ಜುಲೈ 11 : ವಿಶ್ವ ಜನಸಂಖ್ಯಾ ದಿನ (World Population Day)
World Population Day : ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಜನಸಂಖ್ಯೆಯಿಂದ ಹೆಚ್ಚುತ್ತಿರುವ ಸವಾಲುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ನೋಡಿ ವಿಶ್ವಸಂಸ್ಥೆ 1987ರ ವರ್ಷದಲ್ಲಿ ಈ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಆ ದಿನದಂದು ವಿಶ್ವ ಜನಸಂಖ್ಯೆ 5 ಬಿಲಿಯನ್ ತಲುಪಿತಂತೆ. ಹೀಗೆ ಈ ದಿನವನ್ನು ಆಚರಿಸುವುದರ ಮೂಲಕ ವಿಶ್ವದಲ್ಲಿ ಜನಸಂಖ್ಯೆಯ ಕುರಿತಾದ ವಿವಿಧ ಸಮಸ್ಯೆಗಳ ಕುರಿತಾಗಿ ವಿಶ್ವ ಸಮುದಾಯದ ಗಮನ ಸೆಳೆಯುವುದು ಈ ಆಚರಣೆಯ ಪ್ರಮುಖ ಉದ್ದೇಶ. ಈ ದಿನವನ್ನು ಡಾ. ಕೆ.ಸಿ. ಜಕಾರಿಯಾ ಅವರು ಸೂಚಿಸಿದರು.
ವಿಶ್ವ ಜನಸಂಖ್ಯಾ ದಿನದ ಇತಿಹಾಸ..?
ವಿಶ್ವ ಜನಸಂಖ್ಯಾ ದಿನವನ್ನು 1989 ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಪ್ರಾರಂಭಿಸಿತು. 1987 ರ ಹೊತ್ತಿಗೆ, ವಿಶ್ವದ ಜನಸಂಖ್ಯೆಯು ಐದು ಶತಕೋಟಿಯ ಹತ್ತಿರ ತಲುಪಿತ್ತು, ಇದರಿಂದಾಗಿ ಅನೇಕ ದೇಶಗಳು ಮುಂದೆ ಏನು ಎಂದು ಚಿಂತಿಸಲು ಪ್ರಾರಂಭಿಸಿದವು. ಆ ಸಂದರ್ಭದಲ್ಲಿ ಡಾ. ಕೆ.ಸಿ. ಜಕಾರಿಯಾ ಈ ದಿನವನ್ನು ಆಚರಿಸಲು ಸಲಹೆ ನೀಡಿದರು. ಬಡತನ, ತಾಯಿಯ ಆರೋಗ್ಯ, ಆರ್ಥಿಕ ತೊಂದರೆಗಳು ಮತ್ತು ಇತರ ಹಲವು ತೊಂದರೆಗಳು ಸೇರಿದಂತೆ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳು ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಅಂದಿನಿಂದ ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ.
2025ರ ಜನ ಸಂಖ್ಯಾ ದಿನದ ಥೀಮ್:
2025 ರ ಥೀಮ್: “ನ್ಯಾಯಯುತ ಮತ್ತು ಆಶಾದಾಯಕ ಜಗತ್ತಿನಲ್ಲಿ ಯುವಜನರು ಬಯಸುವ ಕುಟುಂಬಗಳನ್ನು ರಚಿಸಲು ಅವರನ್ನು ಸಬಲೀಕರಣಗೊಳಿಸುವುದು” (Empowering young people to create the families they want in a fair and hopeful world) ಈ ಥೀಮ್ ಕುಟುಂಬ ಯೋಜನೆಯ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಯುವಜನರಿಗೆ ಅಗತ್ಯವಿರುವ ಪರಿಕರಗಳು, ಮಾಹಿತಿ ನೀಡುವುದರ ಮೇಲೆ ಕೇಂದ್ರೀಕರಿಸಲಾಗಿದೆ.
8.1 ಬಿಲಿಯನ್ ದಾಟಿದ ಜನಸಂಖ್ಯೆ
1986ರ ವರ್ಷದಲ್ಲಿ 500 ಕೋಟಿ, 1998ರಲ್ಲಿ 600 ಕೋಟಿ, 2011ರಲ್ಲಿ 700 ಕೋಟಿ ಇದ್ದು ಇದೀಗ 720ಕೋಟಿಗಳನ್ನು ದಾಟಿದೆ. ಇದೇ ಮುಂದುವರಿದ ಗತಿಯಲ್ಲಿ ಇದು 2024ರ ವೇಳೆಗೆ 800 ಕೋಟಿ, 2039ರ ವೇಳೆಗೆ 900 ಕೋಟಿ ತಲುಪಿ 2061ರ ವರ್ಷದಲ್ಲಿ 1000 ಕೋಟಿಯನ್ನು ತಲುಪುತ್ತದೆ ಎಂಬುದು ಸಂಖ್ಯಾಶಾಸ್ತ್ರಜ್ಞರ ಊಹೆಯಾಗಿದೆ.
ವಿಶ್ವ ಜನಸಂಖ್ಯಾ ದಿನ: ಟಾಪ್ 10 ದೇಶಗಳು: (2025 ರಲ್ಲಿ)
ಭಾರತ – 1.46 ಬಿಲಿಯನ್
ಚೀನಾ – 1.42 ಬಿಲಿಯನ್
ಯುನೈಟೆಡ್ ಸ್ಟೇಟ್ಸ್ (ಅಮೆರಿಕ)- 347 ಮಿಲಿಯನ್
ಇಂಡೋನೇಷ್ಯಾ – 286 ಮಿಲಿಯನ್
ಪಾಕಿಸ್ತಾನ – 255 ಮಿಲಿಯನ್
ನೈಜೀರಿಯಾ – 238 ಮಿಲಿಯನ್
ಬ್ರೆಜಿಲ್ – 213 ಮಿಲಿಯನ್
ಬಾಂಗ್ಲಾದೇಶ – 176 ಮಿಲಿಯನ್
ರಷ್ಯಾ – 144 ಮಿಲಿಯನ್
ಇಥಿಯೋಪಿಯಾ – 135 ಮಿಲಿಯನ್
ಜನಸಂಖ್ಯೆ ಕುರಿತ ಮಹತ್ವದ ಅಂಶಗಳು :
*ವಿಶ್ವ ಜನಸಂಖ್ಯೆಯು 1 ಬಿಲಿಯನ್‌ಗೆ ಬೆಳೆಯಲು ಲಕ್ಷಾಂತರ ವರ್ಷಗಳು ಬೇಕಾಯಿತು – ನಂತರ ಕೇವಲ 200 ವರ್ಷಗಳಲ್ಲಿ ಅದು ಏಳು ಪಟ್ಟು ಹೆಚ್ಚಾಯಿತು. 2011 ರಲ್ಲಿ, ಜಾಗತಿಕ ಜನಸಂಖ್ಯೆಯು 7 ಬಿಲಿಯನ್ ಗಡಿಯನ್ನು ತಲುಪಿತು, ಇದು 2021 ರಲ್ಲಿ ಸುಮಾರು 7.9 ಬಿಲಿಯನ್ ಆಗಿದೆ, ಮತ್ತು ಇದು 2030 ರಲ್ಲಿ ಸುಮಾರು 8.5 ಬಿಲಿಯನ್, 2050 ರಲ್ಲಿ 9.7 ಬಿಲಿಯನ್ ಮತ್ತು 2100 ರಲ್ಲಿ 10.9 ಬಿಲಿಯನ್‌ಗೆ ಬೆಳೆಯುವ ನಿರೀಕ್ಷೆಯಿದೆ.
*ಸಂತಾನೋತ್ಪತ್ತಿ ವಯಸ್ಸಿನವರೆಗೆ ಬದುಕುಳಿದ ಜನರ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಈ ನಾಟಕೀಯ ಬೆಳವಣಿಗೆಗೆ ಕಾರಣವಾಗಿದ್ದು, ಫಲವತ್ತತೆ ದರಗಳಲ್ಲಿನ ಪ್ರಮುಖ ಬದಲಾವಣೆಗಳು, ನಗರೀಕರಣದ ಹೆಚ್ಚಳ ಮತ್ತು ವಲಸೆಯ ವೇಗವರ್ಧನೆಯೂ ಇದಕ್ಕೆ ಕಾರಣವಾಗಿವೆ. ಈ ಪ್ರವೃತ್ತಿಗಳು ಮುಂದಿನ ಪೀಳಿಗೆಗೆ ದೂರಗಾಮಿ ಪರಿಣಾಮಗಳನ್ನು ಬೀರುತ್ತವೆ.
*ಇತ್ತೀಚಿನ ದಿನಗಳಲ್ಲಿ ಫಲವತ್ತತೆ ದರಗಳು ಮತ್ತು ಜೀವಿತಾವಧಿಯಲ್ಲಿ ಅಗಾಧ ಬದಲಾವಣೆಗಳು ಕಂಡುಬಂದಿವೆ . 1970 ರ ದಶಕದ ಆರಂಭದಲ್ಲಿ, ಮಹಿಳೆಯರು ಸರಾಸರಿ 4.5 ಮಕ್ಕಳನ್ನು ಹೊಂದಿದ್ದರು; 2015 ರ ಹೊತ್ತಿಗೆ, ವಿಶ್ವದ ಒಟ್ಟು ಫಲವತ್ತತೆ ಪ್ರತಿ ಮಹಿಳೆಗೆ 2.5 ಮಕ್ಕಳಿಗಿಂತ ಕಡಿಮೆಯಾಗಿದೆ. ಏತನ್ಮಧ್ಯೆ, ಸರಾಸರಿ ಜಾಗತಿಕ ಜೀವಿತಾವಧಿಯು 1990 ರ ದಶಕದ ಆರಂಭದಲ್ಲಿ 64.6 ವರ್ಷಗಳಿಂದ 2019 ರಲ್ಲಿ 72.6 ವರ್ಷಗಳಿಗೆ ಏರಿದೆ.
*ಇದರ ಜೊತೆಗೆ, ಪ್ರಪಂಚವು ಹೆಚ್ಚಿನ ಮಟ್ಟದ ನಗರೀಕರಣ ಮತ್ತು ವೇಗವರ್ಧಿತ ವಲಸೆಯನ್ನು ಕಾಣುತ್ತಿದೆ. 2007 ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದ ಮೊದಲ ವರ್ಷವಾಗಿತ್ತು ಮತ್ತು 2050 ರ ವೇಳೆಗೆ ವಿಶ್ವ ಜನಸಂಖ್ಯೆಯ ಸುಮಾರು ಶೇಕಡಾ 66 ರಷ್ಟು ಜನರು ನಗರಗಳಲ್ಲಿ ವಾಸಿಸುತ್ತಾರೆ.
ಜನಸಂಖ್ಯೆ ಬೆಳೆಯುತ್ತಿಲ್ಲವೆ?
ಬಹಳಷ್ಟು ಜನಗಳ ಅಭಿಪ್ರಾಯದಲ್ಲಿ ವಿಶ್ವ ಜನಸಂಖ್ಯೆ ಬೆಳೆಯುತ್ತಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಆದರೆ ವಿಶ್ವ ಜನಸಂಖ್ಯಾ ನಿಯಂತ್ರಣದ ಕುರಿತಾದ ಚಿಂತನಾ ಮಂಡಳಿಯ ಪ್ರಕಾರ ನಮ್ಮ ವಿಶ್ವದ ಜನಸಂಖ್ಯೆ ನಿರಂತರ ಏರುತ್ತಲೇ ಇದೆ. ಅದು ನೀಡುವ ಮಾಹಿತಿ ಇಂತಿದೆ: ಪ್ರತಿ ನಿಮಿಷಕ್ಕೆ 160, ಒಂದು ಗಂಟೆಗೆ 9,600, ಒಂದು ದಿನಕ್ಕೆ 2,30,000, ವಾರವೊಂದಕ್ಕೆ 16 ಲಕ್ಷ, ವರ್ಷವೊಂದಕ್ಕೆ 8.4 ಕೋಟಿ ಜನಸಂಖ್ಯೆ ಇಂದೂ ಹೆಚ್ಚುತ್ತಲೇ ಇದೆ.
ವಿಶ್ವ ಜನಸಂಖ್ಯಾ ದಿನದ ಮಹತ್ವ:
ವಿಶ್ವದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಭಾರತ ಮತ್ತು ಚೀನಾ ದೇಶಗಳಲ್ಲಿ ಜನಸಂಖ್ಯೆ ಸ್ಥಿರವಾಗಿ ಏರಿಕೆಯಾಗುತ್ತಿದೆ. ಜನಸಂಖ್ಯೆ ಹೆಚ್ಚಳದಿಂದ ಆರ್ಥಿಕ ಬೆಳವಣಿಗೆ, ದೇಶದ ಪ್ರಗತಿಗೆ ಅವಕಾಶಗಳಿದ್ದರೂ, ವಸತಿ, ಆರೋಗ್ಯ, ಮೂಲಸೌಕರ್ಯ, ಪರಿಸರ, ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಉದ್ಯೋಗಾವಕಾಶಗಳ ಕೊರತೆಯಿಂದ ಬಡತನ ಮತ್ತು ನಿರುದ್ಯೋಗದ ಸಮಸ್ಯೆಗಳೂ ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ, ಜನಸಂಖ್ಯೆಯ ಹೆಚ್ಚಳದ ಬಗ್ಗೆ ಅರಿವು ಮೂಡಿಸಲು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಜನಸಂಖ್ಯಾ ದಿನವು ಜನಸಂಖ್ಯೆಯ ಹೆಚ್ಚಳವು ಪರಿಸರ, ಆರ್ಥಿಕತೆ ಮತ್ತು ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೆನಪಿಸುತ್ತದೆ. ಇದರ ಮಹತ್ವವು ಈ ಕೆಳಗಿನವುಗಳನ್ನು ಒಳಗೊಂಡಿದೆ:
ಹವಾಮಾನ, ಆಹಾರ ಪೂರೈಕೆ, ಜಲ ಸಂಪನ್ಮೂಲಗಳು, ವಸತಿ ಮತ್ತು ಮೂಲಸೌಕರ್ಯಗಳ ಮೇಲೆ ಅಧಿಕ ಜನಸಂಖ್ಯೆಯ ಪರಿಣಾಮವನ್ನು ಎತ್ತಿ ತೋರಿಸುವುದು.ಕುಟುಂಬ ಯೋಜನೆ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಉತ್ತೇಜಿಸುವುದು.
ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಲಿಂಗ ಸಮಾನತೆಯನ್ನು ಬೆಂಬಲಿಸುವುದು. ಸುಸ್ಥಿರ ಅಭಿವೃದ್ಧಿ ಮತ್ತು ಸುಧಾರಿತ ನಗರ ಯೋಜನೆಯನ್ನು ಪ್ರೋತ್ಸಾಹಿಸುವುದು. ಜವಾಬ್ದಾರಿಯುತ ಜನಸಂಖ್ಯಾ ನೀತಿಗಳು ಮತ್ತು ಸಾಮಾಜಿಕ ಕಲ್ಯಾಣ ಸುಧಾರಣೆಗಳನ್ನು ಪರಿಚಯಿಸಲು ಸರ್ಕಾರಗಳನ್ನು ಪ್ರೇರೇಪಿಸುವುದು.
- ಇಂದಿನ ಪ್ರಚಲಿತ ವಿದ್ಯಮಾನಗಳು / 12-07-2025 (Today’s Current Affairs)
- ICC T20 World Cup 2026 : ಟಿ20 ವಿಶ್ವಕಪ್ ಕ್ರಿಕೆಟ್ಗೆ ಅರ್ಹತೆ ಪಡೆದ ಇಟಲಿ, ನೆದರ್ಲ್ಯಾಂಡ್ಸ್
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (12-07-2025)
- ಇಂದಿನ ಪ್ರಚಲಿತ ವಿದ್ಯಮಾನಗಳು / 11-07-2025 (Today’s Current Affairs)
- Richest Indians in U.S. : ಅಮೇರಿಕಾದಲ್ಲಿ ಟಾಪ್-10 ಶ್ರೀಮಂತ ಭಾರತೀಯರ ಪಟ್ಟಿ