1962ರ ಭಾರತ–ಚೀನಾ ಯುದ್ಧದ ವೇಳೆ 600 ಕೆ.ಜಿ ಚಿನ್ನ ದಾನ ಮಾಡಿದ ಮಹಾರಾಣಿ ನಿಧನ
1962ರ ಭಾರತ–ಚೀನಾ ಯುದ್ಧದ ಸಂದರ್ಭದಲ್ಲಿ ರಾಷ್ಟ್ರ ರಕ್ಷಣೆಗೆ ಅಪಾರ ಕೊಡುಗೆ ನೀಡಿದ ದರ್ಭಂಗಾ (Darbhanga) ರಾಜವಂಶದ ಕೊನೆಯ ಜೀವಿತ ಮಹಾರಾಣಿ ಕಂಸುಂದರಿ ದೇವಿ (Maharani Kamsundari Devi) ಸೋಮವಾರ ನಿಧನರಾದರು. 93 ವರ್ಷದ ಅವರು ಬಿಹಾರದ ದರ್ಭಂಗಾದ ಐತಿಹಾಸಿಕ ಕಲ್ಯಾಣಿ ನಿವಾಸದಲ್ಲಿ ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದರು.
ಅವರ ನಿಧನದೊಂದಿಗೆ ದರ್ಭಂಗಾ ರಾಜವಂಶದ ಹಾಗೂ ಮಿಥಿಲಾಂಚಲ ಪ್ರದೇಶದ ಒಂದು ಗೌರವಯುತ ಯುಗಕ್ಕೆ ತೆರೆ ಬಿದ್ದಿದೆ. ಸೇವೆ, ತ್ಯಾಗ ಮತ್ತು ದೇಶಭಕ್ತಿಯ ಪರಂಪರೆಗೆ ಅವರು ಪ್ರತೀಕವಾಗಿದ್ದರು.
1962ರ ಯುದ್ಧದ ವೇಳೆ ಅಪೂರ್ವ ದಾನ
1962ರ ಭಾರತ–ಚೀನಾ ಯುದ್ಧದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮನವಿಗೆ ಮೊಟ್ಟಮೊದಲಾಗಿ ಸ್ಪಂದಿಸಿದ ದರ್ಭಂಗಾ ರಾಜವಂಶವು ರಾಷ್ಟ್ರ ರಕ್ಷಣೆಗೆ 15 ಮೌಂಡ್‌ಗಳಷ್ಟು (ಸುಮಾರು 600 ಕೆ.ಜಿ) ಚಿನ್ನವನ್ನು ದರ್ಭಂಗಾದ ಇಂದ್ರಭವನ ಮೈದಾನದಲ್ಲಿ ದಾನ ಮಾಡಿತ್ತು.
ಇದರೊಂದಿಗೆ ಮೂರು ಖಾಸಗಿ ವಿಮಾನಗಳು ಹಾಗೂ 90 ಎಕರೆ ವಿಸ್ತೀರ್ಣದ ವಿಮಾನ ಹಾರಾಟದ ನೆಲವನ್ನು ಸರ್ಕಾರಕ್ಕೆ ವರ್ಗಾಯಿಸಿತ್ತು. ಇದೇ ಸ್ಥಳವು ನಂತರ ದರ್ಭಂಗಾ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಗೊಂಡಿತು. ಈ ದಾನವನ್ನು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಮಹತ್ವದ ರಾಜವಂಶೀಯ ಕೊಡುಗೆಗಳಲ್ಲಿ ಒಂದೆಂದು ಇತಿಹಾಸಕಾರರು ಗುರುತಿಸಿದ್ದಾರೆ.
ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಕೊಡುಗೆ
ದರ್ಭಂಗಾ ಎಸ್ಟೇಟ್ ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿಗೂ ಅಪಾರ ಕೊಡುಗೆ ನೀಡಿದೆ. ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯವು ರಾಜವಂಶದ ಸಂಕೀರ್ಣದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಕೊಲ್ಕತ್ತಾ ವಿಶ್ವವಿದ್ಯಾಲಯ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಪಾಟ್ನಾ ವಿಶ್ವವಿದ್ಯಾಲಯಗಳಿಗೆ ದರ್ಭಂಗಾ ರಾಜವಂಶ ಮಹತ್ತರ ಆರ್ಥಿಕ ನೆರವು ನೀಡಿತ್ತು. ದರ್ಭಂಗಾ ಮೆಡಿಕಲ್ ಕಾಲೇಜ್ ಕೂಡ ಅವರ ಸ್ಮರಣೀಯ ಕೊಡುಗೆಗಳಲ್ಲಿ ಒಂದಾಗಿದೆ.
ಕೈಗಾರಿಕಾ ಕ್ಷೇತ್ರದಲ್ಲಿ ಸಾಕ್ರಿ, ಲೋಹಟ್, ರೈಯಾಮ್ ಹಾಗೂ ಹಸನ್‌ಪುರದಲ್ಲಿ ಸಕ್ಕರೆ ಕಾರ್ಖಾನೆಗಳು, ಪಾಂಡೌಲ್‌ನಲ್ಲಿ ಸ್ಪಿನ್ನಿಂಗ್ ಮಿಲ್, ಹಯಘಾಟ್‌ನಲ್ಲಿನ ಅಶೋಕ್ ಪೇಪರ್ ಮಿಲ್ ಹಾಗೂ ಸಮಸ್ತಿಪುರದ ರಾಮೇಶ್ವರ ಜ್ಯೂಟ್ ಮಿಲ್ ಸ್ಥಾಪನೆಗೆ ದರ್ಭಂಗಾ ಎಸ್ಟೇಟ್ ಬೆಂಬಲ ನೀಡಿತ್ತು. ಭಾರತದ ವಿಮಾನಯಾನ ಸೇವೆಗಳ ಆರಂಭದಲ್ಲೂ ದರ್ಭಂಗಾ ಎಸ್ಟೇಟ್ ಪ್ರಮುಖ ಪಾತ್ರ ವಹಿಸಿದೆ.
ದರ್ಭಂಗಾದ ಕೊನೆಯ ಮಹಾರಾಣಿ
1932ರ ಅಕ್ಟೋಬರ್ 22ರಂದು ಜನಿಸಿದ ಮಹಾರಾಣಿ ಕಂಸುಂದರಿ ದೇವಿ, ಮಹಾರಾಜ ಕಮೇಶ್ವರ ಸಿಂಗ್ ಅವರ ಮೂರನೇ ಪತ್ನಿಯಾಗಿದ್ದರು. ಎಂಟು ವರ್ಷದ ವಯಸ್ಸಿನಲ್ಲಿ ವಿವಾಹವಾದ ಅವರು, 1962ರಲ್ಲಿ ಮಹಾರಾಜರ ನಿಧನದ ಬಳಿಕ 64 ವರ್ಷಗಳ ಕಾಲ ವಿಧವೆಯಾಗಿ ಜೀವನ ನಡೆಸಿದರು. ಮೂರು ವಿವಾಹಗಳಿದ್ದರೂ ಮಹಾರಾಜ ಕಮೇಶ್ವರ ಸಿಂಗ್ ಅವರಿಗೆ ಸಂತಾನ ಇರಲಿಲ್ಲ.
‘ಅಧಿಕಾರಕ್ಕಿಂತ ಕರ್ತವ್ಯ ಮೇಲು’ ಎಂಬ ತತ್ವವನ್ನು ಜೀವನದ ಮೂಲಮಂತ್ರವಾಗಿಸಿಕೊಂಡಿದ್ದ ಮಹಾರಾಣಿ ಕಂಸುಂದರಿ ದೇವಿ ಸಾರ್ವಜನಿಕ ಜೀವನದಿಂದ ದೂರವಿದ್ದರೂ ಅಪಾರ ಗೌರವಕ್ಕೆ ಪಾತ್ರರಾಗಿದ್ದರು. ಅವರ ನಿಧನದ ಸುದ್ದಿ ದರ್ಭಂಗಾ ಹಾಗೂ ಮಿಥಿಲಾಂಚಲದಲ್ಲಿ ಆಳವಾದ ಶೋಕಕ್ಕೆ ಕಾರಣವಾಯಿತು.
ದರ್ಭಂಗಾ ರಾಜವಂಶದ ಖಾಸಗಿ ದಹನ ಸ್ಥಳವಾಗಿರುವ ಮಧ್ಮೇಶ್ವರ ದೇವಾಲಯದ ಆವರಣದಲ್ಲಿ ಸಂಪ್ರದಾಯಬದ್ಧವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಹಾರಾಣಿಯ ಗ್ರ್ಯಾಂಡ್‌ನೇಫ್ಯೂ ರತ್ನೇಶ್ವರ ಸಿಂಗ್ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಪರೀಕ್ಷಾ ಟಿಪ್ಪಣಿಗಳು (Exam Notes)
1962ರ ಭಾರತ–ಚೀನಾ ಯುದ್ಧದ ವೇಳೆ 600 ಕೆ.ಜಿ ಚಿನ್ನ ದಾನ ಮಾಡಿದ ಮಹಾರಾಣಿ ಕಂಸುಂದರಿ ದೇವಿ
ಹೆಸರು: ಮಹಾರಾಣಿ ಕಂಸುಂದರಿ ದೇವಿ
ರಾಜವಂಶ: ದರ್ಭಂಗಾ ರಾಜವಂಶ (ಮಿಥಿಲಾಂಚಲ)
ಜನನ: 22 ಅಕ್ಟೋಬರ್ 1932
ಮರಣ: ಜನವರಿ 12, 2026 (ವಯಸ್ಸು: 93)
ನಿವಾಸ: ಕಲ್ಯಾಣಿ ನಿವಾಸ, ದರ್ಭಂಗಾ, ಬಿಹಾರ
ಮಹಾರಾಜ ಕಮೇಶ್ವರ ಸಿಂಗ್ ಅವರ ಮೂರನೇ ಪತ್ನಿ
8ನೇ ವಯಸ್ಸಿನಲ್ಲಿ ವಿವಾಹ
1962ರಲ್ಲಿ ಮಹಾರಾಜರ ನಿಧನದ ಬಳಿಕ 64 ವರ್ಷಗಳ ಕಾಲ ವಿಧವೆ ಜೀವನ
ಮಹಾರಾಜರಿಗೆ ಸಂತಾನ ಇರಲಿಲ್ಲ
ಜೀವನ ತತ್ವ: “ಅಧಿಕಾರಕ್ಕಿಂತ ಕರ್ತವ್ಯ ಮೇಲು”
ಅಂತ್ಯಕ್ರಿಯೆ ಸ್ಥಳ: ಮಧ್ಮೇಶ್ವರ ದೇವಾಲಯದ ಆವರಣ, ದರ್ಭಂಗಾ
1962ರ ಭಾರತ–ಚೀನಾ ಯುದ್ಧದ ಕೊಡುಗೆ
ಯುದ್ಧದ ವೇಳೆ ರಾಷ್ಟ್ರ ರಕ್ಷಣೆಗೆ 15 ಮೌಂಡ್ (ಸುಮಾರು 600 ಕೆ.ಜಿ) ಚಿನ್ನ ದಾನ
ಮೂರು ಖಾಸಗಿ ವಿಮಾನಗಳು ಹಾಗೂ 90 ಎಕರೆ ವಿಮಾನ ಹಾರಾಟದ ನೆಲ ಸರ್ಕಾರಕ್ಕೆ ವರ್ಗಾವಣೆ
ಈ ನೆಲವೇ ನಂತರ ದರ್ಭಂಗಾ ವಿಮಾನ ನಿಲ್ದಾಣವಾಗಿ ಅಭಿವೃದ್ಧಿ
ಸ್ವತಂತ್ರ ಭಾರತದ ಇತಿಹಾಸದಲ್ಲಿನ ಅತ್ಯಂತ ಮಹತ್ವದ ರಾಜವಂಶೀಯ ದಾನಗಳಲ್ಲಿ ಒಂದು
ಶಿಕ್ಷಣ ಕ್ಷೇತ್ರದ ಕೊಡುಗೆ
ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯ – ರಾಜವಂಶದ ಸಂಕೀರ್ಣದಲ್ಲೇ ಕಾರ್ಯನಿರ್ವಹಣೆ
ಆರ್ಥಿಕ ನೆರವು:
ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU)
ಕೊಲ್ಕತ್ತಾ ವಿಶ್ವವಿದ್ಯಾಲಯ
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (AMU)
ಪಾಟ್ನಾ ವಿಶ್ವವಿದ್ಯಾಲಯ
ದರ್ಭಂಗಾ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಪ್ರಮುಖ ಕೊಡುಗೆ
ಕೈಗಾರಿಕಾ ಕ್ಷೇತ್ರದ ಕೊಡುಗೆ
ಸಕ್ಕರೆ ಕಾರ್ಖಾನೆಗಳು: ಸಾಕ್ರಿ, ಲೋಹಟ್, ರೈಯಾಮ್, ಹಸನ್‌ಪುರ
ಪಾಂಡೌಲ್ ಸ್ಪಿನ್ನಿಂಗ್ ಮಿಲ್
ಹಯಘಾಟ್ ಅಶೋಕ್ ಪೇಪರ್ ಮಿಲ್
ಸಮಸ್ತಿಪುರ ರಾಮೇಶ್ವರ ಜ್ಯೂಟ್ ಮಿಲ್
ಭಾರತದ ವಿಮಾನಯಾನ ಸೇವೆಗಳ ಆರಂಭದಲ್ಲಿ ದರ್ಭಂಗಾ ಎಸ್ಟೇಟ್ ಪಾತ್ರ
- US freezes visa : 75 ರಾಷ್ಟ್ರಗಳಿಗೆ ವಲಸೆ ವೀಸಾ ಪ್ರಕ್ರಿಯೆ ಸ್ಥಗಿತಗೊಳಿಸಿದ ಅಮೆರಿಕ, ಪಟ್ಟಿಯಲ್ಲಿಲ್ಲ ಭಾರತ
- 1962ರ ಭಾರತ–ಚೀನಾ ಯುದ್ಧದ ವೇಳೆ 600 ಕೆ.ಜಿ ಚಿನ್ನ ದಾನ ಮಾಡಿದ ಮಹಾರಾಣಿ ನಿಧನ
- ಭಾರತ-ಚೀನಾ ನಡುವೆ 2025ರಲ್ಲಿ ದಾಖಲೆ ವ್ಯಾಪಾರ : INSIGHTS
- ಐಟಿಬಿಪಿ ಮಹಾನಿರ್ದೇಶಕರಾಗಿ ಶತ್ರುಜೀತ್ ಸಿಂಗ್ ಕಪೂರ್ ನೇಮಕ
- ಮಕರ ಸಂಕ್ರಾಂತಿ ಮತ್ತು ಮಹಾಭಾರತದ ಭೀಷ್ಮ ಪಿತಾಮಹನ ಕಥೆ


