India-EU FTA : ಐತಿಹಾಸಿಕ ಭಾರತ–ಯುರೋಪಿಯನ್ ಒಕ್ಕೂಟ (EU) ಒಪ್ಪಂದ – ವಿಶ್ಲೇಷಣೆ
India-EU FTA : ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವೆಯೇ ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU-European Union) ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA-Free Trade Agreement) ಸಹಿ ಹಾಕಿವೆ. ಭಾರತದ 77ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರು ಭಾಗವಹಿಸಿದ್ದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಭಾರತ–EU ಶೃಂಗಸಭೆಯಲ್ಲಿ ಈ ಒಪ್ಪಂದಕ್ಕೆ ಅಂತಿಮ ರೂಪ ದೊರೆತಿದೆ. ರಾಜತಾಂತ್ರಿಕತೆ, ವ್ಯಾಪಾರ ಮತ್ತು ಸಂಕೇತಾತ್ಮಕ ಮಹತ್ವ ಒಂದೇ ವೇದಿಕೆಯಲ್ಲಿ ಒಂದಾದ ಕ್ಷಣವಾಗಿ ನವದೆಹಲಿ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಎರಡು ದಶಕಗಳಿಗಿಂತ ಹೆಚ್ಚು ಕಾಲ ನಡೆದ ಕಠಿಣ ಮಾತುಕತೆಗಳಿಗೆ ಈ ಒಪ್ಪಂದ ತೆರೆ ಎಳೆದಿದೆ. 2004ರಿಂದ ತಂತ್ರಾತ್ಮಕ ಪಾಲುದಾರರಾಗಿರುವ ಭಾರತ–EU ಸಂಬಂಧಗಳು, ಪ್ರಜಾಸತ್ತಾತ್ಮಕ ಮೌಲ್ಯಗಳು, ಬಹುಪಕ್ಷೀಯತೆ ಮತ್ತು ನಿಯಮಾಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಯ ಮೇಲೆ ನಿಂತಿವೆ. ಇದಕ್ಕೂ ಮೊದಲು, 1962ರಲ್ಲಿ ಭಾರತವು ಯುರೋಪಿಯನ್ ಆರ್ಥಿಕ ಸಮುದಾಯದೊಂದಿಗೆ (EUಗೆ ಪೂರ್ವಸಂಸ್ಥೆ) ರಾಜತಾಂತ್ರಿಕ ಸಂಬಂಧ ಸ್ಥಾಪಿಸಿದ ಮೊದಲ ರಾಷ್ಟ್ರಗಳಲ್ಲಿ ಒಂದಾಗಿತ್ತು.
ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ ಇದನ್ನು “ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್” (Mother of All Trade Deals) ಎಂದು ವರ್ಣಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದನ್ನು “ಭಾರತದ ಇತಿಹಾಸದಲ್ಲೇ ಅತಿದೊಡ್ಡ FTA” ಎಂದು ಘೋಷಿಸಿದ್ದಾರೆ.
ಈ ಒಪ್ಪಂದದೊಂದಿಗೆ ಸುಮಾರು 213 ಬಿಲಿಯನ್ ಅಮೆರಿಕ ಡಾಲರ್ (180 ಬಿಲಿಯನ್ ಯೂರೋ) ಮೌಲ್ಯದ ವ್ಯಾಪಾರ ಹೊಂದಿರುವ ಜಗತ್ತಿನ ಎರಡು ಅತಿದೊಡ್ಡ ಪ್ರಜಾಸತ್ತಾತ್ಮಕ ವ್ಯಾಪಾರ ಬ್ಲಾಕ್ಗಳು ಹೊಸ ಅಧ್ಯಾಯವನ್ನು ಆರಂಭಿಸಿವೆ. EUನಲ್ಲಿ ವಾಸಿಸುತ್ತಿರುವ ಸುಮಾರು 8 ಲಕ್ಷ ಭಾರತೀಯರಿಗೆ ಈ ಒಪ್ಪಂದದಿಂದ ಮಹತ್ವದ ಲಾಭವಾಗಲಿದೆ.
ಈ ಒಪ್ಪಂದದಿಂದ ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವು 40 ಬಿಲಿಯನ್ ಡಾಲರ್ಗೂ ಹೆಚ್ಚು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ದೀರ್ಘಕಾಲದ ಮಾತುಕತೆಗಳಿಗೆ ಅಂತ್ಯ :
2007ರಲ್ಲಿ ಆರಂಭಗೊಂಡ ಮಾತುಕತೆಗಳು ಕೃಷಿ ಮತ್ತು ಹಾಲು ಉತ್ಪನ್ನಗಳ ಮಾರುಕಟ್ಟೆ ಪ್ರವೇಶ ವಿಚಾರದಲ್ಲಿ ಅಡಚಣೆಯಿಂದ 2016ರಲ್ಲಿ ಸ್ಥಗಿತಗೊಂಡಿದ್ದವು. 2022ರಲ್ಲಿ ಪುನರಾರಂಭಗೊಂಡ ಚರ್ಚೆಗಳು, ಕೋವಿಡ್ ನಂತರದ ಸರಬರಾಜು ಸರಣಿ ಸವಾಲುಗಳು ಮತ್ತು ಜಾಗತಿಕ ರಾಜಕೀಯ ಬದಲಾವಣೆಗಳ ನಡುವೆಯೇ ವೇಗ ಪಡೆದವು.
ಒಪ್ಪಂದದ ಮಹತ್ವ ಏನು?
ಪ್ರಸ್ತುತ ಭಾರತದ ಒಟ್ಟು ರಫ್ತಿನಲ್ಲಿ ಐರೋಪ್ಯ ಒಕ್ಕೂಟದ ಪಾಲು ಶೇ. 17ರಷ್ಟಿದೆ. ‘ಎಮ್ಕೆ ಗ್ಲೋಬಲ್’ ವರದಿಯ ಪ್ರಕಾರ, ಈ ದ್ವಿಪಕ್ಷೀಯ ಒಪ್ಪಂದದಿಂದ ಮಧ್ಯಮ ತಂತ್ರಜ್ಞಾನ ಉತ್ಪಾದನಾ ವಲಯದ ಮೂಲಕ ಭಾರತದಿಂದ ಇಯುಗೆ ರಫ್ತಾಗುವ ಸರಕುಗಳ ಮೌಲ್ಯದಲ್ಲಿ ಸುಮಾರು 50 ಬಿಲಿಯನ್ (ಅಂದಾಜು 4.5 ಲಕ್ಷ ಕೋಟಿ ರೂ.) ಹೆಚ್ಚಳವಾಗುವ ಸಾಧ್ಯತೆಯಿದೆ. ಅಲ್ಲದೆ, ಸುಧಾರಿತ ಆಮದು ದಕ್ಷತೆ ಮತ್ತು ಹೆಚ್ಚಿನ ವಿದೇಶಿ ನೇರ ಬಂಡವಾಳ ಹೂಡಿಕೆಯು ತಂತ್ರಜ್ಞಾನ ವರ್ಗಾವಣೆಗೆ ದಾರಿ ಮಾಡಿಕೊಡಲಿದೆ. ಐಟಿ ಸೇವಾ ರಫ್ತಿಗೂ ಇದು ಬಲ ತುಂಬಲಿದ್ದು, ಇಯು ಈಗಾಗಲೇ ಭಾರತದ ಐಟಿ ಬೇಡಿಕೆಯ ಮೂರನೇ ಒಂದು ಭಾಗವನ್ನು ಹೊಂದಿದೆ.
ಜವಳಿ ವಲಯ: ಬಾಂಗ್ಲಾದೇಶ, ವಿಯೆಟ್ನಾಂಗೆ ಸೆಡ್ಡು! :
ಭಾರತದ ಜವಳಿ ಮತ್ತು ಉಡುಪು ರಫ್ತಿನಲ್ಲಿ ಯುರೋಪ್ನ ಪಾಲು ಶೇ. 38ರಷ್ಟಿದೆ. ಆದರೆ, ಇಯು ಆಮದು ಮಾಡಿಕೊಳ್ಳುವ ಒಟ್ಟು ಜವಳಿಯಲ್ಲಿ ಭಾರತದ ಪಾಲು ಕೇವಲ ಶೇ. 5 ಮಾತ್ರ. ಚೀನಾ (ಶೇ. 28), ಬಾಂಗ್ಲಾದೇಶ (ಶೇ. 22), ಟರ್ಕಿ ಮತ್ತು ವಿಯೆಟ್ನಾಂ ದೇಶಗಳು ನಮಗಿಂತ ಮುಂದಿವೆ. ಪ್ರಸ್ತುತ ಬಾಂಗ್ಲಾದೇಶ, ವಿಯೆಟ್ನಾಂ ಮತ್ತು ಇಥಿಯೋಪಿಯಾ ದೇಶಗಳು ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಯುರೋಪ್ಗೆ ಶೂನ್ಯ ಸುಂಕದಲ್ಲಿ ರಫ್ತು ಮಾಡುತ್ತಿವೆ. ಆದರೆ ಭಾರತೀಯ ಸರಕುಗಳಿಗೆ ಶೇ. 10-12ರಷ್ಟು ಸುಂಕ ವಿಧಿಸಲಾಗುತ್ತಿದೆ. ಒಂದು ವೇಳೆ ಒಪ್ಪಂದದ ಮೂಲಕ ಸುಂಕವು ಶೇ. 10-12 ರಿಂದ ಶೂನ್ಯಕ್ಕೆ ಇಳಿಕೆಯಾದರೆ, ಭಾರತೀಯ ಉಡುಪುಗಳ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಲಿದೆ. ಆಗ ಬಾಂಗ್ಲಾದೇಶ ಮತ್ತು ವಿಯೆಟ್ನಾಂನಿಂದ ಮಾರುಕಟ್ಟೆ ಪಾಲನ್ನು ಕಸಿದುಕೊಳ್ಳಲು ಭಾರತಕ್ಕೆ (ವಿಶೇಷವಾಗಿ ನೈಟ್ವೇರ್ ಮತ್ತು ಟ್ರೌಸರ್ಸ್ ವಿಭಾಗದಲ್ಲಿ) ಸಾಧ್ಯವಾಗುತ್ತದೆ.
ಔಷಧ ವಲಯಕ್ಕೆ ಅನುಕೂಲ :
ಭಾರತವು ಯುರೋಪ್ಗೆ ಸುಮಾರು 2.95 ಬಿಲಿಯನ್ ಡಾಲರ್ ಮೌಲ್ಯದ ಔಷಧಗಳನ್ನು ರಫ್ತು ಮಾಡುತ್ತಿದೆ. ಆದರೆ ಇಯು ಆಮದು ಮಾಡಿಕೊಳ್ಳುವ ಒಟ್ಟು ಫಾರ್ಮಾ ಉತ್ಪನ್ನಗಳಲ್ಲಿ ಭಾರತದ ಪಾಲು ಕೇವಲ ಶೇ. 2.2ರಷ್ಟಿದೆ. ಹೀಗಾಗಿ ಇಲ್ಲಿ ಬೆಳವಣಿಗೆಗೆ ವಿಫುಲ ಅವಕಾಶವಿದೆ. ಯುರೋಪ್ನಲ್ಲಿ ಔಷಧಗಳ ಅನುಮೋದನೆ ಪ್ರಕ್ರಿಯೆ ತೀರಾ ನಿಧಾನಗತಿಯಲ್ಲಿದೆ. ಜೆನೆರಿಕ್ ಔಷಧಗಳಿಗೆ ಅನುಮತಿ ಪಡೆಯಲು 2 ರಿಂದ 3 ವರ್ಷ ಬೇಕಾಗುತ್ತದೆ ಮತ್ತು ಶುಲ್ಕವೂ ದುಬಾರಿ. ಕಠಿಣ ನಿಯಮಗಳು ಮತ್ತು ಅಡೆತಡೆಗಳು ಭಾರತೀಯ ಕಂಪನಿಗಳಿಗೆ ಅಡ್ಡಿಯಾಗಿವೆ.ಈ ಒಪ್ಪಂದದಿಂದ ನಿಯಂತ್ರಕ ಸಹಕಾರ ಹೆಚ್ಚಾಗಲಿದ್ದು, ತ್ವರಿತವಾಗಿ ಮಾರುಕಟ್ಟೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಜೊತೆಗೆ ಅರ್ಜಿ ವೆಚ್ಚದ ಇಳಿಕೆಯಾಗಲಿದ್ದು, ಅಮೆರಿಕದ ಮೇಲಿನ ಅವಲಂಬನೆ ಕೂಡ ತಗ್ಗಲಿದೆ. ಇದು ಭಾರತೀಯ ಸಿಡಿಎಂಒ ಮತ್ತು ಬಯೋಸಿಮಿಲರ್ ಕಂಪನಿಗಳಿಗೆ ಯುರೋಪ್ ಮಾರುಕಟ್ಟೆಯನ್ನು ಸುಲಭವಾಗಿ ಪ್ರವೇಶಿಸಲು ದಾರಿ ಮಾಡಿಕೊಡಲಿದೆ. ಇದರಿಂದ ಬಯೋಸಿಮಿಲರ್ ವಲಯದ ಬಯೋಕಾನ್, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಜೆನೆರಿಕ್ಸ್ಗೆ ಸೇರಿದ ಲುಪಿನ್, ಅರಬಿಂದೋ ಫಾರ್ಮಾ, ಟೊರೆಂಟ್ ಫಾರ್ಮಾ, ಇಪ್ಕಾ ಲ್ಯಾಬ್ಸ್, ಸನ್ ಫಾರ್ಮಾಗೆ ಲಾಭವಾಗುವ ಸಂಭವ ಇದೆ.
ರಾಸಾಯನಿಕ ವಲಯದ ರಫ್ತಿಗೆ ಉತ್ತೇಜನ :
ಭಾರತವು ಜಾಗತಿಕವಾಗಿ ರಾಸಾಯನಿಕಗಳ ಆಮದುದಾರನಾಗಿದ್ದರೂ ಯುರೋಪ್ ವಿಚಾರದಲ್ಲಿ ಭಾರತ ರಫ್ತುದಾರನಾಗಿ ಗುರುತಿಸಿಕೊಂಡಿದೆ. 2024ರಲ್ಲಿ ಭಾರತ ಇಯುಗೆ ಬರೋಬ್ಬರಿ 8.9 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಮಾಡಿ, 7.7 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ.
ಎಮ್ಕೆ ಗ್ಲೋಬಲ್ ವರದಿಯ ಪ್ರಕಾರ, ಎಫ್ಟಿಎ ಸಹಿ ಹಾಕಿರುವುದರಿಂದ ದೇಶೀಯ ರಾಸಾಯನಿಕ ತಯಾರಕರ ರಫ್ತು ಪ್ರಮಾಣ ಹೆಚ್ಚಾಗಲಿದೆ. ಯುರೋಪಿಯನ್ ಕಂಪನಿಗಳು ವೆಚ್ಚದ ಒತ್ತಡ ಎದುರಿಸುತ್ತಿರುವುದರಿಂದ, ಅವರು ಭಾರತೀಯ ಕಂಪನಿಗಳಿಗೆ ಗುತ್ತಿಗೆ ನೀಡುವ ಸಾಧ್ಯತೆ ಹೆಚ್ಚಿದೆ. ಇದರಿಂದ ಕಂಪನಿಗಳ ಎಬಿಟ್ಡಾ ಮಾರ್ಜಿನ್ 100-400 ಬೇಸಿಸ್ ಪಾಯಿಂಟ್ಗಳಷ್ಟು ಸುಧಾರಿಸಬಹುದು. ತಮ್ಮ ಆದಾಯದ ಶೇ. 15 ಕ್ಕಿಂತ ಹೆಚ್ಚು ಪಾಲನ್ನು ಯುರೋಪ್ ರಫ್ತಿನಿಂದ ಪಡೆಯುವ 10ಕ್ಕೂ ಹೆಚ್ಚು ಕೆಮಿಕಲ್ ಕಂಪನಿಗಳು ಇದರಿಂದ ಲಾಭ ಪಡೆಯಲಿವೆ.
ಯಾವ ರಾಜ್ಯಕ್ಕೆ ಏನು ಲಾಭ ಸಾಧ್ಯತೆ..? :
ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (ಎಫ್ಟಿಎ) ಮಾತುಕತೆ ಪೂರ್ಣಗೊಂಡ ಬೆನ್ನಲ್ಲೇ ಯಾವ್ಯಾವ ರಾಜ್ಯಗಳಿಗೆ ಏನೆಲ್ಲಾ ಲಾಭವಾಗಲಿದೆ ಎಂಬ ಲೆಕ್ಕಾಚಾರವೂ ಜೋರಾಗಿದೆ. ಈ ಒಪ್ಪಂದವು ಜಾರಿಗೆ ಬಂದ ನಂತರದಲ್ಲಿ ಭಾರತದಿಂದ ಐರೋಪ್ಯ ಒಕ್ಕೂಟದ ದೇಶಗಳಿಗೆ ರಫ್ತಾಗುವ ಶೇಕಡ 93ರಷ್ಟು ಉತ್ಪನ್ನಗಳು ಸುಂಕ ರಹಿತವಾಗಿ ಅಲ್ಲಿನ ಮಾರುಕಟ್ಟೆ ಪ್ರವೇಶಿಸಲಿವೆ. ಅಲ್ಲದೆ, ಐರೋಪ್ಯ ಒಕ್ಕೂಟದ ದೇಶಗಳ ಐಷಾರಾಮಿ ಕಾರುಗಳು ಹಾಗೂ ವೈನ್ಗಳ ಬೆಲೆಯು ಭಾರತದಲ್ಲಿ ಕಡಿಮೆ ಆಗಲಿದೆ.
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಪ್ರಕಟಣೆ ಹೊರಬಿದ್ದ ನಂತರದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ದೇಶದ ಯಾವ ರಾಜ್ಯದ ಯಾವ ವಲಯಕ್ಕೆ ಹೆಚ್ಚಿನ ಪ್ರಯೋಜನ ಆಗಬಹುದು ಎಂಬ ವಿವರಗಳನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ಕರ್ನಾಟಕ : ರಾಜ್ಯದ ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್, ಔಷಧ ಮತ್ತು ವೈದ್ಯಕೀಯ ಉಪಕರಣಗಳು, ಜವಳಿ ಹಾಗೂ ಉಡುಪು ವಲಯಕ್ಕೆ ಒಪ್ಪಂದವು ಪ್ರಯೋಜನ ತಂದುಕೊಡಲಿದೆ ಎಂದು ಅಂದಾಜಿಸಲಾಗಿದೆ.
ಆಂಧ್ರಪ್ರದೇಶ : ರಾಜ್ಯದ ಸಮುದ್ರ ಉತ್ಪನ್ನಗಳು, ರಾಸಾಯನಿಕಗಳು, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಪ್ರಯೋಜನವಾಗಲಿದೆ.
ತೆಲಂಗಾಣ : ರಾಜ್ಯದ ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್, ಔಷಧ ಮತ್ತು ವೈದ್ಯಕೀಯ ಉಪಕರಣಗಳು, ಜವಳಿ ಹಾಗೂ ಉಡುಪು ವಲಯಕ್ಕೆ ನೆರವಾಗಲಿದೆ.
ತಮಿಳುನಾಡು : ರಾಜ್ಯದ ಚರ್ಮ ಮತ್ತು ಪಾದರಕ್ಷೆಗಳು, ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಪ್ರಯೋಜನವಾಗಲಿದೆ.
ಕೇರಳ : ರಾಜ್ಯದ ಸಮುದ್ರ ಉತ್ಪನ್ನಗಳು, ಚಹಾ ಪದಾರ್ಥಗಳು, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಉತ್ತೇಜನ ಸಿಗಲಿದೆ.
ಮಹಾರಾಷ್ಟ್ರ : ರಾಜ್ಯದ ರತ್ನ ಮತ್ತು ಆಭರಣಗಳು, ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು, ಎಲೆಕ್ಟ್ರಾನಿಕ್ಸ್, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಅನುಕೂಲವಾಗಲಿದೆ.
ಪಶ್ಚಿಮ ಬಂಗಾಳ : ರಾಜ್ಯದ ಸಮುದ್ರ ಉತ್ಪನ್ನಗಳು, ಚಹಾ ಪದಾರ್ಥಗಳು, ಕರಕುಶಲ ವಸ್ತುಗಳ ವಲಯಕ್ಕೆ ಪ್ರಯೋಜನವಾಗಲಿದೆ.
ಅಸ್ಸಾಂ : ಪೀಠೋಪಕರಣಗಳು, ಖನಿಜಗಳು, ಚಹಾ ಪದಾರ್ಥಗಳು, ಕರಕುಶಲ ವಸ್ತುಗಳು, ಔಷಧ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಅನುಕೂಲವಾಗಲಿದೆ.
ಉತ್ತರಪ್ರದೇಶ : ಚರ್ಮ ಮತ್ತು ಪಾದರಕ್ಷೆಗಳು, ಪೀಠೋಪಕರಣಗಳು, ಕರಕುಶಲ ವಸ್ತುಗಳು, ಎಲೆಕ್ಟ್ರಾನಿಕ್ಸ್, ಕೃಷಿ ಯಂತ್ರೋಪಕರಣಗಳ ವಲಯಕ್ಕೆ ನೆರವಾಗಲಿದೆ.
ಗುಜರಾತ್ : ರಾಜ್ಯದ ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು ಎಲೆಕ್ಟ್ರಾನಿಕ್ಸ್, ಔಷಧ ಮತ್ತು ವೈದ್ಯಕೀಯ ಉಪಕರಣಗಳು, ಸಮುದ್ರ ಉತ್ಪನ್ನಗಳು, ರತ್ನ ಮತ್ತು ಆಭರಣಗಳು, ಜವಳಿ ಹಾಗೂ ಉಡುಪು ವಲಯಕ್ಕೆ ಪ್ರಯೋಜನ.
ರಾಜಸ್ಥಾನ : ಕ್ರೀಡಾ ಸರಕುಗಳು, ಕರಕುಶಲ ವಸ್ತುಗಳು, ರತ್ನ ಮತ್ತು ಅಭರಣಗಳು, ಪೀಠೋಪಕರಣಗಳು, ಜವಳಿ ಹಾಗೂ ಉಡುಪು ವಲಯಕ್ಕೆ ಮುಕ್ತ ವ್ಯಾಪಾರ ಒಪ್ಪಂದ ವರದಾನವಾಗಲಿದೆ.
ಪಂಜಾಬ್ : ರಾಜ್ಯದ ಜವಳಿ ಹಾಗೂ ಉಡುಪು, ರಾಸಾಯನಿಕಗಳು, ಕ್ರೀಡಾ ಸರಕುಗಳು, ಕೃಷಿ ಯಂತ್ರೋಪಕರಣಗಳ ವಲಯಕ್ಕೆ ನೆರವಾಗಲಿದೆ.
‘Mother of All Deals’ – ಪ್ರಮುಖ ಅಂಶಗಳು
✶ಐತಿಹಾಸಿಕ ಒಪ್ಪಂದ : ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ನಡುವಿನ ಈ FTA ಅನ್ನು ಇತಿಹಾಸದಲ್ಲೇ ಅತಿದೊಡ್ಡ ಹಾಗೂ ಅತ್ಯಂತ ಮಹತ್ವದ ವ್ಯಾಪಾರ ಒಪ್ಪಂದವೆಂದು ಪರಿಗಣಿಸಲಾಗಿದೆ.
✶ವ್ಯಾಪಾರ ವಿಸ್ತರಣೆ : ಈ ಒಪ್ಪಂದದಿಂದ ಭಾರತ–EU ನಡುವಿನ ದ್ವಿಪಕ್ಷೀಯ ವ್ಯಾಪಾರವು ಗಮನಾರ್ಹವಾಗಿ ಹೆಚ್ಚಳವಾಗಲಿದೆ.
✶ಸುಂಕ ಕಡಿತ / ರದ್ದು : ವಸ್ತುಗಳ ಆಮದು–ರಫ್ತು ಮೇಲಿನ ಕಸ್ಟಮ್ಸ್ ಸುಂಕಗಳನ್ನು ಹಂತ ಹಂತವಾಗಿ ಕಡಿತಗೊಳಿಸುವ ಅಥವಾ ಸಂಪೂರ್ಣ ರದ್ದುಪಡಿಸುವ ನಿರ್ಧಾರ.
✶ಭಾರತೀಯ ಉತ್ಪನ್ನಗಳಿಗೆ ಲಾಭ : ವಸ್ತ್ರೋದ್ಯಮ, ಔಷಧಿ, ಕೃಷಿ ಉತ್ಪನ್ನಗಳು, ಚರ್ಮೋದ್ಯಮ, ಆಭರಣಗಳು ಮತ್ತು ಆಟೋಮೊಬೈಲ್ ಭಾಗಗಳಿಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ.
✶ಸೇವಾ ಕ್ಷೇತ್ರಕ್ಕೆ ಉತ್ತೇಜನ : ಐಟಿ, ಡಿಜಿಟಲ್ ಸೇವೆಗಳು, ಫಿನ್ಟೆಕ್, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೊಸ ಬಾಗಿಲುಗಳು ತೆರೆಯಲಿವೆ.
✶ವಿದೇಶಿ ಹೂಡಿಕೆ ಹೆಚ್ಚಳ : EU ದೇಶಗಳಿಂದ ಭಾರತಕ್ಕೆ ನೇರ ವಿದೇಶಿ ಹೂಡಿಕೆ (FDI) ಹೆಚ್ಚಾಗುವ ನಿರೀಕ್ಷೆ.
✶ಉದ್ಯೋಗ ಸೃಷ್ಟಿ : ರಫ್ತು ಮತ್ತು ಉತ್ಪಾದನೆ ಹೆಚ್ಚಾಗುವುದರಿಂದ ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ.
✶ಸ್ಟಾರ್ಟ್ಅಪ್ ಮತ್ತು MSMEಗಳಿಗೆ ಲಾಭ : ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಯುರೋಪಿಯನ್ ಮಾರುಕಟ್ಟೆ ಪ್ರವೇಶ ಸುಲಭವಾಗಲಿದೆ.
✶ತಂತ್ರಜ್ಞಾನ ಮತ್ತು ಪರಿಸರ ಸಹಕಾರ : ಹಸಿರು ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಸಹಕಾರ ವೃದ್ಧಿ.
✶ಜಾಗತಿಕ ಅನಿಶ್ಚಿತತೆಗೆ ಉತ್ತರ : ಅಮೆರಿಕ ಸೇರಿದಂತೆ ಜಾಗತಿಕ ರಾಜಕೀಯ–ಆರ್ಥಿಕ ಅನಿಶ್ಚಿತತೆಗಳ ನಡುವೆ ಭಾರತ–EU ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಒಪ್ಪಂದ.
ಭಾರತ–EU FTA ಯ ಪ್ರಮುಖ ಅಂಶಗಳು :
ಸುಮಾರು 2 ಬಿಲಿಯನ್ ಜನರ ಮಾರುಕಟ್ಟೆ ಒಳಗೊಂಡ ಮುಕ್ತ ವ್ಯಾಪಾರ ವಲಯ
ಜಾಗತಿಕ GDPಯ ಸುಮಾರು 25% ಪ್ರತಿನಿಧಿಸುವ ಒಪ್ಪಂದ
ಯುರೋಪ್ನಿಂದ ಕಾರುಗಳ ಮೇಲಿನ ಸುಂಕ 110%ರಿಂದ ಹಂತ ಹಂತವಾಗಿ 10%ಕ್ಕೆ ಇಳಿಕೆ
ಉಕ್ಕು, ವಸ್ತ್ರ, ರತ್ನಾಭರಣ, ಚರ್ಮೋದ್ಯಮಕ್ಕೆ ಹೊಸ ಅವಕಾಶಗಳು
ಹಣಕಾಸು, ಕಾನೂನು ಸೇವೆಗಳು ಹಾಗೂ ಸಾರ್ವಜನಿಕ ಖರೀದಿಯಲ್ಲಿ EUಗೆ ಲಾಭ
ರಕ್ಷಣಾ ಸಹಕಾರ ಚೌಕಟ್ಟು ಮತ್ತು ತಂತ್ರಜ್ಞಾನದ ಕಾರ್ಯಸೂಚಿ ಪ್ರಕಟಣೆ
ಯುರೋಪ್ನಿಂದ ಕಾರುಗಳ ಮೇಲಿನ ಸುಂಕ 110% → 40% → 10% (ಹಂತ ಹಂತವಾಗಿ) ಇಳಿಕೆ
ಉಕ್ಕು, ವಸ್ತ್ರ, ರತ್ನಾಭರಣ, ಚರ್ಮೋದ್ಯಮಗಳಿಗೆ ಲಾಭ
EUಗೆ ಹಣಕಾಸು, ಕಾನೂನು ಸೇವೆಗಳು ಮತ್ತು ಸಾರ್ವಜನಿಕ ಖರೀದಿ ಕ್ಷೇತ್ರಗಳಲ್ಲಿ ಅವಕಾಶ
ರಕ್ಷಣಾ ಸಹಕಾರ ಚೌಕಟ್ಟು ಒಪ್ಪಂದ ಪ್ರಕಟಣೆ
ನೆನಪಿನಲ್ಲಿಡಬೇಕಾದ ಅಂಶಗಳು :
ಭಾರತ–EU FTA: ಮುಖ್ಯ ಅಂಶಗಳು
ಒಪ್ಪಂದದ ಹೆಸರು: ಭಾರತ–ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದ (India–EU FTA)
ಸಹಿ ದಿನಾಂಕ: 27 ಜನವರಿ 2026
ಸ್ಥಳ: ನವದೆಹಲಿ
ವರ್ಣನೆ: “Mother of All Trade Deals”
ಸಹಿ ಮಾಡಿದ ಪ್ರಮುಖ ನಾಯಕರು
ಪ್ರಧಾನಮಂತ್ರಿ: ನರೇಂದ್ರ ಮೋದಿ
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ: ಆಂಟೊನಿಯೋ ಕೋಸ್ಟಾ
ಯುರೋಪಿಯನ್ ಕಮಿಷನ್ ಅಧ್ಯಕ್ಷೆ: ಉರ್ಸುಲಾ ವಾನ್ ಡರ್ ಲೇಯೆನ್


