GKSpardha Times

ಅಕ್ಷಾಂಶಗಳು ಮತ್ತು ರೇಖಾಂಶಗಳು

Share With Friends

             ಅಕ್ಷಾಂಶಗಳು

• ಅಕ್ಷಾಂಶಗಳು ಭೂಗೋಳದ ಮೇಲೆ ಪೂರ್ವ- ಪಶ್ಚಿಮವಾಗಿ ಎಳೆದ ಕಾಲ್ಪನಿಕ ಅಡ್ಡ ರೇಖೆಗಳಾಗಿವೆ. ಉತ್ತರ ಮತ್ತು ದಕ್ಷಿಣ ಧ್ರುವಬಿಂದುಗಳಿಂದ ಮಧ್ಯದಲ್ಲಿ ಪೂರ್ವ- ಪಶ್ಚಿಮವಾಗಿ ಎಳೆದ ಕಾಲ್ಪನಿಕ ರೇಖೆಯನ್ನು ‘ ಭೂಮಧ್ಯರೇಖೆ’ ಎಂದು ಕರೆಯಲಾಗಿದೆ. ಈ ರೇಖೆಯು ಭೂಮಿಯನ್ನು ಎರಡು ಸಮಭಾಗಗಳಾಗಿ ವಿಂಗಡಿಸುವುದರಿಂದ ‘ ಸಮಭಾಜಕ ವೃತ್ತ’ ಎಂದು ಕರೆಯುತ್ತಾರೆ.
ಈ ವೃತ್ತದಿಂದ ಉತ್ತರಕ್ಕಿರುವ ಭೂಮಿಯ ಅರ್ಧಭಾಗವನ್ನು ಉತ್ತರ ಗೋಳಾರ್ಧವೆಂದೂ ಮತ್ತು ದಕ್ಷಿಣದ ಅರ್ಧಭಾಗವನ್ನು ದಕ್ಷಿಣ ಗೋಳಾರ್ಧವೆಂದೂ ಕರೆಯಲಾಗಿದೆ. ಸಮಭಾಜಕ ವೃತ್ತ ರೇಖೆಯನ್ನು ಶೂನ್ಯ ಡಿಗ್ರಿಯಿಂದ ಗುರುತಿಸಲಾಗುತ್ತದೆ. ಇದು ಅಕ್ಷಾಂಶಗಳಲ್ಲಿ ಅತಿ ಉದ್ದವಾದುದು.

• ಅಕ್ಷಾಂಶಗಳನ್ನು ಡಿಗ್ರಿಗಳಲ್ಲಿ ಎಣಿಕೆ ಮಾಡಲಾಗುವುದು. ಸಮಭಾಜಕ ವೃತ್ತ ರೇಖೆಯಿಂದ ಉತ್ತರಕ್ಕೆ 90 ಡಿಗ್ರಿ ಮತ್ತು ದಕ್ಷಿಣಕ್ಕೆ 90 ಡಿಗ್ರಿ ಹೀಗೆ ಒಟ್ಟು 180 ಡಿಗ್ರಿ ಅಕ್ಷಾಂಶಗಳನ್ನು ಎಳೆಯಲಾಗಿದೆ.ಅವುಗಳೊಂದಿಗೆ ಸಮಭಾಜಕ ವೃತ್ತವನ್ನೂ ಸೇರಿಸಿದರೆ ಒಟ್ಟು 181 ಡಿಗ್ರಿ ಅಕ್ಷಾಂಶಗಳಾದವು. ಎಲ್ಲ ಅಕ್ಷಾಂಶಗಳು ಭೂಮಧ್ಯ ರೇಖೆಗೆ ಸಮಾಂತರವಾಗಿದೆ. ಮತ್ತು ಅವುಗಳನ್ನು ಪರಸ್ಪರ ಸಮಾಂತರವಾಗಿರುತ್ತದೆ. ಹೀಗಾಗಿ ಅವುಗಳನ್ನು ‘ ಸಮಾಂತರ ರೇಖೆಗಳೆಂದೂ’ ಕರೆಯಲಾಗಿದೆ.

• ಅಕ್ಷಾಂಶಗಳು ಗೋಲಾಕಾರದ ಭೂಮಿಯನ್ನು ಸುತ್ತುವರೆಯುವುದರಿಂದ ಅವುಗಳನ್ನು ವೃತ್ತಗಳೆಂದು’ ಕರೆಯಲಾಗುತ್ತದೆ. ಸಮಭಾಜಕ ವೃತ್ತವು ಮಹಾವೃತ್ತವಾಗಿದೆ.

• ಭೂಮಿಯ ವ್ಯಾಸವು ಸಮಭಾಜಕ ವೃತ್ತದಿಂದ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳ ಕಡೆಗೆ ಹೋದಂತೆ ಕಡಿಮೆ ಆಗುತ್ತ ಹೋಗುವುದರಿಂದ ಅಕ್ಷಾಂಶ ವೃತ್ತಗಳು ಚಿಕ್ಕದಾಗುತ್ತ ಹೋಗಿ, ಧ್ರುವ ಬಿಂದುಗಳಲ್ಲಿ ಪರಿಸಮಾಪ್ತಿಯಾಗುತ್ತವೆ. ಉತ್ತರ ಮತ್ತು ದಕ್ಷಿಣ ಧ್ರುವಗಳು ಬಿಂದುಗಳಾಗಿರುತ್ತವೆ. ಅವು ರೇಖೆಗಳಲ್ಲ.

               ರೇಖಾಂಶಗಳು

*ಇವು ಭೂಗೋಳದ ಮೇಲೆ ಉತ್ತರ ದಕ್ಷಿಣವಾಗಿ ಎಳೆಯಲಾದ ಕಾಲ್ಪನಿಕ ರೇಖೆಗಳು. ಇವುಗಳನ್ನು ಮದ್ಯಾಹ್ನ ರೇಖೆಗಳೆಂತಲೂ ಕರೆಯಲಾಗಿದೆ.

* ಎಲ್ಲ ರೇಖಾಂಶಗಳು ಒಂದೇ ಅಳತೆಯಲ್ಲಿ ಇವೆ. ರೇಖಾಂಶಗಳು ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಹಾಯ್ದು ಬರುತ್ತವೆ. ಇಂಗ್ಲೆಂಡ್‍ನ ಗ್ರೀನಿಚ್ ನಗರದ ಮುಖಾಂತರ ಹಾಯ್ದು ಹೋಗುವ ರೇಖಾಂಶವನ್ನು 0 ಡಿಗ್ರಿ ಎಂದು ಪರಿಗಣಿಸಲಾಗಿದೆ. ಅದು ಇತರ ರೇಖಾಂಶಗಳ ಎಣಿಕೆಯ ಆರಂಭ ಬಿಂದು. ಇದನ್ನು ‘ ಪ್ರಧಾನ ರೇಖಾಂಶ’ ಅಥವಾ ‘ ಗ್ರೀನಿಚ್ ರೇಖಾಂಶ’ ಎಂದು ಕರೆಯಲಾಗಿದೆ. ಇದರಿಂದ ಪೂರ್ವಕ್ಕೆ 180 ಡಿಗ್ರಿ ಮತ್ತು ಪಶ್ಚಿಮಕ್ಕೆ 180 ಡಿಗ್ರಿ ರೇಖಾಂಶಗಳಿದ್ದು, ಒಟ್ಟು 360 ಡಿಗ್ರಿ ರೇಖಾಂಶಗಳಿವೆ. ಗ್ರೀನಿಚ್ ರೇಖಾಂಶದಿಂದ 180 ಡಿಗ್ರಿ ಪೂರ್ವಕ್ಕಿರುವ ಭೂಭಾಗವನ್ನು’ ಪೂರ್ವ ಗೋಳಾರ್ಧ’ ಎಂತಲೂ ಮತ್ತು 180 ಡಿಗ್ರಿ ಪಶ್ಚಿಮಕ್ಕಿರುವ ಭೂಭಾಗವನ್ನು ‘ಪಶ್ಚಿಮ ಗೋಳಾರ್ಧ’ವೆಂದು ಪರಿಗಣಿಸಲಾಗಿದೆ.

ರೇಖಾಂಶಗಳು ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳನ್ನು ಕೂಡಿಸುತ್ತ ಅರ್ಧ ವೃತ್ತಗಳಾಗುತ್ತವೆ. ರೇಖಾಂಶಗಳು ಪ್ರತಿಯೊಂದು ಅಕ್ಷಾಂಶಗಳನ್ನು ಲಂಬವಾಗಿ ಛೇದಿಸುತ್ತವೆ. ಸಮಭಾಜಕ ವೃತ್ತದಲ್ಲಿ ಅವುಗಳ ನಡುವಣ ಅಂತರ ಹೆಚ್ಚು ಇದ್ದರೆ ಧ್ರುಗಳ ಕಡೆಗೆ ಹೋದಂತೆ ಅದು ಕಡಿಮೆಯಾಗುತ್ತದೆ.

           • ರೇಖಾಂಶಗಳು ಮತ್ತು ವೇಳೆ
ರೇಖಾಂಶ ಮತ್ತು ವೇಳೆಗೂ ನಿಕಟವಾದ ಸಂಬಂದವಿದೆ. ಭೂಮಿ 24 ಗಂಟೆಗಳಲ್ಲಿ ತನ್ನ ಎಲ್ಲ 360 ಡಿಗ್ರಿ ರೇಖಾಂಶಗಳನ್ನು ಅಂದರೆ ಪ್ರತಿ ರೇಖಾಂಶವನ್ನು 4 ನಿಮಿಷಗಳಲ್ಲಿ ಕ್ರಮಿಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಅಂದರೆ ಒಂದು ಗಂಟೆಯ ಅವಧಿಯಲ್ಲಿ 15 ಡಿಗ್ರಿ ರೇಖಾಂಶಗಳು ಸೂರ್ಯನಿಗೆ ಎದುರು ಬರುತ್ತವೆ. ಇದರ ಆಧಾರದ ಮೇಲೆ ವಿವಿಧ ಕಾಲಗಳನ್ನು ತಿಳಿಯಬಹುದು.

error: Content Copyright protected !!