿದ್ಯುತ್ ಚಾಪದಿಂದ ಕುಲುಮೆಯಲ್ಲಿ ಅದಿಕ ತಾಪ ಉಂಟಾಗುತ್ತದೆ.ಆಗ ಕ್ಯಾಲ್ಸಿಯಂ ಫಾಸ್ಪೇಟ್ ಮರಳಿನೊಂದಿಗೆ ವರ್ತಿಸಿ ರಂಜಕದ ಪೆಂಟಾಕ್ಸೈಡ್ ಉಂಟಾಗುತ್ತದೆ. ರಂಜಕದ ಪೆಂಟಾಕ್ಸೈಡನ್ನು ಕೋಕ್ ಅಪಕರ್ಷಿಸಿದಾಗ ರಂಜಕದ ಆವಿ ದೊರೆಯುತ್ತದೆ.ಹೀಗೆ ದೊರೆಯುವ ರಂಜಕದ ಆವಿಯನ್ನು ತಂಪುಗೊಳಿಸಿ ಬಿಳಿ ಘನರೂಪದ ರಂಜಕವನ್ನು ಪಡೆಯುತ್ತಾರೆ.
• ರಂಜಕದ ಬಹುರೂಪಗಳು
ರಂಜಕದ ಎರಡು ಬಹುರೂಪಗಳೆಂದರೆ- ಬಿಳಿ ರಂಜಕ ಮತ್ತು ಕೆಂಪು ರಂಜಕ.
• ಬಿಳಿರಂಜಕ ವಿಷಕಾರಿ. ಇದನ್ನು ಗಾಳಿಯಲ್ಲಿ ತೆರೆದಿಟ್ಟಾಗ ಆಕ್ಸಿಜನ್‍ನೊಂದಿಗೆ ವರ್ತಿಸಿ ಬಿಳಿ ದೂಮ ಉತ್ಪತ್ತಿಯಾಗುತ್ತದೆ. ಬಿಳಿರಂಜಕ ನೀರಿನೊಂದಿಗೆ ವರ್ತಿಸದೆ ಇರುವುದರಿಂದ ಇದನ್ನು ತಣ್ಣೀರಿನಲ್ಲಿ ಸಮಗ್ರಹಿಸುತ್ತಾರೆ. ಆದ್ದರಿಂದ ಇದನ್ನು ‘ಜಲಪಾಷಾಣ’ ಎನ್ನುವರು.
• ಬಿಳಿ ರಂಜಕವು ಗಾಳಿಯೊಂದಿಗೆ ತನ್ನಿಂದ ತಾನಾಗೀಯೆ ಉರಿಯುತ್ತದೆ. ಈ ಉತ್ಕರ್ಷಣಾ ಕ್ರಿಯೆ ಕತ್ತಲಿನಲ್ಲಿ ಹಸಿರು ಬಣ್ಣದಲ್ಲಿ ಗೋಚರಿಸುತ್ತದೆ. ಈ ವಿದ್ಯಮಾನವನ್ನು ರಂಜಕದ ಸ್ಪುರದೀಪ್ತಿ ಎನ್ನುತ್ತಾರೆ.
ರಂಜಕದ ಉಪಯೋಗಗಳು
• ಬಿಳಿ ರಂಜಕವನ್ನು ಬೆಂಕಿ ಮತ್ತು ಹೊಗೆ ಕಾರುವ ಬಾಂಬುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
• ಕೆಂಪು ರಂಜಕವನ್ನು ಬೆಂಕಿಕಡ್ಡಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.
• ಸಸ್ಯಗಳು ಚೆನ್ನಾಗಿ ಬೆಳೆದು ಅಧಿಕ ಇಳುವರಿ ನೀಡಲು ರಂಜಕ ಅಗತ್ಯವಾದ ಪೋಷಕಾಂಸವಾಗಿದೆ. ಮಣ್ಣಿನಲ್ಲಿ ರಂಜಕದ ಅಂಶ ಕಡಿಮೆಯಾದಾಗ ಸಸ್ಯಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತವೆ. ಇಳುವರಿ ಕೂಡ ಕಡಿಮೆಯಾಗುತ್ತದೆ. ನೀರಿನಲ್ಲಿ ವಿಲೀನವಾಗುವ ‘ಫಾಸ್ಟೇಟುಗಳ’ ರೂಪದಲ್ಲಿರುವ ರಂಜಕವನ್ನು ಮಾತ್ರ ಸಸ್ಯಗಳು ಹೀರಿಕೊಳ್ಳುತ್ತವೆ. ಆದ್ದರಿಂದ ರಂಜಕದ ರಸಗೊಬ್ಬರಗಳನ್ನು ತಯಾರಿಸಲಾಗುತ್ತದೆ. ಉದಾ-ಸೂಪರ್ ಪಾಸ್ಪೇಟ್, ನೈಟ್ರೋ ಫಾಸ್ಫೇಟು, ಎನ್‍ಪಿಕೆ ಗೊಬ್ಬರಗಳು, ಡೈ ಅಮೋನಿಯಂ ಫಾಸ್ಪೇಟ್(ಡಿಎಪಿ) ಇತ್ಯಾದಿ.
• ಕಂಚಿಗೆ ರಂಜಕವನ್ನು ಸೇರಿಸುವುದರಿಂದ ನಾದವು ತೀವ್ರವಾಗಿರುತ್ತದೆ. ಅಲ್ಲದೆ ಕಂಚು ಗಟ್ಟಿಯಾಗಿ ನೀರು ಅದನ್ನು ಕೊರೆಯುವುದಿಲ್ಲ. ಆದ್ದರಿಂದ ಅದನ್ನು ಕಂಚಿನ ತಯಾರಿಕೆಯಲ್ಲಿ ಬಳಸುತ್ತಾರೆ.
• ರಂಜಕವು ಸೋಡಿಯಂ ಹೈಡ್ರಾಕ್ಸೈಡ್ನೊಂದಿಗೆ ರಂಜಕವು ವರ್ತಿಸಿ “ಫಾಸ್ಫೀನ್” ಎಂಬ ಸಂಯುಕ್ತವನ್ನು ಉತ್ಪತ್ತಿ ಮಾಡುತ್ತದೆ. ಫಾಸ್ಪೀನ್ ನಿರ್ವರ್ಣವಾದ, ದುರ್ವಾಸನೆಯುಳ್ಳ ವಿಷಕಾರಿ ಅನಿಲವಾಗಿದೆ. ಇದನ್ನು 1783 ರಲ್ಲಿ ‘ಗೆಗೆಂಬರ್’ ಎಂಬ ವಿಜ್ಞಾನಿ ಮೊದಲ ಬಾರಿಗೆ ತಯಾರಿಸಿದನು.