ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾಕ್ ವೇಗಿ ಉಮರ್ ಗುಲ್ ವಿದಾಯ
ಪಾಕಿಸ್ತಾನದ ವೇಗದ ಬೌಲರ್ ಉಮರ್ ಗುಲ್ ಅಂತರರಾಷ್ಟ್ರೀಯ ಕ್ರಿಕೆಟ್ನ ಎಲ್ಲ ಮಾದರಿಗಳಿಗೆ ವಿದಾಯ ಘೋಷಿಸಿದ್ದಾರೆ. ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಟಿ-20 ಕಪ್ ಟೂರ್ನಿಯ ಬಳಿಕ ಆಡುವುದಿಲ್ಲ ಎಂದು ಅವರು ಹೇಳಿದ್ದಾರೆ.
36 ವರ್ಷದ ಪೇಶಾವರ ಮೂಲದ ಗುಲ್ 2003 ರಲ್ಲಿ ಏಕದಿನ ಪಂದ್ಯವೊಂದರ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆ ವರ್ಷವೇ ಅವರು ತಮ್ಮ ಮೊದಲ ಟೆಸ್ಟ್ ಆಡಿದರು. ಅವರ ಕೊನೆಯ ಟೆಸ್ಟ್ 2013 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವಾಗಿತ್ತು. 47 ಟೆಸ್ಟ್ ಪಂದ್ಯಗಳಿಂದ ಗುಲ್ 34.06 ಸರಾಸರಿಯಲ್ಲಿ 163 ವಿಕೆಟ್ ಪಡೆದರು. ಅಲ್ಲದೆ 130 ಏಕದಿನ ಪಂದ್ಯಗಳಿಂದ 179 ವಿಕೆಟ್ಗಳ ಜೊತೆಗೆ 60 ಟಿ 20 ಐಗಳಿಂದ 85 ವಿಕೆಟ್ಗಳನ್ನು ಪಡೆದಿದ್ದಾರೆ. ಪಾಕಿಸ್ತಾನದ ಪರ ಕೊನೆಯ ಏಕದಿನ ಪಂದ್ಯ ಆಡಿದ್ದು 2016ರಲ್ಲಿ. ರಾಷ್ಟ್ರೀಯ ಟಿ-20 ಕಪ್ ಟೂರ್ನಿಯಲ್ಲಿ ಅವರು ಬಲೂಚಿಸ್ತಾನ ತಂಡದ ಪರ ಆಡುತ್ತಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 47 ಟೆಸ್ಟ್ ಪಂದ್ಯಗಳಿಂದ 34.06ರ ಸರಾಸರಿಯಲ್ಲಿ 163 ವಿಕೆಟ್ ಗಳಿಸಿದ್ದಾರೆ. 130 ಏಕದಿನ ಪಂದ್ಯಗಳಿಂದ 179 ಹಾಗೂ 60 ಟ್ವೆಂಟಿ-20 ಪಂದ್ಯಗಳಲ್ಲಿ 85 ವಿಕೆಟ್ಗಳನ್ನು ಕಬಳಿಸಿದ್ದಾರೆ.
‘ಬಹಳಷ್ಟು ವಿಚಾರ ಮಾಡಿದ ಬಳಿಕ ಭಾರವಾದ ಹೃದಯದೊಂದಿಗೆ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತನಾಗುವ ನಿರ್ಧಾರ ಮಾಡಿದ್ದೇನೆ’ ಎಂದು ಟ್ವಿಟರ್ ಖಾತೆಯಲ್ಲಿ ಗುಲ್ ಬರೆದುಕೊಂಡಿದ್ದಾರೆ. ‘ದೇಶದ ಪರ ಪೂರ್ಣ ಪ್ರಮಾಣದ ಪರಿಶ್ರಮದೊಂದಿಗೆ ಆಡಿದ್ದೇನೆ. ಕ್ರಿಕೆಟ್ ಯಾವಾಗಲೂ ನನಗೆ ಅಚ್ಚುಮೆಚ್ಚು. ಆದರೆ ಎಲ್ಲದಕ್ಕೂ ಕೊನೆಯೆಂಬುದು ಇರಲೇಬೇಕಲ್ಲ’ ಎಂದು ಅವರು ಹೇಳಿದ್ದಾರೆ.